ಪ್ರತಾಪ್ ಸಿಂಹ: ಸಾರ್ವಜನಿಕ ಜೀವನದ ಹೊರೆ, ಬಿಜೆಪಿಗೆ ಭಾರ

  


ಮೈಸೂರು ಕ್ಷೇತ್ರದಿಂದ ಎರಡು ಬಾರಿ ಸಂಸದನಾಗಿದ್ದ ಪ್ರತಾಪ್ ಸಿಂಹ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಅಭಿವೃದ್ದಿ, ಸಾಧನೆ ಅಥವಾ ಜನಸೇವೆಗಾಗಿ ಅಲ್ಲ. ತನ್ನ ಬಾಯಾರಿಕೆ, ಕೋಪೆÇೀದ್ರಿಕ್ತ ನಡವಳಿಕೆಯೇ ಅವರಿಗೆ ಸುದ್ದಿ ತಂದುಕೊಟ್ಟಿದೆ. ಹಳೆಯ ಪತ್ರಕರ್ತನಾಗಿದ್ದರೂ, ಪತ್ರಕರ್ತರ ಪ್ರಶ್ನೆಗೆ ಸಹನೆ ತೋರದೆ ನಿಂದನೆ ಸುರಿಸಿದ ಅವರ ವರ್ತನೆ, ಪ್ರಜಾಸತ್ತಾತ್ಮಕ ಸಂಸ್ಕøತಿಗೆ ಕಪ್ಪು ಚುಕ್ಕೆ.

ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗೆ ಜನಪ್ರತಿನಿಧಿಗಳಿಂದ, ಪತ್ರಕರ್ತರಿಂದ ಪ್ರಶ್ನೆಗಳು ಬರುವುದು ಸಹಜ. ಅದು ಹೊಣೆಗಾರಿಕೆಯನ್ನು ನೆನಪಿಸುವ ಪ್ರಕ್ರಿಯೆ. ಆದರೆ ಪ್ರತಾಪ್ ಸಿಂಹ, ತಮ್ಮ ಸಾರ್ವಜನಿಕ ಬದುಕಿನ ಅನುಭವವನ್ನು ತೋರಿಸುವ ಬದಲು, ಪ್ರಶ್ನೆ ಕೇಳಿದವರನ್ನೇ ಅವಹೇಳನ ಮಾಡಿದರು. ಇದು ಈ ವ್ಯಕ್ತಿ ಎಷ್ಟು ಸಂಸ್ಕøತಿಹೀನ ಎನ್ನವುದನ್ನು ತೋರಿಸುವ ಜತೆಗೇ ರಾಜಕೀಯ ಸಂಸ್ಕೃತಿಯ ಮೇಲೆ ನೇರದಾಳಿ.

ಮೈಸೂರು ಪತ್ರಕರ್ತರ ಸಂಘವು ಕೂಡಲೇ ತಿರುಗೇಟು ನೀಡಿದ್ದು ಗಮನಾರ್ಹ. ಕ್ಷಮೆ ಕೇಳಬೇಕು ಅಥವಾ ಪಕ್ಷವೇ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹ.  ಇನ್ನೂ ಕಟುವಾಗಿ ಸಂಘವು, "ಬಿಜೆಪಿ ಅವರಿಗೆ ಈ ಬಾರಿ ಟಿಕೆಟ್ ನೀಡದಿರುವುದು ಅವರ ನಿಜವಾದ ಮೌಲ್ಯವನ್ನು ತಿಳಿದುಕೊಂಡದ್ದರಿಂದ" ಎಂದು ಹೇಳಿದೆ. ಇದಲ್ಲದೆ "ಇಂದಿನ ಸಂಸದ ಯದುವೀರ ಒಡೆಯರ್ ಅವರ ಮನೆಯ ಅಂಗಳವನ್ನು ಸ್ವಚ್ಛಗೊಳಿಸುವುದೇ ಪ್ರತಾಪ್ ಸಿಂಹನಿಗೆ ನೀಡಬಹುದಾದ ಶಿಕ್ಷೆ" ಎಂಬ ಮಾತು, ಅವರ ಸ್ಥಿತಿಯನ್ನು ತೀವ್ರವಾಗಿ ಹಾಸ್ಯಮಾಡಿದೆ.

ಸಿಂಹನ ರಾಜಕೀಯ ಜೀವನದ ಪಯಣವನ್ನು ಹಿಂತಿರುಗಿ ನೋಡಿದರೆ, ಜನಪರ ಸಾಧನೆಗಳಿಗಿಂತ ವಿವಾದಗಳು, ಜಾತಿ-ಧರ್ಮದ ಘರ್ಷಣೆಗಳು, ಕೋಪೆÇೀದ್ರಿಕ್ತ ಹೇಳಿಕೆಗಳು ಹೆಚ್ಚಾಗಿ ಕಂಡುಬರುತ್ತವೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ಹಾವಳಿ, ಪ್ರತಿಯೊಂದು ಸಂದರ್ಭವನ್ನೂ ವಿಭಜನೆಯ ರಾಜಕೀಯಕ್ಕೆ ಬಳಸಿಕೊಳ್ಳುವ ಹವಣಿಕೆ, ಅವರು ನಾಯಕತ್ವಕ್ಕೆ ಯೋಗ್ಯರಲ್ಲ ಎಂಬುದನ್ನು ತೋರಿಸುತ್ತದೆ. ಇತ್ತೀಚೆಗೆ ದಸರಾ ಮಹೋತ್ಸವಕ್ಕೆ ಭಾನು ಮಸ್ತಾಕ್ ಅವರನ್ನು ಆಹ್ವಾನಿಸಿದ ವಿಚಾರವನ್ನೇ ವಿರೋಧಿಸಿ, ತಾನೇ ಸಂಸ್ಕೃತಿಯ ರಕ್ಷಕನೆಂದು ದಾಂಧಲೆಗೈದ ಆಸಾಮಿ ಈತ. ಇದು ಮೈಸೂರಿನ ಸಮಾನತೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಹಾಳುಮಾಡುವ ಪ್ರಯತ್ನ.

ಬಿಜೆಪಿಯಂತಹ ದೊಡ್ಡ ಪಕ್ಷಕ್ಕೆ ಇಂತಹವರು ಅನಿವಾರ್ಯವಾಗಬಾರದು. ಜನರನ್ನು ಕಳೆದುಕೊಳ್ಳುವ, ಸಮಾಜದಲ್ಲಿ ದ್ವೇಷ ಬೀಜ ಬಿತ್ತುವ ನಾಯಕರ ಉಪಸ್ಥಿತಿ, ಪಕ್ಷಕ್ಕೆ ಗೌರವ ತರದೆ ಹಾಳು ಮಾಡುತ್ತದೆ. ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಂಡಿರುವುದು ಪಕ್ಷದ ಒಳನೋಟದ ನಿರ್ಧಾರ. ಅವರ ವರ್ತನೆ ಮತ್ತು ನಡವಳಿಕೆಯೇ ಅವರ ವಿರುದ್ಧ ತೀರ್ಪು ನೀಡಿದೆ.

ಇದೊಂದು ವ್ಯಕ್ತಿಗತ ಸಮಸ್ಯೆಯಷ್ಟೇ ಅಲ್ಲ. ಬಿಜೆಪಿ ಒಳಗೆ ಪ್ರತಾಪ್ ಸಿಂಹ, ಬಸನಗೌಡ ಯತ್ನಾಳ್, ಸುನೀಲ್ ಕುಮಾರ್, ಹರೀಶ್ ಪೂಂಜ ಅವರಂತಹ ನಾಯಕರು, ತಮ್ಮ ಅಸಹಿಷ್ಣು ನಡವಳಿಕೆ, ನಿರಂತರ ಜಗಳಾಟದ ರಾಜಕೀಯ ಮತ್ತು ಜನತೆಯನ್ನು ಹತ್ತಿಕ್ಕುವ ನಿಲುವಿನಿಂದ ಪಕ್ಷಕ್ಕೆ "ಮರದ ಒಣಕಡ್ಡಿ"ಗಳಂತಿದ್ದಾರೆ. ಇವರು ಪಕ್ಷವನ್ನು ಬಲಪಡಿಸುವ ಬದಲು ಜನರಿಂದ ದೂರ ಮಾಡುತ್ತಿದ್ದಾರೆ. ಜನಸೇವೆ ಎಂಬ ಬೃಹತ್ ಕಾರ್ಯಕ್ಕೆ ಬದಲಾಗಿ, ಸಣ್ಣ ಮಟ್ಟದ ವೈಯಕ್ತಿಕ ಶತ್ರುತ್ವ, ಧರ್ಮಾಧಾರಿತ ಪ್ರಚೋದನೆ, ಅಧಿಕಾರಪಿಪಾಸೆ ಇವುಗಳಿಗೆ ಬಲಿಯಾಗುತ್ತಿದ್ದಾರೆ.

ಮೈಸೂರು ಪತ್ರಕರ್ತರ ಸಂಘದ ಟೀಕೆ ಒಂದು ಸೂಚನೆ. ಜನರ ಪ್ರತಿನಿಧಿಗಳು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಜನರ ಪರ ಕೆಲಸ ಮಾಡಿದವರು ಮಾತ್ರ ಆತ್ಮವಿಶ್ವಾಸದಿಂದ ಮಾತನಾಡಲು ಸಾಧ್ಯ. ತಪ್ಪುಗಳನ್ನು ಮುಚ್ಚಿಹಾಕಲು ಮಾತ್ರ ನಿಂದನೆಗೆ ಮೊರೆ ಹೋಗುವವರು, ತಮ್ಮ ವೈಫಲ್ಯವನ್ನು ಮಾತ್ರ ಬಯಲಾಗಿಸುತ್ತಾರೆ.

ಪ್ರತಾಪ್ ಸಿಂಹ ಮಾದರಿಯವರು ಬಿಜೆಪಿಗೆ ಕೇವಲ ಹೊರೆ. ಪಕ್ಷದ ಒಳಗಿನ ಶುದ್ಧೀಕರಣ ಪ್ರಕ್ರಿಯೆಗಾಗಿ, ಇಂತಹ ಅಸಹಿಷ್ಣು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಾಳುಮಾಡುವ ಮುಖಗಳನ್ನು ಪಕ್ಕಕ್ಕಿರಿಸುವುದು ಅವಶ್ಯಕ. ಮೈಸೂರು ಜನರು ಈಗಾಗಲೇ ಸಿಂಹನನ್ನು ತಿರಸ್ಕರಿಸಿದ್ದಾರೆ. ಈಗ ಅವರದೇ ಪಕ್ಷವು ಸ್ಪಷ್ಟ ಸಂದೇಶ ನೀಡುವ ಸಮಯ ಬಂದಿದೆ - ದ್ವೇಷದ ರಾಜಕೀಯ, ಕೋಪೆÇೀದ್ರಿಕ್ತ ನಡವಳಿಕೆ, ಮಾಧ್ಯಮ ವಿರೋಧಿ ನಿಲುವುಗಳಿಗೆ ಇಲ್ಲಿ ಜಾಗವಿರಬಾರದು.

ರಾಜಕೀಯದಲ್ಲಿ ಜನರ ವಿಶ್ವಾಸವೇ ದೊಡ್ಡ ಬಂಡವಾಳ. ಪ್ರತಾಪ್ ಸಿಂಹ ಅವರು ಗೌಜಿ-ಗದ್ದಲವನ್ನು ನಾಯಕತ್ವ, ನಿಂದನೆಯನ್ನು ಧೈರ್ಯ, ಧರ್ಮೀಯ ಪ್ರಚೋದನೆಯನ್ನು ನಿಷ್ಠೆ ಎಂದು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ ಈ ತಪ್ಪು ಅವರಿಗೆ ಮತ್ತು ಅವರ ಪಕ್ಷಕ್ಕೂ ಭಾರೀ ಬೆಲೆ ಕಟ್ಟಿಸುತ್ತಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again