ಅಸಹನೆಯನ್ನು ಪೋಷಿಸುತ್ತಿರುವ ಅಧಿಕಾರ

 

ನಿಜವಾದ ಸಾಮಥ್ರ್ಯ ಇರುವುದು ಮತ್ತೊಬ್ಬರನ್ನು ಕೂಗಾಡುವ ಮೂಲಕ ಅವರ ಸದ್ದಡಗಿಸುವುದರಲ್ಲಿ ಅಲ್ಲ; ಬದಲಾಗಿ, ಯಾವಾಗ ಮೌನವಾಗಿರಬೇಕು ಎಂದು ಅರ್ಥಮಾಡಿಕೊಳ್ಳುವುದರಲ್ಲಿ

...............

ಅಹುದಾದರಹುದೆನ್ನಿ * ಬಿವಿಸೀ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ, ಸರ್ಕಾರದ ಒಳಗಿರುವ ಅಥವಾ ಹೊರಗಿರುವ, ಹಲವು ನಾಯಕರಿಗೆ ಅವರ ನಾಲಿಗೆಯ ಮೇಲೆ ನಿಯಂತ್ರಣವೇ ಇಲ್ಲ ಎನಿಸುತ್ತಿದೆ. ಇತ್ತೀಚೆಗೆ ಇತರರ ವೈಯುಕ್ತಿಕ ಆಯ್ಕೆಯ ಬಗ್ಗೆ ಕಾಂಗ್ರೆಸ್ ಪ್ರಭೃತಿಗಳು ವ್ಯಕ್ತಪಡಿಸುತ್ತಿರುವ ಆಕ್ರೋಶ ಅಹಂಕಾರದ ಪರಮಾವಧಿಯಾಗಿದ್ದು, ರಾಜಕೀಯ ಅಧಿಕಾರದಲ್ಲಿರುವುದನ್ನೇ ಅಧಿಕೃತ ಅಧಿಕಾರ ಎಂದು ತಪ್ಪಾಗಿ ಎಣಿಸಿ ನೀಡಿರುವ ಹೇಳಿಕೆಗಳಾಗಿವೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರು ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ ಎಂದಿರುವುದು ವಿವಾದಕ್ಕೀಡಾಗಿದ್ದು, ಇದು ಕಾಂಗ್ರೆಸ್ ನಾಯಕರ ಸರ್ವಾಧಿಕಾರಿ ಧೋರಣೆ ಮತ್ತು ಭಿನ್ನಮತವನ್ನು ಸಹಿಸಿಕೊಳ್ಳದ ಅಸಹನೆಯ ಲಕ್ಷಣವಾಗಿ ಕಾಣುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟ ಸಹೋದ್ಯೋಗಿ ಪ್ರಿಯಾಂಕ ಖರ್ಗೆ ಮತ್ತು ಸೀಳುನಾಲಗೆಯ ಬಿ ಕೆ ಹರಿಪ್ರಸಾದ್ ಎಲ್ಲರೂ ಸಹ ತೀರಾ ಅತಿರೇಕದ ಒರಟುತನದ ಹೇಳಿಕೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು ಮೂರ್ತಿಯವರನ್ನು, ``ಮೂರ್ತಿ ದಂಪತಿಗಳು ಬೃಹಸ್ಪತಿಗಳೇ, ತಮಗೇ ಎಲ್ಲವೂ ತಿಳಿದಿರುವುದು ಎಂದು ಭಾವಿಸಿದ್ದಾರೆಯೇ?'' ಎಂದು ಕೇಳಿರುವುದು ಈ ಅಸಹನೆಯ ದ್ಯೋತಕ. ಒಂದು ವೇಳೆ ಕೇಂದ್ರ ಸರ್ಕಾರ ಇದೇ ರೀತಿಯ ಸಮೀಕ್ಷೆ ನಡೆಸಿದರೆ, ಮೂರ್ತಿಗಳು ಇದೇ ರೀತಿ ವರ್ತಿಸುತ್ತಾರೆಯೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಬಿ ಕೆ ಹರಿಪ್ರಸಾದ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅವರನ್ನು `ದೇಶದ್ರೋಹಿಗಳು' ಎಂದು ಕರೆದಿದ್ದಾರೆ. ಇದು ಸಾರ್ವಜನಿಕ ವ್ಯಕ್ತಿಯೊಬ್ಬರಿಗೆ ಶೋಭಿಸುವ ಮಾತುಗಳಲ್ಲ. ಈ  ಮೂರೂ ಹೇಳಿಕೆಗಳು ಅನವಶ್ಯಕವಾಗಿರುವುದಷ್ಟೇ ಅಲ್ಲ, ಇದು ಸರ್ಕಾರದ ನಿಲುವನ್ನು ನಿರಾಕರಿಸುವುದನ್ನು ಸಹಿಸಿಕೊಳ್ಳಲಾಗದ ನೈತಿಕ ಅಭದ್ರತೆಯ ಲಕ್ಷಣವಾಗಿದೆ.

ವಾಸ್ತವ ವಿಷಯಗಳು ಸರಳವಾಗಿವೆ. ಹಿಂದುಳಿದ ವರ್ಗಗಳ ಆಯೋಗವು ಜಾತಿ ಸಮೀಕ್ಷೆಯನ್ನು ನಡೆಸುತ್ತಿದ್ದು, ತಮ್ಮ ಅಧಿಸೂಚನೆಯಲ್ಲಿ ಭಾಗವಹಿಸುವುದು ಜನರ ಆಯ್ಕೆಗೆ ಬಿಟ್ಟಿದ್ದು ಎಂದು  ಸ್ಪಷ್ಟವಾಗಿ ಹೇಳಿದೆ. ಇದು ಕಡ್ಡಾಯವಲ್ಲ ಎಂದೂ ಹೇಳಿದ್ದಾರೆ. ಮೂರ್ತಿ ಅವರು ಆಯೋಗಕ್ಕೆ ಪತ್ರ ಬರೆದು, ತಮ್ಮ ಆಯ್ಕೆಯ ಹಕ್ಕನ್ನು ಉಪಯೋಗಿಸಿ ತಾವು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸೌಜನ್ಯಪೂರ್ಣವಾಗಿ ಹೇಳಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಜನರು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಮೂರ್ತಿ ದಂಪತಿಗಳನ್ನು ಮಾತ್ರ ರಾಜಕೀಯ ದಾಳಿಗೆ ಗುರಿಮಾಡಲಾಗಿದೆ. ಇದು ಸರ್ಕಾರದ ಸಿಟ್ಟು ಇರುವುದು ಭಾಗವಹಿಸದವರ ವಿರುದ್ಧ ಅಲ್ಲ ಬದಲಾಗಿ ಅಧಿಕಾರಕ್ಕೆ ಬಗ್ಗದ ಯಶಸ್ವಿ ವ್ಯಕ್ತಿಗಳ ವಿರುದ್ಧ ಎನ್ನುವುದು ಸ್ಪಷ್ಟವಾಗುತ್ತದೆ.

ಮೂರ್ತಿ ಅವರು ಕರ್ನಾಟಕಕ್ಕೆ ಮತ್ತು ಭಾರತಕ್ಕೆ ಅಪಾರವಾದ ಗೌರವ, ಘನತೆ ಸಂಪಾದಿಸಿಕೊಟ್ಟಿರುವುದನ್ನು ಮರೆಯುವಂತಿಲ್ಲ. ಇನ್ಫೋಸಿಸ್ ಮೂಲಕ ಅವರು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ, ತೆರಿಗೆ ರೂಪದಲ್ಲಿ ಕೋಟ್ಯಂತರ ರೂಗಳನ್ನು ಪಾವತಿಸಿದ್ದಾರೆ, ಉನ್ನತ ಶಿಕ್ಷಣ ಮತ್ತು ದಾನಧರ್ಮಗಳ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ವೈಯುಕ್ತಿಕ ಆಯ್ಕೆಗೆ ಗೌರವ ಸೂಚಿಸುವುದು ನಮ್ಮ ಕರ್ತವ್ಯವೇ ಹೊರತು, ಅಪಮಾನಿಸುವುದಲ್ಲ.

ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ಅದರ ಹಳೆಯ ಸೈದ್ಧಾಂತಿಕ ತಾರತಮ್ಯಗಳನ್ನೇ ಮುನ್ನಲೆಗೆ ತಂದಿದೆ. ಉದ್ಯಮಿಗಳನ್ನು ಅವಮಾನಿಸುವುದು, ಸಂಪತ್ತು ಹೊಂದಿರುವವರನ್ನು ಹೀಗಳೆಯುವುದು ಪಕ್ಷದ ಹಳೆಯ ಮಾದರಿಯಾಗಿದೆ. ನಾಗರಿಕರೊಡನೆ ಗೌರವಯುತವಾಗಿ ಮಾತುಕತೆ ನಡೆಸುವ ಬದಲು ಕಾಂಗ್ರೆಸ್ ಪಕ್ಷವು ತನ್ನ ನಿಲುವು ವಿರೋಧಿಸುವ ಎಲ್ಲರನ್ನೂ ಶ್ರೀಮಂತರು, ಗಣ್ಯರು, ಅಹಂಕಾರಿಗಳು, ನಿಷ್ಠೆಯಿಲ್ಲದವರು ಎಂದು ಬಣ್ಣಿಸುವಂತೆ ಕಾಣುತ್ತಿದೆ. ಈ ವರ್ತನೆಯು ಹೂಡಿಕೆದಾರರಿಗೆ, ವಾಣಿಜ್ಯೊದ್ಯಮಿಗಳಿಗೆ ತಪ್ಪು ಸಂದೇಶ ರವಾನಿಸುತ್ತದೆ. ಈಗಾಗಲೇ ಕರ್ನಾಟಕವನ್ನು ಉದ್ಯಮಿಗಳು ಸ್ನೇಹಪರ ರಾಜ್ಯವಲ್ಲ ಎಂದು ಭಾವಿಸುತ್ತಿದ್ದಾರೆ.

ನೆರೆ ರಾಜ್ಯಗಳು ಆಕ್ರಮಣಕಾರಿಯಾಗಿ ಬಂಡವಾಳ ಹೂಡಿಕೆಯನ್ನು ಪಡೆಯಲು ಹವಣಿಸುತ್ತಿರುವಾಗ, ಕರ್ನಾಟಕದ ನಾಯಕತ್ವವು ಜಾತಿ ಸಮೀಕರಣ ಮತ್ತು  ಜನಪ್ರಿಯ ರಾಜಕಾರಣಕ್ಕೆ ಅಂಟಿಕೊಂಡಂತೆ ಕಾಣುತ್ತಿದೆ. ಅಸ್ಮಿತೆಯ ರಾಜಕಾರಣದ ಬಗ್ಗೆ ಇರುವ ಗೀಳು, ಅಭಿವೃದ್ಧಿಗೆ ಮಾರಕವಾಗಲಿದ್ದು, ಇದು ಮಾತು ಮತ್ತು ಫಲಿತಾಂಶಗಳ ನಡುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸುತ್ತದೆ.

ನಾಯಕತ್ವದ ಪರೀಕ್ಷೆ ಇರುವುದು ಸಹನೆಯಲ್ಲೇ ಹೊರತು, ಆಕ್ರೋಶದಲ್ಲಿ ಅಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕತ್ವವು, ಆಳ್ವಿಕೆ ಎಂದರೆ ಕೇವಲ ತನ್ನ ನೀತಿಗಳಿಗೆ ಮನ್ನಣೆ ನೀಡಲು ಒತ್ತಡ ಹೇರುವುದಷ್ಟೇ ಅಲ್ಲ, ಬದಲಾಗಿ ವಿಶ್ವಾಸವನ್ನು ಬೆಳಸುವುದು ಎಂದು ಅರ್ಥಮಾಡಿಕೊಳ್ಳಬೇಕಿದೆ. ನಾಗರಿಕರು, ಹೂಡಿಕೆದಾರರು, ಮತ್ತು ಬಹುಮುಖಿ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಬೆಳೆಸುವುದು ಮುಖ್ಯವಾಗಿರುತ್ತದೆ. ಈ ಆಕ್ರಮಣಕಾರಿ ರಾಜಕಾರಣದ ವಿರುದ್ಧ ಮೂರ್ತಿಯವರ ಮೌನವೆತ್ತ ಘನತೆ, ಅಧಿಕಾರದಲ್ಲಿರುವವರ ಅಸಹನೀಯ ಭಾಷೆಗೆ ತದ್ವಿರುದ್ಧವಾಗಿದೆ. ನಿಜವಾದ ಸಾಮಥ್ರ್ಯ ಇರುವುದು ಮತ್ತೊಬ್ಬರನ್ನು ಕೂಗಾಡುವ ಮೂಲಕ ಅವರ ಸದ್ದಡಗಿಸುವುದರಲ್ಲಿ ಅಲ್ಲ; ಬದಲಾಗಿ, ಯಾವಾಗ ಮೌನವಾಗಿರಬೇಕು ಎಂದು ಅರ್ಥಮಾಡಿಕೊಳ್ಳುವುದರಲ್ಲಿ ಎನ್ನುವುದನ್ನು ಈ ಪ್ರಸಂಗ ನೆನಪಿಸುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again