ನಿಷೇಧದ ನಂತರವೂ ಪಿಎಫ್‍ಐ ಛಾಯೆ; ಸಂಸದರ ಮಾತನ್ನು ನಿರ್ಲಕ್ಷಿಸಲಾಗದು
ಪಿಎಫ್‍ಐ ತನ್ನ ಕಚೇರಿಗಳನ್ನು ಮುಚ್ಚಿದೆ; ಆದರೆ ಸಂಘಟನೆಯೇ ಪೆÇೀಷಿಸಿದ ಆಳವಾದ ವಾತಾವರಣವನ್ನು ಕೊನೆಗೊಳಿಸಿಲ್ಲ
..............
ಅಹುದಾದರಹುದೆನ್ನಿ * ಬಿವಿಸೀ
ಮಂಗಳೂರಿನಲ್ಲಿ ಮಂಗಳವಾರ ನಡೆದ ಎಸ್‍ಡಿಪಿಐ ಪಕ್ಷದ ಪತ್ರಿಕಾ ಗೋಷ್ಠಿಯನ್ನು ಲೋಕಸಭೆಯಲ್ಲಿ ದಕ್ಷಿಣ ಕನ್ನಡದ ಸಂಸದ ಬ್ರಿಜೀಶ್ ಚೌಟಾ ಮಾಡಿದ ಆಪಾದನೆಗಳನ್ನು ಖಂಡಿಸುವ ಸಲುವಾಗಿಯೇ ಆಯೋಜಿಸಲಾಗಿತ್ತು. ಇದು ಪರಿಹಾರವಾಗದ ಹಳೆಯ ಚರ್ಚೆಯನ್ನೇ ಮತ್ತೊಮ್ಮೆ ಮುನ್ನಲೆಗೆ ತಂದಿದೆ. ರಾಷ್ಟ್ರಮಟ್ಟದಲ್ಲಿ ನಿಷೇಧಕ್ಕೊಳಗಾದ ನಂತರ ಪಿಎಫ್‍ಐ ಸಂಘಟನೆಯು ನಿಜಕ್ಕೂ ಕಣ್ಮರೆಯಾಗಿದೆಯೇ ಅಥವಾ ಅದರ ಚದುರಿದ ಕಾರ್ಯಕರ್ತರು ತಮ್ಮ ಸೈದ್ಧಾಂತಿಕ ಉತ್ಸಾಹವನ್ನು ಕಾಪಾಡಿಕೊಳ್ಳುವ ಸಲುವಾಗಿ ಇತರ ಇಸ್ಲಾಮಿಕ್ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಈಗ ಚರ್ಚೆಗೊಳಗಾಗಿದೆ. ಚೌಟರ ಮಾತುಗಳನ್ನು ಆಧಾರರಹಿತ ಮತ್ತು ರಾಜಕೀಯ ಉದ್ದೇಶಪೂರಿತ ಎಂದು ಎಸ್‍ಡಿಪಿಐ ಖಂಡಿಸಿದೆ. ಆದರೂ ಇಲ್ಲಿ ಪಕ್ಷದ ರಕ್ಷಣಾತ್ಮಕ ವರ್ತನೆಗಿಂತಲೂ ಮುಖ್ಯವಾಗಿ ಕಾಣಬೇಕಿರುವುದು, ಚೌಟರ ಹೇಳಿಕೆಯು ಕರಾವಳಿ ಕರ್ನಾಟಕದಲ್ಲಿ ನಿಷೇಧದ ನಂತರ ಪ್ರಚಲಿತವಾಗಿರುವ ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುತ್ತದೆಯೇ ಎನ್ನುವ ಪ್ರಶ್ನೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು 2022ರಲ್ಲಿ ಯುಎಪಿಎ ಕಾಯ್ದೆಯಡಿ ನಿಷೇಧಿಸಿದಾಗ ಅದರ ಮುಖ್ಯ ಕಚೇರಿ, ಪದಾಧಿಕಾರಿಗಳು ಮತ್ತು ಮೂಲ ಸೌಕರ್ಯಗಳನ್ನೂ ಸಹ ನಾಶಪಡಿಸಲಾಗಿತ್ತು. ಆದರೆ ಈ ನಿಷೇಧವು ಕೂಡಲೇ ಸಾವಿರಾರು ಸದಸ್ಯರನ್ನು ಮತ್ತು ಬೆಂಬಲಿಗರನ್ನು ನಿಷ್ಕ್ರಿಯಗೊಳಿಸಲಿಲ್ಲ, ಇವರೆಲ್ಲರೂ ಸ್ಥಳೀಯ ಘಟಕಗಳ ಮೂಲಕ, ವಿದ್ಯಾರ್ಥಿ ಸಂಘಗಳ ಮೂಲಕ, ನೆರೆಹೊರೆಯ ಸಮಿತಿಗಳ ಮೂಲಕ ಸಕ್ರಿಯವಾಗಿದ್ದರು. ಮಾಧ್ಯಮ ವರದಿಗಳು ಆಂತರಿಕ ಭದ್ರತೆಯ ಮೂಲಗಳನ್ನೇ ಆಧರಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಪಿಎಫ್‍ಐ ಬ್ಯಾನರ್ ಎಲ್ಲೆಡೆ ನಾಶವಾಗಿದೆ ಎಂದು ವರದಿ ಮಾಡಲಾರಂಭಿಸಿದವು. ಆದರೆ ಅದರ ಸದಸ್ಯರ ಬಗ್ಗೆ ಏನೂ ಹೇಳಿರಲಿಲ್ಲ. ಅನೇಕ ಕಾರ್ಯಕರ್ತರು ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಅನೌಪಚಾರಿಕ ಗುಂಪುಗಳಲ್ಲಿ, ಮಸೀದಿ ಸಮಿತಿಗಳಲ್ಲಿ ಅಥವಾ ಅಸ್ತಿತ್ವದಲ್ಲಿರುವ ಮುಸ್ಲಿಂ ಸಂಘಟನೆಗಳಲ್ಲಿ ತಳಮಟ್ಟದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಚೌಟಾ ಅವರು ಸಂಸತ್ತಿನಲ್ಲಿ ಈ ಪ್ರಶ್ನೆ ಎತ್ತಿದ್ದಾರೆ. ಅವರು ಎಸ್‍ಡಿಪಿಐ ಪಕ್ಷವನ್ನು ದಾಖಲೆಗಳ ಸಮೇತ ಆರೋಪಿಸಲಿಲ್ಲ; ಆದರೆ, ದಕ್ಷಿಣ ಕನ್ನಡದಲ್ಲಿ ಅನೇಕರು ಭಾವಿಸುವಂತೆ, ಪಿಎಫ್‍ಐ ಸಂಘಟನೆಯ ಸಂಘಟನಾತ್ಮಕ ಅಂತ್ಯದ ನಂತರದಲ್ಲಿ ಸೈದ್ಧಾಂತಿಕವಾಗಿ ಪುನರುಜ್ಜೀವನ ಗಳಿಸುವ ನಿಟ್ಟಿನಲ್ಲಿ ಸಾವಿರಾರು ಯುವಕರು ಇತರ ವೇದಿಕೆಗಳಲ್ಲಿ ಪ್ರವೇಶಿಸಿದ್ದರು ಎನ್ನುವುದನ್ನು ಹೇಳಿದ್ದಾರೆ. ಈ ಭಾವನೆಯ ಹಿಂದೆ ಸಾಮಾಜಿಕ ನೆನಪುಗಳೂ ಹೇರಳವಾಗಿವೆ. ಕರಾವಳಿ ಕರ್ನಾಟಕ ದಶಕಗಳ ಕಾಲ ಪರಸ್ಪರ ಸ್ಪರ್ಧಾತ್ಮಕ ತೀವ್ರಗಾಮೀಕರಣವನ್ನು ಎದುರಿಸಿದ್ದು ಇದರಲ್ಲಿ ಪಿಎಫ್‍ಐ ಮತ್ತು ಬಜರಂಗದಳ ಪರಸ್ಪರ ಸೈದ್ಧಾಂತಿಕ ಬಿಂಬಗಳಾಗಿ ಕಾರ್ಯನಿರ್ವಹಿಸಿವೆ. ತತ್ಪರಿಣಾಮವಾಗಿ, ಸಾರ್ವಜನಿಕರು ಸೈದ್ಧಾಂತಿಕ ಮುಂದುವರಿಕೆಗಾಗಿ ಪುನಃಸಂಘಟಿತರಾಗುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.
ಎಸ್‍ಡಿಪಿಐ ಪತ್ರಿಕಾಗೋಷ್ಠಿ ನಿರೀಕ್ಷಿತ ಮಾತುಗಳಿಂದಲೇ ನಡೆದಿದೆ. ನೋಂದಾಯಿತ ರಾಜಕೀಯ ಪಕ್ಷವಾಗಿ ಅದು ತನ್ನನ್ನು ನಿಷೇಧಿತ ಸಂಘಟನೆಯಿಂದ ಪ್ರತ್ಯೇಕಿಸಿಕೊಳ್ಳುವುದು ಅನಿವಾರ್ಯ. ನಿರಾಕರಣೆಯು ರಾಜಕೀಯ ಅನಿವಾರ್ಯತೆಯಾಗಿದ್ದು, ವಾಸ್ತವಾಂಶಗಳೊಂದಿಗೆ ನಿರಾಕರಿಸುವುದು ಸಹಜವಾಗಿದೆ. ಆದರೆ ರಾಜಕೀಯ ಆರೋಪಗಳು ನಿಷೇಧದ ನಂತರ ಜಾಗತಿಕವಾಗಿ ಗಮನಿಸಲಾಗುವ ಮಾದರಿಗಳನ್ನು ಅಲ್ಲಗಳೆಯಲಾಗುವುದಿಲ್ಲ. ನಿಷೇಧಿತ ಸಂಘಟನೆಗಳ ಕಾರ್ಯಕರ್ತರು ನಿವೃತ್ತರಾಗುವುದು ಅಪರೂಪ, ಅವರು ಬೇರೆ ಸಂಘಟನೆಗಳಲ್ಲಿ ಹೊಂದಿಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಕಾರ್ಯಗಳು ಸದ್ದಿಲ್ಲದೆ ಸಾಮಾಜಿಕ ಅಥವಾ ನೆರೆಹೊರೆಯ ಜಾಲಗಳ ಮೂಲಕ ನಡೆಯುತ್ತಿರುತ್ತವೆ.
ಹಾಗಾಗಿಯೇ ಅವರ ಕ್ಷೇತ್ರದ ಬಗ್ಗೆ ಚೌಟ ಅವರ ಮಾತುಗಳನ್ನು ಬೇಕಾಬಿಟ್ಟಿಯಾಗಿ ಪರಿಗಣಿಸಲಾಗುವುದಿಲ್ಲ. ಇದು ಪ್ರದೇಶದಲ್ಲಿ ವ್ಯಾಪಕವಾಗಿ ನಂಬಲಾಗಿರುವಂತೆ, ಪಿಎಫ್‍ಐ ತನ್ನ ಕಚೇರಿಗಳನ್ನು ಮುಚ್ಚಿದೆ; ಆದರೆ ಸಂಘಟನೆಯೇ ಪೆÇೀಷಿಸಿದ ಆಳವಾದ ವಾತಾವರಣವನ್ನು ಕೊನೆಗೊಳಿಸಿಲ್ಲ. ಈ ವಾತಾವರಣವು ಔಪಚಾರಿಕ ಸಂಘಟನೆಗಳಾದ ಎಸ್‍ಡಿಪಿಐ ಮುಂತಾದುವನ್ನು ಆವರಿಸಿದ್ದರೆ ಇದು ಕಾನೂನು ಜಾರಿ ಮಾಡುವ ಸಂಸ್ಥೆಗಳಿಗೆ ಸವಾಲಿನ ಪ್ರಶ್ನೆಯಾಗುತ್ತದೆಯೇ ಹೊರತು, ರಾಜಕೀಯ ಘೋಷಣೆ ಅಥವಾ ಪತ್ರಿಕಾಗೋಷ್ಠಿಗಳ ಮೂಲಕ ಅಲ್ಲ.
ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಒಂದು ಸಂರಚನೆಯನ್ನು ನಾಶಪಡಿಸುವುದು ಸುಲಭ; ಆದರೆ ಸಿದ್ದಾಂತವನ್ನು ಕೊನೆಗೊಳಿಸಲಾಗುವುದಿಲ್ಲ. ಕರಾವಳಿ ಕರ್ನಾಟಕದ ಜನತೆ ಈ ವ್ಯತ್ಯಾಸವನ್ನು ಮರೆತಿಲ್ಲ.
Comments
Post a Comment