ವೀರೇಂದ್ರ ಹೆಗ್ಗಡೆ ಏನೂ ತಿಳಿಯದವರಂತೆ ನಟಿಸುವುದೇಕೆ?

 


ಧರ್ಮಸ್ಥಳದ ಸಮೀಪ ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ, ಮಂಜುನಾಥಸ್ವಾಮಿ ದೇವಾಲಯ ಆಡಳಿತದ ಅನುವಂಶೀಯ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಸಭಿಕರ ಮುಂದೆ ಕುತೂಹಲಕಾರಿ ಪ್ರಶ್ನೆಯನ್ನು ಕೇಳಿದ್ದರು: "ಜನರು ನನ್ನನ್ನು ಏಕೆ ದ್ವೇಷಿಸುತ್ತಾರೆÉ". ಈ ಮಾತಿಗಿಂತಲೂ ಮುಖ್ಯವಾಗಿ ಕಾಣುವುದು, ಸ್ಥಳೀಯ ಜನರು ತಮ್ಮ ಜೊತೆಗೆ ನಿಲ್ಲುವಂತೆ ಅವರು ಮಾಡಿದ ಮನವಿ. ಯಾರೂ `ಸ್ಪರ್ಶಿಸಲಾಗದ' ವ್ಯಕ್ತಿಯಾಗಿ ಇಷ್ಟು ವರ್ಷಗಳಿಂದ ಇದ್ದ ವ್ಯಕ್ತಿಗೆ ಈಗ ಅಭದ್ರತೆ ಕಾಣುತ್ತಿರುವುದು ವಿಚಿತ್ರವಾಗಿದೆ. ಇದು ಅವರ ಅಮಾಯಕತನ ಅಲ್ಲ, ಬದಲಾಗಿ ಅವರಿಗೆ ಸುತ್ತ ಬೀಸುತ್ತಿರುವ ಬಿರುಗಾಳಿಯ ಬಗ್ಗೆ ಅರಿವಿನ ಸೂಚನೆ.

ಸಾರ್ವಜನಿಕರು ತಮ್ಮನ್ನು ದ್ವೇಷಿಸುತ್ತಿರುವುದನ್ನು `ನಿಗೂಢ' ಎಂದೇ ಹೆಗ್ಗಡೆ ಭಾವಿಸುತ್ತಾರೆ. ಹೆಗ್ಗಡೆ ಅವರಿಗೆ ಹಲವರು ಸೋಷಿಯಲ್ ಮೀಡಿಯಾದಲ್ಲಿ, ಯೂ-ಟ್ಯೂಬ್‍ಗಳಲ್ಲಿ ಖಡಕ್ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಅವರು ಬಿಂಬಿಸಿರುವ ಮುಗ್ಧತೆಯ ಪರದೆ ಸರಿದಿದೆ ಎಂದುಕೊಳ್ಳೋಣ.

ಹೆಗ್ಗಡೆ ತಿಳಿದುಕೊಳ್ಳಲು ಬಯಸುವ ಕಾರಣಗಳು ಸ್ಪಷ್ಟವಾಗಿವೆ. ಇದು ಈ ಪ್ರದೇಶದ ಮೂಲೆ ಮೂಲೆಯಲ್ಲೂ ಚರ್ಚೆಗೊಳಗಾಗುತ್ತಿದೆ. ಮೊದಲನೆಯದಾಗಿ, ಹೆಗ್ಗಡೆ ಅವರು ಸೌಜನ್ಯ ಪ್ರಕರಣದಲ್ಲಿ ಮತ್ತು ಇತರ ಅದೇ ರೀತಿಯ ಘಟನೆಗಳಲ್ಲಿ ಅತ್ಯಾಚಾರಿಗಳನ್ನು, ಹಂತಕರನ್ನು ರಕ್ಷಿಸುತ್ತಿದ್ದಾರೆ ಎನ್ನುವುದು ಬಹುಪಾಲು ಜನರ ಅನಿಸಿಕೆಯಾಗಿದೆ. ಸಾರ್ವಜನಿಕವಾಗಿ ಎಷ್ಟೇ ಅಲ್ಲಗಳೆದರೂ ದೇವಸ್ಥಾನದ ಆಡಳಿತ ಮಂಡಲಿಯು ನ್ಯಾಯದ ಪರ ಹೋರಾಡುವ ಬದಲು ಅಪರಾಧಿಗಳನ್ನು ರಕ್ಷಿಸುತ್ತಿದೆ ಎನ್ನುವ ಅಭಿಪ್ರಾಯ ದಟ್ಟವಾಗಿದೆ. ಶ್ರದ್ಧಾ ಭಕ್ತಿಗಳ ಸಂಸ್ಥೆಯೊಂದು ಸತ್ಯವನ್ನು ಮುಚ್ಚಿಹಾಕುವಲ್ಲಿ ಶಾಮೀಲಾಗಿದೆ ಎಂದು ಜನರು ತಿಳಿದಿರುವುದರಿಂದ ದ್ವೇಷ ಎನ್ನುವುದು ಸ್ವಾಭಾವಿಕವಾಗುತ್ತದೆ. ತಮ್ಮವರ್ಯಾರೂ ಅಪರಾಧಿಗಳಲ್ಲ ಎಂದು ಜನ ತಿಳಿಯಬೇಕು ಎಂದು ಅಂದುಕೊಂಡಿರುವ ಅವರು ವೇದವಲ್ಲಿಯಿಂದ ಶುರುವಾಗಿ ಸೌಜನ್ಯಾವರೆಗೆ ಹತ್ತು ಹಲವಾರು ಹೆಣ್ಮಕ್ಕಳ ಅತ್ಯಾಚಾರ ಮತ್ತು ಕೊಲೆಗಳಿಗೆ ಯಾರು ಕಾರಣ ಎಂದು ತಿಳಿದಿಲ್ಲವೇ? ಅವರಿಗೆ ಗೊತ್ತಿಲ್ಲದಿದ್ದರೆ, ಪೊಲೀಸರು ಅದನ್ನು ತನಿಖೆ ಮಾಡಲೇನಡ್ಡಿ? ಧರ್ಮಸ್ಥಳದಲ್ಲಿ ನಡೆದ ಹೇಯ ಕುಕೃತ್ಯಗಳ ಬಗ್ಗೆ ಯಾರಾದರೂ ಮಾತನಾಡಿದರೆ ಅದು ದೇವಸ್ಥಾನದ ವಿರುದ್ಧ ಮತ್ತು ಪರೋಕ್ಷವಾಗಿ ತನ್ನ ಕುಟುಂಬದ ವಿರುದ್ಧ ಎಂದು ಹೆಗ್ಗಡೆ ಹೇಳುವುದೇಕೆ? ಹಾಗೆ ಹೇಳುವ ಮೂಲಕ ಧರ್ಮ ಮತ್ತು ದೇವರನ್ನು ರಕ್ಷಣಾ ಕವಚ ಮಾಡಿಕೊಳ್ಳುವ ಉದ್ದೇಶವೇ? ಜನ ಹಾಗಂದುಕೊಂಡರೆ ತಪ್ಪೇನಿದೆ?

ಎರಡನೆಯದಾಗಿ, ಹೆಗ್ಗಡೆ ತಮ್ಮ ಸುತ್ತಲೂ ವ್ಯಾಪಕವಾದ ರಾಜಕೀಯ ರಕ್ಷಣಾ ಕೋಟೆಯನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲ ಪಕ್ಷಗಳ ನಾಯಕರೂ, ಹೆಗ್ಗಡೆ ಕುಟುಂಬವನ್ನು ಉತ್ತರದಾಯಿಯಾಗಿ ಮಾಡುವ ಜವಾಬ್ದಾರಿಯನ್ನು ಮರೆತು, ಅವರ ಸಮರ್ಥಕರಾಗಿದ್ದಾರೆ. ಹಾಗಾಗಿಯೇ ಸ್ಥಳೀಯ ಪೆÇಲೀಸರು ಹೆಗ್ಗಡೆ ಕುಟುಂಬದ ವಿರುದ್ಧ ದೂರುಗಳನ್ನು ಸ್ವೀಕರಿಸುವುದಿಲ್ಲ, ದಾಖಲೆಗೆ ತೆಗೆದುಕೊಂಡರೂ ಅದನ್ನು ನಿರ್ಲಕ್ಷಿಸುತ್ತಾರೆ. ಸಾಮಾನ್ಯ ಗ್ರಾಮೀಣ ಜನರು ಧರ್ಮ ಮತ್ತು ರಾಜಕಾರಣದ ಸಮ್ಮಿಲನವು ಸಂತ್ರಸ್ತರ, ನೊಂದವರ ಪಾಲಿಗೆ ಅಸಹಾಯಕತೆಯನ್ನು ಸೃಷ್ಟಿಸುತ್ತದೆ ಎಂಬ ವಾಸ್ತವವನ್ನು ಅರಿತಿದ್ದಾರೆ. ಹಾಗಾಗಿ ಇಲ್ಲಿ ಪ್ರಶ್ನೆ ಇರುವುದು ಜನರು ಅವರನ್ನು ಏಕೆ ದ್ವೇಷಿಸುತ್ತಾರೆ ಎನ್ನುವುದಲ್ಲ, ಬದಲಾಗಿ, ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಹಾಗೂ ತಮ್ಮ ರಕ್ಷಣೆಗಾಗಿ ತಂತ್ರ ಹೂಡುವ ವ್ಯಕ್ತಿಯನ್ನು ಹೇಗೆ ಪ್ರಶಂಸಿಸಲು ಸಾಧ್ಯ?

ಮೂರನೆಯದಾಗಿ, ಆರ್ಥಿಕ ಆಯಾಮಗಳನ್ನೂ ಗಮನಿಸಬೇಕಿದೆ. ಅವರ ಟ್ರಸ್ಟ್‍ಗಳ ವ್ಯಾಪ್ತಿಯಲ್ಲಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಬಡ ಜನತೆಯನ್ನು ಶೋಷಣೆಗೊಳಪಡಿಸುವ ಆರೋಪಗಳನ್ನು ಎದುರಿಸುತ್ತಿವೆ. ಬಡ ಜನತೆಯನ್ನು ದಾರಿದ್ರ್ಯದಿಂದ ವಿಮೋಚನೆಗೊಳಪಡಿಸುವುದಕ್ಕಿಂತಲೂ ಹೆಚ್ಚಾಗಿ, ಅವರನ್ನು ಸಾಲದ ಸುಳಿಯಲ್ಲಿ ಸಿಲುಕಿಸಲಾಗುತ್ತದೆ. ಇಷ್ಟು ಸಾಲದೆಂಬಂತೆ, ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಅವರ ಸಂಸ್ಥೆಗಳು ಫಲಾನುಭವಿಯಾಗಿದೆ. ಈ ಭೂಮಿ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಬೇಕಾದುದಾಗಿತ್ತು. ಈ ಸನ್ನಿವೇಶದಲ್ಲಿ ಸೇವೆ ಎನ್ನುವುದು ವ್ಯವಸ್ಥಿತ ಲೂಟಿಯಾಗಿಯೇ ಕಾಣುವುದು ಸಹಜ.

ನಾಲ್ಕನೆಯದಾಗಿ, ಹೆಗ್ಗಡೆಯವರ ಕುಟುಂಬ ಮತ್ತು ಸಹಚರರು ನ್ಯಾಯಾಲಯಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಹೆಗ್ಗಡೆ ಕುಟುಂಬದಿಂದ ಉತ್ತರದಾಯಿತ್ವ ನಿರೀಕ್ಷಿಸುವ ಸಾಮಾಜಿಕ ಕಾರ್ಯಕರ್ತರು, ವಿಮರ್ಶಕರು, ಟೀಕಾಕಾರರು, ಮಾಹಿತಿದಾರರು, ಪತ್ರಕರ್ತರು ಹೆಗ್ಗಡೆಯವರಿಂದ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಾಲಕ್ಕೆ ನ್ಯಾಯ ಅರಸಿ ಜನ ಧರ್ಮಸ್ಥಳಕ್ಕೆ ಬರುತ್ತಿದ್ದರೆ, ಈಗ ಹೆಗ್ಗಡೆಗಳೇ ದೂರು ಹೊತ್ತು ಕೋರ್ಟುಗಳ ಬಾಗಿಲು ಬಡಿಯುತ್ತಿದ್ದಾರೆ. ಇದು ವಿಪರ್ಯಾಸವಲ್ಲದೇ ಮತ್ತೇನು?

ಇಂಥ ಸನ್ನಿವೇಶದಲ್ಲಿ ಹೆಗ್ಗಡೆ ಅವರಿಗೆ ಜನರ ಪ್ರತಿರೋಧದ ಮೂಲ ತಿಳಿದೇ ಇಲ್ಲ ಎನ್ನುವುದು ಅಪ್ರಾಮಾಣಿಕತೆಯ ಪರಾಕಾಷ್ಠೆಯಾಗಿ ಕಾಣುತ್ತದೆ.

ಹೆಗ್ಗಡೆ ಜನರ ಮುಂದೆ ನಿಂತು, ನನ್ನನ್ನು ಏಕೆ ದ್ವೇಷಿಸಲಾಗುತ್ತಿದೆ ಎಂದು ಪ್ರಶ್ನಿಸಿದಾಗ, ಅದು ಅಮಾಯಕ ಪ್ರಶ್ನೆಯಾಗಿ ಕಾಣುವುದಿಲ್ಲ. ನಾಟಕೀಯವಾಗಿ ತೋರುತ್ತದೆ. ಎಲ್ಲರಿಗಿಂತಲೂ ಹೆಚ್ಚಾಗಿ ಅವರಿಗೆ ಉತ್ತರ ತಿಳಿದಿದೆ. ತಮ್ಮ ಕುಟುಂಬದ ಪರ ಸಿಂಪಥಿ ಸೃಷ್ಟಿಸಲು ಬೆಂಬಲಕ್ಕಾಗಿ ಅವರು ಸಲ್ಲಿಸಿರುವ ಮನವಿ ಸಮಾಜ ಸೇವಕನ ಧ್ವನಿಯಾಗಿ ಕಾಣುವುದಿಲ್ಲ. ಬದಲಾಗಿ ಒಬ್ಬ ಬಲಾಢ್ಯ ವ್ಯಕ್ತಿ ತನ್ನ ಸುತ್ತಲಿನ ರಕ್ಷಣಾ ಗೋಡೆಗಳು ಕುಸಿಯುತ್ತಿರುವುದನ್ನು ಕಂಡು ಗಾಬರಿಯಾಗಿ ಬೆಂಬಲ ಕೇಳುತ್ತಿರುವ ದನಿಯಾಗಿ ಕಾಣುತ್ತದೆ.

ಅಂತಿಮವಾಗಿ, ಇಲ್ಲಿ ಪ್ರಶ್ನೆ ಇರುವುದು ಜನರು ಅವರನ್ನು ಅನಗತ್ಯವಾಗಿ ದ್ವೇಷಿಸುತ್ತಾರೆಯೇ ಎನ್ನುವುದು. ಅವರು ಏಕೆ ದ್ವೇಷಿಸುತ್ತಿದ್ದಾರೆ ಅಥವಾ ಅದು ದ್ವೇಷವೇ ಅಲ್ಲ, ಜನ ತನ್ನನ್ನು ಪ್ರಶ್ನಿಸುತ್ತಿದ್ದಾರೆ ಮಾತ್ರ ಎಂದು ಒಪ್ಪಿಕೊಳ್ಳುವ ಧೈರ್ಯ ಅವರಲ್ಲಿದೆಯೇ? ಅಲ್ಲಿಯವರೆಗೂ, ಅವರ ಅಮಾಯಕತನದ ನಾಟಕೀಯ ಪ್ರಹಸನಗಳು, ಅವರು ತಮಗೆ ಅರ್ಥವಾಗಿಲ್ಲ ಎನ್ನುವ ಹೇಳಿಕೆ, ಜನರ ಪ್ರತಿರೋಧವನ್ನು ಹೆಚ್ಚಿಸುತ್ತಲೇ ಹೋಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again