ಜಾತಿ, ಕೋಮು ಎಂದೇಕೆ ಬಡಿದಾಡುವಿರಿ?
ಒಂದು ಸರ್ಕಾರವು ಕೆಲವು ಜಾತಿಗಳು ಇತರ ಸಮುದಾಯಗಳಿಗಿಂತಲೂ ಮುಖ್ಯವಾದುದು ಎಂದು ಭಾವಿಸಿ ಆಳ್ವಿಕೆ ನಡೆಸಲಾಗುವುದಿಲ್ಲ.
ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ದೂರಗಾಮಿ ನೀತಿಗಳು ಅಥವಾ ಆರ್ಥಿಕ ಮಾದರಿಗಿಂತಲೂ ಹೆಚ್ಚಾಗಿ ಜಾತಿ-ಕೋಮು ಸಮೀಕರಣದ ಮೂಲಕವೇ ಆಡಳಿತ ನಡೆಸುತ್ತಿರುವುದು ಎದ್ದುಕಾಣುತ್ತಿದೆ. ಒಂದು ಕಾಲದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ಸಬಲೀಕರಣದ ದೃಷ್ಟಿಯಿಂದ ಆರಂಭವಾದ ಚಳುವಳಿಯನ್ನು ಈಗ ಮತ ಬ್ಯಾಂಕ್ ರಾಜಕಾರಣದ ಅಸ್ತ್ರವನ್ನಾಗಿ ಮಾಡಲಾಗಿದೆ. ಅಲ್ಲದೆ ಈ ಅಸ್ತ್ರವನ್ನು ಬೇಕಾಬಿಟ್ಟಿ ಪ್ರಯೋಗಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ನಿಷ್ಠರ ಪಡೆ ಯಾವುದೇ ಮುಜುಗರವಿಲ್ಲದೆ ಈ ನಿಟ್ಟಿನಲ್ಲಿ ರಾಜಕೀಯ ನಿರೂಪಣೆಯನ್ನು ಸೃಷ್ಟಿಸಿದ್ದು, `ಅಹಿಂದ' ಒಂದೇ ಪ್ರಧಾನವಾದುದು ಎಂದು ಬಿಂಬಿಸುತ್ತಿದ್ದಾರೆ. ಇದಕ್ಕೆ ಕಾರಣ ಅಹಿಂದ ಅವಕಾಶವಂಚಿತರನ್ನು ಪ್ರತಿನಿಧಿಸುತ್ತಿದೆ ಎನ್ನುವುದಲ್ಲ; ಬದಲಾಗಿ, ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತದೆ ಎನ್ನುವುದು. ಇಂದಿನ ಯುವಜನ ಜಾತಿ ಆಧಾರಿತ ವ್ಯವಸ್ಥೆಗಳಿಗಿಂತ ಎಲ್ಲರಿಗೂ ಅವಕಾಶ ಲಭ್ಯವಿರುವ ವ್ಯವಸ್ಥೆ ಬಯಸುತ್ತಾರೆ ಎನ್ನುವುದು ನಮ್ಮ ಆಡಳತಗಾರರಿಗೆ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಜಾತಿ-ಜಾತಿಗಳು ಮತ್ತು ಕೋಮುಗಳ ನಡುವೆ ಹಗೆತನ ಮುಂದುವರಿಸುವ ಯೋಜನೆ ಮುಂದುವರಿಸಲು ಆಸಕ್ತರಾಗಿದ್ದಾರೆ.
ಸಾಮಾಜಿಕ ನ್ಯಾಯದಿಂದ ಜಾತಿ ಆಧಾರಿತ ಅರ್ಹತೆಗೆ ಜಿಗಿದಿರುವುದು ರಾಜಕೀಯ ನಿಷ್ಕ್ರಿಯತೆ ಮಾತ್ರವೇ ಅಲ್ಲ, ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಪಾಯಕಾರಿ ಮಾರ್ಗವಾಗುತ್ತದೆ. ಒಂದು ಸರ್ಕಾರವು ಕೆಲವು ಜಾತಿಗಳು ಇತರ ಸಮುದಾಯಗಳಿಗಿಂತಲೂ ಮುಖ್ಯವಾದುದು ಎಂದು ಭಾವಿಸಿ ಆಳ್ವಿಕೆ ನಡೆಸಲಾಗುವುದಿಲ್ಲ. ಆದರೂ ಕರ್ನಾಟಕದ ಕಾಂಗ್ರೆಸ್ ನಾಯಕತ್ವ ಇದೇ ಧೋರಣೆಯನ್ನು ಬಿಂಬಿಸುತ್ತಿದೆ.
ನಿಗಮ ಮಂಡಲಿಗಳ ನೇಮಕಾತಿಯಲ್ಲಾಗಲಿ, ಕಲ್ಯಾಣ ಯೋಜನೆಗಳ ವಿತರಣೆಯಲ್ಲಾಗಲಿ ಅಥವಾ ಪಕ್ಷದ ಆಂತರಿಕ ಹುದ್ದೆಗಳಲ್ಲಾಗಲಿ ಜಾತಿ ಸಮೀಕರಣವೇ ಪ್ರಧಾನವಾಗಿದೆ. ಅಂದರೆ ಪ್ರತಿಗಾಮಿ ನೀತಿಯನ್ನು ಅನುಸರಿಸುತ್ತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಮಾತ್ರ ಒಂದುಗೂಡಿಸುವ ರಾಜಕೀಯ ಮಂತ್ರ ಪಠಿಸುತ್ತ ಇತರರನ್ನು ಕಡೆಗಣಿಸಲಾಗುತ್ತದೆ. ಕರ್ನಾಟಕ ಛಿದ್ರಗೊಂಡ ಮತಬ್ಯಾಂಕುಗಳ ಒಂದು ರಾಜಕೀಯ ವ್ಯವಸ್ಥೆಯನ್ನು ಹೊಂದಿಲ್ಲ. ಜೀವಂತವಾಗಿ, ಸಾಂಸ್ಕøತಿಕವಾಗಿ ಚಲನಶೀಲವಾದ ಮತ್ತು ಒಳಗೊಳ್ಳುವ ರಾಜಕಾರಣವನ್ನು ಅಪೇಕ್ಷಿಸುವ ಒಂದು ರಾಜ್ಯವಾಗಿದೆಯೇ ಹೊರತು, ಜನ ಗುಂಪುಗಾರಿಕೆಯನ್ನು ಬಯಸುವುದಿಲ್ಲ.
ಆಳ್ವಿಕೆಯ ಈ ಮಾದರಿ ಜನಸಂಖ್ಯೆಯ ಬಹುಭಾಗವನ್ನು - ಕೆಲವು ಜಾತಿಗಳು, ವೃತ್ತಿಪರರು, ನಗರ ಯುವ ಸಮೂಹ, ಅಹಿಂದ ಮೈತ್ರಿಕೂಟದೊಳಗಿನ ಪ್ರಗತಿಪರರನ್ನೂ ಒಳಗೊಂಡಂತೆ - ಹೊರಗಿಡಲಾಗಿದ್ದು, ಅವರ ದನಿಯನ್ನು ಆಲಿಸದೆ ಅಪಮಾನ ಮಾಡಲಾಗುತ್ತಿದೆ. ಸರ್ಕಾರದ ಸೈದ್ಧಾಂತಿಕ ತಳಹದಿಯನ್ನು ಗಮನಿಸಿದಾಗ, ಅಹಿಂದ ಹೊರತಾದ ಸಮುದಾಯಗಳ ಕೊಡುಗೆಯನ್ನು ನಿರ್ಲಕ್ಷಿಸುವ ಅಥವಾ ಅಲ್ಲಗಳೆಯುವ ಲಕ್ಷಣಗಳು ಕಾಣುತ್ತವೆ. ತತ್ಪರಿಣಾಮವಾಗಿ ಈ ಇತರ ಸಮುದಾಯಗಳಿಗೆ ರಾಜ್ಯದ ಭವಿಷ್ಯದಲ್ಲಿ ಪ್ರಾತಿನಿಧ್ಯದ ಅವಶ್ಯಕತೆ ಇಲ್ಲ ಎಂಬ ಧೋರಣೆ ಕಾಣುತ್ತದೆ. ಇದು ಅಪಾಯಕಾರಿ ವಿದ್ಯಮಾನವಾಗುತ್ತದೆ.
ಕರ್ನಾಟಕ ಇತರ ಉತ್ತರ ಭಾರತದ ರಾಜ್ಯಗಳಂತೆ ಅಲ್ಲ, ಇಲ್ಲಿನ ಜಾತಿ ಸಮೀಕರಣಗಳು ಚಾರಿತ್ರಿಕವಾಗಿ ಸಂಯಮಪೂರ್ಣವಾಗಿದೆ, ಕುಂದುಕೊರತೆಗಳಿಗಿಂತಲೂ ಪಟ್ಟಭದ್ರ ಆಳ್ವಿಕೆಗೆ ಪ್ರಾಶಸ್ತ್ಯ ನೀಡುತ್ತಾ ಬರಲಾಗಿದೆ. ಇದು ಈಗ ಬದಲಾಗುತ್ತಿದೆ. ಹಾಲಿ ಸರ್ಕಾರವು ಬಹುಸಂಖ್ಯಾವಾದದ ಜಾತಿ ರಾಜಕಾರಣಕ್ಕೆ ಮುಂದಾಗಿದ್ದು ಪ್ರತಿಭೆ, ನಿರೀಕ್ಷೆ, ಆಕಾಂಕ್ಷೆಗಳನ್ನು ಕಡೆಗಣಿಸಿ ಜಾತಿ ಅಸ್ಮಿತೆಗಳೊಡಗಿನ ಐಕ್ಯತೆ, ಜಾತಿ ಸಮಸ್ಯೆಗಳು ಹಾಗೂ ಜಾತಿ ತುಷ್ಟೀಕರಣದ ಹಾದಿಯಲ್ಲಿ ಕ್ರಮಿಸಿದೆ. ಆಡಳಿತಾತ್ಮಕವಾಗಿ ಕಾಣುವ ಕ್ರಮಗಳು ಸಹ ಕರ್ನಾಟಕದ ಒಳಿತಿಗೆ ಪೂರಕವಾಗಿರುವುದಿಲ್ಲ ಬದಲಾಗಿ ಜಾತಿ ಗುಂಪನ್ನು ಸಂತೃಪ್ತಿಗೊಳಿಸುವ ಮಾದರಿಯಲ್ಲಿರುತ್ತದೆ.
ನ್ಯಾಯದ ಪರಿಕಲ್ಪನೆಯನ್ನು ಕೇವಲ ಚುನಾವಣಾ ಪ್ರಾತಿನಿಧ್ಯಕ್ಕೆ ಸೀಮಿತಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ಸಬಲೀಕರಣದ ಕಲ್ಪನೆಯನ್ನೇ ಅಪ್ರಸ್ತುತವಾಗಿಸುತ್ತಿದೆ. ಸಬಲೀಕರಣ ಎಂದರೆ ಸಾಮಥ್ರ್ಯದ ಹೆಚ್ಚಳ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅವಕಾಶಗಳನ್ನು ಪ್ರತಿನಿಧಿಸಬೇಕೇ ಹೊರತು, ಸಾಂಕೇತಿಕ ನೇಮಕಾತಿಗಳು ಅಥವಾ ಜಾತಿ ಪ್ರಧಾನ ಹುದ್ದೆಗಳನ್ನು ಒದಗಿಸುವುದರಲ್ಲಿ ಅಲ್ಲ. ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯೂ ಜಾತಿಯ ಅಂಗಳದಲ್ಲಿ ಪಗಡೆ ಕಾಯಿಯಾದಾಗ, ದಕ್ಷತೆ ನಷ್ಟವಾಗುತ್ತದೆ, ಸಾರ್ವಜನಿಕರ ವಿಶ್ವಾಸ ಕುಂದುತ್ತದೆ ಮತ್ತು ಪ್ರತಿಭೆ ಬಲಿಯಾಗುತ್ತದೆ.
ಈ ಧೋರಣೆಯ ದುರಂತ ಎಂದರೆ, ಇದು ಕರ್ನಾಟಕ ಎದುರಿಸುತ್ತಿರುವ ನಿರುದ್ಯೋಗ, ಗ್ರಾಮೀಣ ಬಿಕ್ಕಟ್ಟು, ಮೂಲ ಸೌಕರ್ಯಗಳ ಕುಸಿತ, ಕೈಗಾರಿಕಾ ಅಭಿವೃದ್ಧಿಯ ಹಿನ್ನಡೆ ಮತ್ತು ಕನ್ನಡ ಸಂಸ್ಕೃತಿಯ ಹೆಮ್ಮೆಯ ಕಡೆಗಣನೆ. ಈ ಜಟಿಲ ಸಮಸ್ಯೆಗಳನ್ನು ಗಮನಿಸದೆ ಆಡಳಿತ ನಡೆಸಲಾಗುತ್ತಿದೆ. ಇದಾವುದೂ ಜಾತಿ ನಿರ್ದಿಷ್ಟ ಸಮಸ್ಯೆಗಳಲ್ಲ, ಎಲ್ಲ ಕನ್ನಡಿಗರನ್ನು ಬಾಧಿಸುವ ಸಮಸ್ಯೆಗಳು. ಆದರೆ ಕಾಂಗ್ರೆಸ್ ಪಕ್ಷ ಸಂಕುಚಿತ ಮಾರ್ಗದಲ್ಲಿ ಕ್ರಮಿಸುತ್ತಿದ್ದು, ಒಂದುಗೂಡಿದ ಕರ್ನಾಟಕಕ್ಕಿಂತಲೂ ವಿಭಜಿತ ಕರ್ನಾಟಕವನ್ನು ಆಳುವುದು ಸುಲಭ ಎಂದು ಭಾವಿಸಿದಂತಿದೆ.
ಇನ್ನೂ ನಿರಾಶಾದಾಯಕ ಸಂಗತಿ ಎಂದರೆ, ಆಡಳಿತಗಾರರಲ್ಲಿ ಆತ್ಮಾವಲೋಕನದ ಸುಳಿವೂ ಸಹ ಕಾಣುವುದಿಲ್ಲ. ಭಾರತದ ಅನೇಕ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದರೂ ಕಾಂಗ್ರೆಸ್ ಪಕ್ಷವು ತನ್ನ 20ನೆ ಶತಮಾನದ ಅಸ್ಮಿತೆ ರಾಜಕಾರಣವನ್ನು ದಾಟಿ ಯೋಚಿಸುತ್ತಿಲ್ಲ. ಕರ್ನಾಟಕದಲ್ಲಿ ಇದು ಹಳೆಯ ಸಿದ್ಧಮಾದರಿಗಳನ್ನು ಅನುಕರಿಸುವುದನ್ನೇ ಪ್ರಗತಿಪರ ಆಳ್ವಿಕೆ ಎಂದು ಬಿಂಬಿಸುವ ಪ್ರಯತ್ನವಾಗಿದೆ.
ಕರ್ನಾಟಕ ರಾಜ್ಯಕ್ಕೆ ಇನ್ನೂ ಉತ್ತಮ ಆಳ್ವಿಕೆ ಬೇಕಿದೆ. ಜಾತಿ ಸಮೀಕರಣವನ್ನು ದಾಟಿ ನೋಡುವ, ಎಲ್ಲ ಸಮುದಾಯಗಳ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸುವ, ಇಡೀ ರಾಜ್ಯವನ್ನು ನಿರ್ವಹಿಸುವ ನಾಯಕತ್ವದ ಅವಶ್ಯಕತೆ ಇದೆ. ಕೇವಲ ಚುನಾವಣಾ ದೃಷ್ಟಿಯ ಮತದಾರರ ಗುಂಪುಗಳನ್ನು ಕೇಂದ್ರೀಕರಿಸುವ ತಾತ್ಕಾಲಿಕ ಗೆಲುವುಗಳಿಂದ ಇದು ಸಾಧ್ಯವಾಗುವುದಿಲ್ಲ. ನೈಜ ಸಬಲೀಕರಣ ಜಾತಿ ಸಮೀಕರಣದ ರಾಜಕೀಯದಲ್ಲಿ ಇಲ್ಲ; ಬದಲಾಗಿ ಸಮುದಾಯಗಳನ್ನು ಒಂದುಗೂಡಿಸುವ, ಸಮಾನ ಅಭಿವೃದ್ಧಿಯ ಗುರಿಯತ್ತ ಸಾಗುವ ನೀತಿಯಲ್ಲಿದೆ.
ಕಾಂಗ್ರೆಸ್ ಈ ಮೂಲಭೂತ ಸತ್ಯವನ್ನು ಅರ್ಥಮಾಡಿಕೊಳ್ಳುವವರೆಗೂ, ಅದು ಅನುಮಾನಗಳಿಂದ ಕೂಡಿದ, ಘೋಷಣೆಗಳ ಮೂಲಕ ವಿಘಟಿಸುವ ಆಳ್ವಿಕೆಯನ್ನೇ ಮುಂದುವರೆಸಲಿದೆ. ತತ್ಪರಿಣಾಮವಾಗಿ ತಾನು ಆಳ್ವಿಕೆ ನಡೆಸುತ್ತಿರುವ ರಾಜ್ಯದಲ್ಲೇ ಒಂದು ಉತ್ಸಾಹ ಸೃಷ್ಟಿಸಲು ವಿಫಲವಾಗುತ್ತದೆ.

Good article bvsee
ReplyDelete