ದಲಿತರ ಭೂಕಬಳಿಕೆ ತನಿಖೆ: ಶ್ರೀ ರವಿಶಂಕರ್ ಗುರೂಜಿಗೆ ಎಸ್‍ಐಟಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಗೇಕೆ ವಿನಾಯಿತಿ?

 ಖುಲ್ಲಂಖುಲ್ಲಾ * ಬಿವಿಸೀ

ರವಿಶಂಕರ್ ಗುರೂಜಿ ನೇತೃತ್ವದ `ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ದಲಿತರ ಮತ್ತು ಸರ್ಕಾರದ ನೂರಾರು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂಬ ಗಂಭೀರ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ಅತ್ಯಂತ ಪ್ರಶಂಸನೀಯ. ಕಾನೂನು ಎಲ್ಲರಿಗೂ ಒಂದೇ, ಅದು ಪ್ರಭಾವಿ ಧರ್ಮಗುರುವೇ ಆಗಿರಲಿ ಅಥವಾ ಸಾಮಾನ್ಯ ಪ್ರಜೆಯೇ ಆಗಿರಲಿ, ಅಕ್ರಮಗಳನ್ನು ಬಯಲಿಗೆಳೆಯುವುದು ಸರ್ಕಾರದ ಆಡಳಿತಾತ್ಮಕ ಕರ್ತವ್ಯ. ಕಂದಾಯ ಸಚಿವರು ದಲಿತ ನಾಯಕರ ಸಭೆಯಲ್ಲಿ ಈ ದಿಟ್ಟ ನಿರ್ಧಾರ ಪ್ರಕಟಿಸಿ ಸಾರ್ವಜನಿಕರ ಶಹಬಾಸ್‍ಗಿರಿ ಪಡೆದಿದ್ದಾರೆ.

ಆದರೆ, ಇಲ್ಲೊಂದು ಯಕ್ಷಪ್ರಶ್ನೆ ಉದ್ಭವಿಸುತ್ತದೆ -  ರವಿಶಂಕರ್ ಅವರಿಗೆ ಅನ್ವಯವಾಗುವ ಈ ಕಾನೂನಿನ ಪಾವಿತ್ರ್ಯತೆ ಮತ್ತು ತನಿಖೆಯ ಉತ್ಸಾಹ, `ನಡೆದಾಡುವ ದೇವರು' ಎಂದೇ ಬಿಂಬಿತರಾಗಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಮೇಲಿರುವ ದಲಿತರ ಜಮೀನು ಒತ್ತುವರಿ ಆರೋಪಗಳ ವಿಷಯದಲ್ಲಿ ಏಕೆ ಮೌನವಾಗುತ್ತದೆ?

ನಾಗರಿಕ ಸೇವಾ ಟ್ರಸ್ಟ್ ಸುದೀರ್ಘ ಕಾಲದಿಂದ ಹೆಗ್ಗಡೆ ಕುಟುಂಬದ ಭೂಕಬಳಿಕೆ ಮತ್ತು ದಲಿತರ ಜಮೀನು ಕಸಿದುಕೊಂಡ ಪ್ರಕರಣಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ. ಈ ಸಂಬಂಧ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರ ನ್ಯಾಯಾಲಯ ನೀಡಿದ ಮಹತ್ವದ ತೀರ್ಪು ಹೆಗ್ಗಡೆ ಕುಟುಂಬದ ಅಕ್ರಮಗಳನ್ನು ಈಗಾಗಲೇ ಬೆತ್ತಲೆಗೊಳಿಸಿದೆ. ಅಷ್ಟೇ ಅಲ್ಲದೆ, ಅಕ್ರಮ ಭೂಕಬಳಿಕೆ ತಡೆಯಲು ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯದಲ್ಲೂ ಹೆಗ್ಗಡೆ ಕುಟುಂಬದ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ವಲಯದಲ್ಲಿ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ಇಷ್ಟೆಲ್ಲಾ ಸಾಕ್ಷ್ಯಾಧಾರಗಳಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ಕುಂಭಕರ್ಣ ನಿದ್ರೆಗೆ ಜಾರಿರುವುದು ಆಡಳಿತ ವ್ಯವಸ್ಥೆಯ ದ್ವಂದ್ವ ನೀತಿಯನ್ನು ತೋರಿಸುತ್ತದೆ.

ಒಬ್ಬ ಧರ್ಮಗುರುವಿನ ಆಶ್ರಮದ ಒತ್ತುವರಿ ವಿರುದ್ಧ ಸಮರ ಸಾರುವ ಸರ್ಕಾರ, ಮತ್ತೊಬ್ಬ ಪ್ರಭಾವಿ ಧಾರ್ಮಿಕ ಧುರೀಣರ ವಿರುದ್ಧದ ಗಂಭೀರ ದೂರುಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದು ಕೇವಲ ಪಕ್ಷಪಾತವಲ್ಲ, ನ್ಯಾಯಾಂಗ ವ್ಯವಸ್ಥೆಗೆ ಎಸಗುವ ಅಪಚಾರ. `ಕೋಳಿ ಒಂದಕ್ಕೆ ನೀರು, ಮತ್ತೊಂದಕ್ಕೆ ಮಜ್ಜಿಗೆ' ಎಂಬಂತೆ ರಾಜ್ಯ ಸರ್ಕಾರ ನಡೆದುಕೊಳ್ಳುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು.

ರವಿಶಂಕರ್ ಗುರೂಜಿ ಅವರಿಗೊಂದು ನ್ಯಾಯ, ವೀರೇಂದ್ರ ಹೆಗ್ಗಡೆಯವರಿಗೊಂದು ನ್ಯಾಯವೇ? ದಲಿತರ ಹಾಗೂ ಸಾರ್ವಜನಿಕರ ಆಸ್ತಿಯನ್ನು ರಕ್ಷಿಸುವ ಬದ್ಧತೆ ಸರ್ಕಾರಕ್ಕಿದ್ದರೆ, ತಕ್ಷಣವೇ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧವೂ ಉನ್ನತ ಮಟ್ಟದ ಎಸ್‍ಐಟಿ ತನಿಖೆಗೆ ಆದೇಶಿಸಬೇಕು. ಧರ್ಮದ ಮುಸುಕಿನಲ್ಲಿ ನಡೆಯುವ ಅಕೃತ್ಯಗಳನ್ನು ಬಯಲಿಗೆಳೆಯಲು ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗುವುದೇ? ಶಿವಕುಮಾರ್ ನೇತೃತ್ವದ ಸರ್ಕಾರ ಈ ಸವಾಲನ್ನು ಸ್ವೀಕರಿಸಿ ತನ್ನ ನಿಷ್ಪಕ್ಷಪಾತತೆಯನ್ನು ಸಾಬೀತುಪಡಿಸಲಿ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ