ಧರ್ಮಸ್ಥಳ ರಿಪಬ್ಲಿಕ್ ರಕ್ಷಕರಾಗಿ ಸ್ವಾಮಿಗಳು
ರಾಜ್ಯದ ಮಠಾಧೀಶರು ಮತ್ತು ಸ್ವಾಮಿಗಳು ದೆಹಲಿಗೆ ದೌಡಾಯಿಸಿ ಧರ್ಮಸ್ಥಳ ಸಂಸ್ಥಾನ ಪರ ವಕಾಲತ್ತು ವಹಿಸಿರುವುದು, ಅವರ ಗೌರವವನ್ನು ಕಾಪಾಡಲು ವಿನಂತಿಸಿರುವುದು, ಜತೆಗೇ ಧರ್ಮಸ್ಥಳದ ಹಗರಣಗಳನ್ನು ಬಹಿರಂಗಪಡಿಸುತ್ತಿರುವ ಮೀಡಿಯಾ ವಿರುದ್ಧ ಎನ್‍ಐಎ ತನಿಖೆಗೆ ಒತ್ತಾಯಿಸಿರುವುದು ಹಾಸ್ಯಾಸ್ಪದವಾಗಿ ಕಾಣುವಂತಿದ್ದರೂ ಅದು ದೊಡ್ಡ ದುರಂತವಾಗಿ ಕಾಣುತ್ತದೆ. ತಮ್ಮದೇ ಆದ ಹಗರಣಗಳ ಭಾರ ಹೊತ್ತಿರುವ ವ್ಯಕ್ತಿಗಳು - ವಚನಾನಂದ ಸ್ವಾಮಿ ತಮ್ಮ ಕಳಂಕದ ಚರಿತ್ರೆಯೊಂದಿಗೆ, ವಜ್ರದೇಹಿ ಸ್ವಾಮಿ ಮಹಿಳೆಯೊಬ್ಬರ ಅಪಹರಣದ ಆರೋಪ ಹೊತ್ತಿದ್ದರೂ - ತಾವು ಧರ್ಮಸ್ಥಳದ ಘಟನೆಗಳ ಬಗ್ಗೆ ಎನ್‍ಐಎ ತನಿಖೆ ಆದೇಶಿಸುವಂತೆ ಕೆಂದ್ರ ಗೃಹ ಸಚಿವರನ್ನು ವಿನಂತಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳಿರುವುದು ನಿಜಕ್ಕೂ ವಿಷಾದಕರ ಬೆಳವಣಿಗೆ. ಕೇಸರಿ ವಸ್ತ್ರಧಾರಿಗಳು ತಮ್ಮ ರಾಜಕೀಯ ಉದ್ದೇಶವನ್ನು ಬೆತ್ತಲುಗೊಳಿಸಿದ್ದಾರೆ.
ಸ್ಪಷ್ಟವಾಗಿ ಹೇಳುವುದಾದರೆ, ಎನ್‍ಐಎ ಸಂಸ್ಥೆಗೆ ಇಲ್ಲಿ ಏನೂ ಮಾಡಲು ಇಲ್ಲ. ಮೂಲತಃ ಅದು ಭಯೋತ್ಪಾದನೆ, ಗಡಿಯಾಚೆಗಿನ ಪಿತೂರಿಗಳು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಗಮನಿಸುತ್ತದೆ. ಧರ್ಮಸ್ಥಳದ ಪ್ರಕರಣಗಳು ಅತ್ಯಾಚಾರ, ಹತ್ಯೆ, ಕಣ್ಮರೆಯಾಗುವ ಪ್ರಕರಣಗಳ ಸುತ್ತ ಹರಡಿದ್ದು, ಇವೆಲ್ಲವೂ ಊಳಿಗಮಾನ್ಯ ಕುಟುಂಬ ಮತ್ತು ಅದರ ಸಂರಕ್ಷಕರ ಮೂಗಿನಡಿಯಲ್ಲೇ ನಡೆದಿದೆ. ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಎಸ್‍ಐಟಿ ತನಿಖೆ ಮಾತ್ರವೇ ಸೂಕ್ತವಾಗಿರುತ್ತದೆ. ಆದಾಗ್ಯೂ ಸ್ವಾಮಿಗಳು, ವಿದೇಶಿ ಕೈವಾಡದ ಸವಕಲು ಆಪಾದನೆಯನ್ನೇ ಮುಂದಿಟ್ಟುಕೊಂಡು, ಧರ್ಮಸ್ಥಳದ ಅಪರಾಧಗಳ ಬಗ್ಗೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಯು ಟ್ಯೂಬರ್ಸ್ ಮತ್ತು ಸಾಮಾಜಿಕ ತಾಣಗಳಿಗೆ ಹೊರಗಿನಿಂದ ಹಣ ಸರಬರಾಜು ಆಗುತ್ತಿದೆ, ದೇವಸ್ಥಾನಕ್ಕೆ ಕಳಂಕ ತರಲು ಈ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ನೂರಾರು ಮಹಿಳೆಯರು ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿರುವಾಗ ಕಳಂಕ ತರಲು ಸಿಐಎ ಸಂಸ್ಥೆಯ ಅವಶ್ಯಕತೆ ಇದೆಯೇ? ಅಥವಾ ಸಾರ್ವಜನಿಕರ ಸಾತ್ವಿಕ ಆಕ್ರೋಶಕ್ಕೆ ದನಿಗೂಡಿಸಲು ಇವರಿಗೆ ಸಾಧ್ಯವಾಗುತ್ತಿಲ್ಲವೇ ?
ಈ ಪ್ರಯತ್ನಗಳನ್ನು ಇನ್ನೂ ಖಂಡನೀಯವಾಗಿಸುವುದು, ಈ ರಾಯಭಾರಿಗಳ ಸಾರ್ವಜನಿಕ ವರ್ಚಸ್ಸು. ಸಹಜವಾಗಿಯೇ ನಾಗರಿಕರು, ಧರ್ಮಸ್ಥಳದಲ್ಲಿ ಅಪರಾಧಗಳು ನಡೆದಾಗ ಈ ಸ್ವಾಮಿಗಳು ಎಲ್ಲಿದ್ದರು ಎಂದು ಪ್ರಶ್ನಿಸುತ್ತಾರೆ. ಆಗ ಮೌನವಾಗಿದ್ದು, ಈಗ ಡಿ-ಗ್ಯಾಂಗ್ ರಕ್ಷಕರಾಗಿ ಗುರುತಿಸಿಕೊಳ್ಳುವುದು ಎಷ್ಟು ಸರಿ? ತಮ್ಮ ಮಾತುಗಳನ್ನು ಎಂದೂ ಮುಚ್ಚಿಡದ ಬಸವರಾಜ ಯತ್ನಾಳ್ ಈಗಾಗಲೇ ವಚನಾನಂದ ಸ್ವಾಮೀಜಿಯು ಈ ತಂಡಕ್ಕೆ ಮುಂದಾಳತ್ವ ವಹಿಸಿರುವುದನ್ನು ಖಂಡಿಸಿದ್ದಾರೆ. ತಮ್ಮ ವಿರುದ್ಧ ಪೆÇಲೀಸ್ ದೂರು ಇರುವ ವಜ್ರದೇಹಿ ಸ್ವಾಮಿ ನಿಜಕ್ಕೂ ಧರ್ಮದ ಪ್ರತಿನಿಧಿಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಕೇಸರಿ ಪರದೆಯ ಹಿಂದೆ ಬಿಜೆಪಿಯ ನೆರಳು ಇರುವುದು ವಾಸ್ತವ. ಎನ್‍ಐಎ ತನಿಖೆಯ ವಿಷಯವನ್ನು ಮೊದಲು ಪ್ರಸ್ತಾಪಿಸಿದವರು ಬಿಜೆಪಿ ನಾಯಕರೇ. ದೆಹಲಿಯ ಭೇಟಿಯನ್ನು ಬಿಜೆಪಿಯೇ ರೂಪಿಸಿದೆ ಎಂಬ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಡಿ-ಗ್ಯಾಂಗನ್ನು ಏನಾದರೂ ಮಾಡಿ ರಕ್ಷಿಸುವುದು, ಅದಕ್ಕಾಗಿ ಎಸ್‍ಐಟಿ ತನಿಖೆಯನ್ನೂ ಅಪಮಾನಿಸುವುದು ಬಿಜೆಪಿಗೆ ತಪ್ಪಾಗಿ ಕಾಣುವುದಿಲ್ಲ. ಆದರೆ ಬಿಜೆಪಿ ಎಚ್ಚರಿಕೆಯಿಂದ ನಡೆಯಬೇಕಿದೆ. ಕರ್ನಾಟಕದಲ್ಲಿ ಈಗಾಗಲೆ ಸಾರ್ವಜನಿಕವಾಗಿ ಪಕ್ಷದ ವರ್ಚಸ್ಸು ಕುಗ್ಗಿದ್ದು, ಜನರಿಗಿಂತಲೂ ಪ್ರಬಲ ಶಕ್ತಿಗಳ ಪರ ವಹಿಸುತ್ತಿರುವುದನ್ನು ಖಂಡಿಸಲಾಗುತ್ತಿದೆ. ಇನ್ನೂ ಹೆಚ್ಚು ಮಧ್ಯಸ್ಥಿಕೆ ವಹಿಸುವುದು ರಾಜಕೀಯವಾಗಿ ಮುಳುವಾಗುತ್ತದೆ.
ಇದು ಒಕ್ಕೂಟ ವ್ಯವಸ್ಥೆಯೇ ಹೊರತು, ಊಳಿಗಮಾನ್ಯ ನ್ಯಾಯಂಗಣವಲ್ಲ. ಕೇಂದ್ರ ಸಚಿವರಿಗೆ ಇದು ತಿಳಿದಿದೆ ಅಥವಾ ತಿಳಿದುಕೊಳ್ಳಬೇಕಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡಲಾಗುವುದಿಲ್ಲ. ಆದರೂ ಕಳಂಕ ಹೊತ್ತ ಸ್ವಾಮಿಗಳ ದಂಡು ತಮ್ಮ ಅಲ್ಪಕಾಲಿಕ ರಾಜಕೀಯ ಲಾಭಕ್ಕಾಗಿ ಈ ಕ್ರಮ ಕೈಗೊಂಡಿರುವುದು ಹಾಸ್ಯಾಸ್ಪದವಷ್ಟೇ ಅಲ್ಲ ಆಳ್ವಿಕೆಯ ಅಪಹಾಸ್ಯವಾಗಿದೆ. ಮೋದಿ-ಶಾ ಜೋಡಿ ಅಸಾರಾಮ್ ಬಾಪು ಪ್ರಕರಣದಿಂದ ಪಾಠ ಕಲಿಯಬೇಕಿದೆ. ಅವರ ಅಪರಾಧಗಳು ಬಹಿರಂಗವಾದಾಗ, ಅಪಾರ ಜನಬೆಂಬಲದ ಹೊರತಾಗಿಯೂ ಯಾವುದೇ ರಕ್ಷಣೆ ನೀಡಲಿಲ್ಲ. ಈಗ ಧರ್ಮಸ್ಥಳದ ವಿಚಾರದಲ್ಲಿ ಭಿನ್ನವಾಗಿ ಏಕೆ ವರ್ತಿಸಬೇಕು ?
ಕೇಂದ್ರ ಸರ್ಕಾರ ಒಂದು ವೇಳೆ ಮುಂದುವರೆದು ಎಸ್‍ಐಟಿ ಬದಲು ಎನ್‍ಐಎ ತನಿಖೆ ಆದೇಶಿಸಿದರೆ, ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿ, ಕಾನೂನು ಮತ್ತು ಸಂಸ್ಥೆಗಳ ಮೇಲಿನ ವಿಶ್ವಾಸವೇ ಕುಸಿದುಹೋಗುತ್ತದೆ. ಧರ್ಮಸ್ಥಳದ ಭೀಕರ ಅಪರಾಧಗಳ ಸಂತ್ರಸ್ತರು ಮತ್ತೊಮ್ಮೆ ವಿಶ್ವಾಸ ದ್ರೋಹ ಎದುರಿಸುತ್ತಾರೆ, ಶಂಕಿತ ಆರೋಪಿಗಳು ರಾಜಕೀಯ ರಕ್ಷಣೆಯೊಂದಿಗೆ ಮೆರೆಯುತ್ತಾರೆ.
ಸ್ವಾಮಿಗಳು ದೆಹಲಿಯ ಯಶಸ್ಸಿನ ಬಗ್ಗೆ ಎದೆ ತಟ್ಟಿ ಹೇಳಬಹುದು. ಆದರೆ ವಾಸ್ತವಿಕವಾಗಿ ಅವರ ರಾಯಭಾರವೇ ಹಾಸ್ಯಾಸ್ಪದವಾಗಿದೆ. ಜನರು ಇದನ್ನು ಒಳಹೊಕ್ಕು ನೋಡುತ್ತಾರೆ. ಜನತಾ ನ್ಯಾಯಾಲಯದಲ್ಲಿ ಅಂತಿಮ ತೀರ್ಪುಗಳು ಹೆಚ್ಚು ಮೌಲಿಕವಾಗಿರುತ್ತವೆ, ಇದರ ಮುಂದೆ ಕೇಸರಿ ವಸ್ತ್ರಧಾರಿಗಳ, ರಾಜಕೀಯ ಪಕ್ಷಗಳ ಪ್ರಯತ್ನಗಳು ನಗಣ್ಯವಾಗುತ್ತವೆ.
ದೇವಮಾನವರು ಲಾಬಿಕೋರರಾದಾಗ, ಸಚಿವರು ಅವರ ಮಾತಿಗೆ ತಾಳ ಹಾಕಿದಾಗ, ಅಲ್ಲಿ ರಕ್ಷಣೆಯಾಗುವುದು ಧರ್ಮ ಅಲ್ಲ, ಬದಲಾಗಿ ಕ್ರಿಮಿನಲ್‍ಗಳು.
Comments
Post a Comment