ಜನವಿರೋಧಿಗಳಾದ ಧರ್ಮಸ್ಥಳದ ಸಮರ್ಥಕ ರಾಜಕಾರಣಿಗಳು
ಇದು ಜನರಿಗೆ ತಾಳ್ಮೆಯನ್ನು ಬೋಧಿಸುವ ಸಮಯವಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪುನರ್ ಪ್ರತಿಪಾದಿಸುವ, ಸಂತ್ರಸ್ತರೊಡನೆ ನಿಲ್ಲುವ, ನ್ಯಾಯಕ್ಕಾಗಿ ಆಗ್ರಹಿಸುವ ಸಮಯ.
ಧರ್ಮಸ್ಥಳದ ಮೇಲಿನ ಆರೋಪಗಳ ಬಗ್ಗೆ ಎಸ್‍ಐಟಿ ತನಿಖೆ ಕೊನೆಗೂ ಶುರುವಾಗುತ್ತಿರುವಂತೆ, ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳೂ ಬಲಾಢ್ಯರಾದ ಆರೋಪಿಗಳನ್ನು ಸಮರ್ಥಿಸಲು ಮುಂದಾಗಿದ್ದಾರೆಯೇ ಹೊರತು, ನ್ಯಾಯಕ್ಕಾಗಿ ಆಗ್ರಹಿಸುತ್ತಿಲ್ಲ. ಅವರ ವಿಳಂಬದ ಉಪದೇಶಗಳು ಮತ್ತು ನುಣುಚಿಕೊಳ್ಳುವ ಹೇಳಿಕೆಗಳು ಇನ್ನೂ ದುಷ್ಟ ಶಕ್ತಿಗಳ ಜತೆ ಆಳವಾದ ಹೊಂದಾಣಿಕೆಯನ್ನು ಸೂಚಿಸುವಂತೆ ಕಾಣುತ್ತದೆ.
ಸಂತ್ರಸ್ತರೊಡನೆ ನಿಲ್ಲಬೇಕಾಗಿದ್ದ ಗಳಿಗೆಯು ಈಗ ಪಕ್ಷಪಾತದ ಚಮಚಾಗಿರಿಯ ಪೈಪೋಟಿಯ ಪ್ರದರ್ಶನವಾಗಿದೆ. ಕಾಂಗ್ರೆಸ್ ಪಕ್ಷದ ಹಾಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಎಸ್‍ಐಟಿ ವರದಿಗಾಗಿ ಕಾಯುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಇದು ವಿಚಿತ್ರವಾದ ಹೇಳಿಕೆಯಾಗಿದೆ. ಅದೂ ಪತ್ರಕರ್ತರು, ನಾಗರಿಕ ಸಮಾಜ ಮತ್ತು ಸಂತ್ರಸ್ತರು ಈ ತನಿಖೆಯನ್ನು ಹಲವಾರು ವರ್ಷಗಳಿಂದಲೇ ಆಗ್ರಹಿಸುತ್ತಿರುವಾಗ ಏನೂ ಮಾತನಾಡದಿದ್ದ ವ್ಯಕ್ತಿಯಿಂದ ಈ ಹೇಳಿಕೆ ಸೋಜಿಗ ಮೂಡಿಸುತ್ತದೆ. ಅವರ ಧ್ವನಿ ನ್ಯಾಯದ ಧ್ವನಿ ಅಲ್ಲ, ಬದಲಾಗಿ ಹಾನಿಯನ್ನು ನಿಯಂತ್ರಿಸುವ ವಿಳಂಬದ ಧೋರಣೆ.
ಬಿಜೆಪಿಯಿಂದ ಸಿ ಟಿ ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಂತಹ ಹೀನ ಅಪರಾಧಗಳು ಧರ್ಮಸ್ಥಳದಲ್ಲಿ ಸಂಭವಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇದು ಕೇವಲ ನಿರಾಕರಣೆ ಅಲ್ಲ, ಬದಲಾಗಿ ಶ್ರದ್ಧೆ ನಂಬಿಕೆಗಳನ್ನು ನ್ಯಾಯಯುತ ವಿಚಾರಣೆಯ ವಿರುದ್ಧ ಕವಚವಾಗಿ ಬಳಸುವ ಅಪಾಯಕಾರಿ ಪ್ರಯತ್ನ. ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ ಅವರೂ ಸಹ ರವಿ ಹಿಂದೆ ಇದ್ದಾರೆ.
ಸುಳ್ಳು ನಿಷ್ಠೆಯ ಈ ಗುಂಪು ಕರೆಯನ್ನು ಬೆಂಬಲಿಸುತ್ತಿರುವವರ ಪೈಕಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ಥ ನಾರಾಯಣ್ ಅವರೂ ಸೇರಿಕೊಂಡಿದ್ದಾರೆ. ಇಬ್ಬರೂ ಸಹ ಧರ್ಮಸ್ಥಳದ ಉತ್ತಮ ಸೇವೆಯನ್ನು ಕೊಂಡಾಡಿದ್ದು ಎಸ್‍ಐಟಿ ರಚನೆಯ ಹಿಂದಿನ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಈ ತನಿಖೆಯನ್ನು `ರಾಜಕೀಯಪ್ರೇರಿತ' ಎಂದು ಹೇಳಿದರೆ, ಅಶ್ವತ್ಥ ನಾರಾಯಣ್ `ಒಂದು ಉದಾತ್ತ ಸಂಸ್ಥೆಯ ಮೇಲೆ ಅನುಮಾನಗಳನ್ನು ಸೃಷ್ಟಿಸುವುದರ ವಿರುದ್ಧ' ಎಚ್ಚರಿಕೆ ನೀಡಿದ್ದಾರೆ. ಇದಾವುದೂ ತಟಸ್ಥ ನೆಲೆಯ ಅನಿಸಿಕೆಗಳಲ್ಲ, ಬದಲಾಗಿ ದಾರಿ ತಪ್ಪಿಸುವ ಹೇಳಿಕೆಗಳು. ಸಂತ್ರಸ್ತರು ಔದಾರ್ಯ, ದಾನ ಕೇಳದೆ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಹೊತ್ತಿನಲ್ಲಿ ದಿಕ್ಕು ತಪ್ಪಿಸುವ ಮಾತುಗಳು.
ಇಲ್ಲಿ ಸ್ಪಷ್ಟವಾಗಿ ಹೇಳಬಹುದಾದರೆ, ಈ ಆರೋಪಗಳು ಕೇವಲ ಗಾಳಿ ಸುದ್ದಿಗಳಲ್ಲ. ಅವುಗಳು ವಿಶ್ವಾಸಾರ್ಹವಾದ, ನಿರಂತರವಾದ ಸಾರ್ವಜನಿಕವಾಗಿ ದಾಖಲಾಗಿರುವ ಆರೋಪಗಳು. ಎಸ್‍ಐಟಿ ರಾಜಕೀಯ ಇಚ್ಛಾಶಕ್ತಿಯಿಂದ ಹುಟ್ಟಿರುವುದಲ್ಲ, ಬದಲಾಗಿ ಜನರ ಆಕ್ರೋಶಕ್ಕೆ ಮಣಿದು ಸರಕಾರ ರಚಿಸಿರುವ ತಂಡ. ಆದರೂ ಈಗ ರಾಜಕಾರಣಿಗಳು ನ್ಯಾಯವನ್ನು ಖಚಿತಪಡಿಸಲು ಮುಂದಾಗದೆ, ಸಾರ್ವಜನಿಕರನ್ನು ತಣ್ಣಗಾಗಿಸಲು, ಸ್ವಾರ್ಥಪ್ರೇರಿತ ಸಾಮ್ರಾಜ್ಯವೊಂದನ್ನು ರಕ್ಷಿಸಲು ಮುಂದಾಗಿದ್ದಾರೆ.
ಸಂತ್ರಸ್ತರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಗ ಈ ನಾಯಕರು ಎಲ್ಲಿದ್ದರು? ನಿವೃತ್ತ ನ್ಯಾಯಾಧೀಶರು, ವಕೀಲರು, ನಾಗರಿಕ ಹಕ್ಕುಗಳ ಗುಂಪುಗಳು, ಪತ್ರಕರ್ತರು ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಿದ್ದಾಗ ಈ ಮಹಾಮಹಿಮರು ಎಲ್ಲಿದ್ದರು? ಈ ನಾಯಕರ ಈಗಿನ ಕಾಳಜಿ ಪೆÇಳ್ಳು ಎನ್ನುವುದು ಸ್ಪಷ್ಟ.
ಇದು ಒಂದು ಸಿದ್ಧಮಾದರಿ. ಈಗ ಕಾಯುವಂತೆ ಹೇಳುವ ನಾಯಕರು ವಿಷಯ ಪರಾಕಾಷ್ಠೆಗೆ ಹೋದಾಗ ಮೌನವಾಗಿರುವುದನ್ನು ಜನದ್ರೋಹ ಎನ್ನದೆ ವಿಧಿಯಿಲ್ಲ. ಇವರ ಹೊಸ ದನಿಗಳು ಸಂತ್ರಸ್ತರಿಗೆ ನೆರವಾಗುವುದಕ್ಕಿಂತಲೂ ಹೆಚ್ಚಾಗಿ ಸುರಕ್ಷಿತ ಅಪರಾಧಿಗಳಿಗೆ ನೆರವಾಗುತ್ತವೆ.
ಸಾರ್ವಜನಿಕರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಅವರು ಮತ್ತೆ ಮತ್ತೆ ಆಡುವ ಮಾತುಗಳ ಒಳಾರ್ಥಗಳನ್ನು ಜನ ಗ್ರಹಿಸುತ್ತಾರೆ. ರಾಜಕಾರಣಿಗಳು ಉಳ್ಳವರ, ಬಲಾಢ್ಯರ ರಕ್ಷಣೆಗಾಗಿ ತಮ್ಮ ಕಾಳಜಿಯನ್ನು ತೋರುತ್ತಿದ್ದಾರೆ, ನ್ಯಾಯವನ್ನು ಅರಸಲು ಅಲ್ಲ ಎನ್ನುವುದನ್ನು ಅರಿತಿದ್ದಾರೆ. ಧರ್ಮಸ್ಥಳವನ್ನು ಸ್ಪರ್ಶಾತೀತವಾಗಿ ನೋಡಲಾಗುವುದಿಲ್ಲ. ಇಲ್ಲಿನ ಪ್ರಭಾವಳಿ ಉತ್ತರದಾಯಿತ್ವದ ಪ್ರಶ್ನೆಗಳನ್ನು ಮಸುಕಾಗಿಸಬಾರದು.
ಇದು ಜನರಿಗೆ ತಾಳ್ಮೆಯನ್ನು ಬೋಧಿಸುವ ಸಮಯವಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪುನರ್ ಪ್ರತಿಪಾದಿಸುವ, ಸಂತ್ರಸ್ತರೊಡನೆ ನಿಲ್ಲುವ, ನ್ಯಾಯಕ್ಕಾಗಿ ಆಗ್ರಹಿಸುವ ಸಮಯ.
ಖಾದರ್, ಅಶೋಕ, ರವಿ, ಯಡಿಯೂರಪ್ಪ ಮತ್ತು ಅಶ್ವತ್ಥ ನಾರಾಯಣ್ ನ್ಯಾಯದಲ್ಲಿ ನಂಬಿಕೆ ಇರಿಸಿದ್ದರೆ, ಅವರು ಉಪದೇಶ ನೀಡುವುದನ್ನು ನಿಲ್ಲಿಸಬೇಕು. ನ್ಯಾಯ ಗಳಿಸಲು ನೆರವಾಗಲು ಸಾಧ್ಯವಾಗದೆ ಹೋದರೆ, ಹೊರನಡೆದು ಬದಿಗೆ ಸರಿಯಬೇಕು.
ಜನರು ಮಾತನಾಡಿದ್ದಾರೆ. ಇನ್ನೂ ಧರ್ಮಸ್ಥಳದ ಪರ ಗಿಣಿಪಾಠದ ಸಮರ್ಥಕÀ ವಾದಗಳು ಮತ್ತು ನ್ಯಾಯ ಒದಗಿಸುವಲ್ಲಿನ ವಿಳಂಬಗಳು ಸಾಕಾಗಿದೆ. ನ್ಯಾಯ ಮುಂದುವರೆಯಬೇಕಿದೆ. ಅಧಿಕಾರದ ನೆರಳಿನಲ್ಲಿ ಅಲ್ಲ, ವಿಚಾರಣೆ ಮತ್ತು ಶೋಧನೆಯ ಬೆಳಕಿನಲ್ಲಿ.

Comments
Post a Comment