ಭೂ ಒತ್ತುವರಿ, ಸರ್ಕಾರಗಳು ಮತ್ತು ರಿಯಲ್ ಎಸ್ಟೇಟ್ ನಂಟು
ನ್ಯಾಯಾಲಯವು ಸ್ಪಷ್ಟವಾದ ಲಕ್ಷ್ಮಣರೇಖೆಯನ್ನು ಎಳೆದಿದೆ. ರಾಜ್ಯ ಸರ್ಕಾರಕ್ಕೆ ಇದನ್ನು ಪರಿಪಾಲಿಸುವ ಧೈರ್ಯ ಇದೆಯೇ ಎನ್ನುವುದು ಪ್ರಶ್ನೆ
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ 51 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯ ಹೈಕೋರ್ಟ್ ಆದೇಶ ನೀಡಿರುವುದು, ರಾಜ್ಯದ ಭೂಮಿ ಮತ್ತು ಅಭಿವೃದ್ಧಿ ರಾಜಕಾರಣದ ನಡುವೆ ಇರುವ ಮೈತ್ರಿಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. 1,000 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಈ ಭೂಮಿಯಲ್ಲಿ ಈಗಾಗಲೇ 700 ವಸತಿ ನಿವೇಶನಗಳಿಗಾಗಿ ಅಗೆಯಲಾಗಿದ್ದು, `ಸೆಂಚುರಿ ಸ್ಪೋಟ್ರ್ಸ್ ವಿಲೇಜ್' ಹೆಸರಿನಲ್ಲಿ ತಲೆ ಎತ್ತಲಿದೆ. ಈ ಬೆಳವಣಿಗೆಯು ಕಾನೂನುಬಾಹಿರ ಒತ್ತುವರಿ ಪ್ರಕ್ರಿಯೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಪ್ರಭಾವ ಎರಡನ್ನೂ ಸೂಚಿಸುತ್ತದೆ.
ಅರ್ಜಿದಾರರ ಕಾರ್ಯತಂತ್ರ ನಿರೀಕ್ಷಿತವೇ ಆಗಿತ್ತು. ಅರಣ್ಯ ಇಲಾಖೆಯ ನೋಟಿಸ್‍ಗಳಿಗೆ ಪ್ರತಿಯಾಗಿ ತಾವು ನೋಟಿಸ್ ಜಾರಿ ಮಾಡುವುದು, ಎರಡು ದಶಕಗಳಿಗೂ ಹಳೆಯ ದಿನಾಂಕದ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಉಲ್ಲೇಖಿಸುವುದು ಮತ್ತು ನ್ಯಾಯಯುತ ಕ್ರಮದ ನೆಪದಲ್ಲಿ ಒತ್ತುವರಿ ಭೂಮಿಯನ್ನು ಕಬಳಿಸುವುದು. ನ್ಯಾಯಾಂಗವು ಈ ಕಬ್ಬಿಣದ ಪರದೆಯನ್ನು ಭೇದಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದು, ಕರ್ನಾಟಕ ಅರಣ್ಯ ಕಾಯ್ದೆ 1963ರ ಅಡಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನ್ಯಾಯಾಲಯದ ಈ ಆದೇಶವು ಕಾನೂನುಗಳನ್ನು ಸರಿಯಾಗಿ ಅನ್ವಯಿಸಿ ಜಾರಿಗೊಳಿಸಿದರೆ, ಭೂ ಕಬಳಿಕೆದಾರ ವಿರುದ್ಧ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಸಾಬೀತುಪಡಿಸಿದೆ.
ಆದರೆ ಇಲ್ಲಿ ಪ್ರಮುಖವಾದ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಇಂತಹ ಉನ್ನತ ಮೌಲ್ಯದ ವಲಯದಲ್ಲಿ ಅರಣ್ಯ ಭೂಮಿಯು ಸರ್ಕಾರದ ರಕ್ಷಣಾ ಕವಚವನ್ನು ಭೇದಿಸಿಕೊಂಡು ಹೇಗೆ ಹೊರಹೋಯಿತು ಎನ್ನುವುದು. ಈ ದೀರ್ಘ ಅವಧಿಯಲ್ಲಿ ಭೂಮಿಯನ್ನು ಮಾರಾಟ ಮಾಡಿ, ವಸತಿ ನಿವೇಶನಗಳಾಗಿ ಪರಿವರ್ತಿಸಲು ಹೇಗೆ ಸಾಧ್ಯವಾಯಿತು? ಹಲವು ವ್ಯಕ್ತಿಗಳ ಶಾಮೀಲು, ಸಹಭಾಗಿತ್ವ ಉದ್ದಿಮೆಗಳ, ಕಾಪೆರ್Çೀರೇಟ್‍ಗಳ ಒಪ್ಪಂದಗಳು ಹಣೆಯುವ ಜಾಲವನ್ನು ಗಮನಿಸಿದಾಗ, ಅಲ್ಲಿ ರಾಜಕೀಯ ಪೆÇ್ರೀತ್ಸಾಹ, ಅಧಿಕಾರಶಾಹಿಯ ನಿಷ್ಕಾಳಜಿ, ರಿಯಲ್ ಎಸ್ಟೇಟ್ ಉದ್ದಿಮೆಯ ಸಟ್ಟಾ ಬಜಾರ್ ಹಿತಾಸಕ್ತಿಗಳು ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಒತ್ತುವರಿಯ ಪ್ರಮಾಣವೂ ಸಹ, 700 ನಿವೇಶನಗಳು ಕಡಿಮೆ ಸಂಖ್ಯೆಯೇನಲ್ಲ, ವ್ಯವಸ್ಥೆಯ ಹೊಂದಾಣಿಕೆಯನ್ನೇ ಬಿಂಬಿಸುತ್ತದೆ.
ಈ ಪ್ರಕರಣವು ಬೆಂಗಳೂರು ನಗರದ ವಿಸ್ತೀರ್ಣದ ಬಗ್ಗೆ ಒಂದು ನೇರ ಸುಳಿವು ನೀಡುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ದೇವನಹಳ್ಳಿ ತಾಲ್ಲೂಕು ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಿಗೆ ಚಿನ್ನದ ಗಣಿಯಾಗಿ ಪರಿಣಮಿಸಿದೆ. ಅರಣ್ಯ ಮತ್ತು ಕೃಷಿ ಭೂಮಿಯು ನಿರಂತರ ಒತ್ತಡದಲ್ಲಿ ಸಿಲುಕಿದ್ದು, ಪರಿಸರದ ಕಾಳಜಿ, ಕಾನೂನಿನ ಕಟ್ಟಳೆಗಳನ್ನೂ ಲೆಕ್ಕಿಸದೆ ವ್ಯವಹಾರ ನಡೆಸಲಾಗುತ್ತಿದೆ. ಸೆಂಚುರಿ ಸ್ಪೋಟ್ರ್ಸ್ ವಿಲೇಜ್ ಪ್ರಕರಣವು ಈ ಪರಿವರ್ತನೆಯ ಒಂದು ಸಂಕೇತವಾಗಿದ್ದು, ನಿಸರ್ಗವನ್ನು ಸಟ್ಟಾ ಬಜಾರಿನ ಬಲಿಪೀಠದಲ್ಲಿಡುವ ಪಿತೂರಿಯಾಗಿ, ಭೂಮಿಯನ್ನು ಸದ್ದಿಲ್ಲದೆ ಖಾಸಗಿ ಕೋಟೆಗಳನ್ನಾಗಿ ಮಾಡುವ ಹುನ್ನಾರವಾಗಿ ಕಾಣುತ್ತದೆ.
ಹೈಕೋರ್ಟ್ ನಿರ್ದೇಶನವು ಕಾನೂನು ಆದೇಶವನ್ನೂ ಮೀರಿರುವುದಾಗಿದೆ. ಇದು ರಾಜ್ಯ ಸರ್ಕಾರದ ರಾಜಕೀಯ ಬದ್ಧತೆಯ ಅಗ್ನಿಪರೀಕ್ಷೆಯಾಗಿದೆ. 1000 ಕೋಟಿ ರೂ ಮೌಲ್ಯದ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲು ಆದೇಶಿಸಲಾಗಿದ್ದು, ಇದನ್ನು ಜಾರಿಗೊಳಿಸುವುದು ಸುಲಭವಲ್ಲ. ಪ್ರಬಲ ಹಿತಾಸಕ್ತಿಗಳು ಭಾಗಿದಾರರಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರವು ಧೈರ್ಯದಿಂದ ನಡೆದುಕೊಳ್ಳುವುದೋ ಅಥವಾ ಈ ನ್ಯಾಯಾಲಯದ ಆದೇಶ ಮತ್ತೊಮ್ಮೆ ಹಾಳೆಗಳಲ್ಲೇ ಉಳಿದುಬಿಡುವುದೋ ಅಥವಾ ರಾಜಕೀಯ ಅನಿವಾರ್ಯತೆಯ ಅಡಿಯಲ್ಲಿ ಮುಚ್ಚಿಹಾಕಲಾಗುವುದೋ ಕಾದು ನೋಡಬೇಕಿದೆ.
ಅಂತಿಮವಾಗಿ, ಈ ವಿಷಯವು ಒಂದು ಪ್ರದೇಶದ ಒತ್ತುವರಿಗೆ ಸಂಬಂಧಿಸಿರುವುದಲ್ಲ, ಬದಲಾಗಿ ಒಂದು ಪೂರ್ವನಿದರ್ಶನವಾಗಿ ಪರಿಣಮಿಸುತ್ತದೆ. ಅರಣ್ಯ ಭೂಮಿಗಳನ್ನು ಕಾನೂನು ಭಯವಿಲ್ಲದೆ ಉಲ್ಲಂಘಿಸಿ ಭೂಆಕ್ರಮಣ ಮಾಡುವುದಾದರೆ, ಬೆಂಗಳೂರು ಸುತ್ತಮುತ್ತಲಿನ ಹಸಿರು ವೃತ್ತವೇ ಕಣ್ಮರೆಯಾಗುತ್ತದೆ. ನ್ಯಾಯಾಲಯವು ಸ್ಪಷ್ಟವಾದ ಲಕ್ಷ್ಮಣರೇಖೆಯನ್ನು ಎಳೆದಿದೆ. ರಾಜ್ಯ ಸರ್ಕಾರಕ್ಕೆ ಇದನ್ನು ಪರಿಪಾಲಿಸುವ ಧೈರ್ಯ ಇದೆಯೇ ಎನ್ನುವುದೇ ಪ್ರಶ್ನೆ.
Comments
Post a Comment