ಧರ್ಮಸ್ಥಳದ ರೇಪ್ & ಮರ್ಡರ್ ಸರಣಿಗಳ ವಿಚಾರಣೆ ಸುಪ್ರೀಂ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ

ಈ ಪ್ರಮಾಣದ ಗಂಭೀರ ಪ್ರಕರಣದ ತನಿಖೆಯನ್ನು ಪ್ರಣವ್ ಮೊಹಂತಿ ಅವರಂತಹ ನಿಷ್ಪಕ್ಷಪಾತತೆಗೆ ಹೆಸರಾದ, ದಿಟ್ಟತನ ಮತ್ತು ಶೋಧನೆಯ ಕಾರ್ಯದಲ್ಲಿ ಯಾವುದೇ ರಾಜಿಯಾಗದ  ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮುಂದಾಳತ್ವದಲ್ಲಿ ನಡೆಸಬೇಕು.


ಅಲ್ಲಲ್ಲಿ ಕೇಳಿಬರುವ ಗಾಳಿ ಸುದ್ದಿಗಳ ಹಾಗೆ ಆರಂಭವಾದ ಒಂದು ಗಂಭೀರ ವಿಷಯವು ಈಗ ಪೂರ್ಣಪ್ರಮಾಣದಲ್ಲಿ ಮೌಲ್ಯ ಹಾಗೂ ಕಾನೂನಾತ್ಮಕ ಬಿಕ್ಕಟ್ಟು ಸೃಷ್ಟಿಸುವ ವಿದ್ಯಮಾನಗಳಾಗಿ ಪರಿಣಮಿಸಿವೆ. ಶತಮಾನಗಳಿಂದ ಪವಿತ್ರ ಹಾಗೂ ಆಧ್ಯಾತ್ಮಿಕ ಔದಾರ್ಯದ ಕೇಂದ್ರ ಎಂದೇ ಗುರುತಿಸಲ್ಪಟ್ಟಿರುವ ಧರ್ಮಸ್ಥಳದ ಮೇಲೆ ಈಗ ಅನುಮಾನಗಳ ಕಾರ್ಮೋಡ ಕವಿದಿದ್ದು, ಕೆಲವು ಗಂಭೀರ ಆರೋಪಗಳಿಗೆ ತುತ್ತಾಗಿದೆ. ವ್ಯವಸ್ಥಿತವಾಗಿ ಕಾಣೆ ಮಾಡಲಾದ ಬಾಲಕಿಯರು, ಮಹಿಳೆಯರು, ಅವರ ಮೇಲೆ ನಡೆದಿರಬಹುದಾದ ಅತ್ಯಾಚಾರಗಳು, ಹತ್ಯೆಗಳು ಈಗ ಮರಳಿ ಸುದ್ದಿ ಮಾಡುತ್ತಿದ್ದು, ಇದಕ್ಕೆ ಸರ್ಕಾರದ ಮೌನವೇ ಕಾರಣವೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ. 450ಕ್ಕೂ ಹೆಚ್ಚು ಮಹಿಳೆಯರು ಕಳೆದ ನಾಲ್ಕು ದಶಕಗಳಲ್ಲಿ, ಈ ಪ್ರದೇಶದಿಂದಲೇ ಕಾಣೆಯಾಗಿರುವುದು, ಅವರ ಪೈಕಿ ಶಾಲಾ ಬಾಲಕಿಯರು, ಕಾಲೇಜು ವಿದ್ಯಾರ್ಥಿನಿಯರು ಇರುವುದು, ಗಂಭೀರ ಆರೋಪಗಳಾಗಿದ್ದು, ಕರ್ನಾಟಕ ಸರ್ಕಾರವು ಈಗ ಇದನ್ನು ಅಲ್ಲಗಳೆಯುವ ಅಥವಾ ನಿರಾಕರಿಸುವ ಸಾಧ್ಯತೆಗಳೇ ಇಲ್ಲದಂತಾಗಿದೆ.

ಇತ್ತೀಚೆಗೆ ಸುಜಾತಾ ಭಟ್‍ಎಂಬ ಮಹಿಳೆ, ತನ್ನ ಮೆಡಿಕಲ್ ವಿದ್ಯಾರ್ಥಿನಿ ಮಗಳು ಅನನ್ಯ ಭಟ್ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿರುವುದು, ಸೌಜನ್ಯ ಗೌಡ ಎಂಬ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಭೀಕರ ದೃಶ್ಯಗಳನ್ನು ಮರಳಿ ಸಾರ್ವಜನಿಕರ ನಡುವೆ ತಂದು ನಿಲ್ಲಿಸಿದಂತಾಗಿದೆ. 2012ರಲ್ಲಿ ಸಂಭವಿಸಿದ ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಒಂದು ಪ್ರತ್ಯೇಕ ಘಟನೆಯಲ್ಲ, ಅಥವಾ ಅದೊಂದೇ ಪ್ರಕರಣವೂ ಅಲ್ಲ, ಬದಲಾಗಿ ಈ ಪ್ರದೇಶವನ್ನು ಆವರಿಸಿರುವ ಒಂದು ಪ್ರಕ್ಷುಬ್ಧ ಮಾದರಿಯ ಸಂಕೇತವಾಗಿ ತೋರುತ್ತದೆ. ವೇದವತಿ, ಪದ್ಮಾವತಿ ಎಂಬ ಇತರ ಮಹಿಳೆಯರ ಹೆಸರುಗಳು ಸ್ಥಳೀಯರ ನೆನಪುಗಳನ್ನು ಕಾಡಲಾರಂಭಿಸಿದ್ದು, ಈಗ ಧರ್ಮಸ್ಥಳ ದೇವಸ್ಥಾನದ ಮಾಜಿ ಸ್ವಚ್ಚತಾ ಕಾರ್ಮಿಕನೊಬ್ಬ, ಅತ್ಯಾಚಾರ ಮತ್ತು ಹತ್ಯೆಗೀಡಾದ ವ್ಯಕ್ತಿಗಳ ಮೃತ ದೇಹಗಳನ್ನು ಹೂಳಲು, ತಮ್ಮನ್ನು ಬಲಾತ್ಕರಿಸಲಾಗಿತ್ತು ಎಂದು ದೂರು ಸಲ್ಲಿಸಿರುವುದು, ಈ ಸಂತ್ರಸ್ತರ ಪೈಕಿ ಅಪ್ರಾಪ್ತ ಬಾಲಕಿಯರೂ ಇರುವುದು, ಕಳೆದ ಎರಡು ದಶಕಗಳಲ್ಲಿ ಸಂಭವಿಸಿರಬಹುದಾದ ಭೀಕರ ಘಟನೆಗಳನ್ನು ಮತ್ತೊಮ್ಮೆ ಮುನ್ನಲೆಗೆ ತಂದು ನಿಲ್ಲಿಸಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಹತ್ಯಾ ಸರಣಿಗಳ ತನಿಖೆ ಮತ್ತೊಂದು, ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನೊಳಗೊಂಡ,  ಸರ್ಕಾರವೇ ರಚಿಸಿದ ಸಮಿತಿ ಆಗಬಾರದು. ತನಿಖೆಯನ್ನು ಒಂದು ಪ್ರಮಾಣಬದ್ಧವಾದ, ನಿಷ್ಠಾವಂತ ತಂಡವು ನಿರ್ವಹಿಸಬೇಕು. ಇದರಲ್ಲಿ ರಾಜಿಯಿಲ್ಲದ ಪ್ರಾಮಾಣಿಕತೆಯನ್ನು ಹೊಂದಿರುವ ಹಿರಿಯ ಐಪಿಎಸ್ ಅಧಿಕಾರಿಗಳು ಇರಬೇಕು.  ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯಗಳ ಪ್ರಕರಣದ ಹಾಗೆ, ಈ ಪ್ರಕರಣಕ್ಕೂ ರಾಜ್ಯ ಸರ್ಕಾರವು ಗಮನ ನೀಡಬೇಕು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹಲವಾರು ಮಹಿಳಾ ಸಂಘಟನೆಗಳು ಬೀದಿಗಿಳಿದು ಹೋರಾಡಿದ ಕಾರಣ ಸರ್ಕಾರವೂ ಕ್ಷಿಪ್ರ ಗತಿಯಲ್ಲಿ ಕ್ರಮ ಕೈಗೊಂಡಿತ್ತು. ಈ ಪ್ರಕರಣದಲ್ಲಿ ಹಲವು ಹಿರಿಯ ಅಧಿಕಾರಿಗಳೂ, ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳೂ, ಕಾನೂನು ವ್ಯವಸ್ಥೆಯನ್ನು ನಿರ್ವಹಿಸುವವರೂ ಭಾಗಿಯಾಗಿದ್ದರು.

ಹಾಗಾಗಿ ಈ ಪ್ರಕರಣದಲ್ಲಿ ಸರ್ಕಾರ ಕ್ರಿಯಾಶೀಲವಾಗಿ ವರ್ತಿಸಿತ್ತು. ಪೆÇಲೀಸ್ ಉನ್ನತಾಧಿಕಾರ ವಲಯವೂ ಸ್ಪಂದಿಸಿತ್ತು. ವಿಶೇಷ ತಂಡಗಳನ್ನು ರಚಿಸಿ, ಕೆಲವೇ ದಿನಗಳಲ್ಲಿ ಶೋಧ ಆರಂಭವಾಗಿತ್ತು. ಆರೋಪಿಯು ರಾಜಕೀಯವಾಗಿ ಬಲಾಢ್ಯರಾಗಿದ್ದರೂ ಸಾಂಸ್ಥಿಕ ರಕ್ಷಾ ಕವಚಗಳ ಹಿಂದೆ ಅವಿತುಕೊಳ್ಳಲು ಆಗಲಿಲ್ಲ. ಇದೇ ಮಾದರಿಯನ್ನು ಈಗ ಧರ್ಮಸ್ಥಳದ ದೌರ್ಜನ್ಯಗಳಿಗೂ ಅನ್ವಯಿಸಬೇಕಿದೆ, ಅಷ್ಟೇ ತುರ್ತಾಗಿ, ಅಷ್ಟೇ ಗಂಭೀರ ಸ್ವರೂಪದಲ್ಲಿ, ಹೆಚ್ಚಿನ ಬದ್ಧತೆಯಿಂದ ಕ್ರಮ ಜರುಗಿಸಬೇಕಿದೆ.

ಈ ಪ್ರಮಾಣದ ಗಂಭೀರ ಪ್ರಕರಣದ ತನಿಖೆಯನ್ನು ಪ್ರಣವ್ ಮೊಹಂತಿ ಅವರಂತಹ ನಿಷ್ಪಕ್ಷಪಾತತೆಗೆ ಹೆಸರಾದ, ದಿಟ್ಟತನ ಮತ್ತು ಶೋಧನೆಯ ಕಾರ್ಯದಲ್ಲಿ ಯಾವುದೇ ರಾಜಿಯಾಗದ  ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮುಂದಾಳತ್ವದಲ್ಲಿ ನಡೆಸಬೇಕು. ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಿ ಇವರ ಸಾಧನೆಗಳು ಅಪ್ರತಿಮವಾಗಿವೆ. ಅವರ ನೇತೃತ್ವದ ಸಮಿತಿಗೆ ಈ ಕೆಲವು ಅಧಿಕಾರಗಳನ್ನು  ನೀಡಬೇಕು. 

* 1980ರಿಂದೀಚೆಗೆ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಇಂತಹ ಪ್ರಕರಣಗಳ ಕಾಣೆಯಾಗಿರುವ  ವ್ಯಕ್ತಿಗಳನ್ನು ಕುರಿತ ಎಲ್ಲ ಕಡತಗಳನ್ನೂ ಒದಗಿಸಬೇಕು.

* ಸಮಾಧಿಗಳನ್ನು ಫೆÇರೆನ್ಸಿಕ್ ಪರಿಶೋಧನೆಗೊಳಪಡಿಸಿ, ಹೂತು ಹಾಕಿದ ದಾಖಲೆಗಳನ್ನು, ಸ್ಥಳೀಯ ಅಧಿಕಾರಿಗಳಿಂದ, ದೇವಸ್ಥಾನದ ಕಚೇರಿಯಿಂದ ಪಡೆದುಕೊಳ್ಳಬೇಕು.

* ದೂರುದಾರರಿಗೆ ಸೂಕ್ತ ರಕ್ಷಣೆ ನೀಡಿ, ಜೀವ ಬೆದರಿಕೆ ಎದುರಿಸುತ್ತಿರುವ ಸ್ವಚ್ಚತಾ ಕಾರ್ಮಿಕನಿಗೂ ಪೂರ್ಣ ರಕ್ಷಣೆಯನ್ನು ನೀಡಬೇಕು.

* ಸಂತ್ರಸ್ತರು ಮತ್ತು ನ್ಯಾಯ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿರಬಹುದಾದ ಪ್ರಭಾವಿ ಸಂಸ್ಥೆ ಅಥವಾ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಪರಿಶೀಲಿಸಬೇಕು.

ಇವೆಲ್ಲವೂ ಪ್ರತ್ಯೇಕಿಸಬಹುದಾದ ಘಟನೆಗಳ ತನಿಖೆ ಅಲ್ಲ. 40 ವರ್ಷಗಳಲ್ಲಿ ಮೌನ ವಾತಾವರಣವನ್ನು ಭೇಧಿಸಿ ಭಗ್ನಗೊಳಿಸುವ ಒಂದು ಕ್ರಿಯೆ. ಶಿಕ್ಷೆಯ ಭೀತಿ ಇಲ್ಲದೆ ನಡೆದ ದೌರ್ಜನ್ಯಗಳನ್ನು ಬಯಲಿಗೆಳೆಯುವ ಪ್ರಕ್ರಿಯೆ. ರಾಜ್ಯ ಸರ್ಕಾರವು ತನ್ನ ಅತ್ಯುತ್ತಮ ಪೊಲೀಸ್ ಅಧಿಕಾರಿಗಳನ್ನು ಒಂದುಗೂಡಿಸಿ, ಉನ್ನತ ಮಟ್ಟದ ರಾಜಕೀಯ ಪ್ರಕರಣಗಳಲ್ಲಿ ಮಹಿಳೆಯರ ಘನತೆಯನ್ನು ಕಾಪಾಡುವುದೇ ಆದರೆ, ಇದೇ ಸೂತ್ರವನ್ನು ಕಡುಬಡವರಿಗೆ, ದನಿ ಇಲ್ಲದವರಿಗೆ ಏಕೆ ಅನ್ವಯಿಸಕೂಡದು?

ಇದು ಆಡಳಿತಾತ್ಮಕ ಮೌನದ ಮೂಲಕವೋ ಅಥವಾ ಕೆಲವರನ್ನು ತೃಪ್ತಿಪಡಿಸಬಹುದಾದ, ಸೂಕ್ಷ್ಮ ವಿಚಾರಗಳಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಸಾಂವಿಧಾನಿಕ ತುರ್ತು ಸ್ಥಿತಿಯನ್ನು ಸೃಷ್ಟಿಸಿದೆ. ಈಗ ಬೇಕಿರುವುದು, ದಾಖಲಾಗಿರುವ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ವಹಣೆಯಲ್ಲಿ ಅಮೂಲಾಗ್ರ ತನಿಖೆ ಮತ್ತು ವಿಚಾರಣೆ. ಈ ತನಿಖಾ ಪ್ರಕ್ರಿಯೆಗೆ ಶಾಸನಾತ್ಮಕವಾಗಿ ಪೂರ್ಣ ಬೆಂಬಲ ನೀಡುವುದೇ ಅಲ್ಲದೆ, ತನಿಖಾ ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿ, ಯಾವುದೇ ರೀತಿಯ ರಾಜಿಯಾಗದೆ ಪಾರದರ್ಶಕವಾಗಿ ನಡೆಸಬೇಕಿದೆ. ಪ್ರಾಮಾಣಿಕತೆಗೆ ಹೆಸರಾಗಿರುವ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರು ಅಧಿಕಾರಯುತವಾಗಿ ನಿರ್ವಹಿಸಬಲ್ಲರು ಅಲ್ಲದೆ ಸ್ವತಂತ್ರ ತನಿಖೆಯನ್ನು ನಡೆಸಿ ವಿಶ್ವಾಸಾರ್ಹವಾಗಿ, ಧರ್ಮಸ್ಥಳದ ಸುತ್ತಮುತ್ತಲಿನ ಊರುಗಳಲ್ಲಿ  ದಶಕಗಳ ಹಿಂದೆ ಕಾಣೆಯಾಗಿರುವ, ಅತ್ಯಾಚಾರ, ಹತ್ಯೆಗೀಡಾಗಿರುವ ವ್ಯಕ್ತಿಗಳ ಸುತ್ತಲಿನ ಪ್ರಕರಣಗಳನ್ನು ಶೋಧಿಸಿ ಸತ್ಯವನ್ನು ಹೊರಗೆಳೆಯಬಲ್ಲರು. ಹಾಗಾಗಿ ಸರ್ಕಾರವು ಈ ಕ್ರಮವನ್ನು ಅನುಸರಿಸುವುದು ಅಗತ್ಯವಾಗಿದೆ.

ನ್ಯಾಯದಾನವು ಸಂತ್ರಸ್ತರು ಯಾರು ಅಥವಾ ಅಪರಾಧಿ ಯಾರಿರಬಹುದು ಎನ್ನುವುದರ ಮೇಲೆ ನಿರ್ಧಾರವಾಗಕೂಡದು. ಕರ್ನಾಟಕವು ಕಾನೂನು ನಿಯಮಗಳ ಅನುಸಾರವೇ ಆಳ್ವಿಕೆಗೆ ಒಳಪಟ್ಟಿದೆ ಎನ್ನುವುದೇ ಆದರೆ ಈಗ ಸರ್ಕಾರ ಸಕ್ರಿಯವಾಗಬೇಕು. ಇನ್ನಾವುದೇ ಸಬೂಬುಗಳನ್ನು ಹೇಳುವ ಅಗತ್ಯವಿಲ್ಲ. ಆಯ್ಕೆ ಮಾಡಿ ಕಾನೂನು ಜಾರಿಗೊಳಿಸುವ ಕ್ರಮವೂ ಸಲ್ಲ. ಮೌನವಾಗಿರುವುದು ಸರಿಯಲ್ಲ.

ಸುಪ್ರೀಂಕೋರ್ಟ್ ಈ ಪ್ರಕರಣದ ಉಸ್ತುವಾರಿ ವಹಿಸಿಕೊಳ್ಳಲಿ. ಸ್ವತಂತ್ರವಾದ, ಎಲ್ಲ ಅಧಿಕಾರಗಳನ್ನೂ ಹೊಂದಿರುವ, ದಿಟ್ಟತನದಿಂದ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಪೆÇಲೀಸ್ ತಂಡವೊಂದು ಮೊಹಾಂತಿ ಅವರ ಮುಂದಾಳತ್ವದಲ್ಲಿ ಪ್ರತಿಯೊಂದು ಕಡತವನ್ನೂ ಶೋಧಿಸಲಿ, ಪ್ರತಿಯೊಂದು ಗೋರಿಯನ್ನೂ ಪರಿಶೀಲಿಸಲಿ, ಮುಚ್ಚಿಹಾಕುವ ಪ್ರತಿಯೊಂದು ಪ್ರಯತ್ನವನ್ನೂ ಬಯಲಿಗೆಳೆಯಲಿ. ದೀರ್ಘಕಾಲ ಸಮಾಧಿಯಾಗಿರುವ ಸತ್ಯವನ್ನು ಅಕ್ಷರಶಃ ಹೊರತೆಗೆಯಬೇಕಿದೆ.

ಮತ್ತೊಬ್ಬ ಅನನ್ಯ, ಮತ್ತೋರ್ವ ಸೌಜನ್ಯ ನಮಗೆ ಗೋಚರಿಸುವ ಮುನ್ನ ಈ ಕೆಲಸ ಆಗಬೇಕಿದೆ. ತಡಮಾಡುವುದು ಬೇಕಿಲ್ಲ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again