ಸರಕಾರದ ಸಂಪನ್ಮೂಲ ಲೂಟಿಗೆ ಎಡೆಯಾದ ಶಾಸಕರ ಅನುದಾನಗಳು
ಅಭಿವೃದ್ಧಿ ಎನ್ನುವುದು ಶಾಸಕರ, ಅಧಿಕಾರಿಗಳ, ಗುತ್ತಿಗೆದಾರರ ಖಾಸಗಿ ಸ್ವತ್ತಾದರೆ ಸಾರ್ವಜನಿಕರಿಗೆ ದಕ್ಕುವುದು ಏನು?
ಕರ್ನಾಟಕದ ರಾಜಕಾರಣವು ಪ್ರಕ್ಷುಬ್ಧವಾದ ಚಿತ್ರಣವನ್ನು ಪ್ರಸ್ತುತಪಡಿಸುತ್ತಿದೆ. ಎಮ್‍ಎಲ್‍ಎಗಳು ಮತ್ತು ಎಮ್‍ಎಲ್‍ಸಿಗಳು ಸಮನಾಗಿ, ಸರ್ಕಾರದಿಂದ ಅಭಿವೃದ್ಧಿ ಹೆಸರಿನಲ್ಲಿ ಅನುದಾನವೆಂಬ ನಿಧಿ ಕೊಳ್ಳೆ ಹೊಡೆಯುತ್ತಿದ್ದಾರೆ. ಸತತವಾಗಿ ಎಲ್ಲ ಸರ್ಕಾರಗಳೂ, ಶಾಸಕರಿಗೆ ಅನುದಾನ ನೀತಿಯ ಅನುಸಾರ ಇದನ್ನು ಒದಗಿಸುತ್ತಲೂ ಬಂದಿವೆ. ಒಂದು ತಪ್ಪು ಅಭ್ಯಾಸವಾಗಿ ಆರಂಭವಾದ ಈ ನೀತಿಯು ಈಗ ಆಡಳಿತ ನೀತಿಯೇ ಆಗಿದೆ. ಹಾಲಿ ಸರ್ಕಾರವು, ಈ ಮುನ್ನ ತನ್ನ ಪಕ್ಷದವರಿಗೆ ಮಾತ್ರವೇ ಅನುದಾನ ಮಂಜೂರಿಸುವ ಆಪಾದನೆ ಎದುರಿಸುತ್ತಿತ್ತು. ಈಗ ಈ ಸೌಲಭ್ಯವನ್ನು ವಿರೋಧ ಪಕ್ಷದ ಶಾಸಕರಿಗೂ ವಿಸ್ತರಿಸಿದೆ. ಪಕ್ಷಾತೀತವಾಗಿ ಎಲ್ಲೆಡೆಯೂ ಸಂಭ್ರಮ ಮೂಡಿದೆ. ಆದರೆ ಇಲ್ಲಿ ಲೂಟಿ ಎನ್ನುವುದು ನ್ಯಾಯಯುತ ಎನಿಸಿಬಿಟ್ಟಿದೆ.
ಹೈಜಾಕ್ ಆದ ಅಭಿವೃದ್ಧಿ
ಚುನಾವಣಾ ಕ್ಷೇತ್ರಗಳ, ಜಿಲ್ಲೆಗಳ ಅಗತ್ಯತೆಗಳ ನಿಷ್ಪಕ್ಷಪಾತ ಪರಿಶೀಲನೆ ಮಾಡುವ ನೀತಿಯನ್ನು ಕೈಬಿಟ್ಟು ಅಭಿವೃದ್ಧಿಯನ್ನು ಪೆÇೀಷಕತ್ವದ ಮೂಲಕ ಹೈಜಾಕ್ ಮಾಡಲಾಗಿದೆ. ಶಾಸಕರು ಯೋಜನೆಗಳನ್ನು ನಿಯಂತ್ರಿಸುವ ಮೂಲಕ ಗುತ್ತಿಗೆಗಳನ್ನು ಪಡೆದುಕೊಳ್ಳುತ್ತಾ, ಬಿಲ್ ಕ್ಲಿಯರೆನ್ಸ್ ಪ್ರಕ್ರಿಯೆ ಮೇಲೆ ಹತೋಟಿ ಸಾಧಿಸಿದ್ದಾರೆ. ತತ್ಪರಿಣಾಮವಾಗಿ ಜನಪ್ರತಿನಿಧಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ಅಕ್ರಮ ಸಂಬಂಧಗಳು ಏರ್ಪಟ್ಟು ಸಾರ್ವಜನಿಕರ ಹಣವನ್ನು, ಒಂದು ರಸ್ತೆಯನ್ನೂ ನಿರ್ಮಿಸದೆ, ಶಾಲೆಯನ್ನೂ ಕಟ್ಟದೆ, ಚರಂಡಿಯನ್ನೂ ದುರಸ್ತಿ ಮಾಡದೆ ಕಬಳಿಸಲಾಗುತ್ತಿದೆ.
ಸಿಎಜಿ ಎಚ್ಚರಿಕೆಯ ಮಾತುಗಳು
ಈ ಪರಂಪರೆಯು ಹಲವು ದಶಕಗಳ ಕಾಲ ಎಮ್‍ಎಲ್‍ಎ ಸ್ಥಳೀಯ ಅಭಿವೃದ್ಧಿ ಯೋಜನೆ (ಎಮ್‍ಎಲ್‍ಎಎಲ್‍ಎಡಿಎಸ್ ) ಯೋಜನೆಯ ಹೆಸರಿನಲ್ಲಿ ಜಾರಿಯಲ್ಲಿತ್ತು. ಇದು ಭ್ರಷ್ಟಾಚಾರಕ್ಕೆ ಫಲವತ್ತಾದ ಭೂಮಿಕೆಯಾಗುತ್ತದೆ ಎಂದು ಸಿಎಜಿ ಸತತವಾಗಿ ಎಚ್ಚರಿಸುತ್ತಲೇ ಬಂದಿದೆ.
ಇತ್ತೀಚಿನ ಸಿಎಜಿ ವರದಿಯಲ್ಲಿ ದುರ್ಬಳಕೆಯ ವ್ಯಾಪ್ತಿಯನ್ನು ನೀಡಲಾಗಿದೆ: 2017-18 ರಿಂದ 2021-22ರ ಅವಧಿಯಲ್ಲಿ ಖಾಸಗಿ ದೇವಸ್ಥಾನಗಳಿಗಾಗಿ ಬಿಡುಗಡೆ ಮಾಡಿದ 187.81 ಕೋಟಿ ರೂ.ಗಳಿಗೆ ಯಾವುದೇ ಪ್ರಸ್ತಾವನೆಯನ್ನೇ ನೀಡಲಾಗಿಲ್ಲ.
ಮಾರ್ಚ್ 2022ರ ವೇಳೆಗೆ ರಾಜ್ಯದಲ್ಲಿ 78 ವೈಯುಕ್ತಿಕ ಠೇವಣಿ ಖಾತೆಗಳಲ್ಲಿ 4,105 ಕೋಟಿ ರೂ.ಗಳನ್ನು ಖರ್ಚು ಮಾಡದೆ ಉಳಿಸಲಾಗಿದೆ. ಈ ನಿಧಿಗಳು ರಾಜ್ಯದ ಸಂಚಿತ ನಿಧಿಗೆ ಹಿಂತಿರುಗಿಸುವ ಬದಲು, ಅಪಾರದರ್ಶಕ ವಾಹಿನಿಗಳಲ್ಲಿ ಕೂಡಿಡಲಾಗಿದ್ದು, ಇದು ದುರ್ಬಳಕೆ, ವಂಚನೆ ಮತ್ತು ದುವ್ರ್ಯವಹಾರಗಳಿಗೆ ಕಾರಣವಾಗುತ್ತದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ಹೋಟೆಲ್‍ಗಳಿಗಾಗಿ ಖರೀದಿಸಿದ 14 ಕೋಟಿ ರೂ ಮೌಲ್ಯದ ಚಪಾತಿ ಮಾಡುವ ಯಂತ್ರ ಬಳಕೆಯಾಗದೆ ಬಿದ್ದಿವೆ. ಯಾದಗಿರಿಯಲ್ಲಿ ಸಂಸದರ ಅಭಿವೃದ್ಧಿ ಅನುದಾನದಿಂದ 55 ಕೋಟಿ ರೂ.ಗಳನ್ನು ಎಗರಿಸಲಾಗಿದ್ದು, ನಕಲಿ ದಾಖಲೆಗಳು ಮತ್ತು ಕಾಮಗಾರಿಗಳು ನಡೆಯದಿರುವುದನ್ನು ಕಾರಣ ಎಂದು ಗುರುತಿಸಲಾಗಿದೆ.
ಈ ಸಾಕ್ಷ್ಯಗಳೇ ಸಾಕಷ್ಟಾಗಿದ್ದು, ಶಾಸಕರು ಹಣಕಾಸು ನಿಯಂತ್ರಣ ಮಾಡುವುದರಿಂದ ಉತ್ತರದಾಯಿತ್ವ ಇಲ್ಲವಾಗುತ್ತದೆ ಎನ್ನುವುದಕ್ಕೆ ಸಂಕೇತವೂ ಆಗಿದೆ.
ವಿರೋಧ ಪಕ್ಷಗಳ ಠಕ್ಕುತನ
ವಿರೋಧ ಪಕ್ಷದ ಶಾಸಕರು, ಅಭಿವೃದ್ಧಿಗಾಗಿ ಹಣ ನೀಡಲಾಗುತ್ತಿಲ್ಲ ಎಂದು ಸಾರ್ವಜನಿಕವಾಗಿ ಗೋಳಾಡುತ್ತಿದ್ದರೂ, ಈಗ ಸರ್ಕಾರದ ಔದಾರ್ಯದಿಂದ ಸಂತೃಪ್ತರಾಗಿದ್ದಾರೆ. ಇದು ಒಂದು ಸತ್ಯವನ್ನು ಸಾಬೀತುಪಡಿಸುತ್ತದೆ. ಈ ಅನುದಾನಗಳು ಅಭಿವೃದ್ಧಿಗಾಗಿ ಅಲ್ಲ, ಬದಲಾಗಿ ಲೂಟಿಯ ಒಂದು ಪಾಲನ್ನು ಕಬಳಿಸಲು ಇದೆ. ಅಭಿವೃದ್ಧಿಗಾಗಿ ಮೀಸಲಿಟ್ಟ ಅರ್ಧಕ್ಕಿಂತಲೂ ಹೆಚ್ಚು ಹಣವನ್ನು, ಕೆಲವೊಮ್ಮೆ ಇನ್ನೂ ಹೆಚ್ಚಿನ ಹಣವನ್ನು, ಹೆಚ್ಚುವರಿ ಬಿಲ್‍ಗಳ ಮೂಲಕ, ಅರೆಬರೆ ಕಾಮಗಾರಿಗಳ ಮೂಲಕ, ಕಮಿಷನ್‍ಗಳ ಮೂಲಕ ಕಬಳಿಸಲಾಗುತ್ತದೆ.
ಅಪಾಯದಲ್ಲಿ ಪ್ರಜಾತಂತ್ರ
ಇದರ ಪರಿಣಾಮಗಳು ಗಂಭೀರವಾದದ್ದು. ಅಭಿವೃದ್ಧಿ ಯೋಜನೆಯ ಜಾಗದಲ್ಲಿ ಚೌಕಾಸಿ ಮುಖ್ಯವಾಗಿದೆ. ಶಾಸಕರು ಮೂಲತಃ ಗುತ್ತಿಗೆದಾರರಾಗಿದ್ದಾರೆಯೇ ಹೊರತು ರಕ್ಷಕರಂತೂ ಅಲ್ಲ. ಅಧಿಕಾರಶಾಹಿಯು ಲೂಟಿ ಮಾಡುವ ಪರಂಪರೆಯನ್ನು ಅಳವಡಿಸಿಕೊಂಡು, ಇದರಲ್ಲಿ ಗುತ್ತಿಗೆದಾರರಿಗೂ ಅವರ ಪಾಲನ್ನು ಕೊಡುತ್ತದೆ. ನಾಗರಿಕ ಸಮಾಜವು ಮೌನ ವೀಕ್ಷಕನಾಗಿದ್ದು, ರಾಜಕೀಯ ಪಕ್ಷಗಳು ಶಾಮೀಲಾಗಿವೆ. ಕೊನೆಗೆ ರಾಜ್ಯದ ಹಣಕಾಸು ಸ್ವಾಸ್ಥ್ಯವು ಸಂಕಟ ಅನುಭವಿಸುತ್ತದೆ, ಕೋಟ್ಯಂತರ ರೂ ಕಣ್ಮರೆಯಾಗುತ್ತವೆ.
ಪದ್ಧತಿ ರದ್ದುಪಡಿಸಿ
ಈ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸದೆ ಹೋದರೆ, ಶಾಸಕರ ನಿಯಂತ್ರಣದ ಅನುದಾನಗಳು ಕಾನೂನಾತ್ಮಕ ಲೂಟಿ ಆಗುತ್ತದೆ. ಇದನ್ನು ಪ್ರತಿಯೊಂದು ಸರ್ಕಾರವೂ ಮಾನ್ಯ ಮಾಡುತ್ತದೆ. ನ್ಯಾಯಾಂಗವು ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿ, ಅಭಿವೃದ್ಧಿಗಾಗಿ ಇರುವ ಹಣಕಾಸು ನಿಧಿಯು ರಾಜಕಾರಣಿಗಳ ಖಾಸಗಿ ಭಂಡಾರವನ್ನು ತುಂಬಿಸುವ ಸಾಧನವಾಗುತ್ತಿದೆ ಎನ್ನುವುದನ್ನು ಪರಾಮರ್ಶಿಸಬೇಕಿದೆ.
Comments
Post a Comment