ರಾಜಣ್ಣ, ಸ್ವಾಮಿಗಳು ಮತ್ತು ರಾಜಕೀಯ ಸ್ಥಾನಮಾನ


 ಮತ್ತೆ ಮಂತ್ರಿಯಾಗುವ ಭ್ರಮೆಯಲ್ಲಿ ರಾಜಣ್ಣ

ಕ್ಯಾತಸಂದ್ರದಲ್ಲಿ ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಶಾಸಕ ಕೆ ಎನ್ ರಾಜಣ್ಣ ಅವರ ಬೂಟಾಟಿಕೆಯ ವರ್ತನೆಯು ತಮ್ಮ ಬಲವನ್ನು ಪ್ರದರ್ಶಿಸುವುದಕ್ಕಿಂತಲೂ ಹೆಚ್ಚಾಗಿ, ಹತಾಶೆಯನ್ನು ವ್ಯಕ್ತಪಡಿಸುವ ಒಂದು ಪ್ರಯತ್ನವಾಗಿತ್ತು. ಹಿಂದುಳಿದ ವರ್ಗಗಳ ಮತ್ತು ದಲಿತ ಸಮುದಾಯಗಳ ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸುತ್ತುವರೆಯಲ್ಪಟ್ಟಿದ್ದ 75 ವರ್ಷದ ಮಾಜಿ ಸಚಿವ ತಮ್ಮ ಸಕ್ರಿಯ ಮಂತ್ರಿಗಿರಿ ವೃತ್ತಿಗೆ ಮರಳಿ ಬರಲು ಈ ಸಮಾವೇಶ ಮಾಡಿದಂತೆ ಕಾಣುತ್ತಿದ್ದು, ಈ ಕೇಸರಿ ವಸ್ತ್ರಧಾರಿ ಸ್ವಾಮಿಗಳೇ ಅವರ ವೃತ್ತಿಗೆ ಮೆತ್ತಿದ ಕಳಂಕವನ್ನು ತೊಡೆದುಹಾಕಲಿದ್ದಾರೆ ಎಂಬ ಸಂದೇಶವನ್ನು ನೀಡುವಂತಿತ್ತು. ಆದರೆ ಎಷ್ಟೇ ಧಾರ್ಮಿಕ ಲಾಬಿ ಮಾಡಿದರೂ ಸಹ ತಮ್ಮದೇ ಅಪ್ರಬುದ್ಧ ನಡೆವಳಿಕೆ, ಹಠಮಾರಿತನ, ಭ್ರಷ್ಟಾಚಾರ ಮತ್ತು ಹಗರಣಗಳ ಭಾರದಲ್ಲಿ ಕುಸಿದ ವೃತ್ತಿಯನ್ನು ಮರಳಿ ಸುಸ್ಥಿತಿಗೆ ತರಲು ಸಾಧ್ಯವಿಲ್ಲ.

ರಾಜಣ್ಣ ಒಂದು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಲ್ಲಿ ಪ್ರಮುಖರಾಗಿದ್ದರು. ಇವರ ಬೇಕಾಬಿಟ್ಟಿ ಆಕ್ರೋಶದ ಮಾತುಗಳು ಮತ್ತು ಪಕ್ಷದೊಳಗಿನ ಮತ್ತು ಹೊರಗಿನ ವಿರೋಧಿಗಳ ಮೇಲೆ ನಡೆಸುತ್ತಿದ್ದ ವಾಗ್ದಾಳಿಯನ್ನು ಮುಖ್ಯಮಂತ್ರಿ ಬಹಳ ಕಾಲ ಸಹಿಸಿಕೊಂಡಿದ್ದರು. ರಾಜಣ್ಣ ಡಿ ಕೆ ಶಿವಕುಮಾರ್ ಅವರೊಡನೆಯೂ ಜಗಳವಾಡಿದ್ದು, ಅದು ಸಚಿವ ಸಂಪುಟದ ಸದಸ್ಯರಿಗೆ ಮುಜುಗರ ಉಂಟುಮಾಡಿತ್ತು. ಆದರೂ ರಾಜಣ್ಣ ಪಕ್ಷದ ಶಿಸ್ತಿಗೆ ಬೆಲೆ ನೀಡಲಿಲ್ಲ. ಆದರೆ ರಾಹುಲ್ ಗಾಂಧಿ ವಿರುದ್ಧವೇ ದಾಳಿ ನಡೆಸುವ ಲಕ್ಷ್ಮಣರೇಖೆಯನ್ನು ದಾಟಿದ ಕೂಡಲೇ ಸಂದೇಶ ಸ್ಪಷ್ಟವಾಗಿಹೋಗಿತ್ತು. ಸಿದ್ದರಾಮಯ್ಯ ಇವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಸಚಿವನಾಗಿ ರಾಜಣ್ಣ ಅವರ ಕಾರ್ಯಸಾಧನೆ ಕಳಪೆಯೇ. ನೆನಪಿನಲ್ಲಿ ಉಳಿಯುವಂತಹುದೇನಲ್ಲ. ಕಡತಗಳು ಧೂಳು ತಿನ್ನುತ್ತಿದ್ದವು, ಯೋಜನೆಗಳು ಸ್ಥಗಿತಗೊಂಡಿದ್ದವು, ಅವರ ಇಲಾಖೆ ರಾಜಕೀಯ ಲಾಬಿಗೆ ಹಿಂಬದಿಯ ತಾಣವಾಗಿತ್ತು. ರಾಜಣ್ಣ ತಮ್ಮ ಸಚಿವ ಹುದ್ದೆಯ ಬಗ್ಗೆ ಮಾತನಾಡುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಬಗ್ಗೆಯೇ ಮಾತನಾಡುತ್ತಿದ್ದರು. ತನಗೆ ಸಂಬಂಧವಿರದ ಸಂಗತಿಗಳ ಬಗ್ಗೆ ಆಲಾಪ ಮಾಡುತ್ತಿದ್ದರು. ಭ್ರಷ್ಟಾಚಾರದ ಆರೋಪಗಳು ಅವರನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದವು. ಲೈಂಗಿಕ ಹಗರಣ ಮತ್ತು ಹನಿಟ್ರ್ಯಾಪ್ ಆರೋಪಗಳು ಅವರ ಹೆಸರನ್ನು ಕೆಡಿಸಲು ಸಾಕಾಗಿತ್ತು. ತತ್ಪರಿಣಾಮವಾಗಿ ಪಕ್ಷದ ಪಾಲಿಗೆ ಶಾಶ್ವತ ಹೊರೆಯಾಗಿ ಕಾಣತೊಡಗಿದ್ದರು. ಇವರ ತಲೆದಂಡ ಆಗುವ ಹೊತ್ತಿನಲ್ಲಿ ಸರ್ಕಾರ ಮತ್ತು ಪಕ್ಷ ನಿಟ್ಟುಸಿರು ಬಿಡುವಂತಾಗಿತ್ತು.

ಈಗ ರಾಜಕೀಯ ರಂಗಶಾಲೆಯ ರೂಪದಲ್ಲಿ ಸ್ವಾಮೀಜಿಗಳನ್ನು ಹೈಕಮಾಂಡ್ ಬಳಿ ತಮ್ಮ ಪರವಾಗಿ ಲಾಬಿ ನಡೆಸಲು ರಾಜಣ್ಣ ಪ್ರಯೋಗಿಸಿದ್ದಾರೆ. ಈ ಚಿಂತನೆಯೇ ವಂಚಕ ರೀತಿಯದು. ಸಚಿವ ಹುದ್ದೆಗಳನ್ನು ಆಧ್ಯಾತ್ಮಿಕ ಮಠಾಧೀಶರು ನಿರ್ಧರಿಸುತ್ತಾರೆಯೇ? ಅದರಲ್ಲೂ ಎಲ್ಲರನ್ನೂ ಬಿಟ್ಟು ರಾಜಣ್ಣ ಅವರ ಪರವಾಗಿ? ಸ್ವಾಮಿಗಳು ತಾವು ಸಮುದಾಯದ ಪ್ರತಿನಿಧಿಗಳೆಂದು ಬಿಂಬಿಸಿಕೊಳ್ಳಬಹುದು, ಆದರೆ ವಾಸ್ತವದಲ್ಲಿ, ಅವರು ಈಗಾಗಲೇ ಸಮಾಪ್ತಿಯಾಗಿರುವ ವ್ಯಕ್ತಿಯ ವೃತ್ತಿಯನ್ನು ಪುನರುಜ್ಜೀವನಗೊಳಿಸಲು ಅವಕಾಶ ಕೋರುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಇನ್ನೂ ಉಚ್ಛಾಟಿತರಾಗದೆ ಇರುವುದಕ್ಕೆ ರಾಜಣ್ಣ ತಮ್ಮನ್ನು ಅದೃಷ್ಟವಂತರೆಂದೇ ಪರಿಗಣಿಸಬೇಕು. 75ನೆ ವಯೋಮಾನದಲ್ಲಿ, ಅವರು ತಮ್ಮ ಸಮಯವನ್ನು ಕುಟುಂಬದವರೊಡನೆ, ಮಕ್ಕಳೊಡನೆ ಕಳೆಯಬೇಕೇ ಹೊರತು, ಧಾರ್ಮಿಕ ಲಾಬಿ ಮೂಲಕ ಮರಳಿ ಅಧಿಕಾರಕ್ಕೆ ಬರುವುದಲ್ಲ. ಅವರು ಈಗ ಇಡುವ ಪ್ರತಿಯೊಂದು ಹೆಜ್ಜೆಯೂ ತಪ್ಪು ನಡೆಯಾಗಲಿದ್ದು, ಪಕ್ಷ ವಿರೋಧಿ ಎಂದೇ ಭಾವಿಸಲಾಗುತ್ತದೆ. ಕಾಂಗ್ರೆಸ್ ನಾಯಕತ್ವದಲ್ಲಿ ಕೊಂಚ ಪರಿಜ್ಞಾನ ಇದ್ದರೆ, ಈ ಅಬ್ಬರಾಟಗಳಿಗೆ ಕಡಿವಾಣ ಹಾಕಿ, ರಾಜಣ್ಣ ಅವರಿಗೆ ಅವರ ಸಮಯ ಮುಗಿದಿದೆ ಎಂದು ಸ್ಪಷ್ಟವಾಗಿ ಹೇಳಬೇಕು.

ಅವರ ರಾಜಕೀಯ ವೃತ್ತಿಯ ಚರಮಗೀತೆ ಈಗಾಗಲೇ ಬರೆದಾಗಿದೆ. ಒಮ್ಮೆ ಸಹಿಸಿಕೊಳ್ಳಲ್ಪಟ್ಟು, ಒಮ್ಮೆ ನಿರ್ಲಕ್ಷಿಸಲ್ಪಟ್ಟ ರಾಜಣ್ಣ ಈಗ ವರ್ತಮಾನಕ್ಕೆ ಸೇರಿದವರಾಗಿಲ್ಲ. ಯಾವುದೇ ಸ್ವಾಮಿ, ಅವರ ಲಾಬಿ, ಕಡೆಯ ಗಳಿಗೆಯ ದೆಹಲಿಯ ಕಸರತ್ತುಗಳು, ಅವರಿಂದಲೇ ಸಮಾಪ್ತಿಯಾದ ಅವರ ವೃತ್ತಿಯನ್ನು ಮರಳಿ ತರಲಾಗುವುದಿಲ್ಲ. ರಾಜಕೀಯವಾಗಿ ಅಪ್ರಸ್ತುತವಾಗುವ ಮುನ್ನ, ಸದ್ದಿಲ್ಲದೆ, ಶಾಶ್ವತವಾಗಿ ತಾವಾಗಿಯೇ ಹಿಂದಕ್ಕೆ ಸರಿಯುವುದು ವಿವೇಕಯುತ ನಡೆಯಾದೀತು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again