ಸ್ಯಾಮ್ ಪಿಟ್ರೋಡಾ: ಕಾಂಗ್ರೆಸ್‍ಗೆ ತಲೆಬೇನೆ, ಬಿಜೆಪಿಗೆ ಆಯುಧ
ಕಾಂಗ್ರೆಸ್ ಪಕ್ಷದ ಎನ್‍ಆರ್‍ಐ ಮುಖವಾಡವಾಗಿರುವ ಪಿಟ್ರೋಡಾ ಅವರ ವಿದೇಶಾಂಗ ನೀತಿಯ ಪ್ರಮಾದಗಳು ಏಕೆ ಪಕ್ಷಕ್ಕೆ ತೊಡಕಾಗುತ್ತವೆ?
ಬಹಳ ದಿನಗಳ ಮೌನದ ನಂತರ ಸ್ಯಾಮ್ ಪಿಟ್ರೋಡಾ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಬೇಕಾಬಿಟ್ಟಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಮತ್ತೊಮ್ಮೆ ಗೊಂದಲ ಮೂಡಿಸಿ, ಬಿರುಗಾಳಿ ಎಬ್ಬಿಸಿದ್ದಾರೆ. ಪತ್ರಿಕಾ ಏಜೆನ್ಸಿಗಳೊಡನೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಭಾರತೀಯ ವಿದೇಶಾಂಗ ನೀತಿಯ ಮುಖ್ಯಸ್ಥ ಸ್ಯಾಮ್ ಪಿಟ್ರೋಡಾ ಭಾರತಕ್ಕೆ ಪಾಕಿಸ್ತಾನ ಅಥವಾ ಇತರ ನೆರೆ ರಾಷ್ಟ್ರಗಳೊಡನೆ ಯುದ್ಧ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ದೇಶಗಳು ಸಂಕಟದ ಸಮಯಗಳನ್ನು ಕಳೆಯುತ್ತಿದ್ದು, ಭಾರತದ ನೆರವು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇವರ ಔದಾರ್ಯದ ಸಲಹೆಯ ಅನುಸಾರ ಭಾರತ ಸಣ್ಣಪುಟ್ಟ ನೆರೆ ದೇಶಗಳೊಡನೆ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಯತ್ನಿಸಬೇಕಿದೆ. ಈ ಸಲಹೆ ಅಪ್ರಬುದ್ಧವಷ್ಟೇ ಅಲ್ಲದೆ, ಭಾರತದ ರಕ್ಷಣಾ ವಾಸ್ತವಗಳ ದೃಷ್ಟಿಯಿಂದ ಅಪಾಯಕಾರಿಯಾದ ಹಾದಿ ತಪ್ಪಿಸುವ ಮಾತುಗಳಾಗಿವೆ.
ಪಾಕಿಸ್ತಾನ ಕೇವಲ ಸಾಧಾರಣ ನೆರೆ ರಾಷ್ಟ್ರವಲ್ಲ ಎನ್ನುವುದು ಸ್ಪಷ್ಟ. ಇದು ಪುಂಡ ದೇಶವಾಗಿದ್ದು ನಿರಂತರವಾಗಿ ಭಯೋತ್ಪಾದಕರನ್ನು ಪೆÇೀಷಿಸುತ್ತಿದೆ, ಗಡಿಯಾಚೆಗೆ ಭಯೋತ್ಪಾದಕ ಕೃತ್ಯಗಳನ್ನು, ಹಿಂಸೆಯನ್ನು ಪ್ರಚೋದಿಸುತ್ತಿದೆ, ಭಾರತೀಯರ ಜೀವಕ್ಕೆ ಸಂಚಕಾರ ತರುತ್ತಿದೆ. ಪ್ರಾಮಾಣಿಕವಾಗಿ ಯೋಚಿಸುವ ಯಾವುದೇ ಸರ್ಕಾರವಾದರೂ ಪಾಕಿಸ್ತಾನವನ್ನು ಸಂಕಟದಲ್ಲಿರುವ ನೆರೆ ದೇಶ, ಔದಾರ್ಯಕ್ಕೆ ಅರ್ಹವಾಗಿದೆ ಎಂದು ಭಾವಿಸುವುದಿಲ್ಲ. ಭಾರತದ ವಿದೇಶಾಂಗ ನೀತಿ ಮತ್ತು ಸಂಹಿತೆಗಳು ದಶಕಗಳ ಕಾಲದ ಕಹಿ ಅನುಭವಗಳನ್ನು ಆಧರಿಸಿದೆಯೇ ಹೊರತು, ಆದರ್ಶಗಳ ನೆಲೆಯಲ್ಲ. ಈ ಪರಿಣಾಮಗಳೊಂದಿಗೆ ಜೀವನ ನಡೆಸದ ಎನ್‍ಆರ್‍ಐಗೆ ದೇಶದ ರಕ್ಷಣೆ ಮತ್ತು ನೆರೆಯವರೊಡನೆ ನಮ್ಮ ಸಂಬಂಧ ಹೇಗಿರಬೇಕು ಎಂದು ಪ್ರವಚನ ನೀಡುವ ಅವಶ್ಯಕತೆ ಇಲ್ಲ.
ಪಿಟ್ರೋಡಾ ಅವರು ಪದೇಪದೇ ಈ ರೀತಿ ಅಬ್ಬರಿಸುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದೆ. ಪಿಟ್ರೋಡಾ ತಮ್ಮ ಎಲ್ಲೆ ಮೀರಿ ಮಾತನಾಡುತ್ತಲೇ ಇರುತ್ತಾರೆ. ಆದರೂ ಪಕ್ಷವು ಆತನನ್ನೇ ವಿದೇಶೀಯ ವಿಭಾಗಗಳ ಮುಖ್ಯಸ್ಥರಾಗಿ ಮುಂದುವರೆಸಿದೆ. ಪಿಟ್ರೋಡಾರನ್ನು ಈ ರೀತಿ ಓಲೈಸುವುದು ಪಕ್ಷಕ್ಕೆ ರಾಜಕೀಯವಾಗಿ ಹಾನಿಕಾರಕವಾಗಿದೆ. ಪ್ರತಿ ಬಾರಿ ಪಿಟ್ರೋಡಾ ಮಾತನಾಡಿದಾಗಲೂ ಬಿಜೆಪಿಗೆ ಉಚಿತ ಆಯುಧ ಕೊಟ್ಟಂತಾಗುತ್ತದೆ. ಕಾಂಗ್ರೆಸ್ ಪಕ್ಷವನ್ನು ಭಯೋತ್ಪಾದನೆಯ ಬಗ್ಗೆ ಮೃದು ನೀತಿ ಇರುವ ಪಕ್ಷ, ಪಾಕಿಸ್ತಾನದ ವಂಚನೆಗೆ ಕುರುಡಾಗಿರುವ ಪಕ್ಷ ಎಂದು ಹೀಯಾಳಿಸಲು ಅವಕಾಶ ಕಲ್ಪಿಸುತ್ತದೆ.
ರಾಹುಲ್ ಗಾಂಧಿಯ ಮೌನ ಮತ್ತು ಈ ಹಿಂದೆ ಪಿಟ್ರೋಡಾ ಅವರಿಗೆ ನೀಡಿದ ಬೆಂಬಲ, ಅಷ್ಟೇ ಪ್ರಮಾದವಾಗಿ ಕಾಣುತ್ತದೆ. ಪಿಟ್ರೋಡಾ ಅವರ ಜಾಗತಿಕ ದೃಷ್ಟಿಕೋನವನ್ನು ರಾಹುಲ್ ಅನುಮೋದಿಸುತ್ತಾರೆಯೇ? ಹಾಗಾದಲ್ಲಿ ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಬಗ್ಗೆ ಇದ್ದ ಅಭಿಪ್ರಾಯವನ್ನೇ ಪುಷ್ಟೀಕರಿಸಿದಂತಾಗುತ್ತದೆ. ಈ ಅವಧಿಯಲ್ಲಿ ಯುಪಿಎ ಸರ್ಕಾರ ಭಯೋತ್ಪಾದಕ ಕೃತ್ಯಗಳಿಗೆ ದುರದೃಷ್ಟಕರ ಎಂಬ ವಿಷಾದವನ್ನು ದಾಟಿ ಪ್ರತಿಕ್ರಿಯಿಸುತ್ತಿರಲಿಲ್ಲ. ಭಾರತ ಆ ಅವಧಿಯನ್ನು ಇನ್ನೂ ಮರೆತಿಲ್ಲ. ಪ್ರಧಾನಮಂತ್ರಿ ಅಸಹಾಯಕರಾಗಿ ಕಂಡಾಗ, ಪಾಕಿಸ್ತಾನದ ಪ್ರೇರಿತ ಭಯೋತ್ಪಾದಕರು ದಂಡನೆಯ ಭೀತಿ ಇಲ್ಲದೆ ದಾಳಿ ನಡೆಸುತ್ತಾರೆ.
ವಿದೇಶಾಂಗ ನೀತಿ ಎನ್ನುವುದು ಪಕ್ಷದ ಸಿದ್ದಾಂತಿಗಳ ಅಥವಾ ಹೊರದೇಶದ ಮುಖವಾಣಿಗಳ ಆಟದ ಮೈದಾನ ಅಲ್ಲ. ಅದು ರಾಷ್ಟ್ರದ ಅಳಿವು ಉಳಿವಿನ ಪ್ರಶ್ನೆ. ಇದು ವೃತ್ತಿಪರ ಭದ್ರತಾ ಸಂಸ್ಥೆಗಳು ಮತ್ತು ಚುನಾಯಿತ ಸರ್ಕಾರಗಳ ಮಾರ್ಗದರ್ಶನದಲ್ಲಿ ನಿರ್ಧಾರವಾಗಬೇಕು. ಪಿಟ್ರೋಡಾ ಅವರ ಅನಗತ್ಯ ಹೇಳಿಕೆ, ಸಲಹೆಗಳು ಈ ಗಂಭೀರತೆಯನ್ನು ಅಪಮಾನಿಸುವುದೇ ಅಲ್ಲದೆ, ಕಾಂಗ್ರೆಸ್ ಪಕ್ಷವನ್ನೂ ಸಹ ಆಂತರಿಕವಾಗಿ, ಹೊರದೇಶಗಳಲ್ಲಿ ಅಪಹಾಸ್ಯಕ್ಕೀಡುಮಾಡುತ್ತದೆ.
ಕಾಂಗ್ರೆಸ್ ಗಮನಿಸಬೇಕಾದ ಕಟು ಸತ್ಯ ಎಂದರೆ, ಸ್ಯಾಮ್ ಪಿಟ್ರೋಡಾ ತಾವು ಸೇವೆ ಸಲ್ಲಿಸುತ್ತಿರುವ ಪಕ್ಷಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಪ್ರಜ್ಞೆ ಏನಾದರೂ ಇದ್ದರೆ, ಕೂಡಲೇ ಅವರನ್ನು ಅವರ ಹುದ್ದೆಯಿಂದ ಬರ್ತರ್ಫ್ ಮಾಡಬೇಕು ಮತ್ತು ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಬೇಕು. ಕೆಲವೊಮ್ಮೆ ನಾಯಕರೊಬ್ಬರು ಮಾಡಬಹುದಾದ ಬಹುದೊಡ್ಡ ಉಪಕಾರ ಎಂದರೆ ಮೌನ ವಹಿಸುವುದೇ ಆಗಿರುತ್ತದೆ.
Comments
Post a Comment