ಆಯ್ದ ಘಟನೆಗಳಿಗೆ ಅನುಕಂಪ ತೋರುವುದು ಸಲ್ಲದು

 


ಕರೂರಿಗೆ ಬೆಣ್ಣೆ, ಬೆಂಗಳೂರಿಗೆ ಸುಣ್ಣ

ನೇರಾನೇರ * ಬಿವಿಸೀ

ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆಯಲ್ಲಿ ನಲವತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಕೇಂದ್ರ ಸರ್ಕಾರ ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ಸಂಸದರ ನಿಯೋಗ ಕರೂರಿಗೆ ಭೇಟಿ ನೀಡಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತ ವ್ಯಕ್ತಿಗಳ ಕುಟುಂಬಗಳಿಗೆ ತಲಾ 2 ಲಕ್ಷ ರೂ, ಗಾಯಗೊಂಡವರಿಗೆ 50 ಸಾವಿರ ರೂಗಳ ಪರಿಹಾರ ಘೋಷಿಸಿದ್ದಾರೆ. ಇದು ಸರಿಯಾದ ನಡೆಯಾಗಿದ್ದು, ಕರ್ತವ್ಯ ಪ್ರಜ್ಞೆ ಮತ್ತು ಸಂವೇದನೆಯನ್ನು ಸೂಚಿಸುತ್ತದೆ.

ಆದರೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಬಿಜೆಪಿ ವಹಿಸಿದ ಮೌನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೂ ಸಹ ದೆಹಲಿಯ ಯಾವುದೇ ಹಿರಿಯ ಬಿಜೆಪಿ ನಾಯಕರೂ ಸ್ಥಳಕ್ಕೆ ಭೇಟಿ ನೀಡಲಿಲ್ಲ, ಆಸ್ಪತ್ರೆಗಳಿಗೆ ಹೋಗಿ ಗಾಯಗೊಂಡವರನ್ನು ಸಂಪರ್ಕಿಸಲಿಲ್ಲ, ನೊಂದ ಕುಟುಂಬಗಳಿಗೆ ಸಾಂತ್ವನವನ್ನೂ ಸಹ ಹೇಳಲಿಲ್ಲ. ಕುತೂಹಲಕಾರಿ ಅಂಶವೆಂದರೆ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರವನ್ನೂ ಘೋಷಿಸಲಿಲ್ಲ. ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುವ ನಿರ್ಮಲ ಸೀತಾರಾಮನ್ ಸಹ ದೂರವೇ ಉಳಿದರು. ಈ ವ್ಯತಿರಿಕ್ತ ನಡೆ ರಾಜಕೀಯವಾಗಿ ಬಿಜೆಪಿಗೆ ದುಬಾರಿಯಾಗುತ್ತದೆ.

ದುರಂತಗಳು ಸಂಭವಿಸಿದಾಗ ಆಳ್ವಿಕೆಗಳು ಪರೀಕ್ಷೆಗೊಳಗಾಗುವುದು ಆಯ್ದ ಘಟನೆಗಳಿಗೆ ಸ್ಪಂದಿಸುವುದರಿಂದ ಅಲ್ಲ, ಬದಲಾಗಿ ಒಂದೇ ರೀತಿಯ ಅನುಕಂಪವನ್ನು ತೋರುವ ನಡೆಯಿಂದ. ಕರೂರಿನ ಸಂತ್ರಸ್ತರ ಕುಟುಂಬಕ್ಕೂ, ಬೆಂಗಳೂರಿನ ಕುಟುಂಬಕ್ಕೂ ನೋವು ಸಂಕಟಗಳಲ್ಲಿ ವ್ಯತ್ಯಾಸವೇನೂ ಇರುವುದಿಲ್ಲ. ಆದರೂ ಒಂದು ಘಟನೆಯಲ್ಲಿ ಪರಿಹಾರ ಸೂಚಿಸುವುದು, ಮತ್ತೊಂದರಲ್ಲಿ ತಡೆಹಿಡಿಯುವುದು ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಎನ್ನುವ ಕೇಂದ್ರ ಸರ್ಕಾರದ ತಾರತಮ್ಯದ ನೀತಿಯನ್ನು ತೋರುತ್ತದೆ. ಈ ದೃಷ್ಟಿಯಿಂದ ಕೇಂದ್ರ ಬಿಜೆಪಿ ಸರ್ಕಾರ ರಾಷ್ಟ್ರೀಯ ಸರ್ಕಾರದಂತೆ ಕಾಣದೆ, ತನ್ನ ಚುನಾವಣಾ ಲೆಕ್ಕಾಚಾರಗಳಿಗೆ ಅನುಗುಣವಾಗಿ ನೊಂದವರಿಗೆ ಅನುಕಂಪ ತೋರುವ ರಾಜಕೀಯ ಯಂತ್ರವಾಗಿ ಕಾಣುತ್ತದೆ.

ಈ ತಾರತಮ್ಯ ನೀತಿ ಮತ್ತು ಆಯ್ದ ಅನುಕಂಪದ ನಡೆ ಬಿಜೆಪಿಯ ವಿರೋಧಿಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತದೆ. ಈ ಪುರಾವೆಗಳ ಮೂಲಕ ವಿರೋಧಿಗಳು ಬಿಜೆಪಿಯ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಘೋಷಣೆಯ ಪೆÇಳ್ಳುತನವನ್ನು ಬಹಿರಂಗಪಡಿಸಬಹುದು. ತನಗೆ ಲಾಭವಾಗುವ ಕಡೆಗಳಲ್ಲಿ ಮಾತ್ರವೇ ಅನುಕಂಪವನ್ನು ತೋರುವುದಾದರೆ, ನ್ಯಾಯಯುತವಾದ ಆಳ್ವಿಕೆಯ ಕಲ್ಪನೆಯೇ ಕುಸಿದುಬೀಳುತ್ತದೆ. ವಿರೋಧ ಪಕ್ಷಗಳ ಆರೋಪಗಳಿಗಿಂತಲೂ, ಸರ್ಕಾರದ ಆಯ್ಕೆ ಆದ್ಯತೆಗಳೇ ಪಕ್ಷಪಾತದ ನಿರೂಪಣೆಯನ್ನು ಸೃಷ್ಟಿಸುತ್ತದೆ.

ಇಲ್ಲಿ ರಾಜಕೀಯ ಪ್ರಶ್ನೆಗಿಂತಲೂ ಹೆಚ್ಚಾಗಿ ನೈತಿಕತೆಯ ಪ್ರಶ್ನೆ ಮುಖ್ಯವಾಗುತ್ತದೆ. ದುರ್ಘಟನೆಗಳನ್ನು ನ್ಯಾಯಯುತವಾಗಿ ಪರಿಗಣಿಸಬೇಕಾಗುತ್ತದೆ. ಪರಿಹಾರವನ್ನು ಭೂ ಪ್ರದೇಶಗಳಿಗೆ ಅನುಸಾರವಾಗಿ ಅಥವಾ ಪಕ್ಷದ ಆಳ್ವಿಕೆಯ ದೃಷ್ಟಿಯಿಂದ ನೀಡುವುದು ತರವಲ್ಲ. ಬೆಂಗಳೂರನ್ನು ವಿಭಿನ್ನವಾಗಿ ನೋಡುವುದರ ಮೂಲಕ ಕೇಂದ್ರ ಸರ್ಕಾರ ತನ್ನ ವಿಶ್ವಾಸಾರ್ಹತೆಗೆ ಧಕ್ಕೆ ತಂದುಕೊಂಡಿದೆ. ನಾಗರಿಕರು ಪವಾಡಗಳನ್ನು ನಿರೀಕ್ಷಿಸುವುದಿಲ್ಲ, ಸಮಾನವಾದ ಅನುಕಂಪ, ಸಹಾನುಭೂತಿಯನ್ನು ಅಪೇಕ್ಷಿಸುತ್ತಾರೆ. ಇದು ವ್ಯತಿರಿಕ್ತವಾಗಿರುವುದು ಕಂಡಾಗ, ವಿಶ್ವಾಸದ ಬದಲು ವಿರೋಧ ಹೆಚ್ಚಾಗುತ್ತದೆ.

ಕರ್ನಾಟಕದ ಮಟ್ಟಿಗೆ ಇದು ಇನ್ನೂ ಆಳವಾಗಿ ಕಾಣುತ್ತದೆ. ರಾಜ್ಯವು ಬಿಜೆಪಿಯ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಆಳ್ವಿಕೆಯಲ್ಲಿದ್ದು, ಈ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯವು ಕಣ್ತಪ್ಪಿ ನಡೆದಿರುವಂತೆ ಕಾಣುವುದಿಲ್ಲ ಬದಲಾಗಿ ಉದ್ದೇಶಪೂರ್ವಕ ಮಲತಾಯಿ ಧೋರಣೆಯಾಗಿ ಕಾಣುತ್ತದೆ. ಇದು ತಕ್ಷಣಕ್ಕೆ ಚುನಾವಣೆಗಳನ್ನು ಪ್ರಭಾವಿಸದೆ ಇರಬಹುದು. ಆದರೆ ಸದ್ದಿಲ್ಲದೆ ಬಿಜೆಪಿಯ ನೈತಿಕ ಅಧಿಕಾರವನ್ನು ಶಿಥಿಲಗೊಳಿಸುತ್ತದೆ. ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿಗೆ ಇದು ದುಬಾರಿಯಾಗುತ್ತದೆ. ಜನರು ಸಂಕಟದ ಸಮಯದಲ್ಲಿ ಕಾಣುವ ವಿಶ್ವಾಸದ್ರೋಹದ ಪ್ರಸಂಗಗಳನ್ನು, ತಾವು ಪಡೆಯುವ ಸಬ್ಸಿಡಿ, ಘೋಷಣೆಗಳಿಗಿಂತಲೂ, ಹೆಚ್ಚು ಕಾಲ ನೆನಪಿನಲ್ಲಿಡುತ್ತಾರೆ.

ಉತ್ತಮ ಆಳ್ವಿಕೆಯೆಂದರೆ ಕೇವಲ ಬೃಹತ್ ಯೋಜನೆಗಳನ್ನು ಸ್ಥಾಪಿಸುವುದಲ್ಲ. ಬದಲಾಗಿ ನಿರ್ಣಾಯಕ ಗಳಿಗೆಗಳಲ್ಲಿ ನ್ಯಾಯಯುತವಾಗಿರುವುದು ಮುಖ್ಯವಾಗಿರುತ್ತದೆ. ಜನತೆಗೆ ಭರವಸೆಯ ಅವಶ್ಯಕತೆ ಇದ್ದಾಗ ಸ್ಪಂದಿಸುವುದು ಮುಖ್ಯವಾಗುತ್ತದೆ. ಆಯ್ದ ಘಟನೆಗಳಿಗೆ ಅನುಕಂಪ, ಸಹಾನುಭೂತಿ ತೋರುವುದು ರಾಜಕೀಯ ಮತ್ತು ಆಳ್ವಿಕೆ ಎರಡನ್ನೂ ಘಾಸಿಗೊಳಿಸುತ್ತದೆ. ಇದು ಸರ್ಕಾರದ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ, ವಿಭಜನೆಯನ್ನು ಹೆಚ್ಚಿಸುತ್ತದೆ, ಘೋಷಣೆಗಳನ್ನು ಪೆÇಳ್ಳು ಎಂದು ಸಾಬೀತುಪಡಿಸುತ್ತದೆ. ಬಿಜೆಪಿ ನಿಜವಾಗಲೂ ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವುದೇ ಆದರೆ, ಅದು ದುರ್ಘಟನೆಗಳಿಗೆ ಸ್ಪಂದಿಸುವಾಗ, ಒಂದಕ್ಕೆ ಅನುಕಂಪ ಸೂಚಿಸಿ ಮತ್ತೊಂದನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಮಾನವಾದ ನೋವು, ದುಃಖ, ಸಮಾನವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತದೆ. ಇಲ್ಲವಾದರೆ ಅದು ಆಳ್ವಿಕೆ ಎನಿಸಿಕೊಳ್ಳದೆ ಕೆಟ್ಟ ರಾಜಕಾರಣವಾಗಿ ಕಾಣುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again