ಬಾಂಗ್ಲಾದೇಶ ಎಲ್ಲ ಮತಧರ್ಮೀಯರಿಗೂ ಸೇರಿದ್ದು ಎಂದು ಸಾರಿದ ಸೇನಾ ಮುಖ್ಯಸ್ಥ ವಾಕರ್ ಉಜ್ ಝಮಾನ್
ಪರಂಪರೆಯಿಂದ ಭಿನ್ನವಾದ ಬಾಂಗ್ಲಾದೇಶದ ನಡೆ
ಬಾಂಗ್ಲಾದೇಶದ ಅಲ್ಪಸಂಖ್ಯಾತರು ಸೇನಾ ಮುಖ್ಯಸ್ಥರ ಮಾತುಗಳನ್ನಷ್ಟೆ ನಂಬುವುದಿಲ್ಲ ಎನ್ನುವುದೂ ವಾಸ್ತವ.
ಕಳೆದ ವರ್ಷ ಸಂಭವಿಸಿದ ಹಿಂದೂ ವಿರೋಧಿ ಗಲಭೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನಾಡಳಿತದ ಮೂರೂ ವಲಯದ ಮುಖ್ಯಸ್ಥರು ಢಾಕಾದಲ್ಲಿರುವ ಧಾಕೇಶ್ವರಿ ದೇವಾಲಯದ ಜನ್ಮಾಷ್ಟಮಿ ಆಚರಣೆಯಲ್ಲಿ ಹಾಜರಿದ್ದುದು, ಉದ್ದೇಶಪೂರಿತವಾಗಿ ಬಹುತ್ವದ ಸಂದೇಶವನ್ನು ಸಾರುವ ಪ್ರಯತ್ನವಾಗಿದೆ, ಆದರೆ ಪರೀಕ್ಷೆ ಇರುವುದು ಅನುಷ್ಠಾನದಲ್ಲಿ.
ಬಾಂಗ್ಲಾದೇಶದ ಹಿಂದೂ ಸಮುದಾಯವು ಒಂದು ಭಯಭೀತ ವಾತಾವರಣದಲ್ಲಿ ಬದುಕುತ್ತಿದೆ. ಆಗಸ್ಟ್ 2024ರಲ್ಲಿ ನಡೆದ ರಾಜಕೀಯ ಪಲ್ಲಟಗಳು ಹಿಂದೂಗಳ ಮೇಲೆ ಭಾರಿ ದಾಳಿಗಳಿಗೆ ಕಾರಣವಾಗಿದ್ದು, ದೇವಾಲಯಗಳನ್ನು ಭಸ್ಮಮಾಡಲಾಗಿತ್ತು, ಮನೆಗಳನ್ನು ಲೂಟಿ ಮಾಡಲಾಗಿತ್ತು, ಕುಟುಂಬಗಳು ಪರಾರಿಯಾಗಬೇಕಾಯಿತು. ಅನೇಕರಿಗೆ ಇದು, ಪ್ರಭುತ್ವವು ತಪ್ಪು ಹೆಜ್ಜೆ ಇರಿಸಿದಾಗ, ಅಲ್ಪಸಂಖ್ಯಾತರು ದುಬಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದರ ಸಾಕ್ಷಿಯಾಗಿ ಕಂಡಿತ್ತು.
ಈ ದೃಷ್ಟಿಯಿಂದಲೇ ಆಗಸ್ಟ್ 16, 2025ರಂದು ಢಾಕಾದ ಧಾಕೇಶ್ವರಿ ರಾಷ್ಟ್ರೀಯ ದೇವಸ್ಥಾನದಲ್ಲಿ ನಡೆದ ಬೆಳವಣಿಗೆ ಗಮನ ಸೆಳೆಯುತ್ತದೆ. ಮೊಟ್ಟಮೊದಲ ಬಾರಿಗೆ ಸೇನೆ, ನೌಕಾದಳ ಮತ್ತು ವಾಯುದಳದ ಸೇನಾ ಮುಖ್ಯಸ್ಥರು ಒಟ್ಟಿಗೆ ಕುಳಿತು, ಜನ್ಮಾಷ್ಟಮಿ ಉತ್ಸವವನ್ನು ವೀಕ್ಷಿಸಿದ್ದಾರೆ. ಈ ವರ್ತನೆಯು ಅಧಿಪತ್ಯದ ಅಥವಾ ಅನುಮಾನ ಸೃಷ್ಟಿಸುವ ನಡೆಯಾಗಿ ಕಾಣುವುದಿಲ್ಲ. ಬದಲಾಗಿ ಈ ಉತ್ಸವದಲ್ಲಿ ಭಾಗಿಯಾಗುವ ಮೂಲಕ ಪ್ರಮುಖ ಸಂದೇಶವನ್ನು ಸಾರುತ್ತದೆ. ಸೇನಾ ಮುಖ್ಯಸ್ಥರಾದ ವಾಕರ್ ಉಜ್ ಝಮಾನ್ ಬಾಂಗ್ಲಾದೇಶ ಪ್ರತಿಯೊಬ್ಬರಿಗೂ ಸೇರಿದೆ ಎಂಬ ಸಂದೇಶವನ್ನು ನೀಡಿದ್ದರೆ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ನಜ್ಮುಲ್ ಹಸನ್ ಈ ಹಬ್ಬವನ್ನು `ಶಾಂತಿಯ ಉತ್ಸವ' ಎಂದು ಬಣ್ಣಿಸಿದ್ದಾರೆ. ವಾಯು ಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಹಸನ್ ಮಹಮೂದ್ ಖಾನ್ ಅವರು ಬಹುತ್ವದ ಹಿನ್ನೆಲೆ ಮತ್ತು ಐಕ್ಯತೆಯನ್ನು ಸಾರುವ ಬದುಕಿನ ಹೆಜ್ಜೆಗಳನ್ನು ಸ್ಮರಿಸಿದ್ದಾರೆ.
ಇದು ಸಣ್ಣ ಪ್ರಮಾಣದ ತೋರ್ಪಡಿಕೆಯ ನಡೆ ಅಲ್ಲ. ಬದಲಾಗಿ ಉದ್ದೇಶಪೂರ್ವಕವಾಗಿ, ದೇಶದ ಅಲ್ಪಸಂಖ್ಯಾತರಿಗೆ ಮತ್ತು ಹೊರ ಜಗತ್ತಿಗೆ ನೀಡುವ ಸಂದೇಶವಾಗಿದ್ದು, ದೇಶದ ಅತಿ ಪ್ರಬಲ ಸಂಸ್ಥೆಯು ಕೋಮು ದ್ವೇಷದ ಅನುಪಯುಕ್ತತೆಯನ್ನು ಗುರುತಿಸುವ ರೀತಿಯಲ್ಲಿ ಮಾತನಾಡಿದ್ದಾರೆ. 2024ರ ಹಿಂಸಾತ್ಮಕ ಘಟನೆಗಳ ನಂತರದಲ್ಲಿ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಮತ್ತು ಮಧ್ಯಂತರ ಸರ್ಕಾರವು, ಮುಹಮ್ಮದ್ ಯೂನುಸ್ ಅವರ ನೇತೃತ್ವದಲ್ಲಿ ಬಾಂಗ್ಲಾದೇಶದ ಒಳಗೊಳ್ಳುವ (ಇನ್‍ಕ್ಲೂಸಿವ್) ಧೋರಣೆಯನ್ನು ಬಿಂಬಿಸಲು ಯತ್ನಿಸಿದ್ದಾರೆ. ಇಲ್ಲಿ ಉದ್ದೇಶವೂ ಸ್ಪಷ್ಟವಾಗಿದ್ದು, ದ್ವೇಷ ಮತ್ತು ಅಸೂಯೆಯಿಂದ ಆವೃತ್ತವಾದ ಸಮಾಜವೊಂದು ಆರ್ಥಿಕ ಪ್ರಗತಿಯ ಸ್ಥಿರತೆಯನ್ನು ಕಾಪಾಡಲಾಗುವುದಿಲ್ಲ ಅಥವಾ ಭಾರತದೊಡನೆ ಉತ್ತಮ ಸಂಬಂಧಗಳನ್ನು ಮುಂದುವರೆಸಲು ನೆರವಾಗುವುದಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.
ಆದರೂ ಅಲ್ಪಸಂಖ್ಯಾತರು ಈ ಮಾತುಗಳನ್ನಷ್ಟೆ ನಂಬುವುದಿಲ್ಲ ಎನ್ನುವುದೂ ವಾಸ್ತವ. ನಿಜವಾದ ಪರೀಕ್ಷೆ ಇರುವುದು ದೇಶಾದ್ಯಂತ ಹಿಂದೂ ಕುಟುಂಬಗಳು ತಮ್ಮ ಧಾರ್ಮಿಕ ಆಚರಣೆಗಳಲ್ಲಿ ತೊಡಗಿ, ನಿರ್ಭೀತಿಯಿಂದ ಬದುಕುವಲ್ಲಿ. ಆದರೂ ಸೇನಾ ಮುಖ್ಯಸ್ಥರು ಜನ್ಮಾಷ್ಟಮಿ ಆಚರಣೆಯಲ್ಲಿ ಒಟ್ಟಿಗೆ ಹಾಜರಿದ್ದುದು ದೇಶದ ರಾಜಕಾರಣದ ಒಂದು ತಿರುವು ಎನ್ನಬಹುದು. ಎಷ್ಟೇ ದುರ್ಬಲವಾಗಿ ಕಂಡರೂ ಇದು ಒಂದು ಸುರಕ್ಷಿತವಾದ, ಬಹುತ್ವದ ಬಾಂಗ್ಲಾದೇಶದ ಚಿತ್ರಣವನ್ನು ನೀಡುತ್ತದೆ.
Comments
Post a Comment