ಧರ್ಮಸ್ಥಳ ವಿವಾದ: ದಿಕ್ಕು ತಪ್ಪಿಸುವ ಬಿಜೆಪಿಯ ವಿಷಯಾಂತರ ತಂತ್ರ
ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಅತ್ಯಾಚಾರಗಳು ಮತ್ತು ಕೊಲೆಗಳು ಕರ್ನಾಟಕದ ಪ್ರಜ್ಞೆಯನ್ನು ಕದಡಿರುವುದು ಸಹಜ. ಹಲವು ದಶಕಗಳ ಕಾಲ, ಲೈಂಗಿಕ ಹಿಂಸೆ, ದೌರ್ಜನ್ಯ, ನಿಗೂಢ ಸಾವುಗಳು, ಸಾಂಸ್ಥಿಕ ನೆಲೆಯಲ್ಲಿ ಪ್ರಕರಣಗಳನ್ನು ಮುಚ್ಚಿಹಾಕುವ ಹಲವು ಘಟನೆಗಳು ಕರಾಳ ಛಾಯೆಯನ್ನು ಸೃಷ್ಟಿಸಿದೆ. ರಾಜ್ಯ ಸರ್ಕಾರವು ಕೊನೆಗೂ ಒಂದು ವಿಶೇಷ ತನಿಖಾ ದಳವನ್ನು (ಎಸ್‍ಐಟಿ) ರಚಿಸಿರುವುದು ಸತ್ಯವನ್ನು ಹೊರಗೆಳೆಯುವ ಭರವಸೆ ನೀಡಿದೆ. ಆದರೆ ಈಗ ಎಸ್‍ಐಟಿ ತನಿಖೆ ತನ್ನ ಪೂರ್ಣ ಪ್ರಮಾಣದ ಚಲನೆ ಪಡೆಯುವ ಮುನ್ನವೇ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ದಿಕ್ಕುತಪ್ಪಿಸುವ ನಾಟಕವಾಡುತ್ತಿದ್ದು, ತನಿಖೆಯನ್ನೇ ಹಾದಿ ತಪ್ಪಿಸಲು ಮತ್ತು ಶಂಕಿತ ಹಿತಾಸಕ್ತಿಗಳನ್ನು ರಕ್ಷಿಸುವುದರಲ್ಲಿ ತೊಡಗಿವೆ.
ಎಸ್‍ಐಟಿ ತನಿಖೆಯನ್ನು ಬಲಪಡಿಸುವ ನಿರ್ಧಾರಕ್ಕೆ ಬದಲು, ಬಿಜೆಪಿ ನಾಯಕರು ಉಡುಪಿಯ ಸಂಸದ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‍ಐಎ) ತನಿಖೆಗಾಗಿ ಆಗ್ರಹಿಸುತ್ತಿದ್ದಾರೆ. ಇವರ ವಾದ ಏನೆಂದರೆ, ಧರ್ಮಸ್ಥಳದ ವಿರುದ್ಧ ಮಾತನಾಡುವವರು ವಿದೇಶಿ ಹಣಕಾಸು ಪಡೆಯುವವರಾಗಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ ಎನ್ನುವುದು. ಇದು ದಿಕ್ಕುದೆಸೆ ಇಲ್ಲದ ಒಂದು ತರ್ಕ. ಧಾರ್ಮಿಕ ಸ್ಥಳಗಳಲ್ಲಿ ಅತ್ಯಾಚಾರ, ಕೊಲೆಗಳ ಆರೋಪಗಳು ರಾಷ್ಟ್ರೀಯ ಭದ್ರತೆಯ ವಿಷಯ ಆಗುವುದಿಲ್ಲ. ಅದು ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗುತ್ತದೆ. ಇಲ್ಲಿ ಎನ್‍ಐಎ ಪ್ರವೇಶಿಸುವುದು ತರ್ಕಹೀನವಾದ ಕ್ರಮವಾಗುತ್ತದೆ. ಆದರೆ ಒಮ್ಮೆ ವಿದೇಶಿ ಪಿತೂರಿಯ ಆರೋಪವನ್ನು ಹೊರಿಸಿಬಿಟ್ಟರೆ ಕೇಂದ್ರವು ಎನ್‍ಐಎ ತನಿಖೆಗೆ ಆದೇಶಿಸುತ್ತದೆ, ಅದು ಎಸ್‍ಐಟಿ ತನಿಖೆಯನ್ನು ಅಂತ್ಯಗೊಳಿಸುತ್ತದೆ ಎಂಬ ವಾಸ್ತವವನ್ನು ಸಂಘಪರಿವಾರ ಅರಿತಿದೆ.
ಇದು ನ್ಯಾಯದ ವಿಚಾರ ಅಲ್ಲ. ಬದಲಾಗಿ ಮಾಹಿತಿದಾರರನ್ನು ಮತ್ತು ಟೀಕಾಕಾರರನ್ನು ಬಾಯಿಮುಚ್ಚಿಸುವ ತಂತ್ರ. ಬಿಜೆಪಿ ನಾಯಕತ್ವವು ಈ ಹೀನ ಕೃತ್ಯಗಳ ಹಿಂದಿನ ದುಷ್ಕರ್ಮಿಗಳನ್ನು ಗುರುತಿಸುವುದಕ್ಕಿಂತಲೂ ಹೆಚ್ಚಾಗಿ, ಇದನ್ನು ಬಯಲಿಗೆಳೆಯುತ್ತಿರುವ ಯುಟ್ಯೂಬರ್‍ಗಳು, ಕಾರ್ಯಕರ್ತರು, ಸಂತ್ರಸ್ತರ ಕುಟುಂಬದವರು, ಸ್ವತಂತ್ರ ದನಿಗಳಿಂದ ಭೀತಿಗೊಳಗಾಗಿದೆ. ಇವರನ್ನು ವಿದೇಶಿ ಏಜೆಂಟರೆಂದು ಹೇಳುವುದು ಬಹಳ ಹಳೆಯ ತಂತ್ರವಾಗಿದ್ದು, ಇದು ಪ್ರತಿರೋಧವನ್ನು ಅಪಾಯಕಾರಿ ಎಂದು ಪರಿಗಣಿಸಿ, ದೂರುದಾರರ ನ್ಯಾಯಪರತೆಯನ್ನು ಪ್ರಶ್ನಿಸುತ್ತದೆ. ತನ್ಮೂಲಕ ಜನರ ಗಮನವನ್ನು ಆರೋಪಿಗಳಿಂದ ದೂರುದಾರರ ಕಡೆಗೆ ತಿರುಗಿಸುತ್ತದೆ.
ಎನ್‍ಐಎ ತನಿಖೆಗೆ ಆಗ್ರಹಿಸುವುದು ಎರಡು ಪಟ್ಟು ಅಪಾಯಕಾರಿಯಾಗುತ್ತದೆ. ಏಕೆಂದರೆ, ಇದು ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದನ್ನು ಕೇಂದ್ರದ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ವರ್ಗಾಯಿಸುತ್ತದೆ. ಎಸ್‍ಐಟಿ ಎಷ್ಟೇ ಅಸಮರ್ಪಕ ಅಂತ ಯಾರಿಗೇ ಅನಿಸಿದರೂ, ಕರ್ನಾಟಕದ ಒಳಗೆ ಉತ್ತರದಾಯಿತ್ವವನ್ನು ಕಾಪಾಡುತ್ತದೆ. ಎನ್‍ಐಎ ಈ ತನಿಖೆಯನ್ನು ಕೈಗೆತ್ತಿಕೊಂಡರೆ ಎಲ್ಲ ಸಾಕ್ಷಿಗಳೂ, ಸಾಕ್ಷಿಗಳ ಹೇಳಿಕೆಗಳೂ, ಮುಖ್ಯ ಮಾಹಿತಿಗಳೂ ದೆಹಲಿಗೆ ವರ್ಗವಾಗುತ್ತವೆ. ಪರಿಣಾಮವಾಗಿ ಅತ್ಯಾಚಾರ ಮತ್ತು ಕೊಲೆಗಳ ಬಗ್ಗೆ ಆರಂಭವಾದ ತನಿಖೆಯು ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ನಿಷ್ಫಲವಾಗುತ್ತದೆ. ಒಂದು ಸಮಯ ಇದು ರಾಷ್ಟ್ರಮಟ್ಟಕ್ಕೆ ಹೋದರೆ ಪ್ರಕರಣವು ಅಪಾರದರ್ಶಕ ವಲಯವನ್ನು ತಲುಪಿ, ಅಲ್ಲಿ ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಲು ಅನುಕೂಲವಾಗುತ್ತದೆ.
ತನಿಖೆಯ ದಾರಿ ತಪ್ಪಿಸುವ ಉದ್ದೇಶದ ಇಂಥ ಜನವಿರೋಧಿ ನಿಲುವನ್ನು ತಳೆದು ಹಂಗಾಮಾ ನಿರ್ಮಿಸುವುದನ್ನು ರಾಜ್ಯ ಸರಕಾರ ತಪ್ಪಿಸಬಹುದಾಗಿತ್ತು - ರಾಜ್ಯ ಸರ್ಕಾರವು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವ ಆಗ್ರಹಗಳಿಗೆ ಒಪ್ಪಿ ಕ್ರಮ ಜರುಗಿಸಿದ್ದರೆ. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ಆದೇಶಿಸಿದ್ದಲ್ಲಿ, ಎಸ್‍ಐಟಿ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರುತ್ತಿತ್ತು. ಅದು ಸಾರ್ವಜನಿಕರಿಗೆ ತನಿಖೆ ಮಧ್ಯದಲ್ಲೇ ಅಂತ್ಯವಾಗುವುದಿಲ್ಲ ಎಂಬ ಭರವಸೆ ನೀಡುತ್ತಿತ್ತು. ಈ ವೈಫಲ್ಯದ ಪರಿಣಾಮ, ಎಸ್‍ಐಟಿಯನ್ನು ದುರ್ಬಲಗೊಳಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.
ಇಲ್ಲಿ ರಾಜಕೀಯ ಆಟ ಸ್ಪಷ್ಟವಾಗಿದೆ. ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ ಆರೋಪಿಗಳನ್ನು ರಕ್ಷಿಸುವುದರಲ್ಲಿ ಲಾಭ ಇದೆ. ಸ್ಥಳೀಯ ನಾಯಕರು ದೆಹಲಿಯ ನಿರ್ದೇಶನವನ್ನು ಪಾಲಿಸುತ್ತಿದ್ದಾರೆ. ಧಾರ್ಮಿಕ ಅಧಿಕಾರ ಕೇಂದ್ರಗಳು, ರಾಜಕೀಯ ಅಧಿಕಾರ ಮತ್ತು ಸಂಘಪರಿವಾರದ ನಡುವಿನ ಅಪವಿತ್ರ ಮೈತ್ರಿ ಇದರಲ್ಲಿ ಅಡಗಿದೆ.
ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯ ಬೇಕಾಗಿದೆ, ದಿಕ್ಕು ತಪ್ಪಿಸುವುದಲ್ಲ. ಕೇಂದ್ರ ಸರ್ಕಾರವು ಎಸ್‍ಐಟಿಯಿಂದ ತನಿಖೆಯನ್ನು ಕಸಿದುಕೊಳ್ಳುವುದರಲ್ಲಿ ಯಶಸ್ವಿಯಾದರೆ, ಅದು ಸತ್ಯ ಶೋಧಿಸುವ ಉದ್ದೇಶಕ್ಕಿಂತಲೂ ಸತ್ಯದ ಸಮಾಧಿ ಮಾಡುವ ಉದ್ದೇಶದಿಂದಲೇ ಆಗಿರುತ್ತದೆ. ಕರ್ನಾಟಕದ ಜನತೆ ಮತ್ತು ದೇಶದ ಪ್ರಜೆಗಳೂ ಸಹ ವಿದೇಶಿ ನಿಧಿಯ ಕಲ್ಪಿತ ಆರೋಪವನ್ನು ನಂಬಬೇಕಿಲ್ಲ. ಇಲ್ಲಿ ಅಪಾಯದಲ್ಲಿರುವುದು ರಾಷ್ಟ್ರೀಯ ಭದ್ರತೆ ಅಲ್ಲ, ನಮ್ಮ ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆ.
ಎಸ್‍ಐಟಿ ಮತ್ತು ಎನ್‍ಐಎ
ಎಸ್‍ಐಟಿ ತನಿಖೆ
· ವ್ಯಾಪ್ತಿ: ರಾಜ್ಯ ಮಟ್ಟದ್ದು ಸರ್ಕಾರವೇ ನೇಮಿಸುತ್ತದೆ.
· ಆದೇಶ: ಅತ್ಯಾಚಾರ, ಹತ್ಯೆ, ಭ್ರಷ್ಟಾಚಾರ ಮತ್ತು ಸಂಘಟಿತ ಅಪರಾಧಗಳ ತನಿಖೆ ನಡೆಸುತ್ತದೆ.
· ಉತ್ತರದಾಯಿತ್ವ: ರಾಜ್ಯ ಪೆÇಲೀಸ್ ಕಾಯ್ದೆಗಳ ಅಡಿ ಕಾರ್ಯ ನಿರ್ವಹಿಸುತ್ತದೆ. ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ ನಡೆಸಬಹುದು.
· ಪಾರದರ್ಶಕತೆ: ಸ್ಥಳೀಯ ಮಾಧ್ಯಮಗಳು ಮತ್ತು ನ್ಯಾಯಾಲಯಗಳು ಅದರ ಕಾರ್ಯವನ್ನು ಪರಿಶೀಲಿಸಬಹುದು.
· ಅಪಾಯ: ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೆ ಹೋದರೆ ರಾಜ್ಯ ಮಟ್ಟದ ರಾಜಕೀಯ ಒತ್ತಡಕ್ಕೆ ಸಿಲುಕಬಹುದು.
ಎನ್ ಐ ಎ ತನಿಖೆ
· ವ್ಯಾಪ್ತಿ: ರಾಷ್ಟ್ರೀಯ, ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿ.
· ಆದೇಶ: ಭಯೋತ್ಪಾದನೆ, ಗಡಿಯಾಚೆಗಿನ ಅಪರಾಧಗಳು, ರಾಷ್ಟ್ರೀಯ ಭದ್ರತೆಗೆ ಅಪಾಯಗಳು.
· ಉತ್ತರದಾಯಿತ್ವ: ಕೇಂದ್ರಕ್ಕೆ ವರದಿ ಮಾಡುತ್ತದೆ ರಾಜ್ಯ ಸರ್ಕಾರಕ್ಕೆ ಅಲ್ಲ.
· ಪಾರದರ್ಶಕತೆ: ಅಪಾರದರ್ಶಕತೆ ಹೆಚ್ಚು. ತನಿಖೆಯ ವಿವರಗಳು ಕೇಂದ್ರದ ರಾಜಕೀಯ ನಿರೂಪಣೆಗೆ ತಕ್ಕಂತೆ ಇರುತ್ತವೆ.
· ಅಪಾಯ: ರಾಜ್ಯದ ತನಿಖೆಗಳನ್ನು ನಗಣ್ಯಗೊಳಿಸಬಹುದು, ತನಿಖೆಯ ವ್ಯಾಪ್ತಿಯನ್ನು ಹೆಚ್ಚಿಸಿ ಮಾಹಿತಿದಾರರನ್ನು, ಕಾರ್ಯಕರ್ತರನ್ನು ಗುರಿಯಾಗಿಸಬಹುದು.
ಕೊನೆಯ ಹನಿ
ಧರ್ಮಸ್ಥಳದ ಪ್ರಕರಣಗಳು ಅತ್ಯಾಚಾರ ಮತ್ತು ಕೊಲೆಯಂತಹ ಹೀನ ಕೃತ್ಯಗಳ ಬಗ್ಗೆ ಇರುವುದು, ಭಯೋತ್ಪಾದನೆಯ ರೂಪದಲ್ಲಿ ಅಲ್ಲ. ಎಸ್‍ಐಟಿ ತನಿಖೆಯನ್ನು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಸಿದರೆ, ನ್ಯಾಯವನ್ನು ಪಡೆಯಬಹುದು. ಎನ್‍ಐಎ ತನಿಖೆ ನಡೆದರೆ, ವಿದೇಶಿ ನಿಧಿಯ ಆರೋಪದಡಿ, ಸತ್ಯವನ್ನು ಮುಚ್ಚಿಹಾಕಿ, ಬಲಾಢ್ಯರನ್ನು ರಕ್ಷಿಸುವ ಅಪಾಯ ಇರುತ್ತದೆ.
Comments
Post a Comment