ಪಂಜಾಬ್ ಸಮೂಹ ಹತ್ಯೆಗಳ ಕುರಿತ `ಸತ್ಲುಜ್' ಚಿತ್ರ ವಿವಾದ: ಇತಿಹಾಸದ ಕನ್ನಡಿಯಲ್ಲಿ ಕಾಂಗ್ರೆಸ್‍ನ ಕರಾಳ ಮುಖ ದರ್ಶನ

 ಇದರ ಪ್ರದರ್ಶನ ತಡೆದಿರುವ ಮೋದಿ ಸರಕಾರದ ಬದ್ಧತೆ ಏನು?

* ಬಿವಿಸೀ

`ಸತ್ಲುಜ್' ಚಿತ್ರದ ಸುತ್ತ ಎದ್ದಿರುವ ವಿವಾದವನ್ನು ಕೇವಲ ಸೆನ್ಸಾರ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆಯಾಗಿ ನೋಡುವುದು ಅಪೂರ್ಣ. ಈ ಚಿತ್ರ ಭಾರತದ ರಾಜಕೀಯ ಇತಿಹಾಸದ ಒಂದು ಕರಾಳ ಅಧ್ಯಾಯವನ್ನು ಮತ್ತೆ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತರುತ್ತಿದೆ. ಅದಕ್ಕಾಗಿಯೇ ಅದರ ಸುತ್ತ ಇಷ್ಟೊಂದು ಚರ್ಚೆ ಕಾಣಿಸುತ್ತಿದೆ.

1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ ವಿರೋಧಿ ಹಿಂಸಾಚಾರವು ಸ್ವತಂತ್ರ ಭಾರತದ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ಅದರ ಬಳಿಕ ಪಂಜಾಬ್‍ನಲ್ಲಿ ಉಗ್ರವಾದ ಮತ್ತು ಪ್ರತಿದಂಗೆ ಕಾರ್ಯಾಚರಣೆಗಳು ತೀವ್ರಗೊಂಡವು. ಇದೇ ಅವಧಿಯಲ್ಲಿ ಸರಕಾರಿ ಪ್ರೇಷಿತ ಸಾವಿರ ನ್ಯಾಯಬಾಹಿರ ಹತ್ಯೆಗಳು, ನಾಪತ್ತೆಗಳು ಮತ್ತು ಗುರುತಿಸಲಾಗದ ಮೃತದೇಹಗಳ ಅಕ್ರಮ ಅಂತ್ಯಸಂಸ್ಕಾರಗಳು ನಡೆದಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು, ಹೋರಾಟಗಾರರು ಮತ್ತು ವಿವಿಧ ವರದಿಗಳು ಗಂಭೀರ ಆರೋಪಗಳನ್ನು ದಾಖಲಿಸಿವೆ. ಈ ಸಂಪೂರ್ಣ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು; ಪಂಜಾಬ್‍ನಲ್ಲಿಯೂ ಕಾಂಗ್ರೆಸ್ ಆಡಳಿತವೇ ಇತ್ತು. ಆದ್ದರಿಂದ ಈ ಘಟನೆಗಳನ್ನು ಕಾಂಗ್ರೆಸ್ಸಿನ ರಾಜಕೀಯ ಹೊಣೆಗಾರಿಕೆಯಿಂದ ಪ್ರತ್ಯೇಕಿಸಿ ನೋಡುವುದು ಸಾಧ್ಯವಿಲ್ಲ.

ಬ್ಯಾಂಕ್ ಅಧಿಕಾರಿಯಾಗಿದ್ದ ಜಸ್ವಂತ್ ಸಿಂಗ್ ಖಲ್ರಾ ಅವರು ಇದೇ ಜನಾಂಗ ಹತ್ಯೆ ಆರೋಪಗಳ ಬೆನ್ನತ್ತಿದವರು. ಸಾವಿರಾರು ಗುರುತಿಸಲಾಗದ ಮೃತದೇಹಗಳ ಅಕ್ರಮ ಅಂತ್ಯಸಂಸ್ಕಾರಗಳ ಕುರಿತು ಅವರು ಸಂಗ್ರಹಿಸಿದ ದಾಖಲೆಗಳು ದೇಶವನ್ನು ಬೆಚ್ಚಿಬೀಳಿಸಿದ್ದವು. ಬಳಿಕ ಅವರ ಅಪಹರಣ ಮತ್ತು ಹತ್ಯೆ ಪ್ರಕರಣವು ರಾಜ್ಯಾಧಿಕಾರದ ದುರುಪಯೋಗದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿತು. ಈ ಹಿನ್ನೆಲೆಯಲ್ಲೇ `ಸತ್ಲುಜ್' ಚಿತ್ರ ರೂಪುಗೊಂಡಿದೆ. ಇದೀಗ ಮೋದಿ ಸರಕಾರದ ಕುಮ್ಮಕ್ಕಿನಿಂದ ದೇಶದ ಜನರೆದುರು ಪ್ರದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ. ಒಟಿಟಿಯಲ್ಲಿ ಪ್ರದರ್ಶನಗೊಳ್ಳಲೂ ಸಹ ಅಡ್ಡಗಾಲು ಹಾಕಿದೆ.

ಇಲ್ಲಿ ಕಾಂಗ್ರೆಸ್ ಎದುರಿಸಬೇಕಾದ ಪ್ರಶ್ನೆಯೂ ಇದೆ. 2002ರ ಗುಜರಾತ್ ಗಲಭೆಯನ್ನು ಎರಡು ದಶಕಗಳಿಂದ ನಿರಂತರವಾಗಿ ರಾಜಕೀಯ ಚರ್ಚೆಯ ಕೇಂದ್ರದಲ್ಲಿಟ್ಟಿರುವ ಪಕ್ಷವು, 1984ರ ಸಿಖ್ ಹತ್ಯಾಕಾಂಡ ಮತ್ತು ಪಂಜಾಬ್‍ನಲ್ಲಿ ನಡೆದ ನರಮೇಧ ಮತ್ತು  ಬೃಹತ್ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಅದೇ ಮಟ್ಟದ ಆತ್ಮಾವಲೋಕನ ತೋರಿದೆಯೇ? ಗುಜರಾತ್ ಕುರಿತು ನ್ಯಾಯ, ಹೊಣೆಗಾರಿಕೆ ಮತ್ತು ನೈತಿಕತೆಯ ಭಾಷಣ ಮಾಡುವವರು ಪಂಜಾಬ್ ಕುರಿತು ಬಂದಾಗ ಅಸಹಜ ಮೌನ ವಹಿಸಿದರೆ, ಅದು ರಾಜಕೀಯ ಗೋಸುಂಬೆತನವಲ್ಲದೇ ಮತ್ತೇನು?

ಮಾನವ ಹಕ್ಕುಗಳ ಪ್ರಶ್ನೆಗೆ ಪಕ್ಷದ ಬಣ್ಣ ಇರಬಾರದು. ಬಲಿಪಶುಗಳು ಕಾಂಗ್ರೆಸ್ ಕಾಲದಲ್ಲಿ ಸತ್ತವರಾಗಲಿ, ಬಿಜೆಪಿ ಕಾಲದಲ್ಲಿ ಸತ್ತವರಾಗಲಿ, ನ್ಯಾಯದ ಮಾನದಂಡ ಒಂದೇ ಆಗಬೇಕು. ಇತಿಹಾಸವನ್ನು ಆಯ್ದ ಘಟನೆಗಳ ಮೂಲಕ ಅಲ್ಲ, ಸಂಪೂರ್ಣ ಸತ್ಯದೊಂದಿಗೆ ಎದುರಿಸುವ ಧೈರ್ಯವೇ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ. `ಸತ್ಲುಜ್' ಚಿತ್ರದ ಮಹತ್ವವೂ ಅದೇ - ಅದು ಮರೆತುಹೋಗಬೇಕೆಂದು ಕೆಲವರು ಬಯಸುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡುತ್ತಿದೆ.

ಮೋದಿ ಸರಕಾರದ ಮುಂದೆ

ಒಂದೇ ಮಾನದಂಡ ಇರಲಿ


ತುರ್ತು ಪರಿಸ್ಥಿತಿ, ಕಾಶ್ಮೀರಿ ಪಂಡಿತರ ವಲಸೆ ಅಥವಾ ಇತಿಹಾಸದ ಇತರ ವಿವಾದಾತ್ಮಕ ಘಟನೆಗಳನ್ನು ಚಿತ್ರಿಸುವ ಸಿನಿಮಾಗಳಿಗೆ ಮೋದಿ ಸರಕಾರ ಅವಕಾಶ ನೀಡಿದರೆ, ಪಂಜಾಬ್‍ನಲ್ಲಿ ನಡೆದ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಆಧರಿಸಿದ ಚಿತ್ರಗಳಿಗೂ ಅದೇ ಸ್ವಾತಂತ್ರ್ಯ ದೊರೆಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವು ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದರ ಮೇಲೆ ಅಲ್ಲ, ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಒಂದೇ ಮಾನದಂಡದ ಮೇಲೆ ನಿಲ್ಲಬೇಕು.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ