ಕರ್ನಾಟಕದಲ್ಲಿ ಬಿಜೆಪಿ ಆತ್ಮಾವಲೋಕನ ಇಲ್ಲದೆ ಸದ್ದು ಮಾಡುತ್ತಿದೆ

 ರಾಜಕಾರಣದಲ್ಲಿ ಇತರರಿಗೆ ಉಪದೇಶ ಮಾಡುವುದಕ್ಕೂ ಸ್ವತಃ ತಾವೇ ಹಾಗೆ ನಡೆದುಕೊಳ್ಳುವುದಕ್ಕೂ ಬಹಳ ಅಂತರ ಇರುತ್ತದೆ. ಆದರೆ ಸಾರ್ವಜನಿಕರು ಒಂದು ರಾಜಕೀಯ ಪಕ್ಷ ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿತ್ತು ಎನ್ನುವುದನ್ನು ಮರೆಯುವುದಿಲ್ಲ. ರಾಜಕೀಯ ಪಕ್ಷವೊಂದು ತನ್ನ ಪ್ರಮಾದಗಳಿಗಾಗಿ ಬೆಲೆ ತೆತ್ತು ಮತದಾರರಿಂದ ತಿರಸ್ಕರಿಸಲ್ಪಟ್ಟು ಅಧಿಕಾರ ಕಳೆದುಕೊಂಡು, ಅನಂತರ ತಾನೇ ನೈತಿಕತೆಯ ರಕ್ಷಕ ಎಂಬಂತೆ ವರ್ತಿಸಿದರೆ ಜನರು ಮುಜುಗರದಿಂದಲೇ, ಅಸಡ್ಡೆಯಿಂದ ಪ್ರತಿಕ್ರಿಯಿಸುತ್ತಾರೆ. ಇಂದು ಕರ್ನಾಟಕದ ಬಿಜೆಪಿ ಇದೇ ಅಹಿತಕರ ಸನ್ನಿವೇಶವನ್ನು ಎದುರಿಸುತ್ತಿದೆ.

ಹಾಲಿ ಸರ್ಕಾರವನ್ನು ಬಿಜೆಪಿ ಎಷ್ಟೇ ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡಿದರೂ, ಜನರ ಮನಸ್ಸಿನಲ್ಲಿ ಒಂದು ಪ್ರಶ್ನೆ ಸಹಜವಾಗಿ ಕಾಡುತ್ತದೆ. `ನೀವು ಅಧಿಕಾರದಲ್ಲಿದ್ದಾಗ ಏನು ಮಾಡಿದಿರಿ?' ಎಂಬ ಪ್ರಶ್ನೆ ಮುನ್ನಲೆಗೆ ಬರುತ್ತದೆ. ಬಿಜೆಪಿ ಹೇಗೆ ಕದ್ದ ಬಹುಮತದೊಂದಿಗೆ, ವಾಮಮಾರ್ಗಗಳನ್ನು ಅನುಸರಿಸಿ, ಅಧಿಕಾರವನ್ನು ಉಳಿಸಿಕೊಂಡಿತ್ತು ಎನ್ನುವುದು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿ ಮಾಡಿದ ಪ್ರಮಾದಗಳು, ತಪ್ಪುಗಳು, ಪಕ್ಷದೊಳಗಿನ ಭಿನ್ನಮತ, ಗುಂಪುಗಾರಿಕೆ ಮತ್ತು ಅವಕಾಶವಾದಿ ಕಾರ್ಯನಿರ್ವಹಣೆ ಜನರ ಮನಸ್ಸಿನಲ್ಲಿದೆ. ಈ ತಪ್ಪುಗಳು ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ದುಬಾರಿಯಾಗಿದ್ದರಿಂದಲೇ ಮತದಾರರು ನಿರ್ಣಾಯಕವಾಗಿ ಬಿಜೆಪಿಯನ್ನು ಪರಾಭವಗೊಳಿಸಿದ್ದರು.

ಇಂತಹ ಸನ್ನಿವೇಶದಲ್ಲಿ ಬಿಜೆಪಿಯ ಮೊದಲ ಕರ್ತವ್ಯ ಆತ್ಮಾವಲೋಕನ ಮಾಡಿಕೊಳ್ಳುವುದಾಗಿತ್ತು. ನಮ್ಮನ್ನು ಏಕೆ ಸೋಲಿಸಲಾಗಿದೆ, ನಾವು ಎಲ್ಲಿ ತಪ್ಪು ಮಾಡಿದೆವು, ಯಾವ ಪ್ರಮಾದಗಳನ್ನು ಮತ್ತೆ ಮಾಡಬಾರದು ಈ ಪ್ರಶ್ನೆಗಳನ್ನು ಯೋಚಿಸುವ ಬದಲು, ಆತ್ಮಾವಲೋಕನದ ಚಿಂತೆಯೇ ಇಲ್ಲದೆ, ಬಿಜೆಪಿ ನಾಯಕರು ಕೇವಲ ಗದ್ದಲ ಎಬ್ಬಿಸುವ, ಸದ್ದುಮಾಡುವ ರಾಜಕೀಯದಲ್ಲಿ ತೊಡಗಿದೆ. ಪ್ರತಿ ದಿನವೂ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಹೋರಾಟಗಳ ಬೆದರಿಕೆ ಒಡ್ಡುತ್ತಾ, ಸರ್ಕಾರವನ್ನು ಹೀಗಳೆಯಲು ಬೀದಿಗಿಳಿದು ಗದ್ದಲ ಎಬ್ಬಿಸುತ್ತಿದೆ. ಇದು ಜನರಿಗೆ ಇಷ್ಟವಾಗುವುದಕ್ಕಿಂತಲೂ ಸಾಮಾನ್ಯ ಜನರಲ್ಲೂ ಸಹ ಒಂದು ರೀತಿಯ ಅಸಡ್ಡೆಗೆ, ಅಸಹ್ಯಕ್ಕೆ ಕಾರಣವಾಗುತ್ತಿದೆ.

ಗಂಭೀರವಾದ ಸಮಸ್ಯೆ ಎಂದರೆ, ಬಿಜೆಪಿಯ ನಾಯಕತ್ವವೇ ರಾಜ್ಯದಲ್ಲಿ ಬಿಕ್ಕಟ್ಟು ಎದುರಿಸುತ್ತಿದೆ. ರಾಜ್ಯದ ಘಟಕದಲ್ಲಿ ಪ್ರಶ್ನಾತೀತ ವಿಶ್ವಾಸಾರ್ಹತೆ ಹೊಂದಿರುವ ನಾಯಕರು ಯಾವ ಸಮುದಾಯದಿಂದಲೂ ಇಲ್ಲ. ಯಾವುದೇ ಒಬ್ಬ ನಾಯಕರ ಧ್ವನಿಯೂ ಪಕ್ಷದ ಕಾರ್ಯಕರ್ತರನ್ನು, ಜನಸಾಮಾನ್ಯರನ್ನು  ಹುರಿದುಂಬಿಸುವಂತಹ ನೈತಿಕ ಶಕ್ತಿಯನ್ನು ಹೊಂದಿಲ್ಲ. ಈ ರೀತಿ ವಿಶ್ವಾಸಾರ್ಹತೆ ಇಲ್ಲದೆ, ಪಕ್ಷದ ಆರೋಪಗಳು ಪೆÇಳ್ಳು ಎನಿಸುತ್ತವೆ. ಟೀಕೆಗಳೆಲ್ಲವನ್ನೂ ರಾಜಕೀಯ ಅವಕಾಶವಾದ ಎಂದು ತಿರಸ್ಕರಿಸಲಾಗುತ್ತದೆ.

ಬಿಜೆಪಿ ವಿರೋಧ ಪಕ್ಷದ ಪಾತ್ರವನ್ನು ಮನಗಾಣುವಲ್ಲಿ ವಿಫಲವಾಗಿರುವುದೂ ಇಲ್ಲಿಯೇ. ವಿರೋಧ ಪಕ್ಷವಾಗಿ ಇರುವುದೆಂದರೆ, ಸರ್ಕಾರದೊಂದಿಗೆ ಪ್ರತಿ ಬಾರಿಯೂ ಬೀದಿಜಗಳ ಆಡುವುದಲ್ಲ. ಜವಾಬ್ದಾರಿಯುತ ವಿರೋಧ ಪಕ್ಷವು ಆಳ್ವಿಕೆಯಲ್ಲಿನ ತಪ್ಪುಗಳನ್ನು ಗುರುತಿಸಿ, ತರ್ಕಬದ್ಧ ವಿಮರ್ಶೆಗೊಳಪಡಿಸಿ, ರಚನಾತ್ಮಕ ಪರ್ಯಾಯಗಳನ್ನು ನೀಡಬೇಕಾಗುತ್ತದೆ. ಸರ್ಕಾರವನ್ನು ಉತ್ತರದಾಯಿಯಾಗಿ ಇರಿಸಬೇಕಾಗುತ್ತದೆ. ಹೀಗೆ ಮಾಡುವಾಗ ಸಾರ್ವಜನಿಕ ಚರ್ಚೆಗಳನ್ನು ಉತ್ತೇಜಿಸಬೇಕೇ ಹೊರತು ವಿಷಯವನ್ನು ನಗಣ್ಯವಾಗಿಸುವುದಲ್ಲ. ಕರ್ನಾಟಕದಲ್ಲಿ ಬಿಜೆಪಿ ಇದಕ್ಕೆ ತದ್ವಿರುದ್ದವಾದ ಹಾದಿಯಲ್ಲಿ ಸಾಗುತ್ತಿದೆ.

ತತ್ಪರಿಣಾಮವಾಗಿ, ಜನರು ವಿಮುಖರಾಗುತ್ತಿದ್ದಾರೆ. ಬಿಜೆಪಿಯ ಹಿಂದಿನ ವರ್ತನೆಯಿಂದ ಈಗಾಗಲೇ ಬೇಸರಗೊಂಡಿರುವ ಜನತೆ, ಪಕ್ಷದ ನಿರಂತರ ಗದ್ದಲದಿಂದ ಬೇಸತ್ತು ಹೋಗಿದ್ದಾರೆ. ತನ್ನ ಕಳೆದುಕೊಂಡ ವಿಶ್ವಾಸಾರ್ಹತೆಯನ್ನು ಮರಳಿಪಡೆಯುವ ಬದಲು ಬಿಜೆಪಿ, ಜನರ ವಿಶ್ವಾಸ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ, ಅದನ್ನೇ ಕಳೆದುಕೊಳ್ಳುತ್ತಿದೆ.

ಆದಾಗ್ಯೂ, ಒಂದು ಅಂಶ ಗಮನಾರ್ಹವಾಗಿ ಕಾಣುತ್ತದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಸಹ ಸವಾಲುಗಳು ಮತ್ತು ವೈಫಲ್ಯಗಳ ಚಹರೆಯನ್ನೇ ಹೊತ್ತಿದೆ. ಆಳ್ವಿಕೆಯಲ್ಲಿ ತಪು ಮಾಡಿದಾಗ ವಿರೋಧ ಪಕ್ಷದ ಟೀಕೆಗಳು ಮುಖ್ಯವಾಗುತ್ತವೆ. ಬಿಜೆಪಿ ಈ ಸದಾವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಗದ್ದಲ ಮಾಡುವ ರಾಜಕೀಯದಿಂದ ಹೊರಬಂದು, ವಸ್ತುನಿಷ್ಠ ರಾಜಕಾರಣದಲ್ಲಿ ತೊಡಗಬೇಕಾಗುತ್ತದೆ. ವಿಷಯಾಧಾರಿತ ಚರ್ಚೆಗಳು, ನೀತಿಗಳ ವಿಮರ್ಶೆ, ವಿಶ್ವಾಸಾರ್ಹ ಪರ್ಯಾಯ ಪ್ರಸ್ತಾಪಗಳನ್ನು ಮುಂದಿರಿಸಿದರೆ, ಸಾರ್ವಜನಿಕರು ಮತ್ತೊಮ್ಮೆ ಪಕ್ಷವನ್ನು ವಿಶ್ವಾಸದೊಂದಿಗೆ ನೋಡುತ್ತಾರೆ. ಅಲ್ಲಿಯವರೆಗೂ, ಪ್ರತಿಭಟನೆಗಳು ಕೇವಲ ಅಬ್ಬರವಾಗುತ್ತವೆಯೇ ಹೊರತು ಜನರ ದನಿ ಆಗುವುದಿಲ್ಲ. ಇದು ಹತಾಶೆಯನ್ನು ಇನ್ನೂ ಹೆಚ್ಚು ಮಾಡುತ್ತದೆ.

ಕೊನೆಯದಾಗಿ, ಕರ್ನಾಟಕದ ಬಿಜೆಪಿ ತನ್ನ ಕಾಲಿಗೆ ತಾನೇ ಚಪ್ಪಡಿ ಕಲ್ಲು ಹಾಕಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದೆ. ಆತ್ಮಾವಲೋಕನ ಇಲ್ಲದೆ, ವಿಶ್ವಾಸಾರ್ಹ ನಾಯಕತ್ವ ಇಲ್ಲದೆ, ರಚನಾತ್ಮಕ ಕಾರ್ಯಸೂಚಿ ಇಲ್ಲದೆ, ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗಿದೆ. ಬಿಜೆಪಿ ಮತ್ತೊಮ್ಮೆ ಜನರ ದನಿಯಾಗಲು ಬಯಸುವುದಾದರೆ, ತನ್ನ ನೈತಿಕ ಅಧಿಕಾರವನ್ನು ಮರಳಿ ಪಡೆಯಬೇಕು. ಪ್ರಬಲ ವಿರೋಧ ಪಕ್ಷವು ಪ್ರಜಾಪ್ರಭುತ್ವದಲ್ಲಿ ಅನಿವಾರ್ಯ, ಆದರೆ ಅದರ ಶಕ್ತಿ ಬರುವುದು ಅಬ್ಬರದ ಅರಚಾಟದಿಂದಲ್ಲ, ಪ್ರಾಮಾಣಿಕತೆ, ಚಿಂತನೆಗಳು ಮತ್ತು ತನ್ನ ಹಿಂದಿನ ತಪ್ಪುಗಳನ್ನು ಒಪ್ಪಿಕೊಳ್ಳುವ ಧೈರ್ಯದಿಂದ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again