ವೇದವಲ್ಲಿ ಪ್ರಕರಣ: ಧರ್ಮಸ್ಥಳದ ಅಂಧಕಾರದ ಜಗತ್ತು
ವೇದವಲ್ಲಿಗೆ ನ್ಯಾಯ ದೊರಕಿಸುವುದು ಕರ್ನಾಟಕದ ನೈತಿಕತೆಗೆ ಅಗ್ನಿಪರೀಕ್ಷೆಯಾಗುತ್ತದೆ.
ಕರ್ನಾಟಕದ ಸಾರ್ವಜನಿಕ ಪ್ರಜ್ಞೆಯಲ್ಲಿ ಅಚ್ಚಳಿಯದೆ ಉಳಿಯುವ ಒಂದು ಹೆಸರು ಎಂದರೆ ಧರ್ಮಸ್ಥಳದ ವೇದವಲ್ಲಿ. ಈಕೆಯ ಹೆಸರು ಕೇವಲ ಸಂತ್ರಸ್ತೆಯಾಗಿ ಮಾತ್ರವೇ ಅಲ್ಲದೆ, ಸಾಂಸ್ಥಿಕ ಅನ್ಯಾಯಗಳ ವಿರುದ್ಧ ದಿಟ್ಟವಾಗಿ ನಿಂತು ಹೋರಾಡಿದ ಅಪರೂಪದ ವ್ಯಕ್ತಿಯಾಗಿ, ಹಾಗೆಯೇ ತಮ್ಮ ದಿಟ್ಟತನಕ್ಕೆ ಪ್ರತಿಯಾಗಿ ಜೀವವನ್ನೇ ಬೆಲೆ ತೆತ್ತ ಕಾರಣಕ್ಕಾಗಿ ಉಳಿಯುತ್ತದೆ. 1979ರಲ್ಲಿ ಧರ್ಮಸ್ಥಳದ ಪವಿತ್ರ ಸ್ಥಾನದ ಸುತ್ತಲಿನಲ್ಲೇ ಆಕೆಯ ಮೇಲೆ ನಡೆದ ಅತ್ಯಾಚಾರ ಮತ್ತು ಭೀಕರ ಹತ್ಯೆಯು ಕೇವಲ ಒಂದು ಅಪರಾಧ ಮಾತ್ರವಲ್ಲ, ಅದು ಆಕೆಯ ಪ್ರಾಮಾಣಿಕತೆಗೆ ಬೆದರಿದ, ಆಕೆಯ ದಿಟ್ಟ ಪ್ರತಿರೋಧವನ್ನು ದ್ವೇಷಿಸಿದ ಬಲಾಢ್ಯರು ನೀಡಿದ ಒಂದು ಸಂದೇಶ.
ಧರ್ಮಸ್ಥಳದ ಆಡಳಿತದಲ್ಲಿ ನಡೆಯುತ್ತಿದ್ದ ಕಾಲೇಜು ಒಂದರಲ್ಲಿ ಶಿಕ್ಷಕಿಯಾಗಿದ್ದ ವೇದವಲ್ಲಿ ನೈತಿಕವಾಗಿ ಬಹಳ ಸ್ಪಷ್ಟತನವನ್ನು ಹೊಂದಿದ್ದರು. ಆಕೆಗೆ ಅರ್ಹತೆ ಇದ್ದರೂ ಬಡ್ತಿ ನೀಡದ ಆಡಳಿತ ಮಂಡಲಿಯ ವಿರುದ್ಧ ಆಕೆ ನ್ಯಾಯಾಲಯದಲ್ಲಿ ಫಿರ್ಯಾದು ಸಲ್ಲಿಸಿ ನ್ಯಾಯ ಕೋರಿದ್ದರು. ಆಕೆ ಗೆಲುವು ಸಾಧಿಸಿದ್ದೂ ಆಯಿತು. ಆದರೆ ನ್ಯಾಯ ವ್ಯವಸ್ಥೆಯಲ್ಲಿ ಗಳಿಸಿದ ವಿಜಯವನ್ನು, ಯಾವುದೇ ಪ್ರತಿರೋಧವನ್ನು ಸಹಿಸದ ಒಂದು ಅಧಿಕಾರ ಕೇಂದ್ರಕ್ಕೆ ಒಡ್ಡಿದ ಬೆದರಿಕೆ ಎಂದೇ ಭಾವಿಸಲಾಯಿತು. ವೇದವಲ್ಲಿ ಮಹಿಳೆಯಾಗಿದ್ದುದು ಮತ್ತೊಂದು ಪ್ರಬಲ ಕಾರಣವಾಗಿತ್ತು. ಹಲವು ದಿನಗಳ ನಂತರ ಅನುಮಾನಾಸ್ಪದ ರೀತಿಯಲ್ಲಿ ಆಕೆಯ ಸಜೀವ ದಹನವಾದ ಸುದ್ದಿ ಹರಡಿತ್ತು. ಆಕೆಯ ಪತಿ ಊರಲ್ಲಿರಲಿಲ್ಲ. ಸೂಕ್ತವಾದ ಮರಣೋತ್ತರ ಪರೀಕ್ಷೆಯನ್ನು ಮಾಡಲಿಲ್ಲ. ಪ್ರಾಮಾಣಿಕ ತನಿಖೆಯನ್ನೂ ನಡೆಸಲಿಲ್ಲ. ಇನ್ನೂ ದುರಂತ ಎಂದರೆ ಯಾವುದೇ ಆಕ್ರೋಶ ಎಲ್ಲಿಂದಲೂ ಪ್ರಕಟವಾಗಲಿಲ್ಲ. ಕೇವಲ ಮೌನ, ನಿರಾಕರಣೆ ಮತ್ತು ಶೀಘ್ರಗತಿಯಲ್ಲಿ ದಫನು ಮಾಡಿದ್ದಷ್ಟೇ ಕಂಡುಬಂದಿತ್ತು.
ವೇದವಲ್ಲಿಯ ಭೀಕರ ಪ್ರಕರಣವನ್ನು ಅದರ ದೈಹಿಕ ಕ್ರೌರ್ಯದಲ್ಲಿ ಮಾತ್ರ ನೋಡದೆ, ಉದ್ದೇಶಪೂರ್ವಕವಾಗಿ ಸತ್ಯವನ್ನು ನಾಶಪಡಿಸಿದ ಪ್ರಕ್ರಿಯೆಯಲ್ಲೂ ನೋಡಬೇಕಿದೆ. ಪೆÇಲೀಸರು ಒತ್ತಡಕ್ಕೆ ಮಣಿದು ಎಫ್‍ಐಆರ್ ದಾಖಲಿಸಲು ನಿರಾಕರಿಸಿದ್ದರು. ಶಂಕಿತರನ್ನು ಬಂಧಿಸಿ ಠಾಣೆಯಲ್ಲೇ ಪ್ರಶ್ನಿಸಲಿಲ್ಲ. ಫೆÇರೆನ್ಸಿಕ್ ಸಾಕ್ಷಿಗಳನ್ನು ನಾಶಪಡಿಸಲಾಯಿತು ಅಥವಾ ಸಂಗ್ರಹಿಸಲೇ ಇಲ್ಲ. ಕೆಲವು ಗುಸುಗುಸು ಸುದ್ದಿಗಳನ್ನು ಹೊರತುಪಡಿಸಿದರೆ, ಮಾಧ್ಯಮಗಳು ಮೌನ ವಹಿಸಿದ್ದವು. ರಾಜಕೀಯ ಪಕ್ಷಗಳು ಪ್ರಬಲ ಧಾರ್ಮಿಕ ಸಾಮ್ರಾಜ್ಯಕ್ಕೆ ಹೆದರಿ ಹೇಡಿಗಳಂತೆ ತಮ್ಮ ಪ್ರಜ್ಞೆಯನ್ನೇ ಒತ್ತೆ ಇಟ್ಟವು.
ಆಕೆ ಮಾಡಿದ ಅಪರಾಧವಾದರೂ ಏನು? ಧಾರ್ಮಿಕ ಪಾವಿತ್ರ್ಯತೆಯ ಮುಖವಾಡ ತೊಟ್ಟ ಬಲಾಢ್ಯ ಊಳಿಗಮಾನ್ಯ ಶಕ್ತಿಗಳ ಮುಂದೆ ಮಂಡಿಯೂರಲು ನಿರಾಕರಿಸಿದ್ದೇ? ವೇದವಲ್ಲಿ ಘೋಷಣೆಗಳನ್ನು ಹೊತ್ತ ಬಂಡಾಯ ವ್ಯಕ್ತಿಯಾಗಿರಲಿಲ್ಲ. ತನ್ನ ನೈಜ ಹಕ್ಕನ್ನು ಪಡೆದುಕೊಳ್ಳಲು ಹೋರಾಡಿದ ಸರಳ ಮಹಿಳೆಯಾಗಿದ್ದರು. ಆಕೆಯ ಹತ್ಯೆ ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ, ಅದು ನ್ಯಾಯವನ್ನು ಮುಚ್ಚಿಹಾಕುವ ಉದ್ದೇಶಪೂರ್ವಕ ಕ್ರಮಗಳ ಸರಣಿಯಲ್ಲಿ ಮೊದಲಿನದಾಗಿತ್ತು; ಮತ್ತು ಎಚ್ಚರಿಕೆಯೂ ಹೌದು.
ಆದಾಗ್ಯೂ ವೇದವಲ್ಲಿ ಅವರ ಕತೆಯು ವೈಯುಕ್ತಿಕ ದುರಂತ ಎನಿಸಿಕೊಳ್ಳುವುದಿಲ್ಲ. ಅದು ಒಂದು ಮಾದರಿಗೆ ಬುನಾದಿಯಾಗಿತ್ತು. ಮುಂದಿನ ನಾಲ್ಕು ದಶಕಗಳ ಕಾಲ ಧರ್ಮಸ್ಥಳದಲ್ಲಿ ಅನಾವರಣಗೊಳ್ಳಲಿದ್ದ ಒಂದು ಸನ್ನಿವೇಶದ ಪೂರ್ವನಿದರ್ಶನ ಚಿತ್ರಣವಾಗಿತ್ತು. ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಮತ್ತು ಈಗ ಬಹಿರಂಗವಾಗಿರುವ ಸಾಮೂಹಿಕ ಗೋರಿಗಳ ಚರಿತ್ರೆಗೆ ಮುನ್ನುಡಿಯಾಗಿತ್ತು. ಧರ್ಮಸ್ಥಳದ ಪಾವಿತ್ರ್ಯತೆ, ಔದಾರ್ಯ, ದೈವೀಕ ರೂಪ ಇವೆಲ್ಲವನ್ನೂ ವೇದವಲ್ಲಿಯ ಸಾವಿನ ಮೂಲಕ ನೋಡಿದಾಗ ಅದರ ಮತ್ತೊಂದು ಚಹರೆಯೂ ಮುಂದೆ ಬರುತ್ತದೆ. ಶಿಕ್ಷಾಭೀತಿ ಇಲ್ಲದಿರುವ, ಪಿತೃಪ್ರಧಾನತೆಯನ್ನು ಪೆÇೀಷಿಸುವ, ಬೆದರಿಕೆಯ ಮೂಲಕ ಮೌನಕ್ಕೆ ಶರಣಾಗಿಸುವ ಒಂದು ಚಹರೆ ಕಾಣುತ್ತದೆ.
ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ (ಎಸ್‍ಐಟಿ) ರಚಿಸಿ ಸಾಮೂಹಿಕ ಗೋರಿಗಳನ್ನು ಅಗೆಯುವ ಪ್ರಕ್ರಿಯೆ ಆರಂಭಿಸಿದ್ದು, ಧರ್ಮಸ್ಥಳದಲ್ಲಿ ಚಾರಿತ್ರಿಕವಾಗಿ ಗುರುತಿಸಬಹುದಾದ ಲೈಂಗಿಕ ದೌರ್ಜನ್ಯಗಳನ್ನು ನೆನೆಯುವಾಗ ವೇದವಲ್ಲಿಯ ಹೆಸರೂ ಮುನ್ನಲೆಗೆ ಬರುತ್ತದೆ. ಇದು ಗತಕಾಲದ ಪಳೆಯುಳಿಕೆಯಾಗಿ ಅಲ್ಲದೆ, ಮುಟ್ಟಲಾಗದ, ಹತ್ತಿರಕ್ಕೆ ಹೋಗಲಾಗದ ಶಕ್ತಿ ಕೇಂದ್ರದಲ್ಲಿ ಮೂಡಿದ ಮೊದಲ ಬಿರುಕಿನ ಸಂಕೇತವಾಗಿ ಕಾಣುತ್ತದೆ. 46 ವರ್ಷಗಳ ಕಾಲ ವಿಳಂಬವಾದ ನ್ಯಾಯವು ಈಗಲೂ ಪ್ರತಿಧ್ವನಿಸುತ್ತದೆ, ಸಮಾಜವು ಇದಕ್ಕಾಗಿ ದನಿ ಎತ್ತಬೇಕಷ್ಟೇ.
ಇದು ಕೇವಲ ಶಿಕ್ಷೆಯ ಪ್ರಶ್ನೆಯಾಗಿ ಉಳಿದಿಲ್ಲ. ಶರಣಾಗುವುದರ ಬದಲು ದಿಟ್ಟವಾಗಿ ಹೋರಾಡಿದ ಒಬ್ಬ ಮಹಿಳೆಯ, ದೂರುದಾರರ, ಮಾಹಿತಿದಾರರ ಮತ್ತು ಶಿಕ್ಷಕಿಯ ಘನತೆಯನ್ನು ಮರುಸ್ಥಾಪಿಸುವ ಒಂದು ಪ್ರಯತ್ನವಾಗಬೇಕು. ವೇದವಲ್ಲಿಗೆ ನ್ಯಾಯ ದೊರಕಿಸುವುದು ಕರ್ನಾಟಕದ ನೈತಿಕತೆಗೆ ಅಗ್ನಿಪರೀಕ್ಷೆಯಾಗುತ್ತದೆ. ಮತ್ತೊಮ್ಮೆ ವಿಫಲವಾಗುವುದು ಬೇಡ.

Comments
Post a Comment