ಚುನಾವಣಾ ಆಯೋಗದ ನಿಷ್ಪಕ್ಷಪಾತತನಕ್ಕೆ ಗ್ರಹಣ: ಸ್ವಾಯತ್ತತೆ ಹೆಸರಿನಲ್ಲಿ ನಡೆಯುತ್ತಿದೆಯೇ ನಾಟಕ?

 ಸಂಸ್ಥೆಗಳ ಸಮಾಧಿಯ ಮೇಲೆ ಚುನಾವಣೆ: ಮನ್‍ಮೋಹನ್ ಸಿಂಗ್ ಕಾಲದಿಂದ ಮೋದಿ ಯುಗದ ಸವಾಲುಗಳವರೆಗೆ!

ಇರೋ ವಿಚಾರ * ಬಿವಿಸೀ

ಮಾಜಿ ಮುಖ್ಯ ಚುನಾವಣೆ ಆಯುಕ್ತ ಎಸ್ ವೈ ಖುರೇಷಿ ಅವರು ಇತ್ತೀಚೆಗೆ ಬಹಿರಂಗಪಡಿಸಿದ ಘಟನೆಯೊಂದು ಭಾರತೀಯ ಪ್ರಜಾಪ್ರಭುತ್ವದ ಸುವರ್ಣ ಅಧ್ಯಾಯವೊಂದಕ್ಕೆ ಬೆಳಕು ಚೆಲ್ಲಿದೆ. ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರೊಬ್ಬರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಾಗ, ಚುನಾವಣಾ ಆಯೋಗವು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿತ್ತು. ಆ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್‍ನ ಕೆಲ ನಾಯಕರು ಆಯೋಗದ ವಿರುದ್ಧ ನೀಡಿದ್ದ ಹಗುರ ಹೇಳಿಕೆಗಳಿಂದ ಕಂಗೆಟ್ಟಿದ್ದ ಪ್ರಧಾನಿ ಮನ್‍ಮೋಹನ್ ಸಿಂಗ್ ಅವರು, "ನನ್ನ ಸರ್ಕಾರವೇ ಆಯೋಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ನೀವು ಭಾವಿಸುವುದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಭಾವುಕರಾಗಿ ನುಡಿದಿದ್ದರಂತೆ. ಪ್ರಧಾನಿಯೊಬ್ಬರ ಈ ಆಕ್ರೋಶ ಮತ್ತು ಭಾವುಕತೆ, ಸ್ವತಂತ್ರ ಸಂಸ್ಥೆಗಳ ಪಾವಿತ್ರ್ಯತೆ ಹಾಗೂ ಚುನಾವಣಾ ವ್ಯವಸ್ಥೆಯ ನಿಷ್ಪಕ್ಷಪಾತತನದ ಬಗ್ಗೆ ಅವರಿಗಿದ್ದ ಅಪಾರ ಗೌರವ ಮತ್ತು ಪ್ರಜಾಸತ್ತಾತ್ಮಕ ಆತ್ಮಸಾಕ್ಷಿಗೆ ಹಿಡಿದ ಕನ್ನಡಿಯಾಗಿತ್ತು.

ಆದರೆ, ಇಂದಿನ ನರೇಂದ್ರ ಮೋದಿ ಆಡಳಿತಾವಧಿಯ ಸನ್ನಿವೇಶವನ್ನು ಅಂದಿನ ದಿನಗಳಿಗೆ ಹೋಲಿಸಿ ನೋಡಿದರೆ ಪ್ರಜಾಪ್ರಭುತ್ವ ಎಷ್ಟು ಅಧೋಗತಿಗೆ ಇಳಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂದು ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ದೇಶದ ಒಳಗಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ತೀವ್ರ ಸಂಶಯದ ನೆರಳು ಬಿದ್ದಿದೆ. ಕೇವಲ ವಿಪಕ್ಷಗಳು ಮಾತ್ರವಲ್ಲದೆ, ತಟಸ್ಥ ನಾಗರಿಕ ಸಮಾಜವೂ ಚುನಾವಣಾ ಆಯೋಗದ ನಿಷ್ಪಕ್ಷಪಾತತನವನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದೆ.

ಮೋದಿ ಸರ್ಕಾರದ ಅವಧಿಯಲ್ಲಿ ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಉಳಿಯದೆ, ಆಡಳಿತಾರೂಢ ಬಿಜೆಪಿಯ ಒಂದು ಅಧೀನ ಅಂಗದಂತೆ ವರ್ತಿಸುತ್ತಿದೆ ಎಂಬ ಗಂಭೀರ ಆರೋಪಗಳು ಸರ್ವೇಸಾಮಾನ್ಯವಾಗಿವೆ. ಚುನಾವಣಾ ವೇಳಾಪಟ್ಟಿ ನಿಗದಿಪಡಿಸುವುದರಿಂದ ಹಿಡಿದು, ದ್ವೇಷಪೂರಿತ ಭಾಷಣಗಳನ್ನು ಮಾಡುವ ಆಡಳಿತ ಪಕ್ಷದ ಪ್ರಭಾವಿ ನಾಯಕರನ್ನು ರಕ್ಷಿಸುವವರೆಗೆ ಆಯೋಗವು ತೋರುತ್ತಿರುವ ತಾರತಮ್ಯ ನೀತಿ ಕಣ್ಣಿಗೆ ಎದ್ದು ಕಾಣುತ್ತಿದೆ. ಪ್ರತಿಪಕ್ಷಗಳ ನಾಯಕರ ಮೇಲೆ ಅತ್ಯಂತ ಸಣ್ಣ ಕಾರಣಗಳಿಗೂ ನಿಬರ್ಂಧ ಹೇರುವ ಆಯೋಗ, ಆಡಳಿತ ಪಕ್ಷದ ಸಾಂವಿಧಾನಿಕ ಹುದ್ದೆಯಲ್ಲಿರುವ ನಾಯಕರು ಕೋಮು ದ್ರುವೀಕರಣದ ಹೇಳಿಕೆ ನೀಡಿದರೂ ಮೌನಕ್ಕೆ ಶರಣಾಗುತ್ತದೆ.

ಮತದಾನದ ಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ, ಮತದಾರರ ಪಟ್ಟಿಗಳಿಂದ ಲಕ್ಷಾಂತರ ಹೆಸರುಗಳ ನಿಗೂಢ ನಾಪತ್ತೆ, ಹಾಗೂ ಇವಿಎಂ ಅಂಕಿ-ಅಂಶಗಳ ಬಿಡುಗಡೆಯಲ್ಲಿ ಆಯೋಗ ತೋರುವ ಅನುಮಾನಾಸ್ಪದ ವಿಳಂಬಗಳು ಪ್ರಜಾಪ್ರಭುತ್ವದ ತಡಿಹದಿಯನ್ನೇ ಅಲ್ಲಾಡಿಸಿವೆ. ಅಂದು ಪ್ರಧಾನಿಯಾಗಿದ್ದವರು ಸಂಸ್ಥೆಯ ಗೌರವಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧರಾಗಿದ್ದರು; ಇಂದು ಅಧಿಕಾರದಲ್ಲಿರುವವರು ಸ್ವತಂತ್ರ ಸಂಸ್ಥೆಗಳನ್ನೇ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಚುನಾವಣಾ ಆಯೋಗದ ಇಂತಹ ಕಣ್ಣುಮುಚ್ಚಾಲೆ ಆಟ ಹಾಗೂ ಅಧಿಕಾರಾರೂಢರ ದಬ್ಬಾಳಿಕೆಯಿಂದಾಗಿ ಭಾರತದ ಚುನಾವಣಾ ಪ್ರಕ್ರಿಯೆಯು ಪ್ರಜಾಸತ್ತಾತ್ಮಕ ಉತ್ಸವವಾಗುವ ಬದಲು, ಆಡಳಿತ ಪಕ್ಷದ ನಿರ್ದೇಶನದಂತೆ ನಡೆಯುವ ನಾಟಕದಂತಾಗಿದೆ. ಸಂಸ್ಥೆಗಳ ಸ್ವಾಯತ್ತತೆಯನ್ನು ಸಮಾಧಿ ಮಾಡಿ ನಡೆಸುವ ಇಂತಹ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಅಪಾಯಕಾರಿ ಮುನ್ಸೂಚನೆಯಾಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ