ನ್ಯಾಯವನ್ನೂ ಮೀರಿ ಅಧಿಕಾರ ಆಯ್ಕೆ ಮಾಡಿದ ಸ್ವಾಮಿಗಳು
ಕರ್ನಾಟಕದಲ್ಲಿ ಇಂದು ಮಠಗಳು ತಮ್ಮ ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಕಾರಣ ಹೊರಗಿನವರಿಂದ ನಡೆದ ದಾಳಿ ಅಲ್ಲ, ಬದಲಾಗಿ ಮಠಾಧೀಶರು ಅವರು ಪಾಲಿಸುವ ಧರ್ಮವನ್ನೇ ಧಿಕ್ಕರಿಸುವ ರೀತಿಯಲ್ಲಿ ಮಾತನಾಡಲಾರಂಭಿಸಿದ್ದಾರೆ. ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಸುತ್ತ ಹರಡಿರುವ ವಿವಾದ ಮತ್ತು ಹಲವು ದಶಕಗಳಿಂದ ತನಿಖೆಗೊಳಗಾಗದ ಇಂತಹ ಪ್ರಕರಣಗಳು, ಈ ಸಮಾಜಕ್ಕೆ ಮಾರ್ಗದರ್ಶಿಗಳಾಗಬೇಕಾದ ಇವರ ಮುಖವಾಡವನ್ನು ಕಳಚಿಹಾಕುತ್ತಿದೆ.
ಉಡುಪಿ ಪುತ್ತಿಗೆ ಮಠದ ಸ್ವಾಮಿ ಸುಗುಣೇಂದ್ರರು ಒಂದು ಕಾಲದಲ್ಲಿ ವಿದ್ವತ್ತಿಗಾಗಿ ಗೌರವಿಸಲ್ಪಡುತ್ತಿದ್ದರು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಸೌಜನ್ಯಾಳಿಗೆ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು `ಎಡಪಂಥೀಯರ ಕುತಂತ್ರ' ಎಂಬ ಅವರ ಹೇಳಿಕೆಯ ವಿಡಿಯೋ ತುಣುಕು ಹರಿದಾಡುತ್ತಿದೆ. ಮತ್ತೊಂದೆಡೆ ಧರ್ಮಸ್ಥಳದ ಆಡಳಿತಗಾರರ ಪರವಾಗಿ ಮಾಹಿತಿಗಳನ್ನು ತಿರುಚಿ ಪ್ರಸಾರ ಮಾಡುತ್ತಿರುವ, ಜನಸಾಮಾನ್ಯರ ಭತ್ರ್ಸನೆಗೆ ಈಡಾದ ವಿವಾದಾತ್ಮಕ ಟಿವಿ ವಾಹಿನಿಯ ನಿರೂಪಕನನ್ನು ಶ್ಲಾಘಿಸಿದ್ದಾರೆ. ಇದು ಆಘಾತಕಾರಿ ಏಕೆಂದರೆ, ಈ ಹೋರಾಟವನ್ನು ಮುನ್ನಡೆಸುತ್ತಿರುವ ಮಹೇಶ್‍ಶೆಟ್ಟಿ ತಿಮರೋಡಿ, ಗಿರೀಶ್‍ಮಟ್ಟಣ್ಣನವರ್, ಸೋಮನಾಥ ನಾಯಕ್, ತಮ್ಮಣ್ಣ ಶೆಟ್ಟಿ ಇವರಾರು ಎಡಪಂಥೀಯರಲ್ಲ. ಇವರು ಸಂ,ಘಪರಿವಾರಕ್ಕೆ ಸೇರಿದವರು. ಅವರ ಬೆನ್ನಿಗೆ ನಿಂತಿರುವ ಸಾವಿರಾರು ಜನರು ಯಾವುದೇ ಸಿದ್ಧಾಂತದಿಂದ ಪ್ರೇರಿತರಾಗಿಲ್ಲ, ಬದಲಾಗಿ ಮಾನವೀಯತೆ, ಅತ್ಯಾಚಾರ ಹತ್ಯೆಗೀಡಾದ ಹೆಣ್ಣುಮಕ್ಕಳಿಗೆ ನ್ಯಾಯ ಬಯಸುವ ಉದಾತ್ತತೆ ಹೊಂದಿರುವವರಾಗಿದ್ದಾರೆ. ಕೆಲವು ಹೋರಾಟಗಾರರು ಎಡಪಂಥೀಯ ಚಿಂತನೆಗೆ ಒಳಪಟ್ಟಿದ್ದರೂ ಸಹ ಅದು ನ್ಯಾಯದ ಪರ ಆಗ್ರಹಿಸುವುದನ್ನು ನಗಣ್ಯಗೊಳಿಸುವುದೇ? ಸುಗುಣೇಂದ್ರ ಸ್ವಾಮಿ ಅನುಕಂಪ ತೋರುವ ಬದಲು, ಹಣೆಪಟ್ಟಿಗಳನ್ನು ಹಚ್ಚಿ, ಸಂರಕ್ಷಿತ ಶಕ್ತಿಗಳ ಪರ ವಹಿಸುತ್ತಿದ್ದಾರೆ.
ಇದು ಸಾಲದೆನ್ನುವಂತೆ, ಸ್ವಾಮಿಗಳು ಈ ಹಾನಿಯನ್ನು ಉಲ್ಬಣಿಸುವಂತೆ ಮಾತನಾಡಿದ್ದು, ಸ್ವರ್ಗದ ಬಾಗಿಲುಗಳು ಸಂಸ್ಕøತ ವಿದ್ವಾಂಸರಿಗೆ ಮಾತ್ರ ತೆರೆದಿರುತ್ತದೆ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಜನತೆ ಒಳಗೊಳ್ಳುವಿಕೆಗೆ, ಸಮಾನತೆಗೆ ಹೋರಾಡುತ್ತಿರುವ ಹೊತ್ತಿನಲ್ಲಿ, ಇಲ್ಲೊಬ್ಬರು ಸ್ವಾಮಿ ಭಾಷೆ ಮತ್ತು ಜಾತಿಯ ಕಲ್ಪನೆಗಳನ್ನು ಮುನ್ನಲೆಗೆ ತರುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ಸರಿಯಾಗಿಯೇ ಜಾಡಿಸಿವೆ. ಸ್ವರ್ಗದ ಬಾಗಿಲು ಯಾರಿಗಾದರೂ ಮುಚ್ಚಲಾದರೆ ಅದು ಜನರನ್ನು ವಿಭಜಿಸುವ ಮತ್ತು ಪ್ರಾಚೀನ ನಂಬಿಕೆಗಳಿಗೆ ಅಂಟಿಕೊಂಡು ಧರ್ಮವನ್ನು ಅಪಮಾನಿಸುವ ಇಂತಹ ಸ್ವಾಮಿಗಳಿಗೆ ಮಾತ್ರ ಎಂದು ಹೇಳಲಾಗಿದೆ. ನಮ್ಮ ಪರಂಪರೆಯ ಉದಾತ್ತ ಪರೋಪಕಾರದ ಚಿಂತನೆಯನ್ನು, ಅನ್ಯರಿಗೆ ಒಳ್ಳೆಯದು ಮಾಡುವ ಆಲೋಚನೆಯನ್ನು ಮರೆತಿದ್ದರೆ, ಅದು ಭಾಷಾ ವಿದ್ವತ್ತು ಎನಿಸಿಕೊಳ್ಳುವುದಿಲ್ಲ. ಆದಿ ಶಂಕರರು ಕಸಾಯಿಖಾನೆಯ ವ್ಯಕ್ತಿಯ ಮುಂದೆ ತಲೆಬಾಗಿದ್ದು ಆತನಲ್ಲಿದ್ದ ವಿವೇಕವನ್ನು ನೋಡಿ.
ಇವರೊಬ್ಬರೇ ಅಲ್ಲ, ಮೈಸೂರಿನ ಸುತ್ತೂರು ಮಠದ ಸ್ವಾಮಿ ಶಿವರಾತ್ರಿ ದೇಶಿಕೇಂದ್ರ, ತಮ್ಮ ವಿವೇಕ ಮತ್ತು ಜ್ಞಾನಕ್ಕಾಗಿ ಹೆಸರಾಗಿದ್ದರೂ ತಪ್ಪು ಮಾಡಿದ್ದಾರೆ. ಎಸ್‍ಐಟಿ ತನಿಖೆ ಜಾರಿಯಲ್ಲಿರುವಾಗಲೇ ಆರೋಪಿ ಸ್ಥಾನದಲ್ಲಿರುವ ಧರ್ಮಸ್ಥಳದ ಆಡಳಿತ ವ್ಯವಸ್ಥೆಯೊಡನೆ ಐಕ್ಯಮತ ವ್ಯಕ್ತಪಡಿಸುವ ಮೂಲಕ, ಧಾರ್ಮಿಕ ನಾಯಕರಿಂದ ನಿರೀಕ್ಷಿಸಲಾಗುವ ಪ್ರಬುದ್ಧತೆಯನ್ನು ಅವರು ಹುಸಿಗೊಳಿಸಿದ್ದಾರೆ. ಸುತ್ತೂರು ಸ್ವಾಮಿಯು ಕೆಲ ಕಾಲ ಕಾಯಬಹುದಾಗಿತ್ತು. ಶಾಂತಿ ಕಾಪಾಡಲು ಆಗ್ರಹಿಸಬಹುದಿತ್ತು. ಬದಲಾಗಿ ಮುಂಚಿತವಾಗಿಯೇ ಮಾತನಾಡಿ, ಬಲಾಢ್ಯರನ್ನು ರಕ್ಷಿಸುವ ಸೂಚನೆ ನೀಡಿದ್ದಾರೆ. ಇದೇ ರೀತಿ ವಜ್ರದೇಹಿ ಮತ್ತಿರರ ಸ್ವಾಮಿಗಳು ಡಿ ಗ್ಯಾಂಗನ್ನು ಖಂಡಿಸುವುದು ಮಂಜುನಾಥ ಸ್ವಾಮಿಯನ್ನೇ ಖಂಡಿಸಿದ ಹಾಗೆ ಎಂದು ಹೇಳಿದ್ದಾರೆ. ಇದು ಅತ್ಯಂತ ಅಪಾಯಕಾರಿ ತರ್ಕವಾಗಿದ್ದು, ಆರೋಪಿತ ಅಪರಾಧಗಳನ್ನು ದೈವೀಕ ಮುಖವಾಡದಿಂದ ಮುಚ್ಚಿಹಾಕುವ ಮತ್ತು ಅಂತಹ ದನಿಗಳನ್ನು ಅಡಗಿಸುವ ಪ್ರಯತ್ನವಾಗಿದೆ.
ಈ ತಪ್ಪು ಹೆಜ್ಜೆಗಳು ಒಂದೇ ಮಾದರಿಯನ್ನು ಅನುಸರಿಸುತ್ತವೆ. ಸತ್ಯ ಕೇಳುವವರ ಪರ ವಹಸದೆ, ಸ್ವಾಮಿಗಳು ಪ್ರಬಲ ಸಂಸ್ಥೆಗಳ ರಕ್ಷಣೆಗೆ ಧಾವಿಸಿದ್ದಾರೆ. ಗಾಯಗಳನ್ನು ಶಮನ ಮಾಡಿಸುವ ಬದಲು ಅದನ್ನು ಮತ್ತಷ್ಟು ಕೆದಕಿ ನೋವು ಹೆಚ್ಚಿಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಅಪಹಾಸ್ಯಕ್ಕೀಡಾಗುವುದಷ್ಟೇ ಅಲ್ಲದೆ ಅದನ್ನೂ ಮೀರಿದಂತೆ ಮಠಗಳ ನೈತಿಕ ಅಧಿಕಾರವನ್ನು ಕೈಯ್ಯಾರೆ ಕಳೆದುಕೊಳ್ಳುತ್ತಿದ್ದಾರೆ.
ಸೌಜನ್ಯಾಳಿಗೆ ನ್ಯಾಯ ಕೇಳುವುದು ಎಡಪಂಥೀಯ ಎನ್ನುವ ಕಾರಣಕ್ಕಾಗಿ ಅಲ್ಲ ಅಥವಾ ಬಲಪಂಥೀಯವೂ ಅಲ್ಲ. ಇದು ಮಾನವೀಯತೆಯ ಪ್ರಶ್ನೆ. ಸರಳ ಸತ್ಯದೊಡನೆ ಹೆಗಲು ಕೊಟ್ಟು ನೀಡಲಾಗದ ಯಾವುದೇ ಸ್ವಾಮಿಯು ಜನರಿಗೆ ಧರ್ಮವನ್ನು ಬೋಧಿಸುವ ನೈತಿಕ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.
Comments
Post a Comment