ರಾಜ್ಯದಲ್ಲಿ ಪ್ರಜಾಪ್ರಭುತ್ವ ಮಾರಾಟಕ್ಕಿದೆ!
ಪ್ರಜಾಪ್ರಭುತ್ವವನ್ನು ಕೆಲವೇ ಗುಂಪುಗಳು ಮತ್ತು ಅವುಗಳ ರಾಜಕೀಯ ಬೆಂಬಲಿಗರು ಹೈಜಾಕ್ ಮಾಡುವುದರಿಂದ ತಪ್ಪಿಸಬೇಕು
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಡಿ ಗ್ಯಾಂಗ್ ಬೆಂಬಲಿಸುವುದರಲ್ಲಿ ಒಂದೇ ಹೆಜ್ಜೆಯನ್ನು ಹಾಕುತ್ತಿದ್ದು, ನ್ಯಾಯವನ್ನು ಮತಗಳಿಕೆಗಾಗಿ, ಹಣಕ್ಕಾಗಿ ವ್ಯಾಪಾರ ಮಾಡುತ್ತಿವೆ. ಈ ಕುರಿತು ಮೌನ ವಹಿಸುವುದು ಈ ದುಷ್ಕøತ್ಯದಲ್ಲಿ ಶಾಮೀಲಾದಂತೆ. ಇಂಥ ಸಂದರ್ಭದಲ್ಲಿ ನಾಗರಿಕರು ಮಾತನಾಡಬೇಕಿದೆ.
ಧರ್ಮಸ್ಥಳದ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಕರ್ನಾಟಕದ ರಾಜಕೀಯ ನೈತಿಕತೆಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿತ್ತು. ನಾಯಕರಿಗೆ ನ್ಯಾಯವನ್ನು ಎತ್ತಿಹಿಡಿಯಲು ದೊರೆತ ಒಂದು ಅವಕಾಶವಾಗಿದ್ದ ಈ ಪ್ರಕರಣಗಳು, ತದ್ವಿರುದ್ಧವಾಗಿ ಈ ನಾಯಕರ ನಡುವಿನ ಅಪವಿತ್ರ ಮೈತ್ರಿ ಮತ್ತು ಕ್ರಿಮಿನಲ್ ಸಿಂಡಿಕೇಟ್‍ಗಳನ್ನು ರಚಿಸುವ ಅವಕಾಶವಾಗಿ ಪರಿಣಮಿಸಿದೆ.
ಎಸ್‍ಐಟಿ ತನಿಖೆಯ ಹೊರತಾಗಿಯೂ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಚಾರಣೆಗಳ ಹೊರತಾಗಿಯೂ, ಮೃತ ದೇಹಗಳನ್ನು ಹೊರತೆಗೆದ ನಂತರವೂ ಬಿಜೆಪಿ ನಾಯಕರು ಮೂರೂ ಬಿಟ್ಟವರ ರೀತಿ ಕುಖ್ಯಾತ ಡಿ ಗ್ಯಾಂಗ್ ಬೆಂಬಲಿಸಿ ಮೆರವಣಿಗೆ ನಡೆಸಿದ್ದಾರೆ. ತಾನೇನೂ ಕಡಿಮೆ ಇಲ್ಲ ಎನ್ನುವಂತೆ, ಕಾಂಗ್ರೆಸ್ ಶಾಸಕರೂ ಈಗ ಇದೇ ಹಾದಿಯನ್ನು ಅನುರಿಸುವುದಾಗಿ ಹೇಳಿದ್ದಾರೆ. ಈ ಎರಡೂ ಪಕ್ಷಗಳ ಮೈತ್ರಿಪೂರ್ಣ ಸ್ಪರ್ಧೆಯು ಕಳಂಕ ಹೊತ್ತ ವ್ಯಕ್ತಿಗಳ ರಕ್ಷಣೆಗಾಗಿ ನಡೆಯುತ್ತಿದ್ದು, ಆಘಾತಕಾರಿಯಷ್ಟೇ ಅಲ್ಲದೆ, ಅಪಾಯಕಾರಿಯೂ ಆಗಿ ಕಾಣುತ್ತದೆ.
ರಾಜಕೀಯ ನಾಯಕರು ತಾವು ಜನರ ಆಕ್ರೋಶವನ್ನು ಎದುರಿಸಬೇಕಾದ ಅಪಾಯಕ್ಕೆ ಏಕೆ ಅವಕಾಶ ನೀಡುತ್ತಾರೆ? ಹಲವು ದಶಕಗಳ ಕಾಲ ಡಿ-ಗ್ಯಾಂಗ್ ಜಾಲವು ರಾಜಕಾರಣಿಗಳಿಗೆ ಹಣ, ತೋಳ್ಬಲ, ಮತ್ತು ಧಾರ್ಮಿಕ ಮಾನ್ಯತೆಯನ್ನು ನೀಡಿದೆ. ಈ ಭೀಕರ ಆರೋಪಗಳು ಹೊರಬಂದ ನಂತರದಲ್ಲೂ, ಪಕ್ಷಗಳು ಈ ಅವಲಂಬನೆಯ ಸಂಕೋಲೆಗಳಲ್ಲೇ ಬಂಧಿತವಾಗಿವೆ. ಸಂತ್ರಸ್ತರನ್ನು ಮರೆಯಲಾಗಿದ್ದು, ನ್ಯಾಯವನ್ನು ನೇಪಥ್ಯಕ್ಕೆ ಸರಿಸಲಾಗಿದೆ. ಜನರ ಆಕ್ರೋಶವನ್ನು ಕಡೆಗಣಿಸಿ ಮುನ್ನಡೆಯಲಾಗಿದೆ. ಇವೆಲ್ಲದರ ಹಿಂದೆ ಇರುವುದು ಹಣ ಮತ್ತು ಚುನಾವಣಾ ಅನುಕೂಲತೆಗಳು.
ಆದರೆ ನಾಗರಿಕರು ಮೂರ್ಖರಲ್ಲ. ಒಂದು ಕಾಲದಲ್ಲಿ ಗೌರವ ಹೊಂದಿದ್ದ ಡಿ ಗ್ಯಾಂಗ್ ಕುಲವು ಈಗ ವಿಶ್ವಾಸ ಕಳೆದುಕೊಂಡಿದೆ. ರಾಜ್ಯಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಾರಾಸಗಟು ಪ್ರತಿರೋಧ ವ್ಯಕ್ತವಾಗುತ್ತಿದ್ದು, ಮುಕ್ತವಾದ ಅವರ ಲಜ್ಜೆಗೇಡಿ ಹೊಂದಾಣಿಕೆಯನ್ನು ಪ್ರಶ್ನಿಸಲಾಗುತ್ತಿದೆ. ಇದನ್ನು ನಿರ್ಬಂಧಿಸದಿದ್ದರೆ, ಇಂತಹ ಮೈತ್ರಿಗಳು ಪ್ರಜಾಪ್ರಭುತ್ವವನ್ನೇ ಶಿಥಿಲಗೊಳಿಸುತ್ತವೆ. ಚುನಾವಣೆಗಳು ಕೇವಲ ಕೆಲವು ಗ್ಯಾಂಗ್‍ಗಳ ಮತ್ತು ರಾಜಕಾರಣಿಗಳ ನಡುವೆ ಇರುವ ವ್ಯವಹಾರಗಳಾಗಿ ಪರಿಣಮಿಸುತ್ತವೆ. ಸಾಮಾನ್ಯ ಜನರು ಕೇವಲ ವಂಚನೆಯ ನಾಟಕವನ್ನು ನೋಡುತ್ತಿರುವ ಪ್ರೇಕ್ಷಕರಾಗಿ ಉಳಿದುಬಿಡುತ್ತಾರೆ.
ಈ ನಾಯಕರು ಏಕೆ ಅಪರಾಧಿಗಳ ಜೊತೆ ನಿಲ್ಲುತ್ತಾರೆ ಎನ್ನುವುದು ಈಗ ಕಾಡುವ ಪ್ರಶ್ನೆಯಲ್ಲ; ಬದಲಾಗಿ ಸಾರ್ವಜನಿಕರು ಈ ದ್ರೋಹವನ್ನು ಸಹಿಸಿಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆ. ಮೌನ ವಹಿಸುವುದರಿಂದ ರಾಜಕಾರಣಿಗಳಿಗೆ ಮತ್ತಷ್ಟು ಧೈರ್ಯ ಬರುತ್ತದೆ; ಅವರು ಕ್ರಿಮಿನಲ್ ಮಾಫಿಯಾಗಳಿಗೆ ತಮ್ಮನ್ನು ತಾವು ಮಾರಿಕೊಳ್ಳುತ್ತಲೇ ಇರುತ್ತಾರೆ. ಜನರ ಆಕ್ರೋಶ, ಪ್ರತಿಭಟನೆ ಮತ್ತು ಉತ್ತರದಾಯಿತ್ವದ ಆಗ್ರಹಗಳು ಇದಕ್ಕೆ ನಿರೋಧಕ ಮದ್ದು ಆಗಲಿಕ್ಕೆ ಸಾಧ್ಯ.
ಕರ್ನಾಟಕ ಈಗ ಕವಲು ಹಾದಿಯಲ್ಲಿದೆ. ಪ್ರಜಾಪ್ರಭುತ್ವವನ್ನು ಕೆಲವೇ ಗುಂಪುಗಳು ಮತ್ತು ಅವುಗಳ ರಾಜಕೀಯ ಬೆಂಬಲಿಗರು ಹೈಜಾಕ್ ಮಾಡುವುದರಿಂದ ತಪ್ಪಿಸಬೇಕು ಅಥವಾ ಶಾಶ್ವತವಾಗಿ ಶರಣಾಗಬೇಕು. ಈ ಆಯ್ಕೆ ಜನರಿಗೇ ಬಿಟ್ಟಿದ್ದು.
Comments
Post a Comment