ಸೌಜನ್ಯ ಪ್ರಕರಣ ಎಸ್‍ಐಟಿ ತನಿಖೆಯಿಂದ ಕೈಬಿಟ್ಟಿದ್ದೇಕೆ?

ಸರ್ಕಾರ ಪ್ರಬಲರನ್ನು ರಕ್ಷಿಸುತ್ತಿದೆಯೇ?


ಧರ್ಮಸ್ಥಳದ ಸುತ್ತಮುತ್ತ ಹಲವು ವರ್ಷಗಳಿಂದ ನಡೆಯುತ್ತಿರುವ ಅನುಮಾನಾಸ್ಪದ ಸಾವುಗಳು ಮತ್ತು ಹೆಣಗಳನ್ನು ಸಮಾಧಿ ಮಾಡುತ್ತಿರುವ ಆರೋಪಗಳನ್ನು ತನಿಖೆಗೊಳಪಡಿಸಲು ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ (ಎಸ್‍ಐಟಿ) ರಚಿಸಿರುವುದು, ಸರ್ಕಾರ ಸಾರ್ವಜನಿಕರ ವಿಶ್ವಾಸವನ್ನು ಮರಳಿ ಗಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯೆನಿಸಿದರೂ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ಈ ತನಿಖೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವ ಸರ್ಕಾರದ ಲೆಕ್ಕಾಚಾರದ ನಡೆ ಅಚ್ಚರಿ ಮೂಡಿಸಿದ್ದು, ಹಲವು ಅನಿವಾರ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಸ್ಪಷ್ಟವಾಗಿ ಹೇಳುವುದಾದರೆ, ಇದು ಕಾನೂನು ಪ್ರಕ್ರಿಯೆಯಲ್ಲಿ ಕಣ್ತಪ್ಪಿ ನಡೆದಿರುವುದಲ್ಲ. ಬದಲಾಗಿ ಧರ್ಮಸ್ಥಳದಲ್ಲಿ ನಡೆದಿರುವ ಲೆಕ್ಕವಿಲ್ಲದ ಪ್ರಮಾಣದ ಸಾವುಗಳು ಮತ್ತು ಇವುಗಳ ಬಗ್ಗೆ ವ್ಯವಸ್ಥಿತ ಮೌನದ ಒಳಹೊರಗನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಒಂದು ಪ್ರಕರಣವನ್ನು ಉದ್ದೇಶಪೂರ್ವಕವಾಗಿ ತನಿಖೆಯ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ. ರಾಜ್ಯ ಗೃಹಸಚಿವರು ಸಾರ್ವಜನಿಕವಾಗಿಯೇ ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದ ಎಸ್‍ಐಟಿಗೆ ಸೌಜನ್ಯ ಪ್ರಕರಣವನ್ನು ತನಿಖೆ ಮಾಡದಿರುವಂತೆ ಸೂಚಿಸಿರುವುದು ಸಾರ್ವಜನಿಕರಿಗೆ ಆಘಾತಕಾರಿ ಸಂದೇಶವನ್ನು ರವಾನಿಸಿದೆ. ನ್ಯಾಯವನ್ನು ಇಚ್ಛಾನುಸಾರ ರೇಶನ್ ಮಾಡಿ ನೀಡಲಾಗುತ್ತದೆ ಎಂಬ ಈ ಸಂದೇಶ ನಾಗರಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಪ್ರಶ್ನೆಗಳನ್ನು ಕೇಳುವ ಸಮಯವೂ ಬಂದಿದೆ.

ಹಲವು ವರ್ಷಗಳ ಕಾಲ ಮೊಂಬತ್ತಿ ಮೆರವಣಿಗೆ, ನಾಗರಿಕರ ತೀವ್ರ ಪ್ರತಿಭಟನೆ, ಪತ್ರಿಕಾ ತನಿಖೆಗಳಿಗೆ ಸಾಕ್ಷಿಯಾಗಿರುವ ಒಂದು ಪ್ರಕರಣವನ್ನು ಸರ್ಕಾರ ಪ್ರಜ್ಞಾಪೂರ್ವಕವಾಗಿ ಏಕೆ ಕೈಬಿಟ್ಟಿದೆ?  ಈ ನಿರ್ಧಾರವನ್ನು ಯಾರು ಕೈಗೊಂಡಿದ್ದಾರೆ ಮತ್ತು ಏಕೆ ಎನ್ನುವುದರ ಬಗ್ಗೆ ಮೌನವೇಕೆ? ಇನ್ನೂ ಆಳವಾಗಿ ಶೋಧಿಸುವುದರಿಂದ ಆಳದಲ್ಲಿ ಹುದುಗಿಹೋಗಿರುವ ವಾಸ್ತವಗಳನ್ನು ಹೊರಗೆಡಹಬಹುದಾದ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಹೊರತುಪಡಿಸಿರುವುದು ಏಕೆ? ಸರಕಾರ ಈ ಕುರಿತಾಗಿ ಈವರೆಗೂ ಯಾವ ವಿವರಣೆಯನ್ನೂ ಏಕೆ ಕೊಟ್ಟಿಲ್ಲ?

ಸಾರ್ವಜನಿಕರು ಅಮಾಯಕರೇನಲ್ಲ. ರಾಜಕೀಯವಾಗಿ ಸಂಪರ್ಕ ಇರುವ ವ್ಯಕ್ತಿಗಳು ಭಾಗಿಯಾಗಿರುವ ಆರೋಪಗಳನ್ನು ಎದುರಿಸುತ್ತಿರುವಾಗ, ಅಂಥವರನ್ನು ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆಯೇ? ಲಕ್ಷಾಂತರ ಕೋಟಿ ರೂ ಬೆಲೆ ಬಾಳುವ ಒಂದು ಧಾರ್ಮಿಕ-ಔದ್ಯಮಿಕ ಸಾಮ್ರಾಜ್ಯವನ್ನು ಪ್ರತಿನಿಧಿಸುವ ವ್ಯಕ್ತಿಗಳು ಈ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಸಾರ್ವಜನಿಕ ವೇದಿಕೆಗಳಲ್ಲಿ, ಪ್ರತಿಭಟನಾ ಹೋರಾಟಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಎತ್ತಿಹೇಳಲಾಗುತ್ತಿರುವುದನ್ನು ಸರ್ಕಾರ ಗಮನಿಸಿಲ್ಲವೇಕೆ? ಈ ಅನುಮಾನಗಳು ಈಗ ಅಲಕ್ಷಿಸಲಾಗದಷ್ಟು ಗಟ್ಟಿಯಾಗಿ ಕೇಳಿಬರುತ್ತಿವೆ. ಹಾಗಾದಲ್ಲಿ ಈಗ ನೇಮಿಸಲಾಗಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಸತ್ಯವನ್ನು ಹೊರಗೆಡಹುವ ಬದಲು, ಪ್ರಬಲ ಸ್ಥಾನಗಳಲ್ಲಿರುವವರನ್ನು ರಕ್ಷಿಸುವ ಸಲುವಾಗಿ ರಚಿಸಲಾಗಿದೆಯೇ?

ಹಾಗಿಲ್ಲವೆಂದಾದಲ್ಲಿ, ಮುಖ್ಯಮಂತ್ರಿಗಳು ಮತ್ತು ಗೃಹಸಚಿವರು ಸಾರ್ವಜನಿಕವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಸೌಜನ್ಯ ಪ್ರಕರಣವನ್ನು ಏಕೆ ಕೈಬಿಡಲಾಗಿದೆ ಎಂದು ನಾಗರಿಕರಿಗೆ ವಿವರಿಸಬೇಕಿದೆ. ಇದು ಕಾನೂನು ತೊಡಕುಗಳ ಪರಿಣಾಮವೋ ಅಥವಾ ರಾಜಕೀಯ ಒತ್ತಡದ ಪ್ರಭಾವವೋ ಅಥವಾ ಇನ್ನೂ ಹೆಚ್ಚಿನ ದುರುದ್ದೇಶದಿಂದ ಕೂಡಿರುವುದೋ? ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಶ್ನೆಗಳು ಎದುರಾದಾಗ ಮೌನ ವಹಿಸುವುದು ಹೊಂದಾಣಿಕೆಯ ಸೂಚನೆಯಾಗಿ ಕಾಣುತ್ತದೆ.

ಈ ಪ್ರಶ್ನೆಗಳು ಇಲ್ಲಿಗೇ ಮುಗಿಯುವುದಿಲ್ಲ.

ಎಸ್‍ಐಟಿ ತನಿಖೆಯ ಅಂತಿಮ ವರದಿ ಸಲ್ಲಿಕೆಗೆ ಸರ್ಕಾರ ಏಕೆ ಸಮಯದ ಗಡುವು ನಿಗದಿಮಾಡಿಲ್ಲ? ಈ ಸೂಕ್ಷ್ಮ ತನಿಖೆಯನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂಬ ದೀರ್ಘಕಾಲದ ಬೇಡಿಕೆಯನ್ನು ಸರ್ಕಾರ ಏಕೆ ತಿರಸ್ಕರಿಸಿದೆ?

ಕರ್ನಾಟಕದ ನಾಗರಿಕರಾದ ನಾವು ಆಗ್ರಹಿಸುವುದೇನೆಂದರೆ :

        1. ಸೌಜನ್ಯ ಪ್ರಕರಣವನ್ನು ಈ ಕೂಡಲೇ ಎಸ್‍ಐಟಿ ವ್ಯಾಪ್ತಿಗೆ ಒಳಪಡಿಸಬೇಕು.

        2. ಈ ತನಿಖೆಯನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆಸಬೇಕು.

        3. ತನಿಖೆಗೆ ಒಂದು ಖಚಿತ ಸಮಯಾವಧಿಯನ್ನು ನಿಗದಿಪಡಿಸಿ ಅದನ್ನು ಪಾಲಿಸಬೇಕು.

ರಾಜಕೀಯ ಅನುಕೂಲತೆಗಳಿಗಾಗಿ ನ್ಯಾಯವನ್ನು ಬಲಿಕೊಡಕೂಡದು.  ಸಾರ್ವಜನಿಕರಿಗೆ ವಿಶ್ವಾಸದ್ರೋಹ ಎಸಗಲಾಗಿದೆ ಎಂದು ಹೇಳಬಹುದಾದ ಪ್ರಕರಣವೊಂದನ್ನು ಹೊರತುಪಡಿಸಿ, ಸರ್ಕಾರ ಸತ್ಯಶೋಧನೆ ಮಾಡುತ್ತೇನೆ ಎಂದು ಹೇಳಲಾಗುವುದಿಲ್ಲ.  ಈ ವಿಶೇಷ ತನಿಖಾ ದಳವು ಹೂತಿಟ್ಟ ವಾಸ್ತವಗಳನ್ನು ಹೊರತೆಗೆಯುವ ಉದ್ದೇಶ ಹೊಂದಿದ್ದು ವಿಶ್ವಾಸವನ್ನು ಮರಳಿ ಪಡೆಯಲು ಇಚ್ಚಿಸಿದ್ದರೆ, ಸೌಜನ್ಯ ಪ್ರಕರಣವನ್ನು ತನಿಖೆಯ ವ್ಯಾಪ್ತಿಗೊಳಪಡಿಸಬೇಕು ಮತ್ತು ನ್ಯಾಯಿಕ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು.

ಇದಕ್ಕಿಂತಲೂ ಕಡಿಮೆ ಎನಿಸುವ ಯಾವುದೇ ಕ್ರಮ ಕೈಗೊಂಡರೂ, ಈಗಾಗಲೇ ಎಲ್ಲರ ಆತಂಕಕ್ಕೆ ಕಾರಣವಾಗಿರುವಂತೆ, ಇದು ತನಿಖೆ ಎನಿಸಿಕೊಳ್ಳುವುದಿಲ್ಲ ಬದಲಾಗಿ ಪ್ರಕರಣವನ್ನು, ಬ್ಯಾಡ್ಜ್ ಧರಿಸಿ ಮುಚ್ಚಿಹಾಕುವ ಪ್ರಯತ್ನವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again