ಜಿಎಸ್‍ಟಿ ಸುಲಿಗೆ ಮತ್ತು ಕರ್ನಾಟಕದ ನಿರ್ಲಕ್ಷ್ಯ; ಮೋದಿಗೆ ಸಿದ್ದರಾಮಯ್ಯ ಧೀರೋದಾತ್ತ ಸವಾಲು
ಕೇಂದ್ರ ಸರ್ಕಾರದ ಠಕ್ಕುತನವನ್ನು, ಹಣಕಾಸು ತಾರತಮ್ಯ, ಭಾವನಾತ್ಮಕ ಅಲಕ್ಷ್ಯವನ್ನು ಬಯಲುಮಾಡುವ ಮೂಲಕ, ನಮ್ಮ ಮುಖ್ಯಮಂತ್ರಿ ಪಕ್ಷಾತೀತವಾಗಿ ಇರುವಂತಹ ಭಾವನೆಗಳಿಗೆ ದನಿ ಕೊಟ್ಟಿದ್ದಾರೆ.
...........
ನೇರಾನೇರ * ಬಿವಿಸೀ
ಇತರ ರಾಜ್ಯಗಳ ಮುಖ್ಯಮಂತ್ರಿಗಳು ಧೈರ್ಯದಿಂದ ಮಾಡದ ಕೆಲಸವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಮೃದುವಾಗಿಯೇ ಆದರೂ, ನೇರವಾಗಿ ಯಾವುದೇ ಮುಜುಗರ ಅಥವಾ ಹಿಂಜರಿಕೆ ಇಲ್ಲದೆ ಪ್ರಧಾನಮಂತ್ರಿ ಮೋದಿಗೆ ಸವಾಲೆಸೆದಿದ್ದಾರೆ. ಇತ್ತೀಚಿನ ಕೇಂದ್ರ ಸರ್ಕಾರದ ಉಡುಗೊರೆಗಳು ಎಂದು ಪ್ರಚಾರ ಪಡೆಯುತ್ತಿರುವ ಜಿಎಸ್‍ಟಿ ರಿಯಾಯಿತಿಯನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಮೋದಿ ಅವರ ಆಯ್ದ ನೀತಿಗಳು ರಾಜ್ಯದ ಕೆಲವೇ ಜನರ ನಡುವೆ ಜನಪ್ರಿಯತೆ ಪಡೆದಿರುವುದನ್ನೂ ಪ್ರಶ್ನಿಸಿದ್ದಾರೆ. ಈ ಹೇಳಿಕೆಗಳ ಹಿಂದೆ, ಆಳವಾದ ಸತ್ಯ ಅಡಗಿದ್ದು, ಮೋದಿ ಸರ್ಕಾರ ವ್ಯವಸ್ಥಿತವಾಗಿ ಕರ್ನಾಟಕವನ್ನು ಆರ್ಥಿಕವಾಗಿ, ಭಾವನಾತ್ಮಕವಾಗಿ ನಿರ್ಲಕ್ಷಿಸಿರುವುದನ್ನು ಅಲ್ಲಗಳೆಯುವಂತಿಲ್ಲ.
ಸಿದ್ದರಾಮಯ್ಯ ಅವರ ಪ್ರಶ್ನೆಗಳು ಕೇವಲ ರಾಜಕೀಯ ಟೀಕೆಗಳಲ್ಲ. ಅವು ಕಳೆದ ಒಂದು ದಶಕದಲ್ಲಿ ರಾಜ್ಯದ ಹಣಕಾಸು ವಲಯದ ಅನುಭವಗಳಲ್ಲಿ ಅಡಗಿದೆ. ಮೊದಲು ಜನರ ಬೆನ್ನೆಲುಬು ಮುರಿಯುವ ಜಿಎಸ್‍ಟಿ ತೆರಿಗೆಯನ್ನು ಜನರ ಮೇಲೆ ವಿಧಿಸಿ ಈಗ ಅಲ್ಪಸ್ವಲ್ಪ ರಿಯಾಯಿತಿ ನೀಡುತ್ತಿರುವುದನ್ನೇ ಜನರಿಗೆ ಕೊಟ್ಟ ಉಡುಗೊರೆ ಎಂದು ಪ್ರಚಾರ ಮಾಡುತ್ತಿರುವುದು ಮೋದಿ ಸರ್ಕಾರದ ಠಕ್ಕುತನ ಎಂದು ಟೀಕಿಸಿದ್ದಾರೆ.
ಜಿಎಸ್‍ಟಿ ಪದ್ಧತಿಯನ್ನು ಕ್ರಾಂತಿಕಾರಕ ಸುಧಾರಣೆ ಎಂದು ಬಿಂಬಿಸಲಾಗಿದ್ದರೂ, ವಾಸ್ತವವಾಗಿ ಅದು ಕೇಂದ್ರದಲ್ಲಿ ಇಡೀ ದೇಶದ ಹಣಕಾಸು ಅಧಿಕಾರವನ್ನು ಕೇಂದ್ರೀಕರಿಸುವ ಕ್ರಮವಾಗಿದೆ. ಕರ್ನಾಟಕದಂತಹ ರಾಜ್ಯಗಳು ಆದಾಯ ಗಳಿಕೆಯ ಕೊರತೆಯನ್ನು ಎದುರಿಸಬೇಕಾಗಿದ್ದು, ಈ ರಾಜ್ಯ ನ್ಯಾಯಯುತ ಪರಿಹಾರವನ್ನು ಗಳಿಸುತ್ತಿಲ್ಲ. ಮುಖ್ಯಮಂತ್ರಿಗಳ ಹತಾಶೆ ಕೇವಲ ರಾಜಕೀಯ ಆಗಿರದೆ, ಆರ್ಥಿಕ ಮತ್ತು ಸಾಂವಿಧಾನಿಕ ಪ್ರಶ್ನೆಯೂ ಆಗಿದೆ.
ಸಿದ್ದರಾಮಯ್ಯ ಇನ್ನೂ ಮುಂದುವರೆದಿದ್ದು, ಕನ್ನಡಿಗರ ಗೌರವ ಮತ್ತು ಘನತೆಯ ಪ್ರಶ್ನೆಯನ್ನು ತಮ್ಮ ಮಾತುಗಳಲ್ಲಿ ಧ್ವನಿಸಿದ್ದಾರೆ. ಒಂದು ದಶಕದ ಅವರ ಆಳ್ವಿಕೆಯಲ್ಲಿ ಮೋದಿ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿರುವುದು ನ್ಯಾಯಯುತವೇ ಆಗಿದ್ದು, ಈ ಪ್ರಶ್ನೆಯನ್ನು ರಾಜ್ಯದ ಬಿಜೆಪಿ ಸಂಸದರಿಂದಲೇ ಸಮರ್ಥವಾಗಿ ಎದುರಿಸಲಾಗಿಲ್ಲ. ರಾಜ್ಯದ ರಸ್ತೆ ಮತ್ತು ರೈಲು ಮೂಲ ಸೌಕರ್ಯಗಳು, ಸ್ನೇಹಪರ ಮುಖ್ಯಮಂತ್ರಿಗಳಿರುವ ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೆ ಹೋಲಿಸಿದರೆ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದ್ದು ನೆನೆಗುದಿಗೆ ಬಿದ್ದಿವೆ. ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಹಲವು ಕೇಂದ್ರ ಯೋಜನೆಗಳನ್ನು ಪಡೆದುಕೊಂಡಿದ್ದು, ವಿಶೇಷ ಅನುದಾನವನ್ನೂ ಪಡೆದಿವೆ. ಆದರೆ ದೇಶದ ಅತಿ ಹೆಚ್ಚು ತೆರಿಗೆ ಸಂಗ್ರಹದ ರಾಜ್ಯವಾಗಿರುವ ಕರ್ನಾಟಕವನ್ನು ಅಷ್ಟೇ ನಿರ್ಲಕ್ಷಿಸಲಾಗಿದೆ. ಇಲ್ಲಿ, ಮೋದಿಯ ಸ್ನೇಹ ಮತ್ತು ಒಲವು ರಾಜಕೀಯ ಸರಕುಗಳಂತಾಗಿದೆಯೇ ಹೊರತು, ರಾಷ್ಟ್ರೀಯ ಬದ್ಧತೆಯಾಗಿಲ್ಲ ಎಂಬ ಸಂದೇಶ ಸ್ಪಷ್ಟವಾಗಿ ಕಾಣುತ್ತದೆ.
ಇದನ್ನೂ ಮೀರಿದ ನೋವಿನ ಸಂಗತಿ ಎಂದರೆ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ರಾಷ್ಟ್ರೀಕೃತ ಬ್ಯಾಂಕುಗಳಾದ ವಿಜಯಾ ಬ್ಯಾಂಕ್, ಕಾರ್ಪೊರೇಶನ್ ಮತ್ತು ಸಿಂಡಿಕೇಟ್ ಬ್ಯಾಂಕುಗಳನ್ನು ಬಲವಂತವಾಗಿ ವಿಲೀನಗೊಳಿಸಿರುವುದು. ಈ ಸಂಸ್ಥೆಗಳು ಕೇವಲ ಹಣಕಾಸಿನ ಉದ್ದಿಮೆಗಳಲ್ಲ, ಇವು ಕರ್ನಾಟಕದ ಉದ್ಯಮಶೀಲತೆ, ಪ್ರಾಮಾಣಿಕತೆ ಮತ್ತು ಪ್ರಾದೇಶಿಕ ಹೆಮ್ಮೆಯ ಸಂಕೇತಗಳಾಗಿದ್ದವು. ಈ ಬ್ಯಾಂಕುಗಳನ್ನು ಇಲ್ಲವಾಗಿಸಿರುವುದು ಕರ್ನಾಟಕದ ಅಸ್ಮಿತೆಯ ಮೇಲಿನ ದಾಳಿಯಾಗಿದ್ದು, ಮೋದಿಯವರ ಮೌನವನ್ನು ಕ್ಷಮಿಸಲಾಗುವುದಿಲ್ಲ.
ಕರ್ನಾಟಕದ ಬಿಜೆಪಿ ಸಂಸದರ ವಿರುದ್ಧ ಸಿದ್ದರಾಮಯ್ಯ ಆವರ ಆಕ್ರೋಶವೂ ನ್ಯಾಯಯುತವಾದದ್ದು. ಈ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಲು ತುದಿಗಾಲಲ್ಲಿ ನಿಂತಿದ್ದರೂ, ಹಣಕಾಸು ವಲಯದಲ್ಲಿ ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ತುಟಿಬಿಚ್ಚದೆ ಇರುವುದು ಅಕ್ಷಮ್ಯ. ಬಿಜೆಪಿ ಸಂಸದರು ಕರ್ನಾಟಕದ ಜಿಎಸ್‍ಟಿ ಪಾಲನ್ನಾಗಲೀ, ಮೂಲ ಸೌಕರ್ಯಗಳ ಬೇಡಿಕೆಗಳನ್ನಾಗಲೀ, ಹಣಕಾಸು ಸ್ವಾಯತ್ತತೆಯನ್ನಾಗಲೀ ಸಮರ್ಥಿಸಿಕೊಂಡಿಲ್ಲ. ಸಂಸದೀಯ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಈ ಸಂಸದರು ಯಾವ ನೈತಿಕತೆ ಹೊತ್ತು ಜನರ ಮತ ಕೇಳಲು ಸಾಧ್ಯ? ಇವರ ಮೌನ ಮೋದಿಯವರಿಗೆ ಶರಣಾಗಿರುವುದರ ಸಂಕೇತವಾಗಿದೆಯೇ ಹೊರತು, ಅವರು ಪ್ರತಿನಿಧಿಸುವ ಕರ್ನಾಟಕದ ಜನತೆಯ ಬಗ್ಗೆ ನಿಷ್ಠೆಯನ್ನಲ್ಲ.
ಬಿಜೆಪಿ ಕರ್ನಾಟಕದಲ್ಲಿ ಎಂದೂ ಸಹ ಜನರ ನಿಜವಾದ ಮನ್ನಣೆಯನ್ನು ಗಳಿಸಿಲ್ಲ ಎನ್ನುವುದು ಚಾರಿತ್ರಿಕ ಸತ್ಯ. ಎರಡು ಬಾರಿ ಕೇಸರಿಪಕ್ಷ ಅಧಿಕಾರಕ್ಕೆ ಬಂದಿದ್ದು ರಾಜಕೀಯ ಕಸರತ್ತುಗಳ ಮೂಲಕವೇ ಹೊರತು ಮತದಾರರ ಮನ್ನಣೆಯಿಂದಲ್ಲ. ರಾಜ್ಯದ ಮತದಾರರು ಮತ್ತೆ ಮತ್ತೆ ಸೆಕ್ಯುಲರ್, ಒಳಗೊಳ್ಳುವ ಆಳ್ವಿಕೆಯನ್ನು ಅಪೇಕ್ಷಿಸಿದ್ದರೂ ಇದನ್ನು ಪಲ್ಲಟಗೊಳಿಸಿ ಬಿಜೆಪಿ ಪಕ್ಷಾಂತರ, ಹಣಬಲ, ಕೇಂದ್ರದ ಒತ್ತಡಗಳ ಮೂಲಕ ಸರ್ಕಾರಗಳನ್ನು ರಚಿಸಿವೆ. ಕೇಂದ್ರದಲ್ಲಿ ಬಿಜೆಪಿಯ ಹಠಮಾರಿ ಧೋರಣೆಗೆ ಸರಿಹೊಂದುವಂತೆ ಬೆಂಗಳೂರಿನಲ್ಲಿ ಅವಕಾಶವಾದವನ್ನೂ ಸಹ ಕಾಣಬಹುದು.
ನರೇಂದ್ರ ಮೋದಿ ಕರ್ನಾಟಕದ ಜನತೆಯ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂಬ ಸಿದ್ದರಾಮಯ್ಯ ಅವರ ವ್ಯಾಖ್ಯಾನ ಕಠೋರ ಎನಿಸಿದರೂ, ಅದು ರಾಜ್ಯವು ಮೌನವಾಗಿ ವ್ಯಕ್ತಪಡಿಸುತ್ತಿರುವ ಭಾವನೆಯ ಪ್ರತಿಫಲನವೇ ಆಗಿದೆ. ರಾಷ್ಟ್ರೀಯ ನಾಯಕ ಎಂದು ಸ್ವತಃ ಬೆನ್ನುತಟ್ಟಿಕೊಳ್ಳುವ ಪ್ರಧಾನಮಂತ್ರಿ ಯಾವುದೇ ರಾಜ್ಯವನ್ನು ಇಷ್ಟು ಅಸಡ್ಡೆಯಿಂದ ಪರಿಗಣಿಸಲಾಗುವುದಿಲ್ಲ ಅಥವಾ ಬೇರೆ ಪಕ್ಷವನ್ನು ಆಯ್ಕೆ ಮಾಡಿರುವ ಕಾರಣಕ್ಕೆ ನಿರ್ಲಕ್ಷಿಸುವುದೂ ತರವಲ್ಲ. ಆದರೂ ಕರ್ನಾಟಕ ತನ್ನ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಭಾರಿ ಬೆಲೆ ತೆರಬೇಕಾಗಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್, ಹಣಕಾಸು ಆರ್ಥಿಕ ಘನತೆಯ ಪಕ್ಷದ ನಿಲುವನ್ನು ಮರಳಿ ಗಳಿಸುತ್ತಿದೆ. ಕೇಂದ್ರ ಸರ್ಕಾರದ ಠಕ್ಕುತನವನ್ನು, ಹಣಕಾಸು ತಾರತಮ್ಯ, ಭಾವನಾತ್ಮಕ ಅಲಕ್ಷ್ಯವನ್ನು ಬಯಲುಮಾಡುವ ಮೂಲಕ, ಸಿದ್ದರಾಮಯ್ಯ ಪಕ್ಷಾತೀತವಾಗಿ ಇರುವಂತಹ ಭಾವನೆಗಳಿಗೆ ದನಿ ಕೊಟ್ಟಿದ್ದಾರೆ. ಇದು ಘಾಸಿಗೊಳಗಾದ ಗೌರವ ಮತ್ತು ಪ್ರಾದೇಶಿಕ ಹಕ್ಕೊತ್ತಾಯದ ಭಾವನೆಯನ್ನು ಬಿಂಬಿಸುತ್ತದೆ.
ಕರ್ನಾಟಕದ ಜನರ ವಿಶ್ವಾಸವನ್ನು ಮರಳಿ ಗಳಿಸಲು ಮೋದಿ ಉದ್ದೇಶಿಸಿದ್ದರೆ, ಈ ಸರಳ ಪ್ರಶ್ನೆಗಳನ್ನು ಉತ್ತರಿಸಬೇಕೇ ಹೊರತು, ಕೇವಲ ಘೋಷಣೆಗಳಲ್ಲಿ, ಫೆÇೀಟೋ ಪ್ರದರ್ಶನಗಳಲ್ಲಿ ನಿರತರಾಗಿರಕೂಡದು. ಮೋದಿ ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ಗೌರವದಿಂದ ಉತ್ತರಿಸಬೇಕಿದೆ. ಅಲ್ಲಿಯವರೆಗೂ ಸಿದ್ದರಾಮಯ್ಯ ಸರಿಯಾಗಿಯೇ ಹೇಳಿರುವಂತೆ, ಕನ್ನಡಿಗರ ಉತ್ಸಾಹವನ್ನು ದೆಹಲಿಯ ಅಹಂಕಾರದ ಮೂಲಕ ಮಣಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ಜೀವಂತವಾಗಿರುತ್ತದೆ.
Comments
Post a Comment