ಧರ್ಮಸ್ಥಳದ ಸತ್ಯಗಳನ್ನು ಎಸ್‍ಐಟಿ ಕಂಡುಹಿಡಿಯಲೇಬೇಕಿದೆ


 ರಾಜಕೀಯ ಅನಿವಾರ್ಯತೆಯ ಸಲುವಾಗಿ ನೈತಿಕ ಜವಾಬ್ದಾರಿಯನ್ನು ಸರ್ಕಾರ ಅಲಕ್ಷಿಸಬಾರದು

ಧರ್ಮಸ್ಥಳದ ಸುತ್ತ ಮುತ್ತ ನಡೆದಿರುವ ಅತ್ಯಾಚಾರಗಳನ್ನು, ಅಸಹಜ ಸಾವುಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ನೇಮಿಸಿದ ವಿಶೇಷ ತನಿಖಾ ದಳ (ಎಸ್‍ಐಟಿ) ತನ್ನ ನಿರ್ಣಾಯಕ ಘಟ್ಟವನ್ನು ತಲುಪಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ನೂರಾರು ಕುಟುಂಬಗಳಿಗೆ ಭರವಸೆಯ ಕಿರಣವಾಗಿ ಆರಂಭವಾದ ಎಸ್‍ಐಟಿ ತನಿಖೆಯು ಈಗ ಅವಸರದಲ್ಲಿ ಮುಂಚಿತವಾಗಿಯೇ ಮುಕ್ತಾಯವಾಗುವ ಅನುಮಾನಗಳ ಕಾರ್ಮೋಡಗಳಿಂದ ಆವೃತವಾಗಿದೆ. ಎಸ್‍ಐಟಿ ಮೌನವಾಗಿದ್ದರೂ ಸಹ ಕೆಲವು ಅಧಿಕಾರಿಗಳು ವಿಶ್ವಸನೀಯವಾಗಿ ಹೇಳುವ ಪ್ರಕಾರ ತನಿಖೆಯನ್ನು ಒಂದೆರಡು ತಿಂಗಳ ಒಳಗಾಗಿ ಮುಕ್ತಾಯಗೊಳಿಸುವ ಸೂಚನೆಯನ್ನು ನೀಡುತ್ತಿವೆ. ಈ ವರದಿಗಳು ಸಾರ್ವಜನಿಕರ ಅನುಮಾನಗಳನ್ನು ಹೆಚ್ಚಿಸಿದ್ದು, ಅಂತಿಮವಾಗಿ ತನಿಖೆಯ ಪರಿಪೂರ್ಣತೆಗಿಂತಲೂ ಹೆಚ್ಚಾಗಿ ರಾಜಕೀಯ ಅಸಹನೆ ಅಂತಿಮ ಫಲಿತಾಂಶವನ್ನು ನಿರ್ಧರಿಸಬಹುದು ಎಂಬ ಸಂದೇಹವನ್ನು ದೃಢಪಡಿಸುತ್ತಿದೆ.

ದಕ್ಷಿಣ ಕನ್ನಡದ ಜನರು ಹತಾಶರಾಗಲು ಹಲವು ಕಾರಣಗಳಿವೆ. ಹಲವು ದಶಕಗಳ ಕಾಲ, ಬಾಲಕಿಯರ ಮತ್ತು ಮಹಿಳೆಯರ ಅಸಹಜ ಸಾವುಗಳು, ಆರೋಪಿತ ಲೈಂಗಿಕ ದೌರ್ಜನ್ಯಗಳು ಗುಸುಗುಸು ಮಾತುಗಳಲ್ಲಿ, ಸಾರ್ವಜನಿಕರ ನಡುವೆ ಹರಿದಾಡುತ್ತಿದೆ. ಹಲವಾರು ದೂರುಗಳನ್ನೂ ಸಲ್ಲಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಗಳು ಈ ದುರಂತಗಳು ಕೇವಲ ಊಹೆ ಅಥವಾ ಭ್ರಮೆ ಅಲ್ಲ ಎನ್ನುವುದನ್ನು ನಿರೂಪಿಸಿದ್ದು, ಇದು ಮಾನವ ಸಮಾಜದ ನಿಜವಾದ ಸಂಕಟಗಳು ಮತ್ತು ಉತ್ತರದಾಯಿತ್ವದ ವ್ಯವಸ್ಥಿತ ವೈಫಲ್ಯದ ಫಲ ಎನ್ನುವುದನ್ನು ನಿರೂಪಿಸಿದೆ. ಈ ಪ್ರಮಾಣದ ತನಿಖೆ ಸರಳವಾಗಿರಲು ಸಾಧ್ಯವೇ ಇಲ್ಲ ಆದರೆ ಈಗ ಅದನ್ನು ಮೊಟಕುಗೊಳಿಸುವುದು ಸಂತ್ರಸ್ತರಿಗೆ ವಿಶ್ವಾಸ ದ್ರೋಹ ಬಗೆದಂತಾಗುವುದಷ್ಟೇ ಅಲ್ಲದೆ ನ್ಯಾಯ ವ್ಯವಸ್ಥೆಗೇ ಅನ್ಯಾಯ ಮಾಡಿದಂತಾಗುತ್ತದೆ.

ಮೇಲ್ನೋಟಕ್ಕೆ ಕಾಣುವ ಸರ್ಕಾರದ ಹಿಂಜರಿತವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು ಮತ್ತು ಇತರ ಸಚಿವರ ವರ್ತನೆಯಲ್ಲೇ ಸ್ಪಷ್ಟವಾಗಿ ಕಾಣಬಹುದಾಗಿದ್ದು ಇದು ಜನರ ಅವಿಶ್ವಾಸ ಉಲ್ಬಣಿಸುವಂತೆ ಮಾಡುತ್ತದೆ. ರಾಜಕೀಯ ಅನಿವಾರ್ಯತೆಯ ಸಲುವಾಗಿ ನೈತಿಕ ಜವಾಬ್ದಾರಿಯನ್ನು ಸರ್ಕಾರ ಅಲಕ್ಷಿಸಬಾರದು. ಎಲ್ಲ ಸಂಬಂಧಿತ ಪ್ರಕರಣಗಳ ತನಿಖೆಗಳೂ ಮುಗಿಯುವ ಮುನ್ನವೇ ಎಸ್‍ಐಟಿ ವರದಿಯನ್ನು ಅಂತಿಮಗೊಳಿಸಿದರೆ, ಅದು ನ್ಯಾಯ ಶೋಧನೆಯ ಕ್ರಮವಾಗಿ ಕಾಣುವುದಿಲ್ಲ; ಬದಲಾಗಿ ಸದ್ದಿಲ್ಲದೆ ಸತ್ಯವನ್ನು ಮುಚ್ಚಿಡುವ ಪ್ರಯತ್ನವಾಗಿ ಕಾಣುತ್ತದೆ. ಸರ್ಕಾರಗಳು ಬದಲಾಗುತ್ತವೆ, ಆದರೆ ರಾಜಿಯಾದ ತನಿಖೆಯ ನೆನಪು ಮಾಸುವುದಿಲ್ಲ, ಇದು ಶಾಶ್ವತವಾಗಿ ಸಾರ್ವಜನಿಕರ ಮನಸ್ಸಿನಲ್ಲಿ ಉಳಿಯುತ್ತದೆ.

ಈ ಅನಿಶ್ಚಿತತೆಯ ವಾತಾವರಣದಲ್ಲಿ ಸೌಜನ್ಯಾಳ ತಾಯಿ ಕುಸುಮಾವತಿ ಇತ್ತೀಚೆಗೆ ಸಲ್ಲಿಸಿರುವ ಮನವಿ ಪತ್ರವು ದಿಟ್ಟತನದ ನಡೆಯಾಗಿ ಎದ್ದು ಕಾಣುತ್ತದೆ. ವರುಷಗಳಿಂದ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಎಲ್ಲ ಅಸಹಜ ಸಾವುಗಳನ್ನೂ ತನಿಖೆ ಮಾಡುವಂತೆ ಆಗ್ರಹಿಸುವ ಮೂಲಕ ಕುಸುಮಾವತಿ ಅವರು ಇಡೀ ವಿವಾದವನ್ನು ಮರು ರಚನೆಗೊಳಪಡಿಸಿದ್ದು, ಇದು ಒಂದು ಪ್ರಕರಣ ಅಲ್ಲ, ಬದಲಾಗಿ ಉತ್ತರದಾಯಿತ್ವವಿಲ್ಲದೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಒಂದು ವ್ಯವಸ್ಥಿತ ಸರಣಿ ಎನ್ನುವುದನ್ನು ನಿರೂಪಿಸುತ್ತದೆ. `ಸೌಜನ್ಯಾಗೆ ನ್ಯಾಯ' ಆಂದೋಲನವು ಸರಿಯಾದ ಹಾದಿಯಲ್ಲಿದ್ದು, ಎಸ್‍ಐಟಿ ಈ ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಿದೆ. ಇದನ್ನು ನಿರ್ಲಕ್ಷಿಸಿದರೆ, ಹೋರಾಟಗಾರರಿಗೆ ಉನ್ನತ ನ್ಯಾಯಾಲಯದ ಕಟಕಟೆ ಹತ್ತುವ ಸಾಂವಿಧಾನಿಕ ಹಾಗೂ ನೈತಿಕ ಹಕ್ಕು ಇದೆ.

ಆದ್ದರಿಂದ ಎಸ್‍ಐಟಿ ಅತಿ ಎಚ್ಚರಿಕೆಯಿಂದ ತನ್ನ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಬೇಕಿದೆ. ಏಕೆಂದರೆ ಎಸ್‍ಐಟಿಯ ಕರ್ತವ್ಯ ಇರುವುದು ಜನರ ಕಡೆಗೇ ಹೊರತು ಸರ್ಕಾರದ ಕಡೆಗೆ ಅಲ್ಲ. ಪರೀಕ್ಷೆಗೊಳಪಡದ ಪ್ರತಿಯೊಂದು ಪ್ರಕರಣವೂ ತನಿಖೆಯಲ್ಲಿ ಮಾತ್ರವಲ್ಲದೆ ಸಾಂಸ್ಥಿಕ ನ್ಯಾಯದಲ್ಲೂ ಸಹ ಸಾರ್ವಜನಿಕರ ವಿಶ್ವಾಸವನ್ನು ಕುಂದಿಸುತ್ತದೆ. ಮತ್ತೊಂದು ಬದಿಯಲ್ಲಿ ಪಾರದರ್ಶಕವಾದ, ನಿರ್ಭಿಡೆಯ ತನಿಖೆಯು, ರಾಜಕೀಯವಾಗಿ ಎಷ್ಟೇ ಅನಾನುಕೂಲಗಳನ್ನು ಎದುರಿಸಿದರೂ ಸಹ, ವ್ಯವಸ್ಥೆಯಲ್ಲಿನ ವಿಶ್ವಾಸವನ್ನು ಉಳಿಸುತ್ತದೆ. ಎಷ್ಟೇ ಬಲಾಢ್ಯರಾದರೂ, ಕಾನೂನು ವಿಚಾರಣೆಯನ್ನು ಮೀರಿದವರಲ್ಲ ಎಂಬ ಉತ್ತಮ ಸಂದೇಶವನ್ನು ನೀಡುತ್ತದೆ.

ನಾಗರಿಕರಿಗೂ ತಮ್ಮದೇ ಆದ ಪಾತ್ರ ವಹಿಸಬೇಕಿದೆ. ಒತ್ತಡ ಹೇರುತ್ತಾ, ಪ್ರಶ್ನಿಸುತ್ತಾ ಮುನ್ನಡೆದು, ಸತ್ಯಾಂಶವನ್ನು ಹೊರತರದೆ ತನಿಖೆಯನ್ನು ಮುಕ್ತಾಯಗೊಳಿಸುವುದನ್ನು ನಿರಾಕರಿಸಬೇಕಿದೆ. ಮೌನವಾಗಿದ್ದರೆ ಶಂಕಿತ ಅಪರಾಧಿಗಳಿಗೆ ನೆರವಾಗುತ್ತದೆ. ಎಸ್‍ಐಟಿಯ ಮುಂದಿನ ಹಾದಿ ಮತ್ತು ಸರ್ಕಾರದ ಭವಿಷ್ಯದ ನಡೆ ಸ್ಪಷ್ಟವಾಗಿರಬೇಕಿದೆ. ತನಿಖೆಯನ್ನು ಮತ್ತಷ್ಟು ವಿಸ್ತರಿಸಿ, ಪಾರದರ್ಶಕತೆಯನ್ನು ಖಚಿತಪಡಿಸಿ, ಸಾಕ್ಷಿಗಳನ್ನು ರಕ್ಷಿಸಬೇಕಿದೆ. ಇಲ್ಲವಾರೆ ಧರ್ಮಸ್ಥಳದ ಗಾಯಗಳು ಆಳಕ್ಕಿಳಿದು, ರಾಜ್ಯದ ಪ್ರಜ್ಞೆಯನ್ನೇ ಘಾಸಿಗೊಳಿಸುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again