ಧರ್ಮಸ್ಥಳದಲ್ಲಿ ಎಸ್‍ಐಟಿ ತನಿಖೆ ಸತ್ಯವನ್ನು ಹೂತುಹಾಕಲು ನಡೆಸಲಾಗುತ್ತಿದೆಯೇ?
ಪೊಲೀಸ್ ಅಧಿಕಾರಿ ಮಂಜುನಾಥ ಗೌಡನನ್ನು ಕೂಡಲೇ ಬಂಧನದಲ್ಲಿರಿಸಿ, ಈ ಪ್ರಕರಣದಲ್ಲಿ ಮುಂದೆ ಆತ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳದಂತೆ ನಿಬರ್ಂಧಿಸಬೇಕಿದೆ.
ಧರ್ಮಸ್ಥಳದಲ್ಲಿ ನಡೆದಿರುವ ಸಾಮೂಹಿಕ ದೌರ್ಜನ್ಯ ಮತ್ತು ಶವಗಳನ್ನು ಹೂತಿರುವ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಎಸ್‍ಐಟಿ ತಂಡಕ್ಕೆ ಇತ್ತೀಚಿನ ಕೆಲವು ವಿದ್ಯಮಾನ ಸವಾಲಿನ ಪ್ರಶ್ನೆಯಾಗಿದ್ದು ಅದರ ಉದ್ದೇಶದ ಬಗ್ಗೆಯೇ ಅನುಮಾನ ಶುರುವಾಗಿದೆ. ಸಾಕ್ಷಿ ದೂರುದಾರರನ್ನು ಪ್ರತಿನಿಧಿಸುವ ವಕೀಲರಾದ ಅನನ್ಯ ಗೌಡ, ಎಸ್‍ಐಟಿ ತಂಡದ ಒಬ್ಬ ಪೆÇಲೀಸ್ ಅಧಿಕಾರಿ, ಮಂಜುನಾಥ ಗೌಡ, ದೂರುದಾರರನ್ನು ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿರುವುದು, ತನಿಖೆ ಪ್ರಕ್ರಿಯೆಯನ್ನೇ ಪ್ರಶ್ನಾರ್ಹಗೊಳಿಸಿದೆ. ಈ ಘಟನೆಯು ಬೆಳ್ತಂಗಡಿಯ ಎಸ್‍ಐಟಿ ಕಚೇರಿಯಲ್ಲಿ ಆಗಸ್ಟ್1ರಂದು ನಡೆದಿದ್ದು, ಈ ಆರೋಪವು ನ್ಯಾಯಾಲಯದ ಅಧಿಕಾರಿಯಾದ ವಕೀಲರೊಬ್ಬರಿಂದಲೇ ಬಂದಿರುವುದರಿಂದ ಸುಲಭವಾಗಿ ಅಲ್ಲಗಳೆಯಲಾಗುವುದಿಲ್ಲ.
ಈ ಕುರಿತು ಎಸ್‍ಐಟಿಯನ್ನು ಸಂಪರ್ಕಿಸಿದಾಗ, ``ಈ ಆರೋಪವನ್ನು ಪರಿಶೀಲಿಸುತ್ತೇವೆ'' ಎಂದಷ್ಟೇ ಹೇಳಿದ್ದಾರೆ. ಇದು ಆರೋಪದ ಗಂಭೀರ ಸ್ವರೂಪದ ಹಿನ್ನೆಲೆಯಲ್ಲಿ ಅಸಮರ್ಪಕ ಪ್ರತಿಕ್ರಿಯೆಯಾಗಿ ಕಾಣುತ್ತದೆ. `ಸೌಜನ್ಯಕ್ಕೆ ನ್ಯಾಯ' ಹೋರಾಟದಲ್ಲಿ ಮಂಚೂಣಿಯಲ್ಲಿರುವ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟನವರ ಪ್ರಕಾರ ಕರಾವಳಿಯ ಹಲವೆಡೆ ಹಿಂದೆ ಪೋಸ್ಟಿಂಗ್‍ನಲ್ಲಿದ್ದ ಮಂಜುನಾಥ ಗೌಡ ಹಲವು ಬಾರಿ ದುರ್ವರ್ತನೆಗಾಗಿ ಸಸ್ಪೆಂಡ್ ಆಗಿದ್ದವರು ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಆಸ್ತಿ ಗುಡ್ಡೆ ಹಾಕಿಕೊಂಡವರು. ಈ ಆರೋಪವು ಗಂಭೀರವಾಗಿ ಕಾಣುವ ಕಾರಣವೆಂದರೆ, ಈ ಅಧಿಕಾರಿಯು ಎಸ್‍ಐಟಿ ತನಿಖೆಯ ಮಾಹಿತಿಗಳನ್ನು ಧರ್ಮಸ್ಥಳದ ಅತ್ಯಾಚಾರ-ಕೊಲೆ ಪ್ರಕರಣಗಳ ಪ್ರಮುಖ ಆರೋಪಿಗಳಿಗೆ ರವಾನಿಸುತ್ತಿರುವುದಾಗಿ ಹೇಳಲಾಗಿದ್ದು, ಇದಕ್ಕೆ ಪ್ರತಿಯಾಗಿ 10 ಕೋಟಿ ರೂ ಪಡೆದಿರುವುದಾಗಿಯೂ ಆರೋಪಿಸಲಾಗಿದೆ.
ಇದು ಸಾಮಾನ್ಯ ಲೋಪ ಎನಿಸುವುದಿಲ್ಲ. ಆರೋಪವು ಭಾಗಶಃ ಸತ್ಯವಾದರೂ, ಈ ಸುದ್ದಿಯು ಎಸ್‍ಐಟಿ ತಂಡದ ಹಾಗೂ ಕಾನೂನು ನಿಯಮಗಳ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಇಂತಹ ಆಂತರಿಕವಾಗಿ ಹಾದಿತಪ್ಪಿಸುವ ಕ್ರಮಗಳು ಇಡೀ ತನಿಖೆಯನ್ನು ಕೇವಲ ತೋರಿಕೆಯಾಗಿ ಮಾಡುತ್ತದೆ. ಮೇಲಾಗಿ ಮಂಜುನಾಥ ಗೌಡ ಅವರ ವಿರುದ್ಧ ಕ್ಷಿಪ್ರ ಗತಿಯಲ್ಲಿ, ಪಾರದರ್ಶಕವಾಗಿ ಕ್ರಮ ಕೈಗೊಳ್ಳುವುದರಲ್ಲಿ ವಿಳಂಬವಾಗುತ್ತಿರುವುದು, ಸಾರ್ವಜನಿಕರ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ. ಇದು ತನಿಖೆಯನ್ನು ಒಳಗಿನಿಂದಲೇ ಧ್ವಂಸಗೊಳಿಸುವ ಪ್ರಯತ್ನವಾಗಿ ಕಾಣುತ್ತದೆ.
ಹಾಗಾಗಿ ವಕೀಲರ ದೂರನ್ನು ಆಧರಿಸಿ ಎಸ್‍ಐಟಿ ಕೂಡಲೇ ಎಫ್‍ಐಆರ್ ದಾಖಲಿಸಬೇಕಿದೆ. ಮಂಜುನಾಥ ಗೌಡನನ್ನು ಕೂಡಲೇ ಬಂಧನದಲ್ಲಿರಿಸಿ, ಈ ಪ್ರಕರಣದಲ್ಲಿ ಮುಂದೆ ಆತ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳದಂತೆ ನಿಬರ್ಂಧಿಸಬೇಕಿದೆ. ಇಲ್ಲವಾದರೆ ಇದು ಕೇವಲ ಕಣ್ತಪ್ಪಿನ ಪ್ರಮಾದವಾಗಿ ಕಾಣದೆ, ಶಾಮೀಲಾಗುವಂತೆಯೇ ಕಾಣುತ್ತದೆ. ಎಸ್‍ಐಟಿ ದೂರುದಾರರಿಗೆ, ಸಂತ್ರಸ್ತರಿಗೆ, ಕರ್ನಾಟಕದ ಜನತೆಗೆ ಉತ್ತರದಾಯಿಯಾಗಿದ್ದು, ಯಾವುದೇ ರಾಜಿ ಇಲ್ಲದೆ ತನಿಖೆಯನ್ನು ನಡೆಸಬೇಕಿದೆ.
ಮತ್ತೊಂದು ಪ್ರಶ್ನೆಗಳನ್ನು ಇಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ಮೊದಲನೆಯದಾಗಿ ಮಂಜುನಾಥ್‍ಗೌಡ ಅವರನ್ನು ಎಸ್‍ಐಟಿಗೆ ನೇಮಕ ಮಾಡಿದ್ದೇಕೆ? ಈ ನಿರ್ಧಾರ ಕೈಗೊಂಡವರಿಗೆ ಆತನ ವಿವಾದಾಸ್ಪದ ಪೂರ್ವ ಇತಿಹಾಸ ತಿಳಿದಿರಲಿಲ್ಲವೇ? ಅಥವಾ ತನಿಖೆಯ ಫಲಿತಾಂಶವನ್ನು ತಿರುಚುವ ಸಲುವಾಗಿಯೇ ಉದ್ದೇಶಪೂರಿತವಾಗಿ ಈತನನ್ನು ನೇಮಿಸಲಾಯಿತೇ? ಈ ಪ್ರಶ್ನೆಗಳಿಗೆ ಗೃಹಸಚಿವರು ಉತ್ತರಿಸಬೇಕಿದೆ. ಮೌನ ವಹಿಸುವುದರಿಂದ, ಅನುಮಾನಗಳು ಮತ್ತಷ್ಟು ಬಲಗೊಳ್ಳುತ್ತವೆ, ಈ ಪ್ರಸಂಗದಲ್ಲಿ ಮೇಲೆ ಕಾಣುವುದಕ್ಕಿಂತಲೂ ಇನ್ನೂ ಹೆಚ್ಚಿನ ರಹಸ್ಯ ಅಡಗಿದೆ ಎಂಬ ಅಭಿಪ್ರಾಯ ದಟ್ಟವಾಗುತ್ತದೆ.
ಶವಗಳನ್ನು ಹೂತ 9 ಮತ್ತು 10ನೆಯ ಸ್ಥಳವನ್ನು ಶನಿವಾರ ಅಗೆಯಲಾಗಿದ್ದು, ಭಾರಿ ಮಳೆಯ ಹೊರತಾಗಿಯೂ ನಡೆಸಲಾಗಿದ್ದು, ಯಾವುದೇ ಮಾನವ ಅಸ್ತಿಪಂಜರಗಳು ಸಿಕ್ಕಿಲ್ಲ. ಇದು ಸಂತ್ರಸ್ತರ ಕುಟುಂಬಗಳಿಗೆ, ಸಾರ್ವಜನಿಕರ ನಿರೀಕ್ಷೆಗಳಿಗೆ ಹಿನ್ನಡೆ ಉಂಟುಮಾಡುತ್ತದೆ. ಇಂತಹ ವಾತಾವರಣದಲ್ಲಿ, ಸತ್ಯ ಸದಾ ದುರ್ಬಲವಾಗಿಯೆ ಇರುತ್ತದೆ. ಶಾಮೀಲಾಗುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು ವಿಳಂಬವಾದಷ್ಟೂ, ತನಿಖೆ ಪ್ರಕ್ರಿಯೆಯಲ್ಲಿ ಜನತೆಗೆ ಇರುವ ಅಲ್ಪ ಸ್ವಲ್ಪ ನಂಬಿಕೆ, ವಿಶ್ವಾಸಕ್ಕೂ ಧಕ್ಕೆ ಉಂಟಾಗುತ್ತದೆ.
ಇದು ಸಾಧಾರಣ ಪ್ರಕರಣವಲ್ಲ. ಧರ್ಮಸ್ಥಳದಲ್ಲಿ ಶವಗಳನ್ನು ಸಾಮೂಹಿಕವಾಗಿ ಹೂತುಹಾಕಿರುವ ಘಟನೆ ಕರ್ನಾಟಕದಾದ್ಯಂತ ಸಂಚಲನ ಮೂಡಿಸಿದೆ. ಸರ್ಕಾರ ಮತ್ತು ಎಸ್‍ಐಟಿ ಈ ತನಿಖೆಯ ವಿಶ್ವಾಸಾರ್ಹತೆಯನ್ನು ಗುರುತಿಸಬೇಕಿದೆ. ಮಂಜುನಾಥ್ ಗೌಡ ವಿರುದ್ಧ ಪ್ರಾಮಾಣಿಕವಾಗಿ, ಮುಕ್ತ ಕ್ರಮ ಕೈಗೊಳ್ಳುವುದು ಅವಶ್ಯವಷ್ಟೇ ಅಲ್ಲ, ಇದು ಕಡ್ಡಾಯವಾಗಿ ನಡೆಯಲೇಬೇಕಾದ ಒಂದು ಕ್ರಮ.

Comments
Post a Comment