ಎಸ್ ಎಲ್ ಭೈರಪ್ಪ ಪರಂಪರೆಯನ್ನು ರಕ್ಷಿಸುವವರು ಯಾರು?
ಸಹನಾ ವಿಜಯಕುಮಾರ್
ಸಹನಾ ವಿಜಯಕುಮಾರ್ ಮತ್ತು ಭೈರಪ್ಪ ಮಕ್ಕಳ ಮಧ್ಯೆ ನಾಜೂಕಾದ ಬ್ಯಾಲೆನ್ಸ್ ಏರ್ಪಟ್ಟಿದೆ
ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರ ನಿಧನದಿಂದ ಕರ್ನಾಟಕದ ಸಾಹಿತ್ಯ ಲೋಕದಲ್ಲಿ ಮೇರು ಸಾಹಿತಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಸಮಾಜವನ್ನು, ಇತಿಹಾಸವನ್ನು ಮತ್ತು ಮಾನವನ ನೈತಿಕತೆಯನ್ನು ಪ್ರಶ್ನಿಸುವಂತಹ ಕಾದಂಬರಿಗಳನ್ನು ರಚಿಸಿರುವ ಭೈರಪ್ಪ ಅಗಾಧ ಸಾಹಿತ್ಯ ಭಂಡಾರವನ್ನು ಬಿಟ್ಟುಹೋಗಿರುವುದಲ್ಲದೆ, ತಮ್ಮ ಜೀವನದ ಕೊನೆಯ ಗಳಿಗೆಗಳ ದೃಷ್ಟಿಯಿಂದ ಹೊಸ ವಿವಾದವನ್ನೂ ಬಿಟ್ಟುಹೋಗಿದ್ದಾರೆ. ಇದರ ಮೂಲ ಇರುವುದು ಅವರು ಬಿಟ್ಟುಹೋಗಿರುವ ಉಯಿಲಿನಲ್ಲಿ. ಜುಲೈ 2025ರಲ್ಲಿ ದಾಖಲಾಗಿರುವ ಈ ಉಯಿಲು ಭಾಗಿದಾರರಲ್ಲಿ ಎರಡು ಬಣಗಳನ್ನು ಸೂಚಿಸಿದೆ. ಮೊದಲನೆಯದು ಅವರ ಗಂಡುಮಕ್ಕಳಾದ ಎಸ್ ಬಿ ಉದಯಶಂಕರ್ ಮತ್ತು ಎಸ್ ಬಿ ರವಿಶಂಕರ್, ಎರಡನೆಯದು ಭೈರಪ್ಪ ಅವರ ಪಾಲಿಗೆ ಮಗಳಂತೆಯೇ ಇದ್ದ, ಕೊನೆಯ ದಿನಗಳಲ್ಲಿ ಅವರನ್ನು ಪಾಲನೆ ಮಾಡಿದ ಸಹನಾ ವಿಜಯಕುಮಾರ್.
ಈ ಉಯಿಲು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತಿದ್ದು, ಮೈಸೂರು ಕಲಾಮಂದಿರದಲ್ಲಿ ಅವರ ಪಾರ್ಥಿವ ಶರೀರದ ದರ್ಶನದ ವೇಳೆಯಲ್ಲೂ ಧ್ವನಿಸಿತ್ತು. ಉಯಿಲಿನಲ್ಲಿ ಇರುವ ಒಂದು ವಿಶೇಷ ಸೂಚನೆ ಎಂದರೆ ಭೈರಪ್ಪ ಅವರ ಗಂಡುಮಕ್ಕಳು ಅವರ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಬದಲಾಗಿ ಅವರ ಅಂತ್ಯಕ್ರಿಯೆಯನ್ನು ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದಲ್ಲಿ, ಸಹನಾ ವಿಜಯಕುಮಾರ್ ಅವರಿಂದಲೇ ನೆರವೇರಿಸಬೇಕು ಎಂಬುದು. ಅನೇಕರಿಗೆ ಇದು ಕೇವಲ ವೈಯುಕ್ತಿಕ ಆಯ್ಕೆ ಅಷ್ಟೇ ಅಲ್ಲದೆ ಸಾಂಕೇತಿಕ ಸೂಚನೆ ಎಂದೂ ಭಾಸವಾಗುತ್ತಿದೆ. ರಕ್ತಸಂಬಂಧಗಳನ್ನು ಮೀರಿ ವಿಶ್ವಾಸ, ನಿಷ್ಠೆ ಮತ್ತು ವಾತ್ಸಲ್ಯವನ್ನು ಸಾರ್ವಜನಿಕವಾಗಿ ಘೋಷಿಸಿದ ಒಂದು ಪ್ರಕ್ರಿಯೆಯಾಗಿ ಕಾಣಲಾಗುತ್ತಿದೆ.
ಭೈರಪ್ಪ ಅವರು, ಅಸಾಂಪ್ರದಾಯಿಕ ಸಾಮಾಜಿಕ ಹಾಗೂ ನೈತಿಕ ಪ್ರಶ್ನೆಗಳನ್ನು ತಮ್ಮ ಕಾದಂಬರಿಗಳಲ್ಲಿ ಶೋಧಿಸುತ್ತಿದ್ದರು. ಅವರ ಈ ನಿರ್ಧಾರವೂ ಸಹ ಅವರ ಸ್ವತಂತ್ರವಾದ, ಮೂರ್ತಿಭಂಜಕ ಬದುಕನ್ನು ಸೂಚಿಸುತ್ತದೆ. ಆದರೂ ಈ ನಿರ್ಧಾರವು ಅವರ ಮಕ್ಕಳನ್ನು ಅಸಾಮಾನ್ಯ ಸ್ಥಾನದಲ್ಲಿ ಇರಿಸುತ್ತದೆ. ಇಬ್ಬರೂ ಸಹ ಸಾರ್ವಜನಿಕ ವಲಯದಿಂದ ದೂರದಲ್ಲೇ ಉಳಿದಿದ್ದು, ಉದಯಶಂಕರ್ ಬೆಂಗಳೂರಿನಲ್ಲಿ ತಮ್ಮ ತಂದೆಯ ನಿಧನದ ನಂತರ ಎಲ್ಲ ತಯಾರಿಗಳನ್ನೂ ಮಾಡಿದರು. ರವಿಶಂಕರ್, ಲಂಡನ್‍ನಲ್ಲಿ ವಾಸಿಸುತ್ತಿದ್ದು ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಇಬ್ಬರೂ ಸಹ ಉಯಿಲನ್ನು ಕುರಿತಂತೆ ಸಾರ್ವಜನಿಕ ಹೇಳಿಕೆಯನ್ನು ನೀಡಿಲ್ಲ. ಹಾಗಾಗಿ ಸಾರ್ವಜನಿಕರಲ್ಲಿ ಭೈರಪ್ಪನವರ ಈ ನಿರ್ದೇಶನವನ್ನು ಯಾರು ಪ್ರಶ್ನಿಸುತ್ತಾರೆ, ಯಾರು ಮಾತುಕತೆ ನಡೆಸುತ್ತಾರೆ ಅಥವಾ ಒಪ್ಪುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.
ಅಷ್ಟೇ ಮಹತ್ವದ ಸಂಗತಿ ಎಂದರೆ ಸಹನಾ ವಿಜಯಕುಮಾರ್ ಅವರ ಪಾತ್ರ. ಅಂತ್ಯ ಸಂಸ್ಕಾರವನ್ನು ನಡೆಸುವ ಜವಾಬ್ದಾರಿ ಹೊರುವಂತೆ ಸೂಚಿಸಲ್ಪಟ್ಟಿರುವ ಸಹನಾ ಈಗ ಭೈರಪ್ಪನವರ ಪರಂಪರೆಯಲ್ಲಿ ಪ್ರಮುಖ ಭಾಗಿದಾರರಾಗುತ್ತಾರೆ. ಅವರು ಕೇವಲ ಅಂತ್ಯಕ್ರಿಯೆಯನ್ನು ನೆರವೇರಿಸುವ ಹೊಣೆ ಮಾತ್ರ ಹೊತ್ತಿರುವುದಲ್ಲ, ಸಾಹಿತಿಯ ವಿಶ್ವಾಸ, ವೈಯುಕ್ತಿಕ ಆಯ್ಕೆಯನ್ನೂ ಪ್ರತಿನಿಧಿಸುತ್ತಿದ್ದು, ವರದಿಗಳ ಅನುಸಾರ ಬದುಕಿನ ಕೊನೆಯ ದಿನಗಳಲ್ಲಿ ಭೈರಪ್ಪ ಈ ಸಂಬಂಧವನ್ನು ರೂಪಿಸಿಕೊಂಡಿದ್ದಾರೆ. ಆಕೆಯ ಭಾಗವಹಿಸುವಿಕೆಯು, ಭೈರಪ್ಪ ಅವರ ಸ್ಥಿರಾಸ್ತಿ, ಅಪ್ರಕಟಿತ ಹಸ್ತಪ್ರತಿಗಳು, ಬೌದ್ಧಿಕ ಆಸ್ತಿಯ ಹಕ್ಕುಗಳು ಇವೆಲ್ಲವನ್ನೂ ನಿರ್ವಹಿಸುವುದರಲ್ಲಿ ಪ್ರಭಾವ ಬೀರುತ್ತದೆ. ಗಂಡುಮಕ್ಕಳು ಸ್ವಾಭಾವಿಕ ಕಾನೂನಾತ್ಮಕ ಹಕ್ಕುದಾರರಾದರೆ, ಭೈರಪ್ಪ ಅವರ ಉಯಿಲು ಸಹನಾ ಅವರನ್ನು ನೈತಿಕ, ಸಾಂಕೇತಿಕ ರಕ್ಷಕರಾಗಿ ಸೂಚಿಸುತ್ತದೆ. ಇದು ಕುಟುಂಬದ ಮಾತುಕತೆಗಳನ್ನು ಹಾಗೂ ಸಾಹಿತ್ಯವಲಯದ ಪ್ರತಿಕ್ರಿಯೆಯನ್ನು ಪ್ರಭಾವಿಸುತ್ತದೆ.
ಈ ವಿವಾದವು ಕುಟುಂಬ, ಸಂಪ್ರದಾಯ ಮತ್ತು ವ್ಯಕ್ತಿಗತ ಸ್ವಾಯತ್ತತೆಯ ಪ್ರಶ್ನೆಗಳನ್ನೂ ಮುನ್ನಲೆಗೆ ತರುತ್ತದೆ. ಹಿಂದೂ ಸಂಪ್ರದಾಯಿಕ ಆಚರಣೆಯ ಅನುಸಾರ ಗಂಡುಮಗ ಅಂತ್ಯಕ್ರಿಯೆಗಳನ್ನು ನಡೆಸುವುದು ಸಹಜ. ಉದ್ದೇಶಪೂರ್ವಕವಾಗಿ ಸಹನಾ ಅವರನ್ನು ನೇಮಿಸುವ ಮೂಲಕ ಭೈರಪ್ಪ ಸಂಪ್ರದಾಯವನ್ನು ಮೆಟ್ಟಿನಿಂತು, ಭಾವನಾತ್ಮಕ ಹಾಗೂ ಸಂಕೀರ್ಣ ಸಮಸ್ಯೆಯನ್ನು ಬಿಟ್ಟುಹೋಗಿದ್ದಾರೆ. ಕರ್ನಾಟಕದ ಸಾಹಿತ್ಯ ವಲಯವು ಗಮನವಿಟ್ಟು ನೋಡುತ್ತಿದ್ದು, ಉದಯಶಂಕರ್ ಮತ್ತು ರವಿಶಂಕರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾತರದಿಂದ ನೋಡುತ್ತಿದೆ. ಅವರು ಉಯಿಲಿನ ನಿರ್ದೇಶನವನ್ನು ಗೌರವಿಸಿ ಸಹನಾ ಅವರ ಸಾಂಕೇತಿಕ ಅಧಿಕಾರವನ್ನು ಸಮ್ಮತಿಸುತ್ತಾರೆಯೇ ಅಥವಾ ಕಾನೂನಾತ್ಮಕ ವಿವಾದಗಳು ಮುಂದುವರೆಯುವುದೇ? ಸಹನಾ ಸ್ವತಃ ಹೇಗೆ ತಮ್ಮ ಹೊಸ ಪಾತ್ರವನ್ನು ನಿರ್ವಹಿಸುತ್ತಾರೆ, ಆಚರಣಾತ್ಮಕ ಕರ್ತವ್ಯ ಮತ್ತು ಅಭಿಮಾನಿಗಳ ನಿರೀಕ್ಷೆಗಳನ್ನು, ಸಾಹಿತ್ಯ ವಲಯದ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.
ಭಾರತೀಯ ಸಾಹಿತ್ಯ ಚರಿತ್ರೆಯ ಹಿಂದಿನ ಕೆಲವು ಉದಾಹರಣೆಗಳು ಇಂತಹ ಪರಂಪರೆಗಳನ್ನು ದಾಖಲಿಸಿವೆ. ಆರ್ ಕೆ ನಾರಾಯಣ್, ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮುಂತಾದ ಸಾಹಿತಿಗಳು ತಮ್ಮ ಅಪ್ರಕಟಿತ ಕೃತಿಗಳ ಬಗ್ಗೆ, ಪ್ರಕಟಣೆಯ ಅನುಮತಿಯ ಬಗ್ಗೆ ಎಚ್ಚರಿಕೆಯಿಂದ ನಡೆದುಕೊಂಡಿದ್ದಾರೆ. ಭೈರಪ್ಪ ಅವರ ಪ್ರಕರಣದಲ್ಲಿ ಕುಟುಂಬಕ್ಕೆ ಸೇರದ ವ್ಯಕ್ತಿಯೊಬ್ಬರನ್ನು ತಂದು ನಿಲ್ಲಿಸಿರುವುರಿಂದ, ಬಹುತೇಕ ವೈಯುಕ್ತಿಕ ಕೆಲಸಗಳನ್ನು ಅವರಿಗೆ ವಹಿಸಿದ್ದಾರೆ. ಇಲ್ಲಿ ನಿಷ್ಠೆ, ಕಾಳಜಿ ಮತ್ತು ವೈಯುಕ್ತಿಕ ಆಯ್ಕೆಯೇ ಪ್ರಧಾನವಾಗಿ ಕಾಣುತ್ತದೆ.
ಅಂತಿಮವಾಗಿ, ಪರಿಹಾರಗಳು ಅಂತ್ಯಕ್ರಿಯೆಯನ್ನೂ ದಾಟಿ ಮುಖ್ಯವಾಗುತ್ತದೆ. ಕರ್ನಾಟಕ ಹೇಗೆ ಸಂಪ್ರದಾಯವನ್ನು ವ್ಯಕ್ತಿಗತ ನೆಲೆಯಲ್ಲಿ ಸಮತೋಲನ ಮಾಡುತ್ತದೆ, ಕುಟುಂಬದ ಬಾಧ್ಯತೆಗಳನ್ನು ಹೇಗೆ ವೈಯುಕ್ತಿಕ ವಿಶ್ವಾಸದೊಂದಿಗೆ ಸರಿದೂಗಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಸಹನಾ ವಿಜಯಕುಮಾರ್ ಮತ್ತು ಭೈರಪ್ಪ ಅವರ ಮಕ್ಕಳು ಈಗ ನಿರ್ಣಾಯಕ ನೆಲೆಯಲ್ಲಿ ನಿಂತಿದ್ದು ಎಸ್ ಎಲ್ ಭೈರಪ್ಪ ಅವರನ್ನು ಕೇವಲ ಸಾಹಿತ್ಯದ ಮೇರು ಐಕಾನ್ ಎಂದು ಮಾತ್ರವಲ್ಲದೆ, ತಮ್ಮದೇ ಆದ ರಾಜಿಯಿಲ್ಲದ ತತ್ವಗಳಿಗೆ ಅನುಸಾರವಾಗಿ ಬದುಕಿ, ಅಂತ್ಯ ಕಂಡ ವ್ಯಕ್ತಿಯಾಗಿ ಹೇಗೆ ನಿರ್ಧರಿಸುತ್ತಾರೆ ಕಾದು ನೋಡಬೇಕಿದೆ.
Comments
Post a Comment