ಗಾಂಧಿ ಹೆಸರಿನ ಹಕ್ಕು ರಾಮನ ಹೆಸರಿನ ಔದಾರ್ಯವಾದಾಗ!

 ನಿಜವಾದ ಪ್ರಶ್ನೆ ಇರುವುದು, ಜೀವನೋಪಾಯಗಳು ಕಾನೂನುಗಳನ್ನು ಅವಲಂಬಿಸುವುದೋ ಅಥವಾ ಸರಕಾರದ ಔದಾರ್ಯವನ್ನೋ?


...........


 


ಸಂಪಾದಕೀಯ * ಬಿವಿಸೀ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ರದ್ದುಪಡಿಸಿ, ಭಗವಾನ್ ರಾಮನ ಹೆಸರನ್ನು ಹೊಂದಿರುವ ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಈ ಕ್ರಮವನ್ನು ಸುಧಾರಣೆ ಎಂದು ಬಿಂಬಿಸುತ್ತಿದೆ. ಇದು ಕೇವಲ ದಕ್ಷತೆ ಮತ್ತು ಭ್ರಷ್ಟಾಚಾರ ನಿಯಂತ್ರಣದ ಪ್ರಶ್ನೆ ಅಲ್ಲ. ಭಾರತದಲ್ಲಿ ಜನಕಲ್ಯಾಣ ಚಿಂತನೆಯನ್ನೇ ಬದಲಾಯಿಸುವ ಒಂದು ಪ್ರಯತ್ನವಾಗಿ ಕಾಣುತ್ತದೆ.

ಮನರೇಗಾ ಯೋಜನೆ ಸಾಧಾರಣವಾದ ಯೋಜನೆಯಲ್ಲ. ಅದು ಹಕ್ಕು ಆಧರಿತ ಕಾಯ್ದೆಯಾಗಿತ್ತು. ಗ್ರಾಮೀಣ ಕಾರ್ಮಿಕರು ಯಾವುದೇ ದಯಾಮಯ ಅನುಕೂಲತೆಗಳಿಗಾಗಿ ಕೇಳುತ್ತಿರಲಿಲ್ಲ. ಶಾಸನಬದ್ಧವಾಗಿ ಉದ್ಯೋಗವನ್ನು ಖಾತರಿಪಡಿಸಲು ಬದ್ಧರಾಗಿದ್ದರು. ಸರ್ಕಾರವು ಇದಕ್ಕೆ ಪ್ರತಿಕ್ರಿಯಿಸಲೇಬೇಕಿತ್ತು. ವೇತನ ಪಾವತಿ ವಿಳಂಬವಾದರೆ ಪರಿಹಾರವಾಗಿ ಭತ್ಯೆ ನೀಡಬೇಕಿತ್ತು. ಈ ಚೌಕಟ್ಟು ಗ್ರಾಮೀಣ ಕಡುಬಡವ ಕಾರ್ಮಿಕರಿಗೆ ಘನತೆ ಮತ್ತು ತಮ್ಮ ಹಕ್ಕಿನ ಸಾಧನೆಯ ಶಕ್ತಿಯನ್ನು ನೀಡಿತ್ತು.

ಮನರೇಗಾ ಯೋಜನೆಯಲ್ಲಿ ಜಟಿಲ ಸಮಸ್ಯೆಗಳಿದ್ದುದು ನಿಜ. ಭ್ರಷ್ಟಾಚಾರ ವ್ಯಾಪಕವಾಗಿದ್ದುದು ವಾಸ್ತವವಾಗಿತ್ತು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಹಣ ಲಪಟಾಯಿಸುತ್ತಿದ್ದರು. ವೇತನ ವಿಳಂಬವಾಗುತ್ತಿತ್ತು. ಮನರೇಗಾ ಶ್ರಮದಿಂದ ಸೃಷ್ಟಿಸಿದ ಕೆಲವು ಸೊತ್ತುಗಳು ನಿಷ್ಪ್ರಯೋಜಕವಾಗಿರುತ್ತಿದ್ದವು. ಈ ವೈಫಲ್ಯಗಳನ್ನು ಅಲ್ಲಗಳೆಯಲಾಗದು. ಆದರೆ ಅದು ಕಾನೂನು ಅನುಷ್ಠಾನಗೊಳಿಸುವಲ್ಲಿ ಆದ ಲೋಪಗಳೇ ಹೊರತು ತಾತ್ವಿಕ ದೋಷವಲ್ಲ. ಭ್ರಷ್ಟಾಚಾರ ಪ್ರತಿಯೊಂದು ಸಾರ್ವಜನಿಕ ಯೋಜನೆಯಲ್ಲೂ ಇದೆ. ಆದರೆ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಕಾರಣಕ್ಕೆ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ. ಬದಲಾಗಿ ಉಲ್ಲಂಘಿಸುವವರನ್ನು ಶಿಕ್ಷಿಸಿ ರಕ್ಷಣಾ ವ್ಯವಸ್ಥೆಯನ್ನು ಭದ್ರಪಡಿಸುತ್ತೇವೆ.

ಕೇಂದ್ರ ಸರ್ಕಾರದ ಈ ಕ್ರಮದಲ್ಲಿ ಕಾಣುವ ತೊಂದರೆ ಸಾಂಕೇತಿಕತೆಯದ್ದು. ಗಾಂಧಿ ಹೆಸರಿನ ಬದಲಾಗಿ ರಾಮನ ಹೆಸರನ್ನು ಇಡುವುದು ತಟಸ್ಥನೀತಿಯಲ್ಲ. ಗಾಂಧಿ ನೈತಿಕ ಉತ್ತರದಾಯಿತ್ವಕ್ಕೆ ಬದ್ಧರಾಗಿದ್ದರು. ಪ್ರಜೆಗಳಲ್ಲಿ ಶ್ರಮದ ಘನತೆ ಇರುವುದರ ಬಗ್ಗೆ ಬದ್ಧರಾಗಿದ್ದರು. ರಾಮ ಎಷ್ಟೇ ಗೌರವಿಸಲ್ಪಟ್ಟರೂ, ಭಕ್ತಿಯ ಸಂಕೇತವಾಗಿದ್ದು ಒಂದು ನಾಗರಿಕತೆಯ ವ್ಯಕ್ತಿಯಾಗಿ ಕಾಣುತ್ತಾನೆ. ಜೀವನೋಪಾಯದ ಯೋಜನೆಗಳಲ್ಲಿ ದೇವರ ಹೆಸರನ್ನು ತರುವುದು ನೈತಿಕ ಧ್ವನಿಯನ್ನೇ ಬದಲಿಸುತ್ತದೆ. ನೌಕರಿ ಕಾಮಗಾರಿಗಳು ಔದಾರ್ಯದ ಉಡುಗೊರೆಯಾಗಿ ಕಾಣುತ್ತವೆಯೇ ಹೊರತು ಹಕ್ಕುಗಳಾಗಿ ಅಲ್ಲ.

ಮನರೇಗಾ ಹಕ್ಕುಗಳು ಪ್ರಶ್ನಿಸುವುದನ್ನು ಉತ್ತೇಜಿಸುತ್ತವೆ. ಕಾರ್ಮಿಕರು ವೇತನವನ್ನು ಕೇಳುವುದಕ್ಕೆ, ದೂರು ಸಲ್ಲಿಸುವುದಕ್ಕೆ, ಲೆಕ್ಕ ಪರಿಶೋಧನೆ ಒತ್ತಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಶ್ರದ್ಧೆ ಕೇವಲ ಒಪ್ಪಿಗೆಯನ್ನು ಉತ್ತೇಜಿಸುತ್ತದೆ. ಕಾರ್ಮಿಕನೊಬ್ಬನು ತನ್ನ ಉದ್ಯೋಗವನ್ನು ಮೇಲಿನವರಿಂದ ಒದಗಿಸಲಾಗಿದೆ ಎಂಬ ಭಾವನೆ ಹೊಂದಿದ್ದರೆ, ವಿಳಂಬವನ್ನು ಅಥವಾ ನಿರಾಕರಣೆಯನ್ನು ಪ್ರಶ್ನಿಸಲು ಮುಂದಾಗುವುದಿಲ್ಲ. ಭಾವನೆಗಳು, ಅನುಷ್ಠಾನದ ಅಗತ್ಯತೆಯ ಸ್ಥಾನವನ್ನು ಆಕ್ರಮಿಸುತ್ತವೆ.

ಇದು ಹೊಸ ವಿಶಾಲ ಮಾದರಿಯಾಗಿಯೂ ಕಾಣುತ್ತದೆ. ಕೇಸರಿ ಆಡಳಿತವು ಗಾಂಧಿಯನ್ನು ನೈತಿಕತೆಯ ಸಂಕೇತವಾಗಿ ನೋಡುವುದರ ಬಗ್ಗೆ ಮೊದಲಿನಿಂದಲೂ ಅಸಮಾಧಾನ ಹೊಂದಿದೆ. ಜನಕಲ್ಯಾಣ ಯೋಜನೆಯ ಕಾಯ್ದೆಯಿಂದ ಅವರ ಹೆಸರನ್ನು ತೆಗೆದುಹಾಕುವುದು, ಪ್ರಭುತ್ವದ ನೈತಿಕ ಪರಿಭಾಷೆಯನ್ನೇ ಪುನಾರಚಿಸುವ ಹುನ್ನಾರವಾಗಿ ಕಾಣುತ್ತದೆ. ಇದು ಸಾಂಸ್ಕøತಿಕ ಮತ್ತು ಧಾರ್ಮಿಕ ಔದಾರ್ಯವಾಗಿ ಮಾಡುವ ಉದ್ದೇಶದ ಯತ್ನ.

ಈ ಹೊಸ ಕಾಯ್ದೆಯ ಬೆಂಬಲಿಗರು, ಹೊಸ ಕಾನೂನು ಭ್ರಷ್ಟಾಚಾರವನ್ನು ನಿಯಂತ್ರಿಸುತ್ತದೆ ಎಂದು ವಾದಿಸುತ್ತಾರೆ. ಇದು ಅನುಮಾನಾಸ್ಪದ. ಕೇಂದ್ರೀಕೃತ ನಿಯಂತ್ರಣ ಮತ್ತು ವಿವೇಚನಾಧಿಕಾರ ಸಾಮಾನ್ಯವಾಗಿ ದುರ್ಬಳಕೆಯನ್ನು ಹೆಚ್ಚಿಸುತ್ತದೆ. ಕಾನೂನಾತ್ಮಕ ಖಾತರಿಗಳನ್ನು ದುರ್ಬಲಗೊಳಿಸಿದರೆ, ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಸಡಿಲಗೊಳಿಸಿದರೆ, ಭ್ರಷ್ಟಾಚಾರ ಇಲ್ಲವಾಗುವುದಿಲ್ಲ. ಮೇಲ್ನೋಟಕ್ಕೆ ಕಾಣದಂತಾಗುತ್ತದೆ ಮಾತ್ರ.

ಇದೊಂದು ವಿಡಂಬನೆ. ದೇವರ ಹೆಸರನ್ನು ಬಳಸಿದರೂ ಜವಾಬ್ದಾರಿ ಸ್ಪಷ್ಟವಾಗಿ ಹೇಳಲಾಗಿಲ್ಲ. ವೇತನ ವಿಳಂಬವಾದರೆ ಅಥವಾ ಕೆಲಸ ನಿರಾಕರಿಸಿದರೆ, ಕಾರ್ಮಿಕರು ಯಾರನ್ನು ಜವಾಬ್ದಾರರನ್ನಾಗಿ ಪರಿಗಣಿಸಬೇಕು? ದೇವರನ್ನೋ ಅಥವಾ ಸರಕಾರವನ್ನೋ?

ಮನರೇಗಾ ಕಾಯ್ದೆಯ ಸುಧಾರಣೆ ಅಗತ್ಯವಾಗಿತ್ತು. ಆದರೆ ಹಕ್ಕುಗಳನ್ನು ಕಸಿದುಕೊಂಡು, ಸಾಂಕೇತಿಕವಾಗಿ ಬದಲಾವಣೆಗಳನ್ನು ಮಾಡುವುದು ಸುಧಾರಣೆ ಎನಿಸಿಕೊಳ್ಳುವುದಿಲ್ಲ. ಇದು ಹಿನ್ನಡೆಯಾಗುತ್ತದೆ. ಹಿಮ್ಮುಖ ಚಲನೆಯಾಗುತ್ತದೆ. ನಿಜವಾದ ಪ್ರಶ್ನೆ ಇರುವುದು, ಜೀವನೋಪಾಯಗಳು ಕಾನೂನುಗಳನ್ನು ಅವಲಂಬಿಸುವುದೋ ಅಥವಾ ಔದಾರ್ಯವನ್ನೋ?

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again