ಧರ್ಮಸ್ಥಳ ಮತ್ತು ಎಸ್‍ಐಟಿ - ನ್ಯಾಯದ ವಿರುದ್ಧ ಪಿತೂರಿ

ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯ ಅಧಿಕಾರದಲ್ಲಿರುವವರಿಂದ ಒದಗುವುದಿಲ್ಲ, ಜನರು ಒಕ್ಕೊರಲಿನಿಂದ ಆಗ್ರಹಿಸಿದಾಗ ಬರುತ್ತದೆ. ಈ ದನಿಯನ್ನು ದಾಖಲಿಸಲು, ಎತ್ತರಿಸಲು ಇದು ಸಕಾಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ತಮ್ಮ ಮುಖವಾಡವನ್ನು ಕಳಚಿಹಾಕಿದ್ದಾರೆ. ``ಧರ್ಮಸ್ಥಳದ ದೇವಸ್ಥಾನದ ಬಗ್ಗೆ ಇರುವ ಅನುಮಾನಗಳನ್ನು ತೊಡೆದುಹಾಕುವ ಉದ್ದೇಶದಿಂದ ಎಸ್‍ಐಟಿ ರಚಿಸಿದ್ದೇವೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ವತಃ ಅದನ್ನು ಸ್ವಾಗತಿಸಿದ್ದಾರೆ'' ಎಂದು ಘೋಷಿಸುವ ಮೂಲಕ ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರಕ್ಕೆ ಸತ್ಯವನ್ನು ಶೋಧಿಸುವ ಅಥವಾ ನ್ಯಾಯ ಒದಗಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂಬ ಜನಸಾಮಾನ್ಯರ ಆತಂಕವನ್ನು ಈ ಘೋಷಣೆ ದೃಢೀಕರಿಸಿದೆ. ಎಸ್‍ಐಟಿ ತನಿಖೆಯು ಸಂತ್ರಸ್ತರಿಗೆ ಅನುಕಂಪ ತೋರಿಸಲಾಗಲಿ ಅಥವಾ ಕಾನೂನು ನಿಯಮಗಳಿಗೆ ಬದ್ಧತೆಯಿಂದಾಗಲೀ ಆದೇಶಿಸಿಲ್ಲ, ಬದಲಾಗಿ ಒಂದು ಪ್ರಬಲ ಕುಟುಂಬವನ್ನು ರಕ್ಷಿಸುವ ಸಲುವಾಗಿ ರಾಜಕೀಯ ಲೆಕ್ಕಾಚಾರಗಳ ನೆಲೆಯಲ್ಲಿ ರಚಿಸಲಾಗಿದೆ ಎನ್ನುವುದನ್ನು ಸಿದ್ದರಾಮಯ್ಯ ಅವರ ಹೇಳಿಕೆ ಸ್ಪಷ್ಟಪಡಿಸುತ್ತದೆ

ಇದು ನಿರಾಶಾದಾಯಕ ಮಾತ್ರವೇ ಅಲ್ಲ, ಅತ್ಯುನ್ನತ ಮಟ್ಟದ ಹಗರಣ ಎನ್ನಬಹುದು. ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳು, ಅತ್ಯಾಚಾರಗಳು, ಹತ್ಯೆಗಳು, ನಾಪತ್ತೆ ಪ್ರಕರಣಗಳು, ಸುಲಭವಾಗಿ ಮೂಲೆಗೆ ತಳ್ಳುವಂತಹ ಕ್ಷುಲ್ಲಕ ಅಪರಾಧಗಳಲ್ಲ. ಇದು ಜನಾಂಗೀಯ ಹತ್ಯೆಗೆ ಸಮಾನವಾದುದು. ನ್ಯಾಯಕ್ಕಾಗಿ ಸಂತ್ರಸ್ತರು, ಕುಟುಂಬದವರು ಆಗ್ರಹಿಸುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳು ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿವೆ, ಒಂದಲ್ಲ ಒಂದು ದಿನ ಸತ್ಯ ಹೊರಬರುತ್ತದೆ ಎಂಬ ಭರವಸೆಯೊಂದಿಗೆ ಕಾಯುತ್ತಿದ್ದಾರೆ. ಆದರೆ ಸರ್ಕಾರವು ಎಸ್‍ಐಟಿ ತನಿಖೆಯನ್ನು ಒಂದು ಸಾರ್ವಜನಿಕ ಸಂಪರ್ಕ (ಪಿ ಆರ್) ಕ್ರಿಯೆಯ ರೀತಿಯಲ್ಲಿ ನಡೆಸುತ್ತಿರುವುದು ಈ ಜನರನ್ನು ಅಣಕಿಸಿದಂತಾಗಿದೆ. ಇಲ್ಲಿ ಸಂದೇಶ ಅಘಾತಕಾರಿಯಾದುದು, ಪ್ರಬಲರನ್ನು ರಕ್ಷಿಸುವ ಸಲುವಾಗಿ ಸರ್ಕಾರ ತನ್ನ ಸಂಸ್ಥೆಗಳನ್ನು ಹೇಗೆ ಬೇಕಾದರೂ ಬಗ್ಗಿಸುತ್ತದೆ, ಅದರಿಂದ ದುರ್ಬಲರು ತುಳಿಯಲ್ಪಟ್ಟರೂ ಚಿಂತಿಸುವುದಿಲ್ಲ.

ಸ್ಪಷ್ಟವಾಗಿ ಹೇಳುವುದಾದರೆ, ಎಸ್‍ಐಟಿ ತನಿಖೆಯನ್ನು ನಡೆಸುತ್ತಿಲ್ಲ. ದುರ್ವಾಸನೆ ಹೊರಡುತ್ತಿರುವ ಅಪರಾಧ ಕೃತ್ಯಗಳನ್ನು ಮುಚ್ಚಿಹಾಕುವುದರಲ್ಲಿ, ಸ್ವಚ್ಚಗೊಳಿಸುವಲ್ಲಿ ತೊಡಗಿದೆ. ಅದರ ಉದ್ದೇಶ ಅತ್ಯಾಚಾರಿಗಳನ್ನು, ಹಂತಕರನ್ನು ಗುರುತಿಸುವುದಲ್ಲ; ಬದಲಾಗಿ, ಧರ್ಮಸ್ಥಳ ಮತ್ತು ಹೆಗ್ಗಡೆಗಳ ಗೌರವವನ್ನು ಕಾಪಾಡುವುದು. ಇದು ತನಿಖೆ ಎನಿಸಿಕೊಳ್ಳುವುದಿಲ್ಲ, ಬದಲಾಗಿ ಕಾನೂನಿನ ಹೆಸರಿನಲ್ಲಿ ಮುಚ್ಚಿಹಾಕುವ ಪ್ರಕ್ರಿಯೆಯಾಗಿ ಕಾಣುತ್ತದೆ.

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ ಒಂದೇ ಧ್ವನಿಯಲ್ಲಿ ಮಾತನಾಡುವಾಗ, ಎಸ್‍ಐಟಿ ಸ್ವತಂತ್ರ ತಂಡ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದು ಕೇವಲ ರಾಜಕೀಯ ಬೊಂಬೆಯಾಟವಾಗಿದೆ.

ನಾಗರಿಕರು, ಇಡೀ ತನಿಖೆಯನ್ನು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನಡೆಸಲು ಆಗ್ರಹಿಸಿದ್ದರು. ಈ ಬೇಡಿಕೆಯನ್ನು ಮತ್ತೆ ಮತ್ತೆ ನಿರ್ಲಕ್ಷಿಸುತ್ತಲೇ ಬರಲಾಯಿತು. ಏಕೆಂದರೆ, ಹಾಲಿ ನ್ಯಾಯಮೂರ್ತಿಗಳಾದರೆ ಸತ್ಯಾಂಶಗಳನ್ನು ಬಯಲಿಗೆಳೆಯಲು ಒತ್ತಾಯಿಸುತ್ತಾರೆ. ಆದರೆ ಸರ್ಕಾರದ ಉದ್ದೇಶ ಇರುವುದು ಅದನ್ನು ಮುಚ್ಚಿಹಾಕುವುದಾಗಿದೆ. ಏಕೆಂದರೆ ಸತ್ಯ ಅಪಾಯಕಾರಿಯಾಗುತ್ತದೆ, ಅದು ದಶಕಗಳ ಕಾಲ ಕಾಪಾಡಿಕೊಂಡು ಬಂದ ಗೌರವವನ್ನು ಮಣ್ಣುಪಾಲು ಮಾಡುತ್ತದೆ. ಕರ್ನಾಟಕದಲ್ಲಿ ಪ್ರಬಲ ವ್ಯಕ್ತಿಗಳ ಗೌರವ ಘನತೆಗಳೇ ದುರ್ಬಲರ ನ್ಯಾಯಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಅತಿ ದೊಡ್ಡ ವಿಶ್ವಾಸದ್ರೋಹ ಕಾಣುವುದು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಐಕ್ಯತೆಯಲ್ಲಿ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸಾರ್ವಜನಿಕವಾಗಿ ಪರಸ್ಪರ ದೋಷಾರೋಪಗಳಲ್ಲಿ ನಿರತವಾಗಿದ್ದರೂ ಇಲ್ಲಿ ಒಂದೇ ನೆಲೆಯಲ್ಲಿ ಕಾಣುತ್ತವೆ. ಧರ್ಮಸ್ಥಳದ ಗಣ್ಯರನ್ನು ರಕ್ಷಿಸುವ ಪ್ರಶ್ನೆ ಬಂದಾಗ, ಒಂದೇ ದನಿಯಲ್ಲಿ ಮಾತನಾಡುತ್ತವೆ. ಜೆಡಿಎಸ್ ಮತ್ತು ಬಿಜೆಪಿಯ ಮೌನ, ಕಾಂಗ್ರೆಸ್ ಪಕ್ಷದ ಪ್ರಬಲ ಸಮರ್ಥನೆ, ರಾಜಕೀಯ ವರ್ಗಗಳು ಒಟ್ಟಾರೆಯಾಗಿ ಒಂದು ಒಪ್ಪಂದಕ್ಕೆ ಬಂದಿರುವುದನ್ನು ಸೂಚಿಸುತ್ತದೆ. ಏನೇ ಆಗಲೀ ಹೆಗ್ಗಡೆ ಕುಟುಂಬವನ್ನು ರಕ್ಷಿಸುವುದು ಈ ಒಪ್ಪಂದದ ತಿರುಳು. ಪಕ್ಷಾತೀತವಾಗಿ ಆಳುವವರು ಒಂದಾದಾಗ, ಜನರ ಪರ ನಿಲ್ಲುವವರು ಯಾರು?

ಈಗಿನ ಪರಿಸ್ಥಿತಿಯಲ್ಲಿ ಎಸ್‍ಐಟಿ ತಪ್ಪು ದಾರಿಯಲ್ಲಿರುವ ತನಿಖೆಯ ಹಾದಿಯಲ್ಲಿದೆ. ಇದು ನ್ಯಾಯದ ವಿರುದ್ಧ ನಡೆಯುತ್ತಿರುವ ಪಿತೂರಿ. ಸರ್ಕಾರಿ ಪ್ರೇರಿತ ಸತ್ಯದ ಸಮಾಧಿ. ಪ್ರತಿ ದಿನವೂ ಇದು ಕಾರ್ಯಗತವಾಗುತ್ತಿದ್ದು, ಸಂತ್ರಸ್ತರ ಮತ್ತು ಕುಟುಂಬದವರ ನೆನಪುಗಳನ್ನು ಅಪಮಾನಿಸಲಾಗುತ್ತಿದೆ, ವಿಶ್ವಾಸದ್ರೋಹದ ಗಾಯಗಳು ಇನ್ನೂ ಉಲ್ಬಣಿಸುತ್ತಿದೆ.

ನಾಗರಿಕರು ಮೌನವಾಗಿ ಕುಳಿತರೆ ಸಾಲದು. ಈ ಮುಚ್ಚಿಹಾಕುವ ವಿಶಾಲ ತಂತ್ರವನ್ನು ಒಪ್ಪಿಕೊಂಡರೆ, ನಾವು ಅಪರಾಧಗಳಲ್ಲಿ ಶಾಮೀಲಾದಂತೆ ಆಗುತ್ತದೆ. ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯ ಅಧಿಕಾರದಲ್ಲಿರುವವರಿಂದ ಒದಗುವುದಿಲ್ಲ, ಜನರು ಒಕ್ಕೊರಲಿನಿಂದ ಆಗ್ರಹಿಸಿದಾಗ ಬರುತ್ತದೆ. ಈ ದನಿಯನ್ನು ದಾಖಲಿಸಲು, ಎತ್ತರಿಸಲು ಇದು ಸಕಾಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again