ಧರ್ಮಸ್ಥಳದಲ್ಲಿ ಬಿಜೆಪಿಯ ಡಬ್ಬಲ್ ಗೇಮ್

 

ಸೌಜನ್ಯ ಕುಟುಂಬದೊಡನೆ ಕೈಜೋಡಿಸುವ ಮೂಲಕ ವಿಜಯೇಂದ್ರ ಪಕ್ಷಕ್ಕೆ ತಪ್ಪಿಸಿಕೊಳ್ಳುವ ಹಾದಿಯನ್ನು ಸೃಷ್ಟಿಸಿದ್ದಾರೆ.

ಧರ್ಮಸ್ಥಳದ ವಿವಾದಗಳ ಸುತ್ತ ಹಾಗೂ ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದ ಕುರಿತು ನಡೆಯುತ್ತಿರುವ ರಾಜಕೀಯ ಪ್ರಹಸನಗಳು ಬಿಜೆಪಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಬಿಜೆಪಿ ನಾಯಕರ ವಿರೋಧಾಭಾಸದ ಹೇಳಿಕೆಗಳನ್ನು ಗಮನಿಸಿದಾಗ ಅದು ಎಸ್‍ಐಟಿ ತನಿಖೆಯಿಂದ ಹೊರಬರಬಹುದಾದ ಸತ್ಯಾಂಶಗಳ ಅಲಗಿನಿಂದ ಪಾರಾಗಲು ಅಥವಾ ಹಗರಣದ ದಿಕ್ಕುತಪ್ಪಿಸಲು ನಡೆಸುತ್ತಿರುವ ರಾಜಕೀಯ ಪಿತೂರಿ ಎಂದೇ ಕಾಣುತ್ತದೆ. ಏಕೆಂದರೆ ಎಸ್‍ಐಟಿ ತನಿಖೆಯ ಫಲಿತಾಂಶವು ದೇವಸ್ಥಾನದ ಪ್ರಬಲ ಆಡಳಿತಗಾರರು ಈ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸುತ್ತದೆ ಎಂದು ಈಗೀಗ ಬಿಜೆಪಿ ನಂಬತೊಡಗಿದಂತೆ ಕಾಣುತ್ತದೆ.

ಧರ್ಮಸ್ಥಳದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಎಸ್‍ಐಟಿ ತನಿಖೆಯನ್ನು ಆದೇಶಿಸಲು ಯಾವುದೇ ಮೇಲ್ನೋಟಕ್ಕೆ ಸಾಬೀತಾಗುವಂಥ ಸ್ಪಷ್ಟ ಪ್ರಕರಣಗಳು ಇರಲಿಲ್ಲ ಎಂದು ಹೇಳಿರುವುದು, ಹೆಗ್ಗಡೆ ಕುಟುಂಬಕ್ಕೆ ಮತ್ತು ಮಂಜುನಾಥೇಶ್ವರ ದೇವಾಲಯದ ವಂಶವಾಹಿ ಆಡಳಿತಗಾರರಿಗೆ, ರಕ್ಷಣೆಯ ಭರವಸೆ ನೀಡುವ ತಂತ್ರವೇ ಆಗಿದೆ. ಇದು ಬಿಜೆಪಿಯ ದೀರ್ಘಕಾಲದ ನೀತಿಯ ಲಕ್ಷಣವಾಗಿದ್ದು, ಬಿಜೆಪಿ ಸದಾ ಸಂರಕ್ಷಿತ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು, ಹಲವು ಆರೋಪ, ಅಪವಾದಗಳ ಹೊರತಾಗಿಯೂ ರಕ್ಷಿಸುತ್ತಲೇ ಬಂದಿದೆ. ದೇವಾಲಯದ ಕುಟುಂಬದೊಡನೆ ನೇರವಾಗಿ ನಿಲ್ಲುವುದರ ಮೂಲಕ ಜೋಷಿ ಬಿಜೆಪಿಯ ಹಿಂದುತ್ವ ರಾಜಕಾರಣದ ಧ್ಯೇಯವನ್ನು ಸ್ಪಷ್ಟಪಡಿಸುತ್ತಿದ್ದಾರೆ. ಕೇಂದ್ರ ನಾಯತ್ವವು ಹೆಗ್ಗಡೆಯವರ ಕುಟುಂಬವನ್ನು ಅಸ್ಥಿರಗೊಳಿಸಲು ಎಸ್‍ಐಟಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಹೀಗಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಕ್ಷದ ಸಂಪ್ರದಾಯವನ್ನು ಮುರಿದು, ಸೌಜನ್ಯ ಕುಟುಂಬವನ್ನು ಭೇಟಿ ಮಾಡಿದ್ದಾರೆ. 2012ರ ಭೀಕರ ಹತ್ಯೆಯ ನಂತರ ಯಾವುದೇ ಬಿಜೆಪಿ ನಾಯಕರು ಇಲ್ಲಿಗೆ ಭೇಟಿ ನೀಡಿರಲಿಲ್ಲ. ಬಿಜೆಪಿ ಸೌಜನ್ಯಾಳ ಕುಟುಂಬವನ್ನು ಬೆಂಬಲಿಸುವುದಾಗಿಯೂ, ಸೌಜನ್ಯ ಹತ್ಯಾಚಾರದ ಮರುತನಿಖೆಗಾಗಿ ಸುಪ್ರೀಂಕೋರ್ಟ್‍ಗೆ ಹೋದರೆ ಬೆಂಬಲಿಸುವುದಾಗಿಯೂ ಹೇಳಿದ್ದಾರೆ. ಆದರೆ ವಿಜಯೇಂದ್ರ ಅವರ ನಡೆ ಕೇವಲ ಅನುಂಕಪಕ್ಕಾಗಿ ಮಾತ್ರ ಎಂದೇನಲ್ಲ. ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ, ಎಸ್‍ಐಟಿ ಈಗಾಗಲೇ 15 ನಿವೇಶನಗಳನ್ನು ಗುರುತಿಸಿದ್ದು, ಎಲ್ಲವೂ ದೇವಾಲಯದ ಆಡಳಿತಗಾರರ ಕುಟುಂಬಗಳಿಗೆ ಸಂಬಂಧಿಸಿರುವುದಾಗಿದೆ. ಇವರು ನೇರವಾಗಿ ಕೃತ್ಯಗಳಲ್ಲಿ ಭಾಗಿಯಾಗಿರುವುದಕ್ಕೆ ನಿಸ್ಸಂದೇಹ ಸಾಕ್ಷ್ಯಾಧಾರಗಳೂ ಲಭ್ಯವಾಗಿವೆ ಎನ್ನಲಾಗಿದೆ. ಇದು ನಿಜವೇ ಆದರೆ, ಜೋಷಿಯವರ ಹೆಗ್ಗಡೆ ಕುಟುಂಬದ ಸಮರ್ಥನೆ, ಈಗ ಹೊರಬರುತ್ತಿರುವ ಮಾಹಿತಿಗಳ ಆಧಾರದಲ್ಲಿ ಕುಸಿದು, ನಿರರ್ಥಕವಾಗುತ್ತದೆ.

ಸೌಜನ್ಯ ಕುಟುಂಬದೊಡನೆ ಕೈಜೋಡಿಸುವ ಮೂಲಕ ವಿಜಯೇಂದ್ರ ಪಕ್ಷಕ್ಕೆ ತಪ್ಪಿಸಿಕೊಳ್ಳುವ ಹಾದಿಯನ್ನು ಸೃಷ್ಟಿಸಿದ್ದಾರೆ. ಎಸ್‍ಐಟಿ ತನಿಖೆಯಲ್ಲಿ ನಿಜವಾದ ಅಪರಾಧಿಗಳನ್ನು ಗುರುತಿಸಿದರೆ, ಆಗ ವಿಜಯೇಂದ್ರ ತಾವು ಸಂತ್ರಸ್ತೆಯ ಕುಟುಂಬದೊಡನೆ ನಿಲ್ಲುವ ಧೈರ್ಯ ಮಾಡಿದ ನಾಯಕ, ಕುರುಡಾಗಿ ಅಪರಾಧಿಗಳೊಡನೆ ನಿಲ್ಲುವವರಲ್ಲ ಎಂದು ಬಿಂಬಿಸಿಕೊಳ್ಳಲು ಸಹಾಯಕವಾಗುತ್ತದೆ. ತಮ್ಮ ಭೇಟಿಯ ಸಂದರ್ಭದಲ್ಲಿ ಅವರ ತಂಡದಲ್ಲಿ ಸಂಸದ ಬ್ರಿಜೇಶ್ ಚೌಟ ಅವರನ್ನು ಕರೆದೊಯ್ದಿರುವುದು ಇದು ಆ ಕ್ಷಣದ ವರ್ತನೆ ಅಲ್ಲ, ಬದಲಾಗಿ ಕರಾವಳಿ ಪ್ರದೇಶದ ಜನತೆಗೆ, ಬಿಜೆಪಿ ತಪ್ಪು ಹೆಜ್ಜೆಯನ್ನು ಇರಿಸುವುದಿಲ್ಲ ಎಂಬ ಸಂದೇಶವನ್ನು ನೀಡುವ ಕ್ರಿಯೆಯಾಗಿದೆ.

ಏತನ್ಮಧ್ಯೆ, ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಹೇಳಿಕೆ ನೀಡಿದ್ದು, ಕಾಂಗ್ರೆಸ್ ಸರ್ಕಾರವು ಎಸ್‍ಐಟಿ ರಚಿಸಿರುವುದು ಹೆಗ್ಗಡೆಯವರಿಂದ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಸಲುವಾಗಿ ಎಂದು ಆರೋಪಿಸಿದ್ದಾರೆ. ಈ ಚಿಂತನೆಯು ಇಡೀ ವಿವಾದವನ್ನು ಕಾಂಗ್ರೆಸ್ ಮತ್ತು ಹಿಂದೂ ಸಂಸ್ಥೆಗಳ ನಡುವಿನ ಸಂಘರ್ಷ ಎಂದು ಬಿಂಬಿಸುವ ಸೂಚನೆ ನೀಡುತ್ತದೆ. ಇದು ಆರೋಪಗಳ ಗಂಭೀರತೆಯಿಂದ ಗಮನ ಬೇರೆಡೆಗೆ ಸೆಳೆಯುವ ತಂತ್ರವೇ ಆಗಿದೆ. ಇದು ಕೇಸರಿ ಪಡೆಗಳ ಹಳೆಯ ತಂತ್ರವಾಗಿದ್ದು, ತಪ್ಪಿತಸ್ಥ ಸ್ಥಾನದಲ್ಲಿ ನಿಂತಾಗ ಪಕ್ಷವು ಪ್ರತಿಯೊಂದು ತನಿಖೆಯನ್ನೂ ಹಿಂದೂ ಶ್ರದ್ಧೆಯ ಮೇಲಿನ ದಾಳಿ ಎಂದು ಬಿಂಬಿಸಲಾಗುತ್ತದೆ.

ಬಿಜೆಪಿಯೊಳಗಿನ ಈ ಮೂರು ನಿಲುವುಗಳು - ಜೋಷಿಯ ದೇವಸ್ಥಾನದ ಸಮರ್ಥನೆ, ವಿಜಯೇಂದ್ರ ಸಂತ್ರಸ್ತೆಯ ಕುಟುಂಬದೊಡನೆ ನಿಲ್ಲುವುದು ಮತ್ತು ಕಟೀಲ್ ಅವರ ಕಾಂಗ್ರೆಸ್ ವಿರುದ್ಧದ ಆರೋಪ - ಈ ಮೂರು ಪಕ್ಷದೊಳಗಿನ ಗೊಂದಲವೇನಲ್ಲ ಬದಲಾಗಿ ಕಾರ್ಯತಂತ್ರವಾಗಿದೆ. ಬಿಜೆಪಿ ಎಸ್‍ಐಟಿ ತನಿಖೆಯ ಅಂತಿಮ ಫಲಿತಾಂಶವನ್ನು ಎದುರುನೋಡುತ್ತಿದ್ದು, ತನ್ನ ಸ್ಪಷ್ಟ ನಿಲುವನ್ನು ಯಾವ ರೀತಿಯಾದರೂ ಬದಲಿಸಲು ಸಿದ್ದವಾಗಿದೆ. ಆದರೆ ಈ ದ್ವಿಮುಖ ನೀತಿಯ ಮೂಲಕ ಪಕ್ಷವು ತನ್ನ ಹಲವು ಸ್ತರದ ದ್ವಂದ್ವ ನಿಲುವನ್ನು ಬಯಲುಮಾಡಲಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಯಾವ ಬಿಜೆಪಿ ನಾಯಕರೂ ಸೌಜನ್ಯ ಮನೆಗೆ ಭೇಟಿ ನೀಡದಿದ್ದುದು ಈಗ ಪರಿಸ್ಥಿತಿ ಬದಲಾಗುತ್ತಿರುವಾಗ ತನ್ನ ಪಾತ್ರವನ್ನು ಮರುವಿಮರ್ಶೆ ಮಾಡುತ್ತಿರುವುದು ಈ ದ್ವಂದ್ವದ ಸಾಕ್ಷಿಯಾಗಿದೆ.

ಎಸ್‍ಐಟಿ ತನಿಖೆಯ ವರದಿ ಹೊರಬಂದ ನಂತರ ಬಿಜೆಪಿಯ ದ್ವಿಮುಖ ನೀತಿ ಸ್ಪಷ್ಟವಾಗಿ ಬಯಲಾಗಲಿದ್ದು ಅದರ ಅವಕಾಶವಾದ ಅಥವಾ ಮುಂಗಾಣ್ಕೆಯ ಪ್ರದರ್ಶನವಾಗಲಿದೆ. ಸದ್ಯಕ್ಕೆ ಸಮತೋಲನದ ನಡೆಯನ್ನು ತೋರುತ್ತಿರುವ ಪಕ್ಷವು, ಒತ್ತಡ ಬಂದರೆ ಸಂತ್ರಸ್ತರೊಡನೆ ನಿಲ್ಲಲು ಸಿದ್ಧವಾಗುತ್ತಿದ್ದರೂ ಈಗ ಪ್ರಬಲ ವ್ಯಕ್ತಿಗಳನ್ನು ರಕ್ಷಿಸುವುದರಲ್ಲಿ ತೊಡಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again