ಹಸಿದ ತೋಳಗಳಂತಾದ ಕಾಮಾಂಧ ಸ್ವಾಮಿಗಳು
ಮಹಿಳೆಯರು ಪ್ರತಿಯೊಬ್ಬ ಸ್ವಘೋಷಿತ ದೇವ ಮಾನವ, ಗುರು, ಸ್ವಾಮಿ ಹತ್ತಿರ ಹೋಗುವುದಕ್ಕೆ ಮುನ್ನ ಎಚ್ಚರಿಕೆಯಿಂದ ಗಮನಿಸಬೇಕಿದೆ
ಇರೋದು ಇದ್ದಂಗೆ * ಬಿವಿಸೀ
ತ್ತೊಬ್ಬ ಸ್ವಾಮೀಜಿ. ಮತ್ತೊಂದು ಲೈಂಗಿಕ ಹಗರಣ. ಮಾಧ್ಯಮಗಳಲ್ಲಿ ಈ ಶೀರ್ಷಿಕೆ ನಿರಂತರವಾಗಿ ಕಾಣುತ್ತಲೇ ಇದೆ. ಧರ್ಮದ ರಕ್ಷಕರಾಗಿರಬೇಕಾದ, ಮಹಿಳೆಯರ ಸಂರಕ್ಷಕರಾಗಿರಬೇಕಾದ ವ್ಯಕ್ತಿಗಳು ನರಭಕ್ಷಕ ತೋಳಗಳಾಗಿ ತಮ್ಮ ಮುಖವಾಡಗಳನ್ನು ಕಳಚಿಕೊಳ್ಳುತ್ತಿದ್ದಾರೆ. ಕೇಸರಿ ವಸ್ತ್ರಗಳನ್ನು ಧರಿಸಿ, ಶ್ರದ್ಧೆ ಭಕ್ತಿಗಳನ್ನು ಪ್ರದರ್ಶಿಸುವ ಕೆಲವು ಸ್ವಾಮಿಗಳು ಈ ಶ್ರದ್ಧೆ ನಂಬಿಕೆಯನ್ನೇ ಹಾಳುಮಾಡುವ ಅಪರಾಧಗಳಲ್ಲಿ ತೊಡಗಿದ್ದಾರೆ.
ಮೊನ್ನೆಯ ಲೈಂಗಿಕ ದೌರ್ಜನ್ಯ ಹಗರಣವೊಂದರಲ್ಲಿ, ದಿಲ್ಲಿಯ ಬಾಬಾ ಸ್ವಾಮಿ ಚೈತನ್ಯಾನಂದ ಸರಸ್ವತಿ ಎನ್ನುವ ಸ್ವಾಮಿ ಹೆಸರು ಕೇಳಿಬಂದಿದೆ. ತಮ್ಮ ಮೂಲ ನಾಮ ಪಾರ್ಥಸಾರಥಿ ಎಂದಿರುವ ದಕ್ಷಿಣದ ಈ ಸ್ವಾಮಿ ಶೃಂಗೇರಿಯ ಸಂಸ್ಥೆಯೊಡನೆ ಸಂಬಂಧಿಸಿದ ದೆಹಲಿಯಲ್ಲಿರುವ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದು, ಈ ಹಗರಣವು ಮತ್ತೊಮ್ಮೆ ಆಂತರಿಕವಾಗಿ ಕೊಳೆತಿರುವ ವ್ಯವಸ್ಥೆಯನ್ನು ಹೊರಗೆಡಹಿದೆ. 19 ವಿದ್ಯಾರ್ಥಿನಿಯರು ಈ ಸ್ವಾಮಿಯ ವಿರುದ್ಧ ಕಿರುಕುಳ, ಬೆದರಿಕೆ, ಆಮಿಷವೊಡ್ಡಿದ ಆರೋಪಗಳನ್ನು ಹೊರಿಸಿದ್ದು, 17 ಇತರ ವಿದ್ಯಾರ್ಥಿನಿಯರು ಅಶ್ಲೀಲ ಸಂದೇಶಗಳನ್ನು ವರದಿ ಮಾಡಿದ್ದಾರೆ. ದೆಹಲಿ ಪೆÇಲೀಸರು ಸ್ವಾಮಿಯನ್ನು ಬೆನ್ನತ್ತಿದ್ದರೂ ಇಲ್ಲಿ ಉಳಿಯುವ ಪ್ರಶ್ನೆ ಎಂದರೆ, ಈ ರೀತಿಯ ಆರೋಪಗಳನ್ನು ಹೊತ್ತ ವ್ಯಕ್ತಿ, ಹಲವು ತಿಂಗಳುಗಳಿಂದ ಇದನ್ನು ಎದುರಿಸುತ್ತಿದ್ದರೂ, ಹೇಗೆ ಪ್ರತಿಷ್ಠಿತ ಸಂಸ್ಥೆಯೊಂದರ ಮುಖ್ಯಸ್ಥರಾಗಿರಲು ಸಾಧ್ಯವಾಯಿತು? ಅಧಿಕಾರದಲ್ಲಿರುವ ಯಾರು ಇದನ್ನು ಅಲಕ್ಷಿಸಿದರು?
ಈ ರೀತಿಯ ಹಗರಣಗಳಿಗೆ ಕರ್ನಾಟಕ ಕೇಂದ್ರ ಸ್ಥಾನವಾಗಿದೆ. ಚಿತ್ರದುರ್ಗದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೆÇೀಕ್ಸೋ ಕಾಯ್ದೆಯಡಿ ಬಂಧಿಸಿದ್ದು ಒಂದು ನಿರ್ಣಾಯಕ ಘಟ್ಟವಾಗಿತ್ತು. ಹಲವು ವರ್ಷಗಳ ಕಾಲ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ರಾಜಕೀಯ ನಾಯಕರು ಮತ ಗಳಿಕೆಯ ಪ್ರಭಾವಕ್ಕಾಗಿ ಈ ಸ್ವಾಮಿಯನ್ನು ಅವಲಂಬಿಸಿದ್ದರು. ಅಪ್ರಾಪ್ತ ಬಾಲಕಿಯರು ಈ ಸ್ವಾಮಿಯ ವಿರುದ್ಧ ಸಾಕ್ಷಿ ನುಡಿದಾಗ, ಅವರು ಬಂಧನಕ್ಕೊಳಗಾಗಿದ್ದು ಅವರ ಭಕ್ತಾದಿಗಳನ್ನು ಬೆರಗಾಗಿಸಿತು. ಆದರೂ ಈ ಮಠವು ರಾಜಕೀಯ ಪೆÇ್ರೀತ್ಸಾಹ ಪಡೆಯುತ್ತಲೇ ಬಂದಿದೆ.
ಇದಕ್ಕೂ ಮುನ್ನ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಹಗರಣವು ಸಾರ್ವಜನಿಕರಲ್ಲಿ ಪ್ರಕ್ಷುಬ್ಧತೆಯನ್ನು ಮೂಡಿಸಿತ್ತು. ಅವರ ರಾಮಕಥಾ ಪ್ರವಾಸಗಳ ಸಮಯದಲ್ಲಿ ಗಾಯಕಿಯೊಬ್ಬರ ಮೇಲೆ ಸತತ ಅತ್ಯಾಚಾರ ಎಸಗಿದ ಆರೋಪ ಎದುರಿಸಿರುವ ಈ ಸ್ವಾಮಿ, ಫೆÇರೆನ್ಸಿಕ್ ವರದಿ ಮತ್ತು ಸಾಕ್ಷ್ಯಾಧಾರಗಳ ಮೇಲೆ ಆರೋಪಿತರಾಗಿದ್ದರು. ಇದೇ ಸ್ವಾಮಿ ವಿರುದ್ದ ಹೈಸ್ಕೂಲು ವಿದ್ಯಾರ್ಥಿನಿಯೊಬ್ಬಳ ಆರೋಪಗಳು ಸುಪ್ರೀಂ ಕೋರ್ಟ್ ತಲುಪಿ, ಇನ್ನೂ ವಿಚಾರಣೆ ಬಾಕಿ ಇದೆ. ಇವರ ವರ್ಚಸ್ಸು, ಸ್ಥಾನಮಾನಗಳ ಕಾರಣ ವಿಚಾರಣೆ ವಿಳಂಬವಾಗುತ್ತಿದ್ದು, ಮಠಕ್ಕೆ ಇಂದಿಗೂ ಸಹ ರಾಜಕೀಯ ನಾಯಕರು ಬೆಂಬಲಿಸುತ್ತಿರುವುದೇ ಅಲ್ಲದೆ, ಮಠದ ನೈತಿಕ ಸ್ಥಾನಮಾನ ಹಾಳಾಗಿದ್ದರೂ, ಪೆÇೀಷಿಸುತ್ತಲೇ ಬಂದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕೇಳಿಬರುತ್ತಿರುವ ಆರೋಪಗಳೂ ಇದೇ ಮಾದರಿಯಾಗಿದ್ದು, ಸ್ವಾಮಿಗಳನ್ನು ಅವರ ರಾಜಕೀಯ ಸಂಪರ್ಕಗಳು ರಕ್ಷಿಸುತ್ತಿವೆ, ಇತರ ಮಠಾಧೀಶರ ಮೌನ ಮತ್ತು ಪ್ರಕರಣ ದಾಖಲಿಸಲು ಮೇಲಿನವರಿಂದ ಅನುಮತಿಗಾಗಿ ಕಾಯುವ ಪೆÇಲೀಸರ ವಿಳಂಬದಿಂದ ಸುರಕ್ಷಿತವಾಗಿದ್ದಾರೆ. ಆದರೆ ಇಲ್ಲಿ ಸತ್ಯವನ್ನು ಮರೆಮಾಚಲಾಗುವುದಿಲ್ಲ. ಈ ಪ್ರಕರಣಗಳೇನೂ ಅಪವಾದಗಳಲ್ಲ. ಬದಲಾಗಿ ನಿರ್ಭಿಡೆಯಿಂದ ಶಿಕ್ಷೆಯ ಭೀತಿ ಇಲ್ಲದೆ ಅಪರಾಧ ಎಸಗುವ ಘಟನೆಗಳಾಗಿದ್ದು, ಇದು ರಾಜಕಾರಣ ಮತ್ತು ಧರ್ಮದ ಸಮ್ಮಿಲನದಿಂದ ಸಾಧ್ಯವಾಗುತ್ತಿದೆ.
ಈ ವ್ಯಾಧಿ ಕರ್ನಾಟಕವನ್ನು ದಾಟಿ ಹೋಗುತ್ತದೆ. ತಮಿಳುನಾಡಿನಲ್ಲಿ ಸ್ವಾಮಿ ಪ್ರೇಮಾನಂದ ಎಂಬುವರನ್ನು 1990ರಲ್ಲಿ, ಸರಣಿ ಅತ್ಯಾಚಾರ ಮತ್ತು ಹತ್ಯೆಗಳ ಆರೋಪದ ಮೇಲೆ ರಾಜಕೀಯ ಬೆಂಬಲದ ಹೊರತಾಗಿಯೂ ಈತನನ್ನು ಬಂಧಿಸಲಾಗಿತ್ತು. ರಾಜಸ್ಥಾನದಲ್ಲಿ, ಒಂದು ಕಾಲದಲ್ಲಿ ಬಿಜೆಪಿ ನಾಯಕರ ಬೆಂಬಲ ಹೊಂದಿದ್ದ ಫಲಹಾರಿ ಬಾಬಾಗೆ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು. ಎಲ್ಲರಿಗಿಂತಲೂ ಹೆಚ್ಚು ಕುಖ್ಯಾತರಾದ ಅಸಾರಾಮ್ ಬಾಪು, ಹಲವು ದಶಕಗಳ ಕಾಲ ಉನ್ನತ ರಾಜಕಾರಣಿಗಳ ಕೃಪೆಯಿಂದ ಸುರಕ್ಷಿತವಾಗಿದ್ದರೂ, ಅಂತಿಮವಾಗಿ 2018ರಲ್ಲಿ ಅಪ್ರಾಪ್ರೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ವಿದೇಶದಲ್ಲೂ ಸಹ ಪ್ರಕಾಶಾನಂದ ಸರಸ್ವತಿ ಎಂಬ ಸ್ವಾಮಿ ಭಾರತದ ರಾಜಕಾರಣಿಗಳೊಡನೆ ನಿಕಟ ಸಂಪರ್ಕ ಹೊಂದಿದವರಾಗಿದ್ದು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಅಪರಾಧಕ್ಕಾಗಿ ಶಿಕ್ಷೆಗೊಳಗಾಗಿದ್ದರು.
ಇದರಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮಾತ್ರ ಇಲ್ಲ. ಗುಜರಾತ್‍ನಲ್ಲಿ ಉಪ ಪ್ರಾಂಶುಪಾಲ, ಬರೂಚ್‍ನಲ್ಲಿರುವ ಸಂತ ಕ್ಷೇವಿಯರ್ ಶಾಲೆಯ ಪಾಸ್ಟರ್ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಬಂಧನಕ್ಕೊಳಗಾಗಿದ್ದರು. ಎಲ್ಲ ಮತಗಳಲ್ಲೂ ಈ ವ್ಯಾಧಿ ಒಂದೇ ತೆರನಾಗಿದ್ದು, ಅನಿರ್ಬಂಧಿತ ಅಧಿಕಾರ, ಅಂಧ ಭಕ್ತಿ, ರಾಜಕೀಯ ರಕ್ಷಣೆ ಸಾಮಾನ್ಯ ಸಂಗತಿಗಳಾಗಿವೆ.
ಕರ್ನಾಟಕದ ಘಟನೆಗಳು ವಿಶೇಷವಾಗಿ ಕಾಣುವುದು ಪದೇಪದೇ ವರದಿಯಾಗುತ್ತಿರುವುದರಿಂದ. ಒಬ್ಬರಾದ ಮೇಲೆ ಒಬ್ಬರು ಸ್ವಾಮಿಗಳು ಪೆÇೀಕ್ಸೋ ಕಾಯ್ದೆಯಡಿ, ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೂ ಅವರ ಸಂಸ್ಥೆಗಳು ಇಂದಿಗೂ ಹಣಕಾಸು ನೆರವು, ಭೂಮಿ ಮಂಜೂರಾತಿ, ವಿಐಪಿಗಳ ಸಂಪರ್ಕ ಪಡೆಯುತ್ತಲೇ ಇವೆ. ರಾಜಕೀಯ ನಾಯಕರು ಜಾತಿ ಲೆಕ್ಕಾಚಾರಗಳಿಗಾಗಿ, ಮಠದ ಬೆಂಬಲಕ್ಕಾಗಿ, ಅವರನ್ನು ದೂಷಿಸುವುದಿಲ್ಲ. ಕೇಸರಿ ವಸ್ತ್ರವು ತ್ಯಾಗದ ಸಂಕೇತವಾಗುವುದಕ್ಕಿಂತಲೂ ಹೆಚ್ಚಾಗಿ, ಕಾನೂನಿನಿಂದ ರಕ್ಷಿಸುವ ಕವಚವಾಗಿ ಪರಿಣಮಿಸಿದೆ.
ಭಕ್ತಾದಿಗಳಲ್ಲಿ ಭ್ರಮನಿರಸನವಾಗುತ್ತಿದೆ. ಉತ್ತರದಾಯಿತ್ವ ಇಲ್ಲದೆ ಗೌರವಿಸುವುದು ಅಪಾಯಕಾರಿ ಎಂಬ ಅರಿವು ಮೂಡುತ್ತಿದೆ. ರಾಜ್ಯದ ಮಟ್ಟಿಗೆ ಇದು ಅಗ್ನಿಪರೀಕ್ಷೆಯಾಗಿದೆ. ಕಾನೂನು ಪಕ್ಷಪಾತವಿಲ್ಲದೆ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವೇ?
ಈ ವ್ಯಕ್ತಿಗಳನ್ನು ಅವರ ರಕ್ಷಾಕವಚಗಳಿಂದ ಹೊರತರದೆ ಇದ್ದರೆ, ರಾಜಕೀಯ ನಾಯಕರು ಆರೋಪ ಹೊತ್ತ ಸ್ವಾಮಿಗಳನ್ನು ಗಣ್ಯ ವ್ಯಕ್ತಿಗಳಂತೆ ಪರಿಗಣಿಸುವುದನ್ನು ನಿಲ್ಲಿಸದೆ ಹೋದರೆ, ಸಂಸ್ಥೆಗಳು ಸ್ವತಃ ಪಾರದರ್ಶಕ ವಿಚಾರಣೆಗೆ ಮುಕ್ತವಾಗದೆ ಇದ್ದರೆ, ಕರ್ನಾಟಕ ಮತ್ತು ಭಾರತದಲ್ಲಿ, ಧರ್ಮವನ್ನು ಕೇಸರಿ ವಸ್ತ್ರ ಧರಿಸಿದ ಕೆಲ ದಾಳಿಕೋರರು ಅಪಮಾನಗೊಳಿಸುತ್ತಿರುವುದನ್ನು ನೋಡುತ್ತಲೇ ಇರಬೇಕಾಗುತ್ತದೆ. ವಿಶೇಷವಾಗಿ ಮಹಿಳೆಯರು ಪ್ರತಿಯೊಬ್ಬ ಸ್ವಘೋಷಿತ ದೇವ ಮಾನವ, ಗುರು, ಸ್ವಾಮಿ ಹತ್ತಿರ ಹೋಗುವುದಕ್ಕೆ ಮುನ್ನ ಎಚ್ಚರಿಕೆಯಿಂದ ಗಮನಿಸಬೇಕಿದೆ. ಏಕೆಂದರೆ ಅಧಿಕಾರ ಮತ್ತು ಭಕ್ತಿ ಅನೇಕ ಬಾರಿ ಆಕ್ರಮಣಕಾರರಿಗೆ ಮುಖವಾಡವಾಗಿರುತ್ತದೆ.
Comments
Post a Comment