ಕೇರಳ ಸರಕಾರದ ಭಾಷಾ ನೀತಿಯ ಠಕ್ಕುತನ

 ಬಿವಿಸೀ

ಕೇರಳದ ಕಮ್ಯುನಿಸ್ಟ್ ನಾಯಕತ್ವವು ತನ್ನನ್ನು ಅತ್ಯಂತ ಮಾನವೀಯ ಮತ್ತು ಪ್ರಜ್ಞಾವಂತ ರಾಜಕೀಯ ಪರಂಪರೆಯ ವಾರಸುದಾರರಂತೆ ಬಿಂಬಿಸಿಕೊಳ್ಳುತ್ತದೆ. ಕಮ್ಯುನಿಸ್ಟ್ ನಾಯಕರು ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕøತಿಕ ಹಕ್ಕುಗಳನ್ನು ಕುರಿತು ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆದರೆ ರಾಜ್ಯದ ಉತ್ತರ ತುದಿಯಲ್ಲಿರುವ ಕಾಸರಗೋಡಿನಲ್ಲಿ ಈ ನಾಯಕರು ಸೃಷ್ಟಿಸಿರುವ ವಾತಾವರಣ ಅವರ ಇದ್ದಬದ್ದ ವರ್ಚಸ್ಸಿಗೂ ಮಸಿಬಳಿದಿದೆ. ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪ್ರಗತಿಪರ ಆಳ್ವಿಕೆಯಂತೆ ಕಾಣದೆ, ಭಾಷಿಕ ಆಧಿಪತ್ಯದ ಆಡಳಿತದ ಹಾಗೆ ಕಾಣುತ್ತದೆ, ಬಿಜೆಪಿಯ ಹಿಂದೀ ಭಾಷಿಕತನದ ದುರಭಿಮಾನವನ್ನೂ ನಾಚಿಸುವಂತಿದೆ.

ಕಾಸರಗೋಡು ಮಲಯಾಳಿ ಭಾಷೆಯ ಕೇಂದ್ರ ಪ್ರದೇಶವಲ್ಲ. ಕನ್ನಡ, ತುಳು, ಬ್ಯಾರಿ ಮತ್ತು ಕೊಂಕಣಿ  ಭಾಷಿಕರ ಸಮಾಜಗಳನ್ನೊಳಗೊಂಡ ಗಡಿ ಜಿಲ್ಲೆ. ಅಲ್ಲಿ ಮಲಯಾಳಿ ಭಾಷೆಯೂ ಪ್ರಚಲಿತವಾಗಿದೆ. ಇಲ್ಲಿನ ಕುಟುಂಬಗಳು ವ್ಯಾಪಾರ, ವಿವಾಹ ಸಂಬಂಧಗಳು, ಆಚರಣೆ ಮತ್ತು ಆರಾಧನೆಗಳು ಹಾಗೂ ದುಡಿಮೆಯ ವಲಯದಲ್ಲಿ ಅಂತರಭಾಷೀಯ ವಾತಾವರಣ ಕ್ರಿಯಾಶೀಲವಾಗಿವೆ. ಆದರೆ ಇಲ್ಲಿನ ಜನರು ಅಹಿತಕರ ರಾಜಕೀಯ ಹೊಂದಾಣಿಕೆಯ ಮೂಲಕ ಬದುಕುತ್ತಿದ್ದಾರೆ, ಸಾಂಸ್ಕೃತಿಕವಾಗಿ ಕಾಸರಗೋಡಿನ ಹೆಚ್ಚಿನ ಜನ ಕನ್ನಡ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದರೂ ತಿರುವನಂತಪುರಂನಿಂದ ಆಳಲ್ಪಡುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಸೂಕ್ಷ್ಮತೆ, ಸಂವೇದನೆ ಇರಬೇಕೇ ಹೊರತು, ಕೇರಳ ಸರ್ಕಾರದ ಒತ್ತಡದ ನೀತಿಯಲ್ಲ.

ಶಾಲೆಗಳಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಕನ್ನಡದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರವು, ಭೂಪಟದಲ್ಲಿ ಸಾಧ್ಯವಾಗದಿರುವುದನ್ನು ವಾಸ್ತವದಲ್ಲಿ ಮಾಡಲು ಹೊರಟಿದೆ. ಕಾಸರಗೋಡನ್ನು ಮಲಯಾಳಿ ಜಿಲ್ಲೆಯಾಗಿ ಪರಿವರ್ತಿಸಿದೆ. ಕನ್ನಡ ಪಠ್ಯಗಳನ್ನು  ಅಲಕ್ಷಿಸಿ ತಿಳಿಗೊಳಿಸಲಾಗಿದ್ದು ಕನ್ನಡ ಮಾಧ್ಯಮ ಶಾಲೆಗಳಿಗೆ ಉತ್ತೇಜನ ನೀಡಲಾಗುತ್ತಿಲ್ಲ. ಮಲಯಾಳಿ ಭಾಷೆಯ ಶಿಕ್ಷಕರಿಗೆ ಕನ್ನಡ ಬೋಧನೆಯನ್ನು ವಹಿಸಲಾಗುತ್ತಿದೆ. ಇಲ್ಲಿ ಸಂದೇಶ ಸ್ಪಷ್ಟವಾಗಿದೆ. ಇದು ಬಹುತ್ವದ ಲಕ್ಷಣವಲ್ಲ.

ಎಡಪಕ್ಷಗಳು ಈ ಬೆಳವಣಿಗೆಯನ್ನು ಆಡಳಿತಾತ್ಮಕವಾದ ಕ್ರಮ ಎಂದು ಹೇಳುತ್ತವೆ. ಆದರೆ ಗಡಿ ಜಿಲ್ಲೆಯಲ್ಲಿ ಅಸ್ಮಿತೆ, ನೆನಪು ಮತ್ತು ಘನತೆಯೇ ಮುಖ್ಯವಾಗುತ್ತದೆ. ಭಾಷೆಯ ಸೋಂಕಿಲ್ಲದೆ ಆಸ್ಪತ್ರೆಗಳನ್ನು ಒದಗಿಸಬಹುದು, ಆದರೆ ಮಕ್ಕಳನ್ನು ತಮ್ಮ ಮಾತೃಭಾಷೆಯಿಂದ ವಂಚಿಸಲಾಗುವುದಿಲ್ಲ. ಕನ್ನಡ ಶಿಕ್ಷಣವನ್ನು ದುರ್ಬಲಗೊಳಿಸುವ ಮೂಲಕ, ರಾಜ್ಯ ಸರ್ಕಾರವು ಕಾಸರಗೋಡಿನ ಒಂದು ತಲೆಮಾರಿನ ಮಕ್ಕಳಿಗೆ, ಅವರ ಮಾತೃಭಾಷೆಯೇ ಪ್ರಗತಿಗೆ ತೊಡಕಾಗುತ್ತಿದೆ ಎಂಬ ಸಂದೇಶವನ್ನು ನೀಡಲಾಗುತ್ತಿದೆ.

ಕೇರಳದ ಕಮ್ಯುನಿಸ್ಟರು ರಾಷ್ಟ್ರ ಮಟ್ಟದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಲು ಮುಂಚೂಣಿಯಲ್ಲಿರುತ್ತಾರೆ. ಕೇಂದ್ರ ಸರ್ಕಾರ ಅಧಿಕಾರವನ್ನು ಕೇಂದ್ರೀಕರಿಸಿದಾಗ ಒಕ್ಕೂಟದ ಬಗ್ಗೆ ಮಾತನಾಡುತ್ತಾರೆ. ಆದರೂ ಕೇರಳದಲ್ಲಿ ಆಂತರಿಕವಾಗಿ ಸದ್ದಿಲ್ಲದ ರೀತಿಯಲ್ಲಿ ಅದೇ ನೀತಿಯನ್ನು ಅನುಸರಿಸುತ್ತಾರೆ. ಒಂದು ಭಾಷೆಯ ಆಧಿಪತ್ಯ ಇರಬೇಕು, ಉಳಿದವು ಹೊಂದಿಕೊಳ್ಳಬೇಕು ಅಥವಾ ಕ್ಷೀಣಿಸಬೇಕು ಎಂಬ ನೀತಿಯನ್ನು ಅನುಸರಿಸುತ್ತಾರೆ.

ಕರ್ನಾಟಕ ಭಿನ್ನ ಮಾದರಿಯನ್ನು ನೀಡುತ್ತದೆ. ಬೆಂಗಳೂರು ಮತ್ತು ಗಡಿ ಜಿಲ್ಲೆಗಳಲ್ಲಿ ಮಲಯಾಳಿ, ತಮಿಳು, ಮರಾಠಿ ಶಾಲೆಗಳು ಹೇರಳವಾಗಿದ್ದು ಅದು ಕನ್ನಡ ಭಾಷೆಗೇನೂ ಅಪಾಯ ಒಡ್ಡುತ್ತಿಲ್ಲ. ವೈವಿಧ್ಯತೆ ರಾಜ್ಯವನ್ನು ಶಿಥಿಲಗೊಳಿಸಿಲ್ಲ; ಬದಲಾಗಿ ಇನ್ನೂ ಸುಸ್ಥಿರಗೊಳಿಸಿದೆ. ಜನರು ತಾವು ಸುರಕ್ಷಿತ ಎಂದು ಭಾವಿಸಿದಾಗ ಭಾಷೆಯನ್ನು ರಕ್ಷಿಸುತ್ತಾರೆಯೇ ಹೊರತು, ಅದನ್ನು ಬಲಾತ್ಕಾರದಿಂದ ಹೇರಿದಾಗ ಅಲ್ಲ.

ಕಾಸರಗೋಡಿನಲ್ಲಿ ಈಗ ಉಂಟಾಗಿರುವ ಆಕ್ರೋಶ, ಅಸಮಾಧಾನಗಳು ಕೃತ್ರಿಮವಾಗಿ ಸೃಷ್ಟಿಸಿರುವುದಲ್ಲ. ತನ್ನ ದನಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಭಾವನೆ ಹೊಂದಿರುವ ಸಮುದಾಯದ ಪ್ರತಿಕ್ರಿಯೆ. ಪಿಣರಾಯಿ ವಿಜಯನ್ ಸರ್ಕಾರವು ಕನ್ನಡ ಭಾಷೆಯನ್ನು ಜಿಲ್ಲೆಯ ಸಹಭಾಷೆ ಎಂದು ಪರಿಗಣಿಸದೆ, ಅನನುಕೂಲಕರ ಎಂದು ಭಾವಿಸಿದರೆ ಸೌಹಾರ್ದತೆ ಉಂಟಾಗುವುದಿಲ್ಲ.

ಭಾಷಿಕ ಬಹುತ್ವವನ್ನು ಗೌರವಿಸದ ಎಡಪಕ್ಷಗಳನ್ನು ಪುರೋಗಾಮಿ ಎನ್ನಲಾಗುವುದಿಲ್ಲ. ಅದು ಮತ್ತೊಂದು ಬಹುಸಂಖ್ಯಾವಾದದ ಶಕ್ತಿಯಾಗಿ, ಭಿನ್ನ ಭಾಷೆಯಲ್ಲಿ ಮಾತನಾಡುವ ರಾಜಕೀಯ ಶಕ್ತಿಯಾಗುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again