ರಾಜ್ಯದಲ್ಲಿ ಜಾತಿ ಸಮೀಕ್ಷೆ: ಮುಸ್ಲಿಮರ ಮೇಲೆ ಜಾತಿಯ ಹೇರಿಕೆ

 ಸಾಮಾಜಿಕ ನ್ಯಾಯವನ್ನು ವಿಸ್ತರಿಸುವುದರ ಬದಲು, ಸಮೀಕ್ಷೆಯು ಹೊಸ ಬಿರುಕುಗಳನ್ನು ಸೃಷ್ಟಿಸಿ, ಮುಂದಿನ ಹಲವು ಪೀಳಿಗೆಗಳಿಗೆ ವಿಭಜನೆಯನ್ನು ವಿಸ್ತರಿಸುತ್ತದೆ.

ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮೂಲತಃ ಸಮಾನತೆ ಮತ್ತು ಅಭಿವೃದ್ಧಿಯ ಒಂದು ಸೇತುವೆ ಎಂದು ಬಿಂಬಿಸಲಾಗುತ್ತಿದೆಯಾದರೂ, ಇದು ರಾಜಕೀಯ ತಂತ್ರಗಾರಿಕೆಯ ಪ್ರಬಲ ಅಸ್ತ್ರವಾಗುವ ಅಪಾಯಗಳು ಎದುರಾಗುತ್ತಿವೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ಮುಸ್ಲಿಮರಿಗೆ ತಮ್ಮ ಧರ್ಮ ಇಸ್ಲಾಂ ಎಂದು ನಮೂದಿಸಲು ಹಾಗೂ ಇದರೊಂದಿಗೆ 124 ಉಪಜಾತಿಗಳಲ್ಲಿ ಒಂದನ್ನು ಜಾತಿ ಕಾಲಂನಲ್ಲಿ ನಮೂದಿಸಲು ಆದೇಶ ನೀಡಿದೆ. ದತ್ತಾಂಶ ಸಂಗ್ರಹದ ಹೆಸರಿನಲ್ಲಿ ನಡೆಯುತ್ತಿರುವ ಈ ಸಮೀಕ್ಷೆ ವಿಭಜಕ ಕ್ರಿಯೆಯಾಗಿ ಕಾಣುತ್ತಿದ್ದು, ಶ್ರದ್ಧೆ, ಅಸ್ಮಿತೆ ಮತ್ತು ರಾಜಕೀಯ ಉದ್ದೇಶಗಳ ಬಗ್ಗೆ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮುಸ್ಲಿಮರಿಗೆ ಇದು ಮೂಲಭೂತ ಸಮಸ್ಯೆಯಾಗಿ ತಲೆದೋರಿದೆ. ಇಸ್ಲಾಂ ಧರ್ಮವು ಜಾತಿ-ಉಪಜಾತಿಗಳನ್ನು ನಿರಾಕರಿಸುವುದೇ ಅಲ್ಲದೆ, ಎಲ್ಲ ಸಮಾಜ ಬಾಂಧವರನ್ನೂ ಸಮಾನ ನೆಲೆಯಲ್ಲಿ ನೋಡುತ್ತದೆ ಅಥವಾ ತಾತ್ವಿಕವಾಗಿ ಹಾಗೆ ಭಾವಿಸಲಾಗುತ್ತದೆ. ಹಾಗಾಗಿ ಇಸ್ಲಾಂ ಧರ್ಮನಿಷ್ಠರನ್ನು ಜಾತಿ ಅಥವಾ ಉಪಜಾತಿಯಾಗಿ ಗುರುತಿಸಿಕೊಳ್ಳಲು ಆದೇಶಿಸುವುದು ಈ ಮೂಲ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ. ಅನೇಕ ಮುಸ್ಲಿಮರು ಈ ಚಿಂತನೆಯನ್ನೇ ಆಕ್ರಮಣಕಾರಿ ಎಂದು ಭಾವಿಸುವ ಸಾಧ್ಯತೆಗಳಿವೆ. ಇನ್ನು ಕೆಲವರಲ್ಲಿ ಇದು ಗೊಂದಲ ಮೂಡಿಸಿದ್ದು ತಮ್ಮ ಕುಟುಂಬಗಳು ಚಾರಿತ್ರಿಕವಾಗಿ ಯಾವ ವರ್ಗಕ್ಕೆ ಸೇರಿದವರು ಎಂದು ಶೋಧಿಸುವಂತಾಗುತ್ತದೆ. ಇನ್ನೂ ಸಮಸ್ಯೆ ಎಂದರೆ ಸಮರ್ಪಕವಾದ ಪ್ರತಿಕ್ರಿಯೆಗಳು ದೊರಕದೆ ಇದ್ದಲ್ಲಿ, ದತ್ತಾಂಶಗಳು ಸಂಕುಚಿತವಾಗುತ್ತವೆ, ಇದು ಕೆಲವು ಗುಂಪುಗಳನ್ನು ಮೀಸಲಾತಿ ಸೌಲಭ್ಯಗಳಿಂದ ಹೊರಗಿಟ್ಟರೆ ಇನ್ನು ಕೆಲವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತದೆ.

ಸರ್ಕಾರದ ಸಮರ್ಥನೆಗೆ ಜನಕಲ್ಯಾಣದ ತರ್ಕವನ್ನು ಮುಂದಿಡಲಾಗುತ್ತದೆ. ಉಪಜಾತಿಗಳನ್ನು ಗುರುತಿಸದೆ ಅವಕಾಶವಂಚಿತ ಮುಸ್ಲಿಂ ಸಮುದಾಯಗಳು - ಉದಾಹರಣೆಗೆ ನೇಕಾರರು, ಕಸಾಯಿ ಖಾನೆಯ ವೃತ್ತಿ ಅನುಸರಿಸುವವರು - ಮೀಸಲಾತಿ ನೀತಿಯ ಯೋಜನೆಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಬಹುದು. ಆಯೋಗವು ಆಕ್ಷೇಪಗಳನ್ನು ಆಹ್ವಾನಿಸಿದ್ದು, ಪರಿಷ್ಕರಣೆಗೂ ಸಮ್ಮತಿಸಿದೆ. ಈ ಪಟ್ಟಿಯೇ ಅಂತಿಮ ಅಲ್ಲ ಎಂದು ಹೇಳಿದೆ. ಆದರೆ ಈ ತಾಂತ್ರಿಕ ಭರವಸೆ ಆಳವಾದ ಜಟಿಲ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಸರ್ಕಾರವು ಜಾತಿಯನ್ನು ಸಾಂಸ್ಥೀಕರಣಗೊಳಿಸುತ್ತಿದ್ದು, ಇಲ್ಲಿ ಧರ್ಮವೇ ಇದಕ್ಕೆ ವಿರೋಧಿಯಾಗಿದೆ.

ರಾಜಕೀಯವಾಗಿ ಈ ಸಂದರ್ಭವನ್ನು ಅಲಕ್ಷಿಸಲಾಗದು. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈ ಸಮೀಕ್ಷೆಯು ತನ್ನ ಸಾಮಾಜಿಕ ತಳಹದಿಯನ್ನು ವಿಸ್ತರಿಸಿಕೊಳ್ಳಲು, ಸಾಮಾಜಿಕ ನ್ಯಾಯದ ನಿರೂಪಣೆಯನ್ನು ವಿಸ್ತøತಗೊಳಿಸಲು ಮತ್ತು ಹಿಂದುಳಿದ ವರ್ಗಗಳ, ಅಂಚಿನಲ್ಲಿರುವ ಮುಸ್ಲಿಂ ಗುಂಪುಗಳ ಬೆಂಬಲವನ್ನು ಕ್ರೋಢೀಕರಿಸಲು ನೆರವಾಗುತ್ತದೆ. ಬಿಜೆಪಿಗೆ ಇದು, ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯವನ್ನು ಆಂತರಿಕವಾಗಿ ವಿಭಜಿಸುತ್ತಿದೆ ಎಂದು ಆರೋಪಿಸಲು ಅವಕಾಶ ಕಲ್ಪಿಸುವುದೇ ಅಲ್ಲದೆ, ಈ ಬಿರುಕುಗಳನ್ನೇ ತನ್ನ ಮತ ಕ್ರೋಢೀಕರಣಕ್ಕಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ತಟಸ್ಥ ದತ್ತಾಂಶ ಎಂದು ಬಿಂಬಿಸಲ್ಪಡುವ ಈ ಪ್ರಕ್ರಿಯೆ ಕರ್ನಾಟಕದ ಅಸ್ಮಿತೆಯ ರಾಜಕಾರಣದಲ್ಲಿ ಮತ್ತೊಂದು ಕದನಕಣ ಆಗಲಿದೆ.

ಇಲ್ಲಿ ಎದುರಾಗುವ ಅಪಾಯ ಸ್ಪಷ್ಟವಾಗಿದೆ. ಮುಸ್ಲಿಮರ ಮೇಲೆ ಉಪ ಜಾತಿ ವರ್ಗಗಳನ್ನು ಹೇರುವ ಮೂಲಕ ಸರ್ಕಾರವು ಸಮುದಾಯವನ್ನು ಭಗ್ನಗೊಳಿಸುವುದೇ ಅಲ್ಲದೆ, ಗುರುತಿಸಲಾಗದ ಅಥವಾ ಅಪೇಕ್ಷಿಸದ ಅಸ್ಮಿತೆಗಳನ್ನು ರಕ್ಷಿಸುತ್ತದೆ. ಸಾಮಾಜಿಕ ನ್ಯಾಯವನ್ನು ವಿಸ್ತರಿಸುವುದರ ಬದಲು, ಸಮೀಕ್ಷೆಯು ಹೊಸ ಬಿರುಕುಗಳನ್ನು ಸೃಷ್ಟಿಸಿ, ಮುಂದಿನ ಹಲವು ಪೀಳಿಗೆಗಳಿಗೆ ವಿಭಜನೆಯನ್ನು ವಿಸ್ತರಿಸುತ್ತದೆ.

ರಾಜ್ಯದ ನಾಯಕರು ಈಗ ದೃಢ ನಿರ್ಧಾರ ಕೈಗೊಳ್ಳಬೇಕಿದೆ. ಇದು ನಿಜವಾದ ಸಬಲೀಕರಣದ ಸಮೀಕ್ಷೆಯೋ ಅಥವ ಚುನಾವಣಾ ಲೆಕ್ಕಾಚಾರವನ್ನು ಜನಕಲ್ಯಾಣದ ಹೆಸರಿನಲ್ಲಿ ಪರಿಗಣಿಸುವ ಒಂದು ಪ್ರಕ್ರಿಯೆಯೋ ಎಂದು ನಿರ್ಧರಿಸಬೇಕಿದೆ. ಎರಡರ ನಡುವೆ ತೆಳು ಗೆರೆ ಇದ್ದು, ಆಳ್ವಿಕೆಯು ಅಸ್ಮಿತೆಗಳನ್ನು ಗೌರವಿಸುವ ಬದಲು ಸೃಷ್ಟಿಸುವಲ್ಲಿ ತೊಡಗಿದಾಗ, ಸಾಮಾಜಿಕ ನ್ಯಾಯದ ಭರವಸೆಗಳು ನಿಯಂತ್ರಣದ ರಾಜಕಾರಣದಲ್ಲಿ ಕೊನೆಗೊಳ್ಳುತ್ತವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again