ಧರ್ಮಸ್ಥಳದಲ್ಲಿ ಬಿಜೆಪಿಯ ದುಸ್ಸಾಹಸ ಪಕ್ಷಕ್ಕೇ ದುಃಸ್ವಪ್ನವಾಗಿ ಕಾಡಲಿದೆ
ಆರೋಪಿಗಳ ಬೆಂಬಲಕ್ಕೆ ಕಟಿಬದ್ಧವಾಗಿದ್ದು, ಈಗ ಸಂತ್ರಸ್ತೆಯ ಕುಟುಂಬದ ರಕ್ಷಣೆಗೆ ಧಾವಿಸುವ ಬಿಜೆಪಿಯ ದ್ವಿಮುಖ ನೀತಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವಾಗಿ ಪರಿಣಮಿಸಿದೆ.
ಬಹುನಿರೀಕ್ಷಿತ ಬಿಜೆಪಿಯ ಧರ್ಮಸ್ಥಳದ ಸಮಾವೇಶವನ್ನು ಹೆಗ್ಗಡೆ ಕುಟುಂಬದೊಡನೆ ಐಕ್ಯಮತ ತೋರುವುದು ಮತ್ತು ಕೇಸರಿಪಡೆಯ ಶಕ್ತಿ ಪ್ರದರ್ಶನದ ದೃಷ್ಟಿಯಿಂದ ಮುಖ್ಯ ಎಂದು ಭಾವಿಸಲಾಗಿತ್ತು. ಆದರೆ ಫಲಿತಾಂಶದಲ್ಲಿ ಇದು ಪಕ್ಷವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಐಕ್ಯತೆ ಮತ್ತು ಜನಸಮೂಹ ಬೆಂಬಲವನ್ನು ಪ್ರದರ್ಶಿಸುವುದಿರಲಿ, ಈ ಕಾರ್ಯಕ್ರಮವು ಪಕ್ಷದೊಳಗಿನ ಆಳವಾದ ಬಿರುಕುಗಳನ್ನು ಬಹಿರಂಗಪಡಿಸಿದ್ದು ಪಕ್ಷದೊಡನೆ ಸಾರ್ವಜನಿಕ ಸಂಬಂಧಗಳನ್ನು ಮತ್ತಷ್ಟು ಹಾಳುಮಾಡಿದೆ. ಇದನ್ನು ನಿಯಂತ್ರಿಸಲು ನಾಯಕತ್ವವು ಹರಸಾಹಸ ಮಾಡಬೇಕಾಗುತ್ತದೆ.
ಪಕ್ಷದ ಮೊದಲ ಹಿನ್ನಡೆ ಎಂದರೆ ಇಲ್ಲಿ ಭಾಗವಹಿಸಿದ ನಾಯಕರ ವರ್ತನೆ ಮತ್ತು ಆಂಗಿಕಚಲನೆ (ದೈಹಿಕಭಾಷೆ). ಒಗ್ಗಟ್ಟಿನಿಂದ ನಿಲ್ಲುವುದಿರಲಿ, ಹಿರಿಯ ನಾಯಕರು ವಿರೋಧಿ ಬಣಗಳೊಡನೆ ಪರಸ್ಪರ ಶುಭಾಶಯಗಳನ್ನೂ ಹಂಚಿಕೊಳ್ಳಲಿಲ್ಲ. ಹಲವರು ತಿರುಗಿಯೂ ನೋಡಲಿಲ್ಲ. ಹೆಗ್ಗಡೆ ಕುಟುಂಬಕ್ಕೆ ಈ ಮುನ್ನ ಬೆಂಬಲ ಸೂಚಿಸಿದ್ದ ಕೆಲವು ನಾಯಕರು ವೇದಿಕೆಯ ಮೇಲೆ ಮಾತನಾಡುವ ಅವಕಾಶವನ್ನೇ ಪಡೆಯಲಿಲ್ಲ, ಇದರ ಪರಿಣಾಮವಾಗಿ ಅವರು ಹೊರನಡೆಯಬೇಕಾಯಿತು. ಪಕ್ಷದಲ್ಲಿ ಉನ್ನತ ಸ್ಥಾನ ಹೊಂದಿರುವ ಆರ್ ಅಶೋಕ್ ಕಾರ್ಯಕ್ರಮದ ಮಧ್ಯದಲ್ಲೇ ನಿರ್ಗಮಿಸಿದರು. ಹೆಗ್ಗಡೆ ಕುಟುಂಬಕ್ಕೆ ನಿಕಟವರ್ತಿಯಾದ ಸುನಿಲ್ ಕುಮಾರ್ ಕೂಡಾ ಹೊರನಡೆದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಇಡೀ ಕಾರ್ಯಕ್ರಮದಲ್ಲಿ ಅವರು ರಾರಾಜಿಸಿದರು.
ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದು ಅಲ್ಲಿ ಸೇರಿದ್ದ ಜನರ ಸಂಖ್ಯೆ. ಒಂದು ಲಕ್ಷ ಜನರನ್ನು ಧರ್ಮಸ್ಥಳದ ಕಾರ್ಯಕ್ರಮಕ್ಕೆ ಸೇರಿಸುತ್ತೇವೆ ಎಂದು ಪಕ್ಷ ಘೋಷಿಸಿದ್ದರೂ, ಅಲ್ಲಿ ವೀಕ್ಷಕರು ಹೇಳುವಂತೆ, 20 ಸಾವಿರಕ್ಕೂ ಕಡಿಮೆ ಜನರು ಸೇರಿದ್ದರು. ಜನರ ಭಾಗವಹಿಸುವಿಕೆಯಲ್ಲಿ ಸ್ಥಳೀಯರ ನಿರಾಸಕ್ತಿಯು ಎದ್ದುಕಾಣುವಂತಿದ್ದು, ಕಾರ್ಯಕ್ರಮದ ಬಗ್ಗೆ ಉತ್ಸಾಹ ಕನಿಷ್ಠ ಮಟ್ಟದಲ್ಲಿದ್ದು, ಪಕ್ಷದ ಇಮೇಜಿಗೆ ತೀವ್ರ ಧಕ್ಕೆಯಾಗಿದ್ದು ಸುಳ್ಳಲ್ಲ.
ಈ ಸಮಾವೇಶವು ವಿಫಲವಾಗಿದೆ ಎನ್ನುವುದನ್ನು ಅರಿತ ವಿಜಯೇಂದ್ರ ಮತ್ತು ಅವರ ನಿಷ್ಠಾವಂತರು ಆ ಕ್ಷಣದಲ್ಲಿ ಪಾರಾಗಲು ಸೌಜನ್ಯ ಪ್ರಕರಣದ ಬಗ್ಗೆ ಗಮನ ನೀಡಬೇಕಾಯಿತು. ಮೃತ ವಿದ್ಯಾರ್ಥಿನಿಯ ಮನೆಗೆ ದೌಡಾಯಿಸಿದ ಈ ನಾಯಕರು, ಕುಟುಂಬದ ದುರಂತವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ತಂತ್ರ ಅನುಸರಿಸಿದ್ದರು. ಆದರೆ ಅದೂ ತಿರುಗುಬಾಣವಾಯಿತು. ಸೌಜನ್ಯ ಕುಟುಂಬವು ನಿರೀಕ್ಷಿತ ಆತಿಥ್ಯ ನೀಡಲಿಲ್ಲ, ಸೌಜನ್ಯಾಳ ತಾಯಿಗೆ ಅವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದರೆ ಬಿಜೆಪಿ ಬೆಂಬಲಿಸುತ್ತದೆ ಎಂಬ ಆಶ್ವಾಸನೆ ನೀಡಿದ್ದು ಅಷ್ಟೇನೂ ಫಲಕಾರಿಯಾಗಲಿಲ್ಲ. `ಸುಪ್ರೀಂ ಕೋರ್ಟಿಗೆ ಹೋಗಲು ನಿಮ್ಮ ನೆರವು ಅಗತ್ಯವಿಲ್ಲ' ಎಂಬ ಕ್ಲಿಯರ್ ಸಂದೇಶವನ್ನು ಸೌಜನ್ಯ ತಾಯಿ ರವಾನಿಸಿದರು.
ಇದಕ್ಕೆ ಸ್ಪಷ್ಟ ಕಾರಣವೂ ಇದೆ. ಬಿಜೆಪಿ ಆರಂಭದಿಂದಲೂ ಈ ಕೃತ್ಯದಲ್ಲಿ ಭಾಗಿಯಾದವರ ಪರ ನಿಂತಿದೆ. ಈ ಹಿನ್ನೆಲೆಯಲ್ಲಿ, ಯಾವುದೇ ರೀತಿಯ ಬೆಂಬಲ ಘೋಷಣೆ ಪೆÇಳ್ಳು ಎನಿಸುತ್ತದೆ. ಈ ಭೇಟಿ ಐಕ್ಯಮತಕ್ಕಿಂತಲೂ ಅತಿಕ್ರಮಣದಂತೆ ಕಂಡಿತ್ತು. ಪಕ್ಷಕ್ಕೆ ಒಳ್ಳೆಯ ಹೆಸರು ತರುವುದಕ್ಕಿಂತಲೂ ಹೆಚ್ಚಾಗಿ, ಬಿಜೆಪಿ ಸಿದ್ದರಾಮಯ್ಯ ಸರ್ಕಾರಕ್ಕೆ, ಬಿಜೆಪಿಯನ್ನು `ದ್ವಂದ್ವ ನೀತಿಯ ಪಕ್ಷ' ಎಂದು ಮೂದಲಿಸಲು ಮುಕ್ತ ಅವಕಾಶ ಕಲ್ಪಿಸಿತ್ತು. ಆರೋಪಿಗಳ ಬೆಂಬಲಕ್ಕೆ ಕಟಿಬದ್ಧವಾಗಿದ್ದು, ಈಗ ಸಂತ್ರಸ್ತೆಯ ಕುಟುಂಬದ ರಕ್ಷಣೆಗೆ ಧಾವಿಸುವ ಬಿಜೆಪಿಯ ದ್ವಿಮುಖ ನೀತಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತ್ರವಾಗಿ ಪರಿಣಮಿಸಿದೆ.
ಒಟ್ಟಾರೆ ನೋಡಿದರೆ, ವಿಜಯೇಂದ್ರ ಅವರ ಈ ವಿಫಲ ಭೇಟಿ ಎರಡು ರೀತಿಯ ಹಿನ್ನಡೆ ಉಂಟುಮಾಡಿದೆ. ಮೊದಲನೆಯದು ಸಂಘಟನಾತ್ಮಕವಾಗಿ ಜನರನ್ನು ಕ್ರೋಢೀಕರಿಸಲು ವಿಫಲವಾಗಿರುವುದು ಮತ್ತು ವಿಜಯೇಂದ್ರ ಅವರ ಅಧಿಕಾರವನ್ನು ದುರ್ಬಲಗೊಳಿಸುವಂತಹ ಆಂತರಿಕ ವಿಘಟನೆ. ಇದು ತಮ್ಮ ನಾಯಕತ್ವವನ್ನು ಬಲಪಡಿಸಲು ಯತ್ನಿಸುತ್ತಿರುವ ವಿಜಯೇಂದ್ರ ಅವರಿಗೆ ದೊಡ್ಡ ಹಿನ್ನಡೆಯಾಗಲಿದೆ. ಎರಡನೆಯದು ನೈತಿಕ ನೆಲೆಯಲ್ಲಿ ಸೌಜನ್ಯ ಕುಟುಂಬಕ್ಕೆ ಭೇಟಿ ನೀಡಿರುವುದು ಬಿಜೆಪಿಯ ವಿಶ್ವಾಸಾರ್ಹತೆಯನ್ನು ಹಾನಿ ಮಾಡಿದ್ದು, ಇದು ಕರಾವಳಿ ಪ್ರದೇಶದಲ್ಲಿ ಸಂಚಲನ ಉಂಟುಮಾಡುತ್ತದೆ.
ಈ ಪ್ರದೇಶದ ರಾಜಕೀಯವು ಮತಗಳ ಲೆಕ್ಕಾಚಾರದ ಜೊತೆಯೇ ಭಾವನಾತ್ಮಕವಾಗಿಯೂ ಮುಖ್ಯವಾಗುತ್ತದೆ. ಅವಕಾಶವಾದಿಗಳಾಗಿ, ವಿಭಜಕ ಪಕ್ಷವಾಗಿ ಬಿಂಬಿಸುವ ಮೂಲಕ ಬಿಜೆಪಿ ತನ್ನ ಶಕ್ತಿ ಪ್ರದರ್ಶನದಲ್ಲಿ ವಿಫಲವಾಗಿರುವುದಷ್ಟೇ ಅಲ್ಲದೆ, ನೊಂದ ಕುಟುಂಬವನ್ನು ವಿಳಂಬವಾಗಿ ಸಂತೈಸುವ ನಾಟಕವಾಡಿ ವಿರೋಧಿಗಳ ಕೈಗೆ ಪ್ರಬಲ ಅಸ್ತ್ರವನ್ನು ನೀಡಿದೆ. ಐಕ್ಯಮತದ ಪ್ರದರ್ಶನವಾಗಬೇಕಿದ್ದ ಕಾರ್ಯಕ್ರಮ ಅಂತಿಮವಾಗಿ, ಪಕ್ಷದ ಆಂತರಿಕ ವಿಘಟನೆಯ ಸಂಕೇತವಾಗಿ ಕಾಣುತ್ತದೆ. ಬಿಜೆಪಿಯ ಈ ಕಸರತ್ತು ತಿರುಗುಬಾಣವಾಗಿರುವುದಂತೂ ಸತ್ಯ.
Comments
Post a Comment