ಪವಿತ್ರ ಹಸುವಿನ ಮುಖವಾಡ ಕಳಚಿದಾಗ: ಆರೆಸ್ಸೆಸ್ ಉತ್ತರದಾಯಿತ್ವದ ಪ್ರಶ್ನೆ

 ಖರೇ ಹೇಳಬೇಕೆಂದ್ರೆ * ಬಿವಿಸೀ

ಅಯೋಧ್ಯೆಯ ರಾಮಮಂದಿರದ ದೇಣಿಗೆ ಲೂಟಿ ಹಗರಣ ಸಾರ್ವಜನಿಕವಾಗಿ ಬಯಲಿಗೆ ಬಂದು ವಾರಗಳೇ ಕಳೆದ ನಂತರ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರೆಸ್ಸೆಸ್) ಹಠಾತ್ ಜ್ಞಾನೋದಯವಾಗಿದೆ. ಸ್ವತಃ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ತೀವ್ರ ಆಸಕ್ತಿ ವಹಿಸಿ, ಪ್ರಾಣಪ್ರತಿಷ್ಠಾಪನೆ ಧಾರ್ಮಿಕ ವಿಧಿಯಲ್ಲೂ ಭಾಗವಹಿಸಿದ್ದ ಈ ಮಂದಿರದ ನಿಧಿಗೆ ಕನ್ನ ಹಾಕಿದ ಕಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಘದ ಎರಡನೇ ಅತ್ಯುನ್ನತ ನಾಯಕ ದತ್ತಾತ್ರೇಯ ಹೊಸಬಾಳೆ ಈಗ ಸರ್ಕಾರಕ್ಕೆ 'ಫರ್ಮಾನು' ಹೊರಡಿಸಿದ್ದಾರೆ. ದೇಶದ ಕಾನೂನು ಮತ್ತು ತನಿಖಾ ಸಂಸ್ಥೆಗಳು ಈ ಲೂಟಿಕೋರರನ್ನು ಹಿಡಿಯಲು ನಾಗಪುರದ ಹಸಿರು ನಿಶಾನೆಗಾಗಿ ಕಾಯುತ್ತ ಕುಳಿತಿದ್ದವೇ? ಸರ್ಕಾರ ಈಗಾಗಲೇ ಈ ಹಗರಣದ ತನಿಖೆಯನ್ನು ಆರಂಭಿಸಿ, ತಪ್ಪಿತಸ್ಥರನ್ನು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದೆ. ಹೀಗಿರುವಾಗ ಆರೆಸ್ಸೆಸ್ ನೀಡುತ್ತಿರುವ ಈ ಹೇಳಿಕೆ ಸಾಂಸ್ಕøತಿಕ ಕಾಳಜಿಯಲ್ಲ, ಬದಲಿಗೆ ಇದೊಂದು ರಾಜಕೀಯ ಗಿಮಿಕ್.


ತನ್ನನ್ನು ಕೇವಲ ಒಂದು "ಸಾಂಸ್ಕೃತಿಕ ಸಂಘಟನೆ" ಎಂದು ಕರೆದುಕೊಳ್ಳುವ ಆರೆಸ್ಸೆಸ್, ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷದಂತೆ ವರ್ತಿಸುತ್ತಿರುವುದಕ್ಕೆ ಹೊಸಬಾಳೆಯವರ ಮತ್ತೊಂದು ಹೇಳಿಕೆಯೇ ಸಾಕ್ಷಿ. ಗಡಿಯಲ್ಲಿ ನಿರಂತರ ಸಂಘರ್ಷ ಮತ್ತು ಪಾಕಿಸ್ತಾನ ಪ್ರಾಯೋಜಿತ ಉಗ್ರರ ಉಪಟಳ ಮುಂದುವರಿದಿದ್ದರೂ, ಭಾರತ ಸರ್ಕಾರವು ಪಾಕಿಸ್ತಾನದೊಂದಿಗೆ ಮರಳಿ ಮಾತುಕತೆ ಆರಂಭಿಸಬೇಕು ಎಂದು ಹೊಸಬಾಳೆ ಆಗ್ರಹಿಸಿದ್ದಾರೆ. "ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ" ಎಂಬುದು ಭಾರತದ ಸ್ಪಷ್ಟ ಹಾಗೂ ದೃಢ ನಿಲುವು. ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಭಾರತದೊಂದಿಗಿನ ಮಾತುಕತೆ ಅನಿವಾರ್ಯವಾಗಿದೆ, ನಮಗಲ್ಲ. ದೇಶದ ಭದ್ರತಾ ನೀತಿಗೆ ವಿರುದ್ಧವಾಗಿ ಇಂತಹ ಹೇಳಿಕೆ ನೀಡುವ ಮೂಲಕ, ಆರೆಸ್ಸೆಸ್ ತಾನೊಂದು ಸಾಂಸ್ಕೃತಿಕ ಸಂಸ್ಥೆಯಲ್ಲ, ಬದಲಿಗೆ ಛಾಯಾ ಸರ್ಕಾರದಂತೆ ಆಡಳಿತ ನಡೆಸಲು ಬಯಸುವ ರಾಜಕೀಯ ಶಕ್ತಿ ಎಂಬುದನ್ನು ಸಾಬೀತುಪಡಿಸಿದೆ.

ಹಿಂದೂ ಹಿತಾಸಕ್ತಿಗಳ ರಕ್ಷಕ ಎಂದು ಬಿಂಬಿಸಿಕೊಳ್ಳುವ ಸಂಘಟನೆಯ ಈ ನೈತಿಕತೆ ಎಷ್ಟು ಪರಿವರ್ತಿತವಾಗಿದ್ದು ಮತ್ತು ಸ್ವಾರ್ಥಪರವಾದದ್ದು ಎನ್ನುವುದಕ್ಕೆ ಧರ್ಮಸ್ಥಳದ ಘಟನೆಗಳೇ ಸಾಕ್ಷಿ. ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಕೊಲೆಗಳು ನಡೆದಾಗ ಇದೇ ಆರೆಸ್ಸೆಸ್ ಸಂಪೂರ್ಣ ಮೌನಕ್ಕೆ ಶರಣಾಗಿತ್ತು. ಅಲ್ಲಿನ ಪ್ರಭಾವಿ ಮತ್ತು ಬಲಿಷ್ಠ ವ್ಯಕ್ತಿಗಳ ಹಿತಾಸಕ್ತಿಗೆ ಧಕ್ಕೆಯಾಗಬಾರದು ಎಂಬ ಏಕೈಕ ಕಾರಣಕ್ಕೆ ಸಂಘಟನೆ ತುಟಿ ಬಿಚ್ಚಲಿಲ್ಲ. ಬಲಾಢ್ಯರ ಹಿತಾಸಕ್ತಿಯ ಮುಂದೆ ಸಂಘಕ್ಕೆ ಸಾಮಾನ್ಯ ಹಿಂದೂ ಹೆಣ್ಮಕ್ಕಳ ರಕ್ಷಣೆ ಮುಖ್ಯವೆನಿಸಲಿಲ್ಲ.

ಇನ್ನು ಆರೆಸ್ಸೆಸ್‍ನ ನೋಂದಣಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಎತ್ತಿದ ವಿವಾದಕ್ಕೆ ಸಂಘ ನೀಡಿದ ಸಮರ್ಥನೆ ಅತ್ಯಂತ ದುರ್ಬಲವಾಗಿತ್ತು. ಸಾರ್ವಜನಿಕ ಸ್ಥಳಗಳನ್ನು ತನ್ನ ಚಟುವಟಿಕೆಗಳಿಗೆ ಮುಕ್ತವಾಗಿ ಬಳಸಿಕೊಳ್ಳುವ, ಸರ್ಕಾರದ ಭದ್ರತಾ ವ್ಯವಸ್ಥೆಯನ್ನು ಅನುಭವಿಸುವ ಮತ್ತು ಸಾರ್ವಜನಿಕರಿಂದ ನೂರಾರು, ಸಾವಿರಾರು ಕೋಟ್ಯಂತರ ರೂಪಾಯಿ ದೇಣಿಗೆ ವಸೂಲಿ ಮಾಡುವ ಈ ಸಂಘಟನೆ ಇನ್ನೂ ಕಾಯ್ದೆಯಡಿ ನೋಂದಣಿಯಾಗದೆ ಇರುವುದು ಅದರ ಇತಿಹಾಸಕ್ಕೆ ಮುಜುಗರ ತರುವಂತಹದ್ದು. ಅಂದಾಜಿನ ಪ್ರಕಾರ, ಆರೆಸ್ಸೆಸ್ ದೇಶಾದ್ಯಂತ ಅಪಾರ ಪ್ರಮಾಣದ ಲೆಕ್ಕವಿಲ್ಲದ ಆಸ್ತಿಪಾಸ್ತಿ ಮತ್ತು ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ಹೊಂದಿದೆ. ಇದು ದಿನಪತ್ರಿಕೆಯಂಥ ವಾಣಿಜ್ಯ ಸಂಘಟನೆಗಳು, ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದೆ.  ಒಂದು ವಾಣಿಜ್ಯ ಸಂಸ್ಥೆಯಂತೆ ಆರ್ಥಿಕ ಚಟುವಟಿಕೆ ನಡೆಸುವ ಈ ಸಂಘಟನೆ, ಸರ್ಕಾರದ ನಿಯಮಾವಳಿಗಳಿಗೆ ಒಳಪಟ್ಟು ತನ್ನ ಆದಾಯ ಮತ್ತು ತೆರಿಗೆ ವಿವರಗಳನ್ನು ಸಲ್ಲಿಸಲೇಬೇಕು.

ಆರೆಸ್ಸೆಸ್ ಯಾರೂ ಸ್ಪರ್ಶಿಸಲಾಗದ `ಪವಿತ್ರ ಹಸು'ವೇನಲ್ಲ ಮತ್ತು ಅದು ಈ ದೇಶದ ಕಾನೂನಿಗಿಂತ ಮಿಗಿಲಾದದ್ದಲ್ಲ. ಸಂಘಟನೆ ಇನ್ನು ಮುಂದಾದರೂ ತಾನೊಂದು "ಸೇವಾ ಸಂಸ್ಥೆ" ಎಂಬ ಮುಖವಾಡವನ್ನು ಕಳಚಿಡಬೇಕು. ದೇಶದ ಕಾನೂನುಗಳಿಗೆ ತಲೆಬಾಗಿ, ನಿಯಮಗಳ ಪ್ರಕಾರ ನೋಂದಣಿ ಮಾಡಿಕೊಂಡು, ತೆರಿಗೆ ಪಾವತಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಂಘ ಒಪ್ಪಿಕೊಳ್ಳುವ ಕಾಲ ಬಂದಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI