`ಬಿಗ್ ಬಾಸ್' ಮನೆಗೆ ಬೀಗಮುದ್ರೆ ಮತ್ತು ತೆರವು: ಸಂಯಮವಿಲ್ಲದ ಅಧಿಕಾರ ಬಳಕೆ
ಅಧಿಕಾರವನ್ನು ಎಲ್ಲರಿಗೂ ಕಾಣುವ ಹಾಗೆ ಸಾರ್ವಜನಿಕವಾಗಿ ಹೀಗೆ ಉಪಯೋಗಿಸಬಹುದಾದರೆ, ಮುಚ್ಚಿದ ಬಾಗಿಲುಗಳ ಹಿಂದೆ ಏನು ನಡೆದಿರಬಹುದು?
.............
ನೇರಾನೇರ * ಬಿವಿಸೀ
ಬಿಡದಿಯಲ್ಲಿರುವ `ಬಿಗ್ ಬಾಸ್' ಕನ್ನಡ ಕಾರ್ಯಕ್ರಮ ನಡೆಯುವ ಮನೆಯಲ್ಲಿ ಏನು ನಡೆಯಿತು ಎನ್ನುವುದು ಇನ್ನೂ ಗೊಂದಲದಲ್ಲಿದೆ. ನಡುರಾತ್ರಿಯಲ್ಲಿ ಬಿಗ್ ಬಾಸ್ ಮನೆಯನ್ನು ವಶಪಡಿಸಿಕೊಂಡು ಬೀಗ ಹಾಕಲು ಆದೇಶಿಸಿದ ಕೆಲವೇ ದಿನಗಳ ನಂತರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಮನಗರದ ಉಪ ಆಯುಕ್ತರಿಗೆ ಕರೆ ಮಾಡಿ, ಬೀಗ ತೆರೆದು ಕಟ್ಟಡವನ್ನು ಮುಕ್ತಗೊಳಿಸಲು ಆದೇಶಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ಪಾತ್ರಧಾರಿಗಳು ಮನೆಯೊಳಗೆ ಪ್ರವೇಶಿಸಿದ್ದು, ಕ್ಯಾಮರಾಗಳು ಮತ್ತೆ ಚಾಲನೆ ಪಡೆದಿವೆ. ಏನೂ ನಡೆದೇ ಇಲ್ಲ ಎನ್ನುವಂತೆ ಘಟನೆಗಳು ಸಂಭವಿಸಿವೆ. ಬೀಗ ಹಾಕುವುದು ಮತ್ತು ತೆಗೆಯುವ ಪ್ರಕ್ರಿಯೆಗಳು ಎರಡೂ ಸಹ ರಹಸ್ಯವಾಗಿ ನಡೆದಿದ್ದು, ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ ಎನ್ನುವುದು ಹೊರಗೆಡಹುವ ಆಘಾತಕಾರಿ ಸತ್ಯ. ಈ ಸರ್ಕಾರ ನಡೆದುಕೊಳ್ಳುವ ರೀತಿಗೆ ಕಾನೂನು ಮತ್ತು ನಿಯಮಗಳು ಅನ್ವಯಿಸುವುದಿಲ್ಲ, ಕೇವಲ ಪ್ರಬಲ ವ್ಯಕ್ತಿಯ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ.
ಮೊದಲನೆಯ ಸಲ ಬೀಗ ಹಾಕಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ (ಕೆಎಸ್‍ಪಿಸಿಬಿ) ಸುಪರ್ದಿಯಲ್ಲಿ; ಆದರೂ ಅಲ್ಲಿ ಪರಿಸರದ ಪ್ರಶ್ನೆಯೇ ಇರಲಿಲ್ಲ. ಇದು ರಾಜಕೀಯ ಒತ್ತಡದಿಂದ ನಡೆದಿತ್ತೇ ಹೊರತು ನಿಯಮಾನುಸಾರ ಅಲ್ಲ. ಇದೇ ಮಂಡಲಿ ಕಾರ್ಖಾನೆಗಳ ಮಾಲಿನ್ಯವನ್ನು, ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದು, ಹಠಾತ್ತನೆ ಟಿವಿ ಸ್ಟುಡಿಯೋ ವಿಚಾರದಲ್ಲಿ ಮನಸ್ವೇಚ್ಛೆ ವರ್ತಿಸಿದೆ. ಈಗ ಅಷ್ಟೇ ಅವಸರದಲ್ಲಿ ಈ ಪ್ರಜ್ಞೆ ಮಾಯವಾಗಿದೆ. ಬೀಗ ಹಾಕಿ ಮತ್ತೆ ತೆರೆದಿರುವುದು ತೋರಿಸುವ ಮತ್ತೊಂದು ಸಂಗತಿ ಎಂದರೆ, ಡಿ ಕೆ ಶಿವಕುಮಾರ್ ಎರಡೂ ಪ್ರಕ್ರಿಯೆಗಳ ರೂವಾರಿಯಾಗಿದ್ದಾರೆ.
ಈ ಘಟನೆಯಲ್ಲಿ ಅಧಿಕಾರಸ್ಥರ ವರ್ತನೆಯು ಒಂದು ಮಾದರಿ! ಕೆಲವೇ ವಾರಗಳ ಮುನ್ನ ಉಪಮುಖ್ಯಮಂತ್ರಿ ಮನರಂಜನಾ ಉದ್ಯಮದ `ನಟ್ & ಬೋಲ್ಟ್ ಹೇಗೆ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ' ಎಂದು ಅಬ್ಬರಿಸಿದ್ದರು. ಅವರ ರಾಜಕೀಯ ಅವಶ್ಯಕತೆಗಳಿಗೆ ಸ್ಪಂದಿಸದೆ ಇರುವ ನಿರ್ಮಾಪಕರು ಮತ್ತು ಚಾನೆಲ್‍ಗಳಿಗೆ ಇದು ಎಚ್ಚರಿಕೆಯಾಗಿತ್ತು. ಬಿಗ್ ಬಾಸ್ ಪ್ರಕರಣವು ಈ ಎಚ್ಚರಿಕೆಯ ಪ್ರಾತ್ಯಕ್ಷಿಕೆಯಾಗಿ ಕಾಣುತ್ತದೆ. ಅವಸರದಲ್ಲಿ ಕ್ರಮ ಕೈಗೊಂಡು, ನಿಧಾನವಾಗಿ ಪಶ್ಚಾತ್ತಾಪ ಪಡುವುದು ಶಿವಕುಮಾರ್ ಆಳ್ವಿಕೆಯ ಮಾದರಿಯಾಗಿದೆ. ಆದರೆ ಈ ರೀತಿಯ ಆಳ್ವಿಕೆಯು ಹಲವು ಜೀವನಗಳನ್ನು ಬಾಧಿಸುವುದೇ ಅಲ್ಲದೆ, ಕಾನೂನು ಸಂಸ್ಥೆಗಳನ್ನು ನಗಣ್ಯಗೊಳಿಸುತ್ತದೆ.
ಇಲ್ಲಿ ಕಾಡುವ ಕಾಳಜಿ ಎಂದರೆ ಒಂದು ಟಿವಿ ಪ್ರದರ್ಶನದ ಭವಿಷ್ಯವನ್ನು ಕುರಿತು ಅಲ್ಲ; ಬದಲಾಗಿ, ಸಾಂಸ್ಥಿಕ ಪ್ರಾಮಾಣಿಕತೆಯ ನಾಶ. ಒಬ್ಬ ಸಚಿವರು ಒಂದು ಖಾಸಗಿ ಉದ್ಯಮದ ಕಟ್ಟಡಕ್ಕೆ ಬೀಗ ಹಾಕಿ ತೆಗೆಯುವುದು, ಅದೂ ಯಾವುದೇ ಕಾನೂನು ಅನುಮತಿ ಇಲ್ಲದೆ, ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಹೀಗೆ ಮಾಡುವುದು, ಆಡಳಿತಾತ್ಮಕ ನಿಯಂತ್ರಣ ಮತ್ತು ಸಮತೋಲನ ಕುಸಿದಿರುವುದನ್ನು ಸೂಚಿಸುತ್ತದೆ. ಕೆಎಸ್‍ಪಿಸಿಬಿ ಶಾಸನಬದ್ಧ ಸಂಸ್ಥೆಯಿಂದ ಸಾಧಾರಣ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದ್ದು, ಜನರ ದೃಷ್ಟಿಯಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆ ನಾಶವಾಗಿದೆ.
ನೂರಾರು ತಂತ್ರಜ್ಞರು, ಕಾರ್ಮಿಕರು ಹಲವು ದಿನಗಳ ಕೆಲಸ ಮತ್ತು ವೇತನ ಕಳೆದುಕೊಂಡಿರುವುದು, ಡಿ ಕೆ ಶಿವಕುಮಾರ್ ಅವರ ಏಕಪಕ್ಷೀಯ ವರ್ತನೆಯಿಂದ. ಡಿ ಕೆ ಶಿವಕುಮಾರ್ ಅವರ ಕ್ಷಮೆ ಕೋರಬೇಕು. ಜವಾಬ್ದಾರಿ ಇಲ್ಲದೆ ತಮ್ಮ ಅಧಿಕಾರ ಚಲಾಯಿಸುವ ನಾಯಕರು ತಮ್ಮ ಹುದ್ದೆ ಮತ್ತು ಪಕ್ಷ ಎರಡನ್ನೂ ಅಪಮಾನಗೊಳಿಸುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಸಾರ್ವಜನಿಕವಾಗಿ ಪಕ್ಷದ ರಾಜ್ಯಾಧ್ಯಕ್ಷರನ್ನು ಖಂಡಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ಛೀಮಾರಿ ಹಾಕಬೇಕಿದೆ.
ಬಿಗ್ ಬಾಸ್ ಮನೆಯು ಈಗ ತೆರೆದಿರಬಹುದು. ಆದರೆ ಈ ಇಡೀ ಘಟನೆ ಒಂದು ಸದಾ ಕಾಡುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಧಿಕಾರವನ್ನು ಎಲ್ಲರಿಗೂ ಕಾಣುವ ಹಾಗೆ ಸಾರ್ವಜನಿಕವಾಗಿ ಹೀಗೆ ಉಪಯೋಗಿಸಬಹುದಾದರೆ, ಮುಚ್ಚಿದ ಬಾಗಿಲುಗಳ ಹಿಂದೆ ಏನು ನಡೆದಿರಬಹುದು? ಮನಸೋಯಿಚ್ಛೆ ಆಳ್ವಿಕೆಯನ್ನು ಅಹಂಕಾರದಿಂದ ಚಲಾಯಿಸುವುದು ತರವಲ್ಲ. ಕರ್ನಾಟಕ ಇದನ್ನೂ ಮೀರಿದ ಉತ್ತಮ ವರ್ತನೆಯನ್ನು ಅಪೇಕ್ಷಿಸುತ್ತದೆ.
Comments
Post a Comment