ನ್ಯಾಯ, ಸಂಸ್ಕøತಿ ಎರಡಕ್ಕೂ ಬೆನ್ನು ಹಾಕಿ ನಿಂತ ಬಿಜೆಪಿ
ಬಿಜೆಪಿ ಹಿಂದೂ ಹಿತಾಸಕ್ತಿಗಳನ್ನು ಕಾಪಾಡುವ ನ್ಯಾಯಯುತ ಹಕ್ಕನ್ನು ಸಹಜವಾಗಿ ಕಳೆದುಕೊಂಡಿದೆ.
ಬಿಜೆಪಿ ಬೆಳೆಯುವುದು ರಚನಾತ್ಮಕ ರಾಜಕಾರಣವನ್ನು ಅವಲಂಬಿಸಿ ಅಲ್ಲ ಬದಲಾಗಿ, ತನ್ನ ಕೋಮು ದ್ವೇಷದ ಸಾಧನಗಳನ್ನು ಚಾಲನೆಯಲ್ಲಿರಿಸಿ ವಿಭಜನೆಗಳನ್ನು ಸೃಷ್ಟಿಸುವುದರ ಮೂಲಕ. ಪಕ್ಷದ ಇತ್ತೀಚಿನ ಆಕ್ರೋಶ ಕರ್ನಾಟಕ ಸರ್ಕಾರ ಅಂತಾರಾಷ್ಟ್ರೀಯ ಮನ್ನಣೆ ಪಡೆದ, ಕನ್ನಡದ ಸಾಹಿತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಭಾಟನೆಗೆ ಆಹ್ವಾನಿಸಿದ್ದರ ವಿರುದ್ಧ ವ್ಯಕ್ತವಾಗಿದೆ. ಬಿಜೆಪಿಯ ಏಕೈಕ ಆಕ್ಷೇಪ ಎಂದರೆ ಆಕೆ ಮುಸ್ಲಿಂ ಎನ್ನುವುದು. ದೇಶವನ್ನು ಮುನ್ನಡೆಸುವ ಆಕಾಂಕ್ಷೆ ಹೊತ್ತಿರುವ ಪಕ್ಷವು ಇಂತಹ ನಿಲುವು ತಳೆಯುವುದು ನಾಚಿಕೆಗೇಡಿನ ವಿಚಾರ.
ಬಾನು ಮುಷ್ತಾಕ್ ಅಹಿತಕರ ಸತ್ಯಗಳನ್ನು ನುಡಿಯುವುದರಲ್ಲಿ ಅಪರಿಚಿತರೇನಲ್ಲ. ಆಕೆ ತನ್ನ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ದಿಗೊಳಿಸಿರುವುದೇ ಅಲ್ಲದೆ ವಿಶ್ವ ಮಾನ್ಯತೆ ಪಡೆದಿದ್ದಾರೆ. ನಿರಂತರವಾಗಿ ಧಾರ್ಮಿಕ ಮತಾಂಧತೆಯನ್ನು, ತಮ್ಮ ಸಮುದಾಯದ ಒಳಗೂ ಸಹ, ವಿರೋಧಿಸಿಕೊಂಡು ಬಂದಿರುವ ಬಾನು ಮುಷ್ತಾಕ್ ಗಾಢವಾದ ಜಾತ್ಯತೀತ ಮೌಲ್ಯಗಳ ಬದುಕನ್ನು ಸಾಗಿಸುತ್ತಿದ್ದಾರೆ. ಆಕೆಯ ಆಯ್ಕೆ ಕೇವಲ ಸಾಂಕೇತಿಕವಾಗಿರದೆ, ಆಕೆಯು ಕರ್ನಾಟಕದ ಸಾಂಸ್ಕøತಿಕ, ಬೌದ್ಧಿಕ ಪರಂಪರೆಯ ಅತ್ಯುತ್ತಮ ಸಂಕೇತವಾಗಿದ್ದಾರೆ. ಆಕೆಯನ್ನು ಕೇವಲ ಧಾರ್ಮಿಕ ಅಸ್ಮಿತೆಗೆ ಸೀಮಿತಗೊಳಿಸುವ ಮೂಲಕ ಬಿಜೆಪಿ ತನ್ನ ಸಂಕುಚಿತ ಹಿಂದುತ್ವದ ದೃಷ್ಟಿಯಲ್ಲಿ ವಿಶಾಲ ದೃಷ್ಟಿಕೋನ ಇಲ್ಲದಿರುವುದನ್ನು ಸಾಬೀತುಪಡಿಸಿದೆ.
ಬಿಜೆಪಿಯ ಕೋಮುವಾದಿ ಹೇಳಿಕೆಯು ಠೊಳ್ಳು ಎನ್ನುವುದನ್ನು ಇತ್ತೀಚೆಗೆ ಹಿಂದೂಗಳೇ ಸಹಿಸಲಾರದಷ್ಟು ಅಪರಾಧಗಳಿಗೆ ಬಲಿಯಾಗಿರುವುದರಲ್ಲಿ ಕಾಣಬಹುದು. ನೂರಾರು ಹಿಂದೂ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿ, ಹತ್ಯೆಗೀಡಾಗಿರುವ ಧರ್ಮಸ್ಥಳದಲ್ಲಿ ಬಿಜೆಪಿ ಸಂತ್ರಸ್ತರೊಡನೆ, ಅವರ ಕುಟುಂಬದವರೊಡನೆ ನಿಲ್ಲುವುದರ ಬದಲು ಅಪರಾಧಿಗಳನ್ನು ರಕ್ಷಿಸುವವರ ಪರ ವಹಿಸಿರುವುದು ಪಕ್ಷದ ಠಕ್ಕುತನವನ್ನು ತೋರಿಸುತ್ತದೆ. ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಯಾತ್ರೆಗಳನ್ನು ಕೈಗೊಳ್ಳುತ್ತಿರುವುದು ದಮನಿತರ ಪರವಾದ ದನಿಯಾಗಿ ಅಲ್ಲ, ಬದಲಾಗಿ ದಮನಕಾರರನ್ನು ಬೆಂಬಲಿಸುವ ನಾಚಿಕೆಗೇಡಿನ ಉದ್ದೇಶದಿಂದ. ಹಿಂದೂ ಘನತೆಯನ್ನು ಕಾಪಾಡಲು ಸಂಕಲ್ಪ ಮಾಡುವ ಪಕ್ಷದ ವರ್ತನೆ ಹೀಗಿರಲು ಸಾಧ್ಯವಿಲ್ಲ. ಪಕ್ಷದ ಧೋರಣೆಯನ್ನು ಗಮನಿಸಿದರೆ, ರಾಜಕೀಯ ಲಾಭಕ್ಕಾಗಿ, ತನ್ನದೇ ಜನರಿಗೆ ದ್ರೋಹ ಬಗೆಯಲು ಹಿಂಜರಿಯದ ನೀತಿ ಅನುಸರಿಸುವಂತೆ ಕಾಣುತ್ತದೆ.
ಈ ರೀತಿಯ ವರ್ತನೆಯಿಂದ ಬಿಜೆಪಿ ಹಿಂದೂ ಹಿತಾಸಕ್ತಿಗಳನ್ನು ಕಾಪಾಡುವ ನ್ಯಾಯಯುತ ಹಕ್ಕನ್ನು ಸಹಜವಾಗಿ ಕಳೆದುಕೊಂಡಿದೆ. ಬಿಜೆಪಿಯ ಹಿಂದುತ್ವ ಹಿಂದೂಗಳ ರಕ್ಷಣೆಗಾಗಿ ಅಲ್ಲ ಅಥವಾ ನ್ಯಾಯವನ್ನು ಎತ್ತಿಹಿಡಿಯಲು ಅಲ್ಲ. ಅದೊಂದು ಅನುಕೂಲಸಿಂಧು ಸಾಧನವಾಗಿದ್ದು ಪಕ್ಷದ ಅಧಿಕಾರ ದಾಹವನ್ನು ನೀಗಿಸಲು ಬಳಸುವ ಅಥವಾ ಬಿಸಾಡುವ ಉಪಕರಣವಾಗಿದೆ. ಸಂರಕ್ಷಿತ ಹಿತಾಸಕ್ತಿಗಳ ನಿಜ ಬಣ್ಣ ಬಯಲಾದಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ಈ ಠಕ್ಕುತನ ಎದ್ದು ಕಾಣುವಂತಿದೆ. ಹಿಂದೂ ಸಂತ್ರಸ್ತರ ಮೇಲೆ ನಡೆದ ಸಮೂಹ ಅಪರಾಧಗಳನ್ನು ನಿರ್ಲಕ್ಷಿಸುವ ಪಕ್ಷವೇ ಈಗ ಹಿಂದೂ ಪ್ರಜ್ಞೆಯನ್ನು ಕಂಡುಕೊಂಡಿರುವುದು, ಮುಸ್ಲಿಂ ವ್ಯಕ್ತಿಯನ್ನು ನಾಡಹಬ್ಬ ಉದ್ಘಾಟಿಸಲು ಆಹ್ವಾನಿಸಿದಾಗ.
ಕರ್ನಾಟಕದ ಜನತೆ ಈ ದ್ವಂದ್ವ ನೀತಿಗೆ ಕುರುಡಾಗಿಲ್ಲ. ಕಡಬ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಪರಾಭವಗೊಂಡಿರುವುದು, ಮತದಾರರು ಪಕ್ಷದ ಅಪರಾಧಿಗಳ ಪರ ಮೈತ್ರಿಯನ್ನು ಗುರುತಿಸಿರುವುದರ ಸಂಕೇತವಾಗಿದೆ. ಗೌರವ ಸಂಪಾದಿಸುವ ಬದಲು ಬಿಜೆಪಿಯ ವರ್ತನೆ ಜಿಗುಪ್ಸೆ ಮೂಡಿಸಿದೆ. ಇದು ಜನರನ್ನೂ ತೃಪ್ತಿಪಡಿಸುವುದಿಲ್ಲ ಅಥವಾ ಅನೇಕರು ಹೇಳುವಂತೆ ಪ್ರತಿ ಹೆಜ್ಜೆಯಲ್ಲೂ ಪಕ್ಷವು ಉದ್ಘರಿಸುವ ದೇವರನ್ನೂ ಮೆಚ್ಚಿಸುವುದಿಲ್ಲ.
ಅಂತಿಮವಾಗಿ ಇಲ್ಲಿ ವಿರೋಧಾಭಾಸವು ಎದ್ದು ಕಾಣುವಂತಿದೆ. ಒಂದೆಡೆ ಸಮಾಜವು ಬಾನು ಮುಷ್ತಾಕ್ ಅವರೊಡನೆ ನಿಲ್ಲುತ್ತದೆ. ಕರ್ನಾಟಕಕ್ಕೆ ತಮ್ಮ ಸಾಹಿತ್ಯ ಮತ್ತು ದಿಟ್ಟ ಬರಹದಿಂದ ಗೌರವ ತಂದುಕೊಟ್ಟಿರುವ ಸಾಹಿತಿಯೊಡನೆ ನಿಲ್ಲುತ್ತದೆ. ಮತ್ತೊಂದು ಸಮಾಜವು, ರಾಜಕೀಯ ಪಕ್ಷವಾಗಿ ಸಂಸ್ಕøತಿಯನ್ನು ಕೋಮು ಲೆಕ್ಕಾಚಾರಗಳಿಗೆ ಸೀಮಿತಗೊಳಿಸಿ, ನ್ಯಾಯವನ್ನು ಚೌಕಾಸಿ ವಸ್ತುವನ್ನಾಗಿ ಮಾಡುತ್ತದೆ. ಬಾನು ಮುಷ್ತಾಕ್ ವಿರುದ್ಧ ಮುಸ್ಲಿಂ ವಿರೋಧಿ ಕೂಗು ಎಬ್ಬಿಸುತ್ತಲೇ ಮತ್ತೊಂದೆಡೆ ಧರ್ಮಸ್ಥಳದ ವಿಲನ್‍ಗಳನ್ನು ರಕ್ಷಿಸುವ ಮೂಲಕ ಬಿಜೆಪಿ ತನ್ನ ಗೋಸುಂಬೆ ರಾಜಕಾರಣವನ್ನು ಜಗಜ್ಜಾಹೀರುಗೊಳಿಸಿದೆ. ಇದು ಹಿಂದೂ ಗೌರವ, ನ್ಯಾಯ ಮತ್ತು ಸಂಸ್ಕøತಿಯನ್ನು ಪ್ರತಿನಿಧಿಸುವ ಬಣ್ಣ ಅಲ್ಲ. ವಂಚನೆ ಮತ್ತು ಅವಕಾಶವಾದದ ಬಣ್ಣಗಳು.
Comments
Post a Comment