"ಕಾನೂನು ಒಂದು ಕತ್ತೆ" ಎಂಬ ಡಿಕನ್ಸ್ ಮಾತಿಗೆ ಜೀವ ತುಂಬಿದ ಅನುಭವ

 


ಅಶೋಕ್ ಲವಾಸಾ ಬರಹದಲ್ಲಿ ನ್ಯಾಯದ ವಿಳಂಬಕ್ಕಿಂತ ಹೆಚ್ಚಾಗಿ ಬಯಲಾಗುವುದು ವ್ಯವಸ್ಥೆಯ ಅಸಂಗತತೆ


* ಬಿವಿಸೀ


`ಕಾನೂನು ಒಂದು ಕತ್ತೆ' (ಲಾ ಈಸ್ ಆನ್ ಆಸ್) ಎಂಬ ಚಾಲ್ರ್ಸ್ ಡಿಕನ್ಸ್ ಅವರ ಪ್ರಸಿದ್ಧ ಉಲ್ಲೇಖವನ್ನು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಅಶೋಕ್ ಲವಾಸಾ ತಮ್ಮ ಇತ್ತೀಚಿನ ಲೇಖನದಲ್ಲಿ ನೆನಪಿಸಿಕೊಳ್ಳುತ್ತಾರೆ. ಇದು ನ್ಯಾಯಾಂಗವನ್ನು ಹೀಗಳೆಯುವ ಮಾತಲ್ಲ. ಬದಲಾಗಿ, ನ್ಯಾಯದ ಉದ್ದೇಶಕ್ಕಿಂತ ಕಾರ್ಯವಿಧಾನವೇ ಮೇಲುಗೈ ಸಾಧಿಸಿದಾಗ ಕಾನೂನು ಎಷ್ಟರಮಟ್ಟಿಗೆ ಅರ್ಥಹೀನವಾಗಿ ವರ್ತಿಸಬಲ್ಲದು ಎಂಬುದನ್ನು ಅವರ ಸ್ವಂತ ಅನುಭವದ ಮೂಲಕ ತೋರಿಸುವ ಪ್ರಯತ್ನ.

2009ರಲ್ಲಿ ಕೇಂದ್ರ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಲವಾಸಾ, ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡಿದ ಪತ್ರಕ್ಕೆ ಸಹಿ ಹಾಕಿದ್ದರು. ಹದಿನೇಳು ವರ್ಷಗಳ ನಂತರ, ಅದೇ ಪತ್ರದ ಮೇಲಿನ ತಮ್ಮ ಸಹಿಯನ್ನು ದೃಢೀಕರಿಸಲು ಪಾಟ್ನಾದ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಅವರಿಗೆ ಸಮನ್ಸ್ ಬಂತು. ಸರ್ಕಾರಿ ದಾಖಲೆಗಳಿಂದಲೇ ಇದನ್ನು ಪರಿಶೀಲಿಸಬಹುದಿತ್ತು. ವಿಡಿಯೊ ಕಾನ್ಫರೆನ್ಸ್ ಮೂಲಕ ಸಾಕ್ಷ್ಯ ಪಡೆಯುವ ಅವಕಾಶವೂ ಇತ್ತು. ಆದರೂ ನ್ಯಾಯಾಲಯವು ವೈಯಕ್ತಿಕ ಹಾಜರಾತಿಯನ್ನೇ ಒತ್ತಾಯಿಸಿತು.

ಲವಾಸಾ ಆರೋಪಿಯಲ್ಲ, ಪ್ರಕರಣದ ಸಾಕ್ಷಿದಾರ ಮಾತ್ರ. ಆದರೂ ಅವರು ಅನುಭವಿಸಿದ ಸಂಕಷ್ಟ, ನ್ಯಾಯಾಲಯದ ದ್ವಾರ ತಟ್ಟುವ ಸಾಮಾನ್ಯ ನಾಗರಿಕನ ಅನುಭವಕ್ಕಿಂತ ಭಿನ್ನವಾಗಿರಲಿಲ್ಲ. ಪಾಟ್ನಾಕ್ಕೆ ಪ್ರಯಾಣ, ನ್ಯಾಯಾಲಯದಲ್ಲಿ ಗಂಟೆಗಟ್ಟಲೆ ಕಾಯುವಿಕೆ, ಪ್ರಕರಣಗಳ ದಟ್ಟಣೆ, ಗೊಂದಲದ ನಡುವೆ ತಮ್ಮ ಸರದಿಗಾಗಿ ನಿರೀಕ್ಷೆ - ಇವೆಲ್ಲವೂ ಐದು ನಿಮಿಷಗಳಲ್ಲಿ ಮುಗಿಯಬಹುದಾದ ಒಂದು ಔಪಚಾರಿಕತೆಯ ಬೆಲೆ.

ಅವರ ವಿವರಣೆಯಲ್ಲಿ ನ್ಯಾಯಾಲಯದ ದಿನಚರಿ ಕಣ್ಣಿಗೆ ಕಟ್ಟಿದಂತಿದೆ. ಕಡತಗಳ ರಾಶಿ, ಜನರಿಂದ ತುಂಬಿದ ನ್ಯಾಯಾಲಯ, ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಅಲೆದಾಡುವ ವಕೀಲರು, ವಿಳಂಬದಿಂದ ಬೇಸತ್ತ ಸಾಕ್ಷಿದಾರರು, ಪ್ರತಿಯೊಂದು ಹಂತದಲ್ಲೂ ಸಮಯ ವ್ಯರ್ಥವಾಗುವ ಕಾರ್ಯವಿಧಾನ. ವಿಚಾರಣೆ ಆರಂಭವಾದ ನಂತರವೂ ಎಲ್ಲವೂ ಸುಗಮವಾಗಲಿಲ್ಲ. ಅವರ ಹೇಳಿಕೆಯನ್ನು ದಾಖಲಿಸುವಾಗ ತಪ್ಪು ವಿವರಗಳನ್ನು ಓದಲಾಗಿದ್ದು, ಬಳಿಕ ಅವನ್ನು ತಿದ್ದುಪಡಿ ಮಾಡಬೇಕಾಯಿತು. ಪ್ರತಿರಕ್ಷಣಾ ವಕೀಲರ ಪ್ರಶ್ನೆಗಳೂ ಪ್ರಕರಣದ ಮೂಲಾಂಶಕ್ಕಿಂತ ತಾಂತ್ರಿಕ ವಿಚಾರಗಳ ಸುತ್ತಲೇ ತಿರುಗಿದವು.

ಲವಾಸಾ ಅವರ ಬೇಸರ ನ್ಯಾಯಾಧೀಶರ ವಿರುದ್ಧವಲ್ಲ. ನ್ಯಾಯಾಧೀಶರೂ ಭಾರೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಅವರ ಟೀಕೆ ವ್ಯವಸ್ಥೆಯತ್ತ. ಸರ್ಕಾರಿ ದಾಖಲೆಗಳಿಂದ ದೃಢೀಕರಿಸಬಹುದಾದ ಸಂಗತಿಗಾಗಿ ಒಬ್ಬ ನಿವೃತ್ತ ಅಧಿಕಾರಿಯನ್ನು ನೂರಾರು ಕಿಲೋಮೀಟರ್ ಪ್ರಯಾಣಕ್ಕೆ ಒತ್ತಾಯಿಸುವುದು, ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳದಿರುವುದು ಮತ್ತು ಕಾರ್ಯವಿಧಾನವನ್ನು ಉದ್ದೇಶಕ್ಕಿಂತ ದೊಡ್ಡದಾಗಿಸುವುದು ನ್ಯಾಯದ ಹಿತಕ್ಕೇ ವಿರುದ್ಧ ಎಂದು ಅವರು ಪ್ರಶ್ನಿಸುತ್ತಾರೆ.

ಈ ಅನುಭವದ ಅಂತ್ಯದಲ್ಲಿ ಅವರಿಗೆ ನೆನಪಾಗುವುದು ಡಿಕನ್ಸ್ ಅವರ ಮಾತು - `ಕಾನೂನು ಒಂದು ಕತ್ತೆ;. ಈ ವಾಕ್ಯವನ್ನು ಅವರು ಭಾವೋದ್ವೇಗದಿಂದ ಬಳಸಿಲ್ಲ; ಬದಲಾಗಿ, ವಿವೇಕಕ್ಕಿಂತ ನಿಯಮಗಳ ಯಾಂತ್ರಿಕ ಅನುಸರಣೆಯೇ ಮೇಲುಗೈ ಸಾಧಿಸಿದಾಗ ಕಾನೂನು ತನ್ನ ವಿಶ್ವಾಸಾರ್ಹತೆಯನ್ನು ಹೇಗೆ ಕಳೆದುಕೊಳ್ಳುತ್ತದೆ ಎಂಬುದನ್ನು ಸೂಚಿಸಲು ಬಳಸಿದ್ದಾರೆ.

ಭಾರತೀಯ ನ್ಯಾಯಾಂಗದಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಕೋಟಿಗಳನ್ನು ದಾಟಿದೆ. ನ್ಯಾಯಾಧೀಶರ ಕೊರತೆ, ಮೂಲಸೌಕರ್ಯದ ಅಭಾವ ಮತ್ತು ಆಡಳಿತಾತ್ಮಕ ಜಡತೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಲವಾಸಾ ಅವರ ಅನುಭವ ಮತ್ತೊಂದು ಆಯಾಮವನ್ನು ಎತ್ತಿ ತೋರಿಸುತ್ತದೆ. ನ್ಯಾಯವನ್ನು ವಿಳಂಬಗೊಳಿಸುವುದು ಕೇವಲ ಪ್ರಕರಣಗಳ ಸಂಖ್ಯೆ ಮಾತ್ರವಲ್ಲ; ಅನಗತ್ಯ ಔಪಚಾರಿಕತೆ, ಹಳೆಯ ಕಾರ್ಯವಿಧಾನಗಳು ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆಯ ಕೊರತೆಯೂ ಅಷ್ಟೇ ದೊಡ್ಡ ಕಾರಣಗಳಾಗಿವೆ.

ಲವಾಸಾ ಅವರ ಲೇಖನವು ಒಬ್ಬ ಹಿರಿಯ ಅಧಿಕಾರಿಯ ವೈಯಕ್ತಿಕ ನೆನಪು ಮಾತ್ರವಲ್ಲ. ನ್ಯಾಯದ ಹೆಸರಿನಲ್ಲಿ ನಾಗರಿಕರು ಅನುಭವಿಸುವ ಅನಗತ್ಯ ಸಂಕಷ್ಟಗಳ ದಾಖಲೆಯಾಗಿದೆ. ನ್ಯಾಯದ ಉದ್ದೇಶ ಜನರಿಗೆ ಪರಿಹಾರ ನೀಡುವುದು; ಕಾರ್ಯವಿಧಾನವೇ ಶಿಕ್ಷೆಯಾಗಿ ಪರಿಣಮಿಸಿದರೆ, ಡಿಕನ್ಸ್ ಅವರ `ಕಾನೂನು ಒಂದು ಕತ್ತೆ' ಎಂಬ ಶತಮಾನಗಳ ಹಿಂದಿನ ವ್ಯಂಗ್ಯೋಕ್ತಿ ಇಂದಿಗೂ ಏಕೆ ಪ್ರಸ್ತುತವಾಗಿದೆ ಎಂಬುದಕ್ಕೆ ಇದೇ ಉತ್ತರ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ