ಕರಾವಳಿ ಕರ್ನಾಟಕಕ್ಕೆ ನಿತಿನ್ ಗಡ್ಕರಿ ಸಚಿವಾಲಯದ ವಿಶ್ವಾಸ ದ್ರೋಹ
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಮ್ಮ ಸಂಸದರು ವಿಫಲವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚಿನ ದಿನಗಳಲ್ಲಿ ಅವರ ಆಧ್ಯಾತ್ಮಿಕ ಉಪನ್ಯಾಸಗಳಿಗೆ ಹೆಸರಾಗುತ್ತಿದ್ದಾರೆಯೇ ಹೊರತು, ಭಾರತದ ರಸ್ತೆಗಳ ಅಭಿವೃದ್ಧಿಗಾಗಿ ಅಲ್ಲ. ಗಡ್ಕರಿ ದೇಶದ ಹೆದ್ದಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿಲ್ಲದಿದ್ದರೆ, ಈ ವರ್ತನೆಯೇನೂ ಹಾನಿಕರವಾಗಿ ಕಾಣುತ್ತಿರಲಿಲ್ಲ. ಭಾರತದಾದ್ಯಂತ ರಸ್ತೆಗಳು ಶಿಥಿಲವಾಗುತ್ತಿರುವಾಗ, ಕುಸಿಯುತ್ತಿರುವಾಗ, ಕರಾವಳಿ ಕರ್ನಾಟಕದ ಹೆದ್ದಾರಿಗಳಲ್ಲಿ ಹಳ್ಳ ಕೊಳ್ಳಗಳೇ ತುಂಬಿರುವಾಗ, ಗಡ್ಕರಿಯವರ ಉಪನ್ಯಾಸಗಳು ಕರ್ತವ್ಯ ನಿರ್ಲಕ್ಷ್ಯವಾಗಿಯೇ ಕಾಣುತ್ತವೆ.
ಕೊಚ್ಚಿ-ಪನ್ವೇಲ್ ನಡುವಿನ ಹೆದ್ದಾರಿಯು ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಇದು ಯಮಲೋಕಕ್ಕೆ ನೇರ ರಹದಾರಿಯಂತೆ ಕಾಣುತ್ತಿದೆ. ಹಳ್ಳಗಳು, ಪೂರ್ತಿಯಾಗದ ಅಗಲೀಕರಣ ಕಾಮಗಾರಿ, ಕಿತ್ತುಹೋಗಿರುವ ವಿಭಜಕಗಳು, ತೇಪೆ ಹಾಕಲಾದ ರಸ್ತೆಗಳು ಇವೆಲ್ಲವೂ ಹೆದ್ಚಾರಿಯನ್ನು ಅಪಘಾತಗಳಿಗೆ ಈಡು ಮಾಡುವ ಅಪಾಯಕಾರಿ ಸನ್ನಿವೇಶಕ್ಕೆ ದೂಡಿವೆ. ಇದರಿಂದ ಉಂಟಾಗುವ ಆರ್ಥಿಕ ನಷ್ಟವೂ ಹೆಚ್ಚಾಗುತ್ತಿದೆ. ಕೆಲವೇ ದಿನಗಳ ಮುನ್ನ ದ್ವಿಚಕ್ರದಾರಿ ಗೃಹಿಣಿಯೊಬ್ಬರು ಮಂಗಳೂರಿನ ರಸ್ತೆಯಲ್ಲಿ, ಹೊಂಡ ಅಡ್ಡ ಬಂದ ಕಾರಣ ಸಾವನ್ನಪ್ಪಿದ್ದಾರೆ. ಪ್ರವಾಸಿಗರು ಹಿಡಿ ಶಾಪ ಹಾಕುತ್ತಿದ್ದು, ವ್ಯಾಪಾರಿ ವಲಯವು ಅಪಾರ ಹಣವನ್ನು ಕಳೆದುಕೊಳ್ಳುತ್ತಿದೆ. ಸಾಧಾರಣ ಪ್ರಯಾಣಕರು ಸದಾ ಭೀತಿಯಲ್ಲಿರುವಂತಾಗಿದೆ. ಹಲವು ವರ್ಷಗಳ ಪ್ರತಿಭಟನೆಗಳು, ಧರಣಿ ಸತ್ಯಾಗ್ರಹಗಳು, ಸಾರ್ವಜನಿಕ ನಿಯೋಗಗಳು ಸಕ್ರಿಯವಾಗಿದ್ದರೂ ಗಡ್ಕರಿ ಅವರ ಸಚಿವಾಲಯವು ಜನರ ಅಹವಾಲುಗಳಿಗೆ ಕಿವುಡಾಗಿದ್ದು, ಮೌನಕ್ಕೆ ಶರಣಾಗಿದೆ. ಕರಾವಳಿಯ ಜನತೆ ನಿರ್ಲಕ್ಷ್ಯಕ್ಕೊಳಗಾದ ಭಾವನೆಯನ್ನು ಹೊಂದಿದ್ದು, ನವದೆಹಲಿ ತಮ್ಮನ್ನು ಬಹಿಷ್ಕರಿಸಿದೆ ಎಂದು ಭಾವಿಸುತ್ತಿದ್ದಾರೆ.
ಈ ಕುಸಿತದ ಹಿಂದೆ ಸ್ಥಳೀಯ ಸಂಸದರೂ ಸಹ ಅಷ್ಟೇ ಖಂಡನೆಗೆ ಅರ್ಹರಾಗುತ್ತಾರೆ. ದಕ್ಷಿಣ ಕನ್ನಡದ ಬ್ರಿಜೇಶ್ ಚೌಟ, ಉಡುಪಿಯ ಶ್ರೀನಿವಾಸ ಪೂಜಾರಿ ಗಡ್ಗರಿಯೊಡಗಿನ ತಮ್ಮ ಸಂಬಂಧಗಳನ್ನು ಎತ್ತಿತೋರಿಸಲು ಸಚಿವರೊಡನೆ ತೆಗೆಸಿಕೊಂಡ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸಚಿವರಿಗೆ ನಿಕಟವಾಗಿರುವುದೇ ಒಂದು ಸಾಧನೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಪ್ರತಿ ವಾರವೂ ತಮ್ಮ ದೆಹಲಿಯ ಪ್ರಯಾಣದ ಚಿತ್ರಗಳನ್ನು ಪ್ರದರ್ಶಿಸುವ ಈ ನಾಯಕರು, ಗಡ್ಕರಿ ಅವರೊಡನೆ ನೇರ ಸಂಪರ್ಕ ಹೊಂದಿರುವುದಾಗಿ ತೋರಿಸಿಕೊಳ್ಳುತ್ತಾರೆ. ಆದರೆ ಈ ಕ್ಷೇತ್ರಗಳ ಸಾಮಾನ್ಯ ಜನತೆಯನ್ನು ಕಾಡುವ ಪ್ರಶ್ನೆ ಎಂದರೆ ಈ ಸ್ನೇಹದಿಂದ ಆಗಿರುವ ಪ್ರಯೋಜನ ಏನು, ಸುಧಾರಿತ ರಸ್ತೆಗಳು ಎಲ್ಲಿವೆ, ಸುರಕ್ಷಿತ ಹೆದ್ದಾರಿಗಳು ಎಲ್ಲಿವೆ ಇತ್ಯಾದಿ. ಈ ಪ್ರಶ್ನೆಗಳಿಗೆ ಉತ್ತರವನ್ನು ಹಾಳಾಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಣುವ ಧೂಳು, ಕಲ್ಲು ಮಣ್ಣುಗಳಲ್ಲಿ ಹುಡುಕಬಹುದು.
ಈ ಶೋಬಾಜಿಗಳಿಂದ ನಾಗರಿಕರನ್ನು ತೃಪ್ತಿಪಡಿಸಲಾಗುವುದಿಲ್ಲ. ಚೌಟ ಮತ್ತು ಪೂಜಾರಿಯನ್ನು ಜನರು ನಿಮ್ಮನ್ನು ಸಂಸತ್ತಿಗೆ ಚುನಾಯಿಸಿದ್ದು ಈ ಪುರುಷಾರ್ಥಕ್ಕಾಗಿಯೇ ಎಂದು ನೇರವಾಗಿ ಪ್ರಶ್ನಿಸುತ್ತಿದ್ದಾರೆ. ನವದೆಹಲಿಯಲ್ಲಿ ಅಪಾರ ಪ್ರಭಾವ ಇರುವ ಸಂಸದರಾಗಿ ಕಾಣಿಸಿಕೊಳ್ಳುವ ಇರಾದೆಯ ಈ ನಾಯಕರ ಬಂಡವಾಳ ಈಗ ಬಯಲಾಗುತ್ತಿದ್ದು, ತಮ್ಮ ಮತದಾರರ ಆಕ್ರೋಶವನ್ನು ಎದುರಿಸಲಾಗದೆ ಪರದಾಡುತ್ತಿದ್ದಾರೆ. ದಕ್ಷಿಣ ಕನ್ನಡವನ್ನು ತನ್ನ ಭದ್ರಕೋಟೆ ಎಂದೇ ಪರಿಗಣಿಸುವ ಬಿಜೆಪಿಯ ಪಾಲಿಗೆ ಇದು ಸ್ಥಳೀಯವಾದ ಮುಜುಗರ ಅಷ್ಟೇ ಅಲ್ಲದೆ, ಇನ್ನೂ ಉಲ್ಬಣಿಸುವ ರಾಜಕೀಯ ಹಾನಿಯಾಗಿದೆ.
ರಸ್ತೆಯ ಹಳ್ಳಕೊಳ್ಳಗಳು ಸಿದ್ಧಾಂತಗಳನ್ನು ಗೌರವಿಸುವುದಿಲ್ಲ, ಇದು ವಾಹನ ಸವಾರಕರನ್ನು, ಅವರು ಯಾವ ಪಕ್ಷಕ್ಕೆ ಮತ ನೀಡಿದ್ದಾರೆ ಎನ್ನುವುದನ್ನು ಲೆಕ್ಕಿಸದೆ ಗಾಯಗೊಳಿಸುತ್ತವೆ. ಭಗ್ನವಾಗಿರುವ ಹೆದ್ದಾರಿಗಳು ಒಬ್ಬ ವ್ಯಾಪಾರಿ ಮೋದಿಯ ಬೆಂಬಲಿಗರೋ, ಕಾಂಗ್ರೆಸ್ ಹಿಂಬಾಲಕರೋ ಎಂದು ನೋಡುವುದಿಲ್ಲ. ಅದು ಆರ್ಥಿಕತೆಯ ಉಸಿರುಗಟ್ಟಿಸುತ್ತದೆ. ಗಡ್ಕರಿ ಅವರ ಉಪನ್ಯಾಸಗಳು ಮತ್ತು ಫೆÇೀಟೋ ಪ್ರದರ್ಶನಗಳು ಈ ವಾಸ್ತವವನ್ನು ಮುಚ್ಚಿಹಾಕುವ ಮಸುಕು ಆಗುವುದಿಲ್ಲ.
ಮೋದಿ ಸರ್ಕಾರ ಪದೇಪದೇ ಗಡ್ಕರಿ ಅವರನ್ನು ಮೂಲ ಸೌಕರ್ಯಗಳ ಅಭಿವೃದ್ಧಿಯ ಹರಿಕಾರನಂತೆ ಬಿಂಬಿಸುತ್ತದೆ. ಆದರೆ ಕರಾವಳಿ ಕರ್ನಾಟಕದಲ್ಲಿ ಗಡ್ಕರಿ ನಿರ್ಲಕ್ಷ್ಯ ಮತ್ತು ವಂಚನೆಯ ಮುಖ ಆಗಿದ್ದಾರೆ. ಗಡ್ಕರಿ ತಮ್ಮ ಆಧ್ಯಾತ್ಮಿಕ ಚಿಂತನೆಯೆಡೆಗೆ ಹೆಚ್ಚು ಹೊರಳಿದಷ್ಟೂ ಈ ಪ್ರದೇಶದ ಜನರು ತಮ್ಮ ನೋವನ್ನು ನಿರ್ಲಕ್ಷಿಸಿದ ಬುರ್ನಾಸ್ ನಾಯಕ ಎಂದೇ ಅವರನ್ನು ಪರಿಗಣಿಸುತ್ತಾರೆ. ಚೌಟ ಮತ್ತು ಪೂಜಾರಿ ತಮ್ಮ ಫೆÇೀಟೋ ಪ್ರದರ್ಶನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಷ್ಟೂ, ಅವರ ಅದಕ್ಷತೆ ಬಯಲಾಗುತ್ತಿರುತ್ತದೆ.
ಸತ್ಯಾಂಶ ಸ್ಪಷ್ಟವಾಗಿ ಕಾಣುತ್ತಿದೆ. ಕರಾವಳಿ ಕರ್ನಾಟಕವನ್ನು ಅದರ ಸಚಿವರು ಮತ್ತು ಸಂಸದರು ಸಮನಾಗಿ ವಂಚಿಸಿದ್ದಾರೆ. ಕೇಂದ್ರ ಸರ್ಕಾರವು ತುರ್ತು ಕ್ರಮ ಜರುಗಿಸಿ ಹೆದ್ದಾರಿಗಳ ದುರಸ್ತಿ ಮಾಡದೆ ಹೋದರೆ ವಿಶ್ವಾಸ ಕಳೆದುಕೊಳ್ಳುತ್ತದೆ. ಪಕ್ಷದ ಒಳಗಿನ ಬಿರುಕುಗಳು ರಸ್ತೆಗಳಲ್ಲಿ ಇಲ್ಲ ಬದಲಾಗಿ ತಮ್ಮ ರಾಜಕೀಯ ಬುನಾದಿಯಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ನಾಗರಿಕರಿಗೆ ಇನ್ನೇನು ದಾರಿ ಉಳಿದಿದೆ? ಹೆದ್ದಾರಿಯಲ್ಲಿ ಧರಣಿಯಂಥ ಉಪಕ್ರಮಗಳು ಮಾತ್ರ ಬಾಕಿ ಉಳಿದಿವೆ.
Comments
Post a Comment