ಬಿಜೆಪಿ ಕಾರ್ಯಕರ್ತರಿಗೆ ದ್ರೋಹ ಬಗೆದರೆ ಪರಿಣಾಮ ಎದುರಿಸಬೇಕಾಗುತ್ತದೆ
ಬಿಜೆಪಿ ಸದಾಕಾಲವೂ ಕಾರ್ಯಕರ್ತರನ್ನು ಆಧರಿಸಿದ ಪಕ್ಷ ಎಂದೇ ಹೇಳಿಕೊಳ್ಳುತ್ತಿದೆ. ಆದರೆ ಕಾರ್ಯಕರ್ತರು ಗುಲಾಮರಲ್ಲ.
ಕರಾವಳಿ ಕರ್ನಾಟಕವನ್ನು ಪ್ರಕ್ಷುಬ್ಧಗೊಳಿಸುತ್ತಿರುವ ಈಗಿನ ಬಿಕ್ಕಟ್ಟುಗಳ ಮೂಲ ಇರುವುದು, ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರಿಗೆ ದ್ರೋಹ ಬಗೆದಿರುವ ವಾಸ್ತವ ಸನ್ನಿವೇಶದಲ್ಲಿ. ಸಾಮಾನ್ಯ ಜನರು, ಕೇಸರಿ ಪಕ್ಷವು ಸೌಜನ್ಯ ಪ್ರಕರಣದಲ್ಲಿ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಅಪರಾಧಗಳಲ್ಲಿ ನ್ಯಾಯದ ಪರ ನಿಲ್ಲುತ್ತದೆ ಎಂದು ನಿರೀಕ್ಷಿಸುತ್ತಿದ್ದಾಗ, ಪಕ್ಷವು ಆರೋಪಿಗಳನ್ನು ರಕ್ಷಿಸುತ್ತಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಬಿಜೆಪಿ ನಾಯಕರು ಧರ್ಮಸ್ಥಳದ ದೇವಾಲಯದಲ್ಲಿ ಹೆಗ್ಗಡೆಗಳೊಂದಿಗೆ ಕುಳಿತು ಬೈಠಕ್ ನಡೆಸಿದ ಚಿತ್ರ ತಪ್ಪು ಸಂದೇಶ ರವಾನಿಸಿದ್ದು, ಅಧಿಕಾರ ಮತ್ತು ಪ್ರಭಾವಗಳು ಸತ್ಯ ಮತ್ತು ನ್ಯಾಯಕ್ಕಿಂತಲೂ ಮುಖ್ಯ ಎನ್ನುವ ಸಂದೇಶವನ್ನು ರವಾನಿಸಿದೆ. ಈ ನಡೆಗೆ ಕಾರ್ಯಕರ್ತರು ಮೌನದ ಮೂಲಕ ಪ್ರತಿಕ್ರಿಯಿಸಿದ್ದಾರೆ, ಹಾಗಾಗಿ ಒಂದು ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಿದ್ದ ಸಾರ್ವಜನಿಕ ಸಭೆಯಿಂದ ದೂರ ಉಳಿದಿದ್ದಾರೆ. ಕೇವಲ ಹತ್ತು ಸಾವಿರ ಜನರು ನೆರೆದಿದ್ದಾರೆ. ಖಾಲಿ ಮೈದಾನವು ಬಿಜೆಪಿ ಕಾರ್ಯಕರ್ತರು ಅನ್ಯಾಯದೊಡನೆ ರಾಜಿಯಾಗುವ ನಾಯಕರನ್ನು ಹಿಂಬಾಲಿಸುವುದಿಲ್ಲ ಎಂಬ ಗಟ್ಟಿಯಾದ ಸೂಚನೆಯನ್ನು ಕೊಟ್ಟಿದೆ.
ಇದು ಸಣ್ಣ ಕಲಹ ಅಲ್ಲ. ಬಿಜೆಪಿ ಸದಾಕಾಲವೂ ಕಾರ್ಯಕರ್ತರನ್ನು ಆಧರಿಸಿದ ಪಕ್ಷ ಎಂದೇ ಹೇಳಿಕೊಳ್ಳುತ್ತಿದೆ. ಆದರೆ ಕಾರ್ಯಕರ್ತರು ಗುಲಾಮರಲ್ಲ. ದಕ್ಷಿಣ ಕನ್ನಡದಲ್ಲಿ ಜನರ ತಿಳುವಳಿಕೆಗೆ ವಿರುದ್ಧವಾಗಿ ಹೋಗುವ ಯಾವುದೇ ಆದೇಶವನ್ನು ತಾವು ಪಾಲಿಸುವುದಿಲ್ಲ ಎಂದು ಅವರು ಪಕ್ಷಕ್ಕೆ ಮನದಟ್ಟು ಮಾಡಿದ್ದಾರೆ. ಮೇಲಿನಿಂದ ನಿರ್ಧಾರಗಳನ್ನು ಹೇರಬಹುದು, ಕಣ್ಮುಚ್ಚಿ ಅದನ್ನು ಅನುಸರಿಸಲಾಗುತ್ತದೆ ಎಂದು ಭಾವಿಸುವ ನಾಯಕರು ವಾಸ್ತವಕ್ಕೆ ವಿಮುಖರಾಗಿದ್ದಾರೆ. ಕಾರ್ಯಕರ್ತರು ಇಲ್ಲದಿದ್ದರೆ, ನಾಯಕರು ಏನು ಮಾಡಲು ಸಾಧ್ಯ? ಯಾವುದೇ ಸಮಾವೇಶಗಳಾಗುವುದಿಲ್ಲ, ಮತಗಳು ದೊರೆಯುವುದಿಲ್ಲ, ಜಯ ಗಳಿಸಲಾಗುವುದಿಲ್ಲ.
ಈ ರೀತಿ ದ್ರೋಹ ಬಗೆಯುವಲ್ಲಿ ಬಿಜೆಪಿ ನಾಯಕರು ಮಾತ್ರವೇ ಕಾಣುವುದಿಲ್ಲ. ಕಾಂಗ್ರೆಸ್ ನಾಯಕರೂ ಸಹ ಧರ್ಮಸ್ಥಳದ ಹಿತಾಸಕ್ತಿಗಳನ್ನು ಕಾಪಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಮುಖ್ಯಮಂತ್ರಿ ಮತ್ತು ಅವರ ಸಹವರ್ತಿಗಳು ಎಸ್‍ಐಟಿ ತನಿಖೆ ಕೇವಲ ಔಪಚಾರಿಕ, ಸಾರ್ವಜನಿಕರ ಆಕ್ರೋಶವನ್ನು ತಣಿಸುವ ಕ್ರಮ ಎಂದು ಹೇಳಿದ್ದಾರೆ. ಇದು ಸಂತ್ರಸ್ತರಿಗೆ ಮಾಡಿರುವ ಅವಮಾನ. ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ಬಲಾಢ್ಯರ ರಕ್ಷಣೆಗೆ ಬದ್ಧವಾಗಿರುವಾಗ, ರಾಜಕೀಯ ಎನ್ನುವುದು ಒಂದು ಸಮಾನಮನಸ್ಕರ ಕೂಟ ಎನ್ನುವುದು ಸ್ಪಷ್ಟವಾಗುತ್ತದೆ. ಸವಲತ್ತು ಇರುವವರನ್ನು ರಕ್ಷಿಸುವ ಸಲುವಾಗಿ ರೂಪಿಸಿರುವ ಒಂದು ಕೂಟ, ಅಲ್ಲಿ ಜನರು ಯಾವುದೆ ರಕ್ಷಣೆ ಇಲ್ಲದೆ ಇರಬೇಕಾಗುತ್ತದೆ ಎಂಬ ಸಂದೇಶ ಸ್ಪಷ್ಟವಾಗಿ ಕಾಣುತ್ತದೆ.
ಆದರೆ ಜನರು ಅಸಹಾಯಕರಲ್ಲ. ಧರ್ಮಸ್ಥಳ ಸಮಾವೇಶದ ಬಹಿಷ್ಕಾರ ಕಾರ್ಯಕರ್ತರು ಮತ್ತು ಸ್ಥಳೀಯ ಸಮುದಾಯಗಳು ತಮ್ಮ ಮಾತುಗಳಲ್ಲಿ ನೀಡುವ ಸಂದೇಶ್ಕಕಿಂತಲೂ ತೀಕ್ಷ್ಣವಾಗಿದೆ. ಸೌಜನ್ಯ ಪಕ್ಷ ರಚಿಸಲು ಎದ್ದಿರುವ ಕೂಗು, ನ್ಯಾಯವೇ ಕರಾವಳಿ ಕರ್ನಾಟಕದ ರಾಜಕೀಯ ಶಕ್ತಿಯಾಗುವ ಸೂಚನೆಗಳನ್ನು ನೀಡುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಪರ ಪ್ರಚಾರ ಮಾಡಲು ನಿರಾಕರಿಸಿದರೆ, ಆಗ ಹೊಸ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ, ಆಗ ದೇವಸ್ಥಾನದ ನಾಯಕರ ಬದಲು ದ್ರೋಹಕ್ಕೆ ಒಳಗಾದ ನಾಗರಿಕರು ಅವರೊಡನೆ ಇರುತ್ತಾರೆ.
ಬಿಜೆಪಿ ಪಕ್ಷವು ಇದನ್ನು ಗಂಭೀರ ಎಚ್ಚರಿಕೆಯಾಗಿ ಪರಿಗಣಿಸಬೇಕಿದೆ. ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗೆ ಕಾರಣ ಅದರ ಕಾರ್ಯಕರ್ತರು ಪಕ್ಷವನ್ನು ಭಿನ್ನ ಎಂದು ಭಾವಿಸಿದ್ದು, ರಾಜಿಯಾಗುವುದಕ್ಕಿಂತಲೂ ಪ್ರಾಮಾಣಿಕತೆಯನ್ನು ಅನುಸರಿಸುವ ಕಾರಣಕ್ಕಾಗಿ. ಈಗ ಇದೇ ಕಾರ್ಯಕರ್ತರು `ನಮ್ಮ ಹೆಸರಿನಲ್ಲಿ ಇದು ಸಲ್ಲದು' ಎಂದು ಹೇಳುತ್ತಿದ್ದಾರೆ. ಬಿಜೆಪಿ ನಾಯಕರು ಇನ್ನೂ ತಮ್ಮನ್ನು ಧರ್ಮಸ್ಥಳಕ್ಕೆ ಒತ್ತೆ ಇಡುವುದಾದರೆ, ಅವರ ಸೋಲು ನಿಶ್ಚಿತ. ರಾಜಕೀಯವಾಗಿ ಪಕ್ಷವು ಹೆಸರಿಲ್ಲದಂತಾಗುತ್ತದೆ. ಒಮ್ಮೆ ಭದ್ರಕೋಟೆಯಾಗಿದ್ದ ಪ್ರದೇಶ ಅವರ ಪಾಲಿಗೆ ಸೋಲಿನ ಮೈದಾನವಾಗುತ್ತದೆ.
ಇಲ್ಲಿ ಸಂದೇಶ ಸ್ಪಷ್ಟವಾಗಿದೆ. ನ್ಯಾಯದ ಜೊತೆಗೆ ನಿಲ್ಲಿ, ಬಲಾಢ್ಯರೊಂದಿಗೆ ಅಲ್ಲ. ಕಾರ್ಯಕರ್ತರ ಮತ್ತು ನಾಗರಿಕರ ದನಿಯನ್ನು ಆಲಿಸಿ, ಸೋ-ಕಾಲ್ಡ್ ಗಣ್ಯರ ಮಾತುಗಳನ್ನಲ್ಲ. ಇಲ್ಲವಾದರೆ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ!
Comments
Post a Comment