ಧರ್ಮಸ್ಥಳವನ್ನು ಸಮರ್ಥಿಸುವ ಬಿಜೆಪಿಯ ಅನೈತಿಕತೆ

 ಮೋದಿ ಗುಜರಾತ್ ಸಿಎಂ ಆಗಿ ಹೇಳಿದ್ದು ಕರ್ನಾಟಕಕ್ಕೆ ಏಕೆ ಪಥ್ಯವಲ್ಲ?

ಈ ಹಿಂದೆ ಬಿಜೆಪಿ ಕಳಂಕ ಹೊತ್ತ ಸ್ವಘೋಷಿತ ದೇವಮಾನವರಿಂದ ಅಂತರ ಕಾಪಾಡಿಕೊಳ್ಳುವ ನೀತಿಯನ್ನು ಅನುಸರಿಸಿದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಪಕ್ಷದ ಕಾರ್ಯಕರ್ತರಿಗೆ, ಅತ್ಯಾಚಾರ ಮತ್ತು ಕೊಲೆ ಆರೋಪ ಹೊತ್ತಿದ್ದ ಅಸಾರಾಂ ಬಾಪು ಅಥವಾ ಅವರ ಮಗ ನಾರಾಯಣ ಸಾಯಿ ಅವರನ್ನು ಬೆಂಬಲಿಸದಿರುವಂತೆ ಕರೆ ನೀಡಿದ್ದರು. ಇದರ ಸರಳ ತತ್ವ ಎಂದರೆ, ಕಾನೂನನ್ನು ಎತ್ತಿಹಿಡಿಯುವ ರಾಜಕೀಯ ಪಕ್ಷವೊಂದು ಆರೋಪಿಗಳಿಗೆ ಸಾರ್ವಜನಿಕವಾಗಿ ಮಾನ್ಯತೆ ನೀಡಕೂಡದು.

ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ನಿಲುವು ಪ್ರಶ್ನಾರ್ಹವಾಗಿದೆ. ವಿಶೇಷ ತನಿಖಾ ದಳ (ಎಸ್‍ಐಟಿ) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈಗಾಗಲೇ ತನಿಖೆಯನ್ನು ನಡೆಸುತ್ತಿದ್ದು, ಧರ್ಮಸ್ಥಳದ ಡಿ ಗ್ಯಾಂಗ್‍ಗೆ ನೇರ ಸಂಪರ್ಕ ಇರುವ ಲೈಂಗಿಕ ದಾಳಿ, ಅನುಮಾನಾಸ್ಪದವಾಗಿ ಶವಗಳನ್ನು ಹೂತಿರುವುದು ಮತ್ತು ಸಾಮೂಹಿಕ ಅತ್ಯಾಚಾರಗಳನ್ನು ತನಿಖೆ ಮಾಡುತ್ತಿವೆ. ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ ಅಭಿಪ್ರಾಯವೂ ಸಹ ಈಗಾಗಲೇ ಆರೋಪಿಗಳ ವಿರುದ್ಧವಾಗಿದೆ. ಆದಾಗ್ಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು, ಹಿರಿಯ ರಾಜ್ಯ ನಾಯಕರು, ಮತ್ತು ಕೇಂದ್ರದ ಪದಾಧಿಕಾರಿಗಳೂ ಆದ ಬಿ ಎಲ್ ಸಂತೋಷ್ ಮುಂತಾದವರು "ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ" ಎಂಬ ಕೂಗಿಗೆ ದನಿಗೂಡಿಸಿದ್ದಾರೆ.

ಈ ರೀತಿಯ ಬೀಸು ಘೋಷಣೆಗಳನ್ನು ಈ ನಾಯಕರು ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆ? ಇಲ್ಲಿ ಆರೋಪಗಳು ಇರುವುದು ದೇವರ ಅಥವಾ ದೇವಾಲಯದ ವಿರುದ್ಧ ಅಲ್ಲ. ಬದಲಾಗಿ ಕೆಲವು ವ್ಯಕ್ತಿಗಳು ಮತ್ತು ಅವರ ಜಾಲಗಳ ವಿರುದ್ಧ. ಇಡೀ ದೇವಸ್ಥಾನವನ್ನೇ ಸಂತ್ರಸ್ತನಂತೆ ನೋಡುವುದು ಉದ್ದೇಶಪೂರ್ವಕವಾಗಿ ಶ್ರದ್ಧೆ ಮತ್ತು ಅಧಿಕಾರದ ನಡುವಿನ ಅಂತರವನ್ನು ಮಸುಕುಗೊಳಿಸಿದಂತಾಗುತ್ತದೆ. ಸಾರ್ವಜನಿಕರನ್ನು ಇದರಿಂದ ವಂಚಿಸಲಾಗುವುದಿಲ್ಲ. ಜನರನ್ನು ಮೂರ್ಖರನ್ನಾಗಿ ಕಾಣಲಾಗದು. ಕರ್ನಾಟಕದಾದ್ಯಂತ ಮತ್ತು ಅದರಿಂದಾಚೆಗೂ ಸಹ ಜನರು ಈ ಆರೋಪಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕಂಡಿದ್ದಾರೆ. ಇವುಗಳ ಹಿಂದೆ ಯಾರಿದ್ದಾರೆ ಎನ್ನುವುದನ್ನೂ ಅರಿತಿದ್ದಾರೆ. ಈ ಸಂದೇಶವನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಅಪರಾಧಿಗಳನ್ನು ಹೆಸರಿಸುವ ಅವಶ್ಯಕತೆ ಇಲ್ಲ. 

ಇಲ್ಲಿ ಎದ್ದುಕಾಣುವ ಅಂಶವೆಂದರೆ, ದುಷ್ಕರ್ಮಿಗಳನ್ನು ಬಿಜೆಪಿ ಸಮರ್ಥಿಸುದರಲ್ಲಿನ ಏಕತೆ. ಈ ರೀತಿಯ ಐಕ್ಯತೆ ಅಥವಾ ಒಗ್ಗಟ್ಟು ಕಾಕತಾಳೀಯವಲ್ಲ. ಹೈಕಮಾಂಡ್ ಕಟ್ಟುನಿಟ್ಟಿನ ಆದೇಶವನ್ನು ನೀಡಿ ಸ್ಪಷ್ಟ ನಿರ್ದೇಶನ ನೀಡಿದರೆ ಮಾತ್ರ ಸಾಧ್ಯ. ``ಧರ್ಮಸ್ಥಳದ ಅಧಿಕಾರ ಕೇಂದ್ರವನ್ನು ಕೈಬಿಡಬೇಡಿ, ಕಾರ್ಯಕರ್ತರನ್ನು ಒಗ್ಗೂಡಿಸಿ, ತನಿಖೆಯನ್ನು ಶ್ರದ್ಧೆಯ ಮೇಲಿನ ದಾಳಿ ಎಂದು ಬಿಂಬಿಸಿ'' ಎಂಬ ಸಂದೇಶ ರಾಜ್ಯದ ಪಕ್ಷದ ಪ್ರಮುಖರಿಗೆ ರವಾನೆಯಾಗಿರುವುದು ಸ್ಪಷ್ಟ. ಇಂತಹ ನಿರ್ದೇಶನ ಇಲ್ಲದೆ ಹೋಗಿದ್ದರೆ, ಕರಾವಳಿಯ ಪ್ರತಿಯೊಬ್ಬ ಶಾಸಕನೂ, ಹಿರಿಯ ನಾಯಕನೂ ತಮ್ಮ ಸ್ಥಾನಮಾನಗಳನ್ನು, ಗೌರವವನ್ನು ಪಣಕ್ಕಿಟ್ಟು ಸಾರ್ವಜನಿಕವಾಗಿ ಸರಣಿ ಅತ್ಯಾಚಾರ ಮತ್ತು ಕೊಲೆಗಳಂಥ ಗಂಭೀರ ಅಪರಾಧಗಳ ತನಿಖೆ ಎದುರಿಸುತ್ತಿರುವ ವ್ಯಕ್ತಿಗಳನ್ನು ಸಮರ್ಥಿಸುತ್ತಿರಲಿಲ್ಲ.

ಬಿಜೆಪಿಗೆ ಇದು ರಾಜಕೀಯವಾಗಿ ಹಾನಿಕಾರಕವಾಗಿದೆ. ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಕರ್ನಾಟಕದ ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸಿದ್ದು, ಶೇಕಡಾ 90ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದು, ಲೋಕಸಭಾ ಚುನಾವಣೆಗಳಲ್ಲಿ ಎಲ್ಲ ಸ್ಥಾನಗಳನ್ನೂ ಗಳಿಸಿದೆ. ಈ ಪ್ರಾಬಲ್ಯವನ್ನು ಶಾಶ್ವತ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಆರೋಪಿಗಳ ಪರ ವಹಿಸುವುದರ ಮೂಲಕ ಪಕ್ಷದ ನಾಯಕರು ಸಾರ್ವಜನಿಕರ ಆಕ್ರೋಶದ ಅಲೆಯ ವಿರುದ್ಧ ಈಜುತ್ತಿದ್ದಾರೆ. ಇದರಿಂದ ಉಂಟಾಗುವ ಪರಿಣಾಮಗಳು ನಿರ್ಣಾಯಕವೂ, ಶೀಘ್ರಗತಿಯಲ್ಲೂ ಆಗುತ್ತದೆ. ಕರಾವಳಿಯ ಮತದಾರರು ಬಿಜೆಪಿ ಮುಖ್ಯವಾಗಿ ಸಂಪತ್ತು ಇರುವವರನ್ನು, ರಾಜಕೀಯವಾಗಿ ಸಂಬಂಧ ಹೊಂದಿರುವ ಕುಟುಂಬಗಳನ್ನು ರಕ್ಷಿಸುತ್ತದೆ, ನ್ಯಾಯ ಮತ್ತು ಸತ್ಯಕ್ಕಿಂತಲೂ ಇದನ್ನೇ ಹೆಚ್ಚು ಅವಲಂಬಿಸುತ್ತದೆ ಎಂಬ ವಾಸ್ತವವನ್ನು ಅರಿತರೆ, ಪಕ್ಷದ ಚುನಾವಣಾ ಭದ್ರಕೋಟೆ ಕುಸಿದುಬೀಳುತ್ತದೆ.

ಗುಜರಾತ್‍ನಿಂದ ಕಲಿತ ಪಾಠ ಇಂದಿಗೂ ಕರ್ನಾಟಕಕ್ಕೂ ಪ್ರಸ್ತುತ ಎನಿಸುತ್ತದೆ. ಸಂತ್ರಸ್ತರ ಮೇಲೆ ದಾಳಿ ನಡೆಸುವುದಾಗಲೀ, ಅಧಿಕಾರಸ್ಥರನ್ನು ರಕ್ಷಿಸುವುದಾಗಲೀ ವಿವೇಕಯುತವಾಗುವುದಿಲ್ಲ. ಬದಲಾಗಿ ಕಾನೂನು ತನ್ನ ಕೆಲಸವನ್ನು ನಿರ್ಭಿಡೆಯಿಂದ ಮಾಡುವಂತೆ, ರಾಜಕೀಯ ಹಸ್ತಕ್ಷೇಪದಿಂದ ಹಿಂದೆ ಸರಿಯುವುದು ವಿವೇಕ ಎನಿಸುತ್ತದೆ. ಇಂದು ಈ ವಿವೇಕ ಮಾಯವಾಗಿದೆ. ಬದಲಾಗಿ ಕರ್ನಾಟಕದ ಬಿಜೆಪಿ ಬಂಡೆಗೆ ತಲೆ ಚಚ್ಚಿಕೊಳ್ಳುತ್ತಿದೆ. ಸ್ಥಳೀಯ ಕ್ರಿಮಿನಲ್‍ಗಳ ಸಾಮ್ರಾಜ್ಯವೊಂದಕ್ಕೆ ತೋರುವ ಅಲ್ಪಕಾಲದ ನಿಷ್ಠೆಯನ್ನೇ ದೀರ್ಘಕಾಲಿಕ ಶಕ್ತಿ ಎಂದು ತಪ್ಪಾಗಿ ಭಾವಿಸಿದಂತಿದೆ.  ಮುಂಬರುವ ಚುನಾವಣೆಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದರೆ ಅದು ಪಕ್ಷದ ಸ್ವಯಂಕೃತ ಅಪರಾಧವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again