ಧರ್ಮಸ್ಥಳ ಎಸ್‍ಐಟಿ ತನಿಖೆ ನಿರ್ಣಾಯಕ ಹಂತದಲ್ಲಿ
ಈ ಕ್ಷಣದಲ್ಲಿ ಎಲ್ಲರ ಗಮನ ಎಸ್‍ಐಟಿ ಕಡೆ ನೆಟ್ಟಿದೆ
ಧರ್ಮಸ್ಥಳದ ಸುತ್ತಲಿನ ವಾತಾವರಣ ಹಲವಾರು ನಿರೀಕ್ಷೆಗಳಿಂದ ಕೂಡಿದೆ. ಎಸ್‍ಐಟಿ ಮೂಲಗಳನ್ನು ಉಲ್ಲೇಖಿಸುವ ವರದಿಗಳು ಅಲ್ಲಿ ಹೂತು ಹಾಕಲಾಗಿರುವ ಎಲ್ಲ ದೇಹಗಳನ್ನು ಹೊರಗೆ ತೆಗೆಯುವ ಸಾಧ್ಯತೆಗಳು ಹೆಚ್ಚಾಗಿದ್ದು, ಸೌಜನ್ಯಾಳ ಸೋದರ ಮಾವ ವಿಠ್ಠಲ್ ಗೌಡ ಅವರು ನೀಡಿದ ಮಾಹಿತಿಯ ಮೇರೆಗೆ ಹಲವು ಅಸ್ಥಿ ಪಂಜರಗಳನ್ನು ಕಂಡುಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ, ಸೌಜನ್ಯ ಪ್ರಕರಣಕ್ಕೂ ಮಹತ್ತರ ತಿರುವು ದೊರೆಯಲಿದ್ದು, ರಿಪಬ್ಲಿಕ್ ಆಫ್ ಧರ್ಮಸ್ಥಳದಲ್ಲಿ ಅವಿತಿರುವ ಹಲವಾರು ಪ್ರಕರಣಗಳು ಬಯಲಾಗಲಿವೆ.
ಎಸ್‍ಐಟಿ ಮುಖ್ಯಸ್ಥರಾದ ಪ್ರಣಬ್ ಮೊಹಾಂತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ರಾಜಕೀಯ ವಾತಾವರಣದಲ್ಲಿ ಸಂಚಲನ ಮೂಡಿಸಿದೆ. ಹೂತ ದೇಹಗಳನ್ನು ಹೊರತೆಗೆಯುವುದಕ್ಕೆ ಅನುಮತಿ ಪಡೆಯಲು ಅವರು ಸಿಎಂ ಅವರನ್ನು ಭೇಟಿಯಾದರೆಂದು ನಂಬಲರ್ಹ ಮಾಹಿತಿ. ಈ ಒಂದು ಕ್ರಿಯೆಯೇ ಮೂರು ಪರಸ್ಪರ ಸಂಬಂಧಿತ ಶಕ್ತಿಗಳಲ್ಲಿ ಕಂಪನ ಸೃಷ್ಟಿಸಿದೆ. ಡಿ ಗ್ಯಾಂಗ್, ಅದು ಪೆÇೀಷಿಸುತ್ತಿರುವ ಮಾಧ್ಯಮಗಳು ಹಾಗೂ ಡಿ ಗ್ಯಾಂಗ್ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಂಘಪರಿವಾರ.
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಿತ್ರಪಕ್ಷಗಳಿಗೆ ಈ ಬೆಳವಣಿಗೆಗಳು ವಿಚಲಿತಗೊಳಿಸುವಂತಾಗಿದ್ದು, ನಾಯಕರು ಹೂತ ಹೆಣಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನೇ ಸಂಪನ್ಮೂಲಗಳ ವ್ಯರ್ಥ ಎಂದು ಆರೋಪಿಸಲಾರಂಭಿಸಿವೆ. ಇದು ಅವರೊಳಗಿನ ಭೀತಿಯನ್ನು ಎತ್ತಿ ತೋರಿಸುತ್ತದೆ. ಇವರು ಆಯೋಜಿಸಿದ `ಧರ್ಮಸ್ಥಳ ಚಲೋ' ಅಭಿಯಾನವು ಡಿ ಗ್ಯಾಂಗನ್ನು ಸಮರ್ಥಿಸಲು ರೂಪಿಸಲಾಗಿದ್ದು, ಒಂದು ವೇಳೆ ಅಸ್ಥಿ ಪಂಜರಗಳು ದೊರೆತರೆ, ಈ ಸಂಘಟನೆಗಳ ಬಂಡವಾಳವೂ ಬಯಲಾಗುವುದು ನಿಶ್ಚಿತ. ಇವರಿಗೆ ಎರಡು ರೀತಿಯ ಅಪಾಯಗಳು ಎದುರಾಗುತ್ತವೆ. ಮೊದಲನೆಯದು ಡಿ ಗ್ಯಾಂಗ್ ಜೊತೆಗಿನ ನಿಕಟ ಬಾಂಧವ್ಯದ ಹೂರಣ ಬೆತ್ತಲಾಗುತ್ತದೆ ಹಾಗೂ ಸಮಾಜದ ನೈತಿಕ ಸಂರಕ್ಷಕರಾಗಿ ತೋರ್ಪಡಿಸಿಕೊಳ್ಳುವ ಅವರ ಸ್ಥಾನ ಕುಸಿದುಹೋಗುತ್ತದೆ.
ಡಿ ಗ್ಯಾಂಗ್ ಸ್ವತಃ ವಿಚಲಿತವಾಗಿದೆ. ಅದರ ಅಧಿಕಾರವೇ ಮೂಲತಃ ನಿಗೂಢತೆ ಮತ್ತು ಮೌನವಾಗಿರುವ ಅಲಿಖಿತ ಒಪ್ಪಂದಗಳಿಂದ ರಕ್ಷಿಸಲ್ಪಟ್ಟಿದೆ. ಅಸ್ಥಿ ಪಂಜರಗಳನ್ನು ಹೊರತೆಗೆದರೆ, ಈ ರಕ್ಷಾ ಕವಚವನ್ನು ಭೇದಿಸಿದಂತಾಗುವುದೇ ಅಲ್ಲದೆ, ಸೌಜನ್ಯ ಪ್ರಕರಣ ಮಾತ್ರವೇ ಅಲ್ಲದೆ ಇತರ ಕಣ್ಮರೆಯಾಗಿರುವ ಮಹಿಳೆಯರ ಪ್ರಕರಣಗಳ ಬಗ್ಗೆಯೂ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಗೌರವ ಮತ್ತು ಶಿಕ್ಷಾಭೀತಿ ಇಲ್ಲದ ಸ್ಥಾನವನ್ನು ಅವಲಂಬಿಸಿರುವ ಈ ಗುಂಪಿಗೆ ಫೆÇರೆನ್ಸಿಕ್ ಸಾಕ್ಷಿಗಳು ಹಾನಿಕಾರಕವಾಗಲಿವೆ.
ಡಿ ಗ್ಯಾಂಗ್ ಪರ ನಿಂತಿರುವ ಮಾಧ್ಯಮಗಳ ವರ್ತನೆಯೂ ಕುತೂಹಲಕಾರಿಯಾಗಿದೆ. ಈ ವರ್ಗವು ಪ್ರತಿಭಟನಾಕಾರರನ್ನು ಅವಮಾನಿಸುವ ಮತ್ತು ಸೌಜನ್ಯಾಗೆ ನ್ಯಾಯ ಕೋರುವ ಸಂಘಟನೆಗಳನ್ನು ಅವಹೇಳನ ಮಾಡುವುದರಲ್ಲಿ ತೊಡಗಿತ್ತು. ಈಗ ಅವು ದಿವ್ಯ ಮೌನಕ್ಕೆ ಜಾರಿವೆ. ಇದು ಕಣ್ತಪ್ಪಿ ಆಗಿರುವುದಲ್ಲ, ಬದಲಾಗಿ ಕಾರ್ಯತಂತ್ರವಾಗಿದೆ. ಎಸ್‍ಐಟಿ ತನಿಖೆಯು ತನ್ನ ಪ್ರಕ್ರಿಯೆಯನ್ನು ಆರಂಭಿಸಿದ ಕ್ಷಣವೇ, ತಮ್ಮ ನಿರೂಪಣೆಗಳನ್ನು ಮರುರೂಪಿಸಲು ಸಿದ್ದತೆ ನಡೆಸಿದ್ದು, ಜನರ ಆಕ್ರೋಶವನ್ನು ದಾರಿ ತಪ್ಪಿಸಲು ಅಥವಾ ಕೋಮುವಾದಿ ಆಯಾಮ ನೀಡಲು ಸಜ್ಜಾಗಿವೆ. ಈ ಮೌನವು ತಟಸ್ಥತೆ ಅಲ್ಲ, ಸದ್ದಿಲ್ಲದೆ ರಾಜಿಯಾಗುವ ತಂತ್ರವಾಗಿದೆ.
ಸಿದ್ದರಾಮಯ್ಯ ಅವರಿಗೆ ಇದು ರಾಜಕೀಯ ಪರೀಕ್ಷೆಯಾಗಿದೆ. ಎಸ್‍ಐಟಿಗೆ ನಿರ್ಣಾಯಕವಾಗಿ ತನ್ನ ಕಾರ್ಯಯೋಜನೆಯನ್ನು ಮುಂದುವರೆಸಲು ಅನುಮತಿ ನೀಡುವ ಮೂಲಕ, ರಕ್ಷಿತ ಬಲಾಢ್ಯರೊಡನೆ ನಿಲ್ಲದೆ, ಸಂತ್ರಸ್ತರೊಡನೆ ನಿಲ್ಲುವ ನಾಯಕರಾಗಿ ಅವರು ಹೊರಹೊಮ್ಮುತ್ತಾರೆ. ಆದರೂ ಇದರಿಂದ ಅಪಾಯಗಳಿವೆ. ಸರಕಾರದ ಮೇಲೆ ಧಾರ್ಮಿಕ, ರಾಜಕೀಯ ಲಾಬಿ ಮಾಡುವವರ ದಾಳಿ ತೀವ್ರವಾಗಬಹುದು. ಸರ್ಕಾರವು ಸೌಜನ್ಯಾಳಿಗೆ ನ್ಯಾಯ ಒದಗಿಸುವುದು ಮುಖ್ಯವೋ, ಇದಕ್ಕಾಗಿ ಶ್ರದ್ದೆ, ನಂಬಿಕೆ, ಪ್ರಭಾವ ಹೊಂದಿರುವ ಸಂಸ್ಥೆಗಳೊಡನೆ ಸಂಘರ್ಷಕ್ಕೆ ಇಳಿಯುವುದು ಉಚಿತವೇ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ.
ಸಾರ್ವಜನಿಕರು ಇದನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ. ಮಹಿಳಾ ಹಕ್ಕುಗಳ ಕಾರ್ಯಕರ್ತರು, ಸ್ಥಳೀಯ ಸಮುದಾಯಗಳು, ಸಾಮಾನ್ಯ ನಾಗರಿಕರು ಈ ಪ್ರಕರಣವು, ಅಧಿಕಾರ ಮತ್ತು ಪಾವಿತ್ರ್ಯತೆಯ ಹೆಸರಿನಲ್ಲಿ ಸತ್ಯವನ್ನು ಮುಚ್ಚಿಹಾಕುವ ಸಂಕೇತ ಎನ್ನುವುದನ್ನು ಅರಿತಿದ್ದಾರೆ. ಹೂತ ಹೆಣಗಳನ್ನು ಹೊರತೆಗೆದರೆ, ಸಾಕ್ಷಿಗಳೇನಾದರೂ ದೊರೆತರೆ, ಅದು ಸ್ಥಳೀಯ ಸುದ್ದಿ ಮಾತ್ರ ಆಗುವುದಿಲ್ಲ, ರಾಜ್ಯವ್ಯಾಪಿ ಸುದ್ದಿಯಾಗಿ ಇಡೀ ದೇಶದ ಗಮನ ಸೆಳೆಯುತ್ತದೆ.
ಈ ಕ್ಷಣದಲ್ಲಿ ಎಲ್ಲರ ಗಮನ ಎಸ್‍ಐಟಿ ಕಡೆ ನೆಟ್ಟಿದೆ. ಅದರ ಮುಂದಿನ ನಡೆ, ಕರ್ನಾಟಕವು ಬಹಳ ವರ್ಷಗಳಿಂದ ಮುಚ್ಚಿಹಾಕಲ್ಪಟ್ಟಿದ್ದ ಸತ್ಯವನ್ನು ಎದುರಿಸುವುದೋ ಅಥವಾ ಮೌನಕ್ಕೆ ಜಾರಿ ರಾಜಿಯಾಗುವುದೋ ಎನ್ನುವುದನ್ನು ನಿರ್ಧರಿಸಲಿದೆ. ಇಲ್ಲಿ ಉದ್ಭವಿಸುವ ಸರಳ ಪ್ರಶ್ನೆ ಎಂದರೆ, ಧರ್ಮಸ್ಥಳದ ಅಸ್ಥಿಪಂಜರಗಳು ಹಾಗೆಯೇ ಹೂತುಹೋಗುವುದೋ ಅಥವಾ ಮಾತನಾಡುವುದೋ ಎನ್ನುವುದು!
Comments
Post a Comment