ಉಚಿತಗಳನ್ನು ರದ್ದುಪಡಿಸಿ ಹಣಕಾಸು ಶಿಸ್ತು ತರಲು ಇದು ಸಕಾಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಲದಲ್ಲಿ ಪ್ರಬುದ್ಧ ಆಡಳಿತಗಾರರೆಂಬ ಹೆಸರು ಗಳಿಸಿದ್ದವರು. ಇದನ್ನು ಮರಳಿ ಪಡೆಯಬೇಕಿದೆ.


ಯಾವುದೇ ಮಗ್ಗುಲಿನಿಂದ ನೋಡಿದರೂ ಕರ್ನಾಟಕ ಸರ್ಕಾರವು ಇಂದು ಹಣಕಾಸು ದುಸ್ಥಿತಿಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದರ ಮೂಲ ಇರುವುದು ಜನಪ್ರಿಯ ಭರವಸೆಗಳಲ್ಲಿ, ಐದು ಗ್ಯಾರಂಟಿ ಯೋಜನೆಗಳಲ್ಲಿ. 2023ರ ಚುನಾವಣೆಗಳ ನಂತರ ಕಾಂಗ್ರೆಸ್ ಸರ್ಕಾರ ಘೋಷಿಸಿದ ಈ ಗ್ಯಾರಂಟಿಗಳು ರಾಜಕೀಯವಾಗಿ ಜಾಣತನದ ನಡೆಯಾಗಿದ್ದರೂ, ಈಗ ಆರ್ಥಿಕವಾಗಿ ಸರಕಾರದ ಕತ್ತನ್ನೇ ಹಿಸುಕುತ್ತಿದ್ದು ಆಡಳಿತವೇ ದುರ್ಭರವಾಗಿದೆ. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್, ಎಲ್ಲರಿಗೂ ತಿಳಿದಿರುವ ವಾಸ್ತವವನ್ನು ಒಪ್ಪಿಕೊಂಡು, ರಾಜ್ಯ ಸರ್ಕಾರದ ಈ ದುಂದು ವೆಚ್ಚವನ್ನು ತಪ್ಪಿಸಬೇಕಿದೆ. ಗ್ಯಾರಂಟಿ ಯೋಜನೆಗಳನ್ನು ರದ್ದುಪಡಿಸಬೇಕಿದೆ. ಇದು ಯಾರು ಕೇಳಿಕೊಟ್ಟಿದ್ದೇನಲ್ಲ, ಮತಗಳಿಕೆಗಾಗಿ ಕಾಂಗ್ರೆಸ್ ಪಕ್ಷ ಹೂಡಿರುವ ಗ್ಯಾಂಬಲ್.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿರಂತರವಾಗಿ ಈ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ರಾಜ್ಯ ಬೊಕ್ಕಸದ 75 ಸಾವಿರ ಕೋಟಿ ರೂ ಹೊರೆಯಾಗುವುದೆಂದು ಹೇಳುತ್ತಲೇ ಇದ್ದು, ಇದರಿಂದ ಸರ್ಕಾರದ ಮೂಲ ಕಾರ್ಯಗಳಿಗೆ ಕೊರತೆಯಾಗುವುದಿಲ್ಲ ಎಂದೂ ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಪ್ರತಿಪಾದನೆಯನ್ನು ವಿರೋಧ ಪಕ್ಷಗಳಾಗಲೀ, ಕಾರ್ಯಕರ್ತರಾಗಲೀ ಅಲ್ಲದೆ, ಸರ್ಕಾರದ ಸದಸ್ಯರೇ ಅಲ್ಲಗಳೆಯುತ್ತದ್ದಾರೆ.  ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ಬಸವರಾಜ ರಾಯರೆಡ್ಡಿ ಸಭೆಯೊಂದರಲ್ಲಿ ಮಾತನಾಡುತ್ತಾ, ಜನರಿಗೆ  ರಸ್ತೆ, ಸೇತುವೆಗಳು ಬೇಕಾದರೆ ಗೃಹಲಕ್ಷ್ಮಿ, ಉಚಿತ ಪಡಿತರ, ಉಚಿತ ಬಸ್ ಪ್ರಯಾಣ ಮುಂತಾದ ಸವಲತ್ತುಗಳನ್ನು ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ ಗೃಹ ಸಚಿವ ಜಿ ಪರಮೇಶ್ವರ್ ಸರ್ಕಾರದ ಬಳಿ ಸ್ಮಾರಕಗಳನ್ನು ನೋಡಿಕೊಳ್ಳಲು, ಮೂಲ ನಾಗರಿಕ ಸೌಕರ್ಯಗಳನ್ನು ಸರಿಪಡಿಸಲೂ ಹಣ ಇಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಏನನ್ನು ಸೂಚಿಸುತ್ತವೆ? ರಾಜ್ಯದ ಬೊಕ್ಕಸವು ಖಾಲಿಯಾಗಿದೆ ಎಂದಲ್ಲವೇ?

ಈ ಯೋಜನೆಗಳನ್ನು ಜನರು ಕೇಳಿರಲಿಲ್ಲ ಎನ್ನುವ ಅಂಶ ಗಮನದಲ್ಲಿರಬೇಕು. ಉಚಿತ ಬಸ್ ಪ್ರಯಾಣ ಅಥವಾ ಗೃಹಿಣಿಯರಿಗೆ ಮಾಸಿಕ ನಗದು ಪಾವತಿಗಾಗಿ ಯಾವುದೇ ಸಾಮೂಹಿಕ ಚಳುವಳಿ ನಡೆದಿರಲಿಲ್ಲ.  ಇವೆಲ್ಲವೂ ಚುನಾವಣಾಪೂರ್ವ ಭರವಸೆಗಳಾಗಿದ್ದು, ಜನಪ್ರಿಯತೆಯನ್ನು ಗಳಿಸುವ, ಮತಗಳನ್ನು ಗಳಿಸುವ ಸಲುವಾಗಿ ನೀಡಿದ ಅಶ್ವಾಸನೆಗಳಾಗಿದದ್ವು. ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು.

ಆದರೆ ಈ ಗೆಲುವಿಗೆ ಜವಾಬ್ದಾರಿಯುತ ಆಳ್ವಿಕೆಯನ್ನು ಬಲಿಕೊಡುವುದು ತರವಲ್ಲ. ಒಂದು ವರ್ಷದಿಂದಲೂ ಕರ್ನಾಟಕವು ಹಣಕಾಸು ವ್ಯವಹಾರ ಪರದಾಡುವಂತಾಗಿದೆ. ಅಭಿವೃದ್ಧಿಯ ವೆಚ್ಚಗಳು ಸಂಪೂರ್ಣ ಸ್ಥಗಿತವಾಗಿದ್ದು, ಗುತ್ತಿಗೆದಾರರು ಹಲವು ತಿಂಗಳುಗಳಿಂದ ಪಾವತಿ ಪಡೆಯದೆ ಪರದಾಡುತ್ತಿದ್ದಾರೆ.  ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳು ಬಹುತೇಕ ವಂಚಿತವಾಗಿವೆ. ಸರ್ಕಾರವು ಇದಕ್ಕೆ ಮೌನದ ಮೂಲಕ ಅಥವಾ ನಿರಾಕರಣೆಯ ಮೂಲಕ ಪ್ರತಿಕ್ರಿಯಿಸುತ್ತಿದೆ

ಈ ಯೋಜನೆಗಳ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವಾಗುವುದಾದರೆ ಒಪ್ಪಬಹುದು. ಆದರೆ ಇದು ಸಾಧ್ಯವಾಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ನೀಡುವ ಮಾಸಿಕ 2000 ರೂ ಬಡ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರ ನೀಡಬಹುದು ಆದರೆ ಅದು ಉದ್ಯೋಗ ಸೃಷ್ಟಿಸುವುದಿಲ್ಲ, ಆರೋಗ್ಯ ಸೇವೆಯನ್ನು ಸುಧಾರಿಸುವುದಿಲ್ಲ, ಶಾಲೆಗಳ ನಿರ್ಮಾಣಕ್ಕೆ ಸಹಾಯಕವಾಗುವುದಿಲ್ಲ, ಕೈಗಾರಿಕೆಗಳನ್ನು ಬೆಳೆಸುವುದಿಲ್ಲ. ಉಚಿತ ಬಸ್ ಪ್ರಯಾಣ ಹೆಚ್ಚಿನ ಚಲನೆ ಸಾಧ್ಯವಾಗಿಸಬಹುದು ಆದರೆ ಅದನ್ನು ಉಳಿಸಿಕೊಳ್ಳುವ ಸೌಕರ್ಯಗಳನ್ನು ನಿರ್ಮಿಸುವುದಿಲ್ಲ. ಉಚಿತ ಪಡಿತರವು ಪೌಷ್ಟಿಕಾಂಶದ ರಕ್ಷಣೆಯನ್ನು ಹೆಚ್ಚಿಸಬಹುದು, ಆದರೆ ಪರಾವಲಂಬನೆಯನ್ನು ಸೃಷ್ಟಿಸುತ್ತದೆ. ಕರ್ನಾಟಕಕ್ಕೆ ಸುಸ್ಥಿರ ಆರ್ಥಿಕ ಬೆಳವಣಿಗೆಯ ಅಗತ್ಯವಿದೆಯೇ ಹೊರತು ಇಂದಿನ ಮೆಚ್ಚುಗೆಗಾಗಿ   ಅಭಿವೃದ್ಧಿಯನ್ನು ಬಲಿ ಕೊಡುವ ಮಾದರಿ ಅಲ್ಲ.

ಈಗ ಬೇಕಿರುವುದು ದಿಟ್ಟತನ ಅಲ್ಲ ಬದಲಾಗಿ ವಿವೇಕ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಲದಲ್ಲಿ ಪ್ರಬುದ್ಧ ಆಡಳಿತಗಾರರೆಂಬ ಹೆಸರು ಗಳಿಸಿದ್ದವರು. ಇದನ್ನು ಮರಳಿ ಪಡೆಯಬೇಕಿದೆ. ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಪುನರ್ ಪರಿಶೀಲಿಸಿ, ದಿಟ್ಟ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಗ್ಯಾರಂಟಿಗಳನ್ನು ರದ್ದುಪಡಿಸಬೇಕು ಅಥವಾ ಇದರ ಪ್ರಮಾಣವನ್ನು ತಗ್ಗಿಸಬೇಕು. ಕಲ್ಯಾಣ ಯೋಜನೆಗಳು ನಿರ್ದಿಷ್ಟ ಗುರಿ ಹೊಂದಿರಬೇಕು, ಸಾರ್ವತ್ರಿಕವಾಗಕೂಡದು. ಸಾರ್ವಜನಿಕ ವೆಚ್ಚಗಳು ಹೂಡಿಕೆಗೆ ಆದ್ಯತೆ ನೀಡಬೇಕೇ ಹೊರತು ಬಳಕೆಗೆ ಅಲ್ಲ. ಕಾಂಗ್ರೆಸ್ ನಾಯಕತ್ವವು ರಾಷ್ಟ್ರ ಮಟ್ಟದಲ್ಲಿ ಈ ಜವಾಬ್ದಾರಿ ಹೊತ್ತು ಚುನಾವಣಾ ಜನಪ್ರಿಯತೆ ಸೃಷ್ಟಿಸಿರುವ ಹಾನಿಯನ್ನು ಸರಿಪಡಿಸಬೇಕಿದೆ. ಹಣಕಾಸು ನೀತಿಯನ್ನು ಪ್ರಣಾಳಿಕೆಯ ಅಂಶಗಳು ನಿರ್ದೇಶಿಸಲಾಗುವುದಿಲ್ಲ.

ಕರ್ನಾಟಕ ಭಾರತದ ಅತ್ಯಂತ ಪ್ರಗತಿಪರ, ಹಣಕಾಸು ಶಿಸ್ತಿನ, ಅಭಿವೃದ್ಧಿಪ್ರೇರಿತ ರಾಜ್ಯವೆನಿಸಿಕೊಂಡ ಕಾಲವತ್ತು. ಈಗ ಮೂರು ವರ್ಷಗಳ ದಿಕ್ಕುದೆಸೆ ಇಲ್ಲದ ಹಣಕಾಸು ನಿರ್ವಹಣೆ ದಶಕಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿದೆ. ಎಚ್ಚರಿಕೆಯ ಸೂಚನೆಗಳು ಸ್ಪಷ್ಟವಾಗಿವೆ. ಸರಿಪಡಿಸಲು ಇದು ಸಕಾಲ. ರಾಜಕೀಯ ದೃಷ್ಟಿಕೋನಗಳು ಆಡಳಿತಾತ್ಮಕ ಕರ್ತವ್ಯಗಳಿಗೆ  ಎಡೆಮಾಡಿಕೊಡಬೇಕಿದೆ. ಹಳೆಯ ಗಾದೆಯೊಂದು ಹೇಳುವಂತೆ, ಸದಾ ಕಾಲವೂ ಕೆಲಸ ಮಾಡದೆ ಇರುವುದಕ್ಕಿಂತಲೂ ತಡವಾಗಿಯಾದರೂ ಮಾಡುವುದು ಒಳಿತು. ಕಾಂಗ್ರೆಸ್ ಕರ್ನಾಟಕಕ್ಕೆ ಸೂಕ್ತವಾದ ನೀತಿಯನ್ನು ಅನುಸರಿಸಬೇಕಿದೆ, ಇದರಿಂದ ಅಧಿಕಾರಕ್ಕೆ ಸಂಚಕಾರ ಬಂದರೂ ಸಹ ಇದು ಅನಿವಾರ್ಯ. ಈಗ ರಾಜ್ಯದ ಮುಂದಿರುವ ದಾರಿ ಇದೊಂದೇ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again