ನ್ಯಾಯವನ್ನೇ ಸಮಾಧಿ ಮಾಡುವ ವಿಕೃತ ವ್ಯವಸ್ಥೆ

 ಸರ್ಕಾರ ಎಸ್‍ಐಟಿ ತನಿಖೆಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು, ಯಾವುದೇ ಹಸ್ತಕ್ಷೇಪ ಮಾಡಕೂಡದು. ಇಲ್ಲವಾದಲ್ಲಿ, ಬಲಾಢ್ಯರನ್ನು ರಕ್ಷಿಸುವ ಸಲುವಾಗಿ, ನ್ಯಾಯದ ಕತ್ತು ಹಿಸುಕಿದ ಸರ್ಕಾರ ಎಂದೇ ನೆನಪಿನಲ್ಲುಳಿಯುತ್ತದೆ.

ನೇರಾನೇರ * ಬಿವಿಸೀ

ಗೃಹ ಸಚಿವ ಜಿ ಪರಮೇಶ್ವರ್ ಧರ್ಮಸ್ಥಳದಲ್ಲಿ ನಡೆದಿರುವ ಬಾಲಕಿಯರ ಮತ್ತು ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆಗಳ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆಯನ್ನು, ಅದು ಪೂರ್ಣಗೊಳ್ಳುವ ಮುನ್ನವೇ, ಅಂತಿಮಗೊಳಿಸುವುದಾಗಿ ಹೇಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದ ನಾಗರಿಕರಿಗೆ ಈ ಸಂದೇಶ ಆಘಾತಕಾರಿಯಾಗಿದ್ದು, ಸರ್ಕಾರಕ್ಕೆ ನ್ಯಾಯ ನಿರ್ಣಯ ಮಾಡುವ ಪ್ರಕ್ರಿಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶವೇ ಇಲ್ಲ ಎನಿಸುತ್ತದೆ. ಕರ್ನಾಟಕ ಸರ್ಕಾರದ ನಡೆ, ಸತ್ಯಾಂಶ ಹೊರಬರುವ ಮುನ್ನವೇ ನ್ಯಾಯವನ್ನು ಸಮಾಧಿ ಮಾಡುವಂತೆ ಕಾಣುತ್ತಿದೆ.

ಮಾಹಿತಿದಾರರ ಬಾಯಿ ಮುಚ್ಚಿಸಿ

ಬಲಾಢ್ಯರನ್ನು ರಕ್ಷಿಸುವ ತಂತ್ರ

ಘಟನೆಗಳ ಜಾಡನ್ನು ಗಮನಿಸಿದಾಗ, ಸರ್ಕಾರದ ಉದ್ದೇಶ ಸುಸ್ಪಷ್ಟವಾಗಿ ಕಾಣುತ್ತದೆ. ಮಾಹಿತಿದಾರ ಚಿನ್ನಯ್ಯ ನೀಡಿದ ದೂರು ವ್ಯಾಪಕ ಪ್ರಚಾರ ಪಡೆದಿದ್ದೇ ಅಲ್ಲದೆ, ಸರ್ಕಾರವು ಎಸ್‍ಐಟಿ ತನಿಖೆ ಆರಂಭಿಸುವುದನ್ನು ಅನಿವಾರ್ಯವಾಗಿಸಿತ್ತು. ಆದರೆ ಈಗ ಚಿನ್ನಯ್ಯ ಸೆರೆವಾಸಿಯಾಗಿದ್ದಾನೆ. ಮತ್ತೊಬ್ಬ ದೂರುದಾರ ತಿಮರೋಡಿ ಒಮ್ಮೆ ಜೈಲು ವಾಸ ಅನುಭವಿಸಿದ್ದು ಗಡೀಪಾರಿನ ಬೆದರಿಕೆಯನ್ನೂ ಎದುರಿಸಿದ್ದಾಗಿದೆ. ಈಗ ಶಸ್ತ್ರಾಸ್ತ್ರ ಸಂಗ್ರಹದ ಆರೋಪ ಎದುರಿಸುತ್ತಿದ್ದಾರೆ. ಮತ್ತೊಬ್ಬ ಪ್ರಮುಖ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಅವರನ್ನೂ ಅಧಿಕಾರಿಗಳು ಬೆನ್ನಟ್ಟಿದ್ದು, ಬಾಂಡ್ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದು ಅವರ ಬಾಯಿಮುಚ್ಚಿಸುವ ತಂತ್ರ ಎನ್ನುವುದು ಸ್ಪಷ್ಟ. ಧರ್ಮಸ್ಥಳದ ಕುಟುಂಬವನ್ನು ವಿರೋಧಿಸಿ ನಿಲ್ಲಲು ಹಿಂಜರಿಯುವ ಸರ್ಕಾರದ ವರ್ತನೆಗೆ ವ್ಯತಿರಿಕ್ತವಾಗಿ ದನಿ ಎತ್ತುತ್ತಿರುವವರ ವಿರುದ್ಧ ನಿರಂತರವಾಗಿ ಕ್ರಮಗಳನ್ನು ಜರುಗಿಸುವ ಸರ್ಕಾರದ ನಡೆ, ಸಾರ್ವಜನಿಕ ವಲಯದಲ್ಲಿ ಅತ್ಯಾಚಾರ, ಹತ್ಯೆಗಳನ್ನು ಎಸಗಿದ ವ್ಯಕ್ತಿಗಳನ್ನು, ಅದನ್ನು ಮುಚ್ಚಿ ಹಾಕಿದ ಸಂಸ್ಥೆಗಳನ್ನು ರಕ್ಷಿಸುವ ವರ್ತನೆಯಾಗಿ ಕಾಣುತ್ತಿದೆ. ದೂರು ಸಲ್ಲಿಸುವವರನ್ನು ಶಿಕ್ಷೆಗೊಳಪಡಿಸುವ, ಆರೋಪಿಗಳನ್ನು ರಕ್ಷಿಸುವ ಧೋರಣೆಯನ್ನು ಇಲ್ಲಿ ಗುರುತಿಸಬಹುದಾಗಿದೆ.

ಎಸ್‍ಐಟಿ ಮಂಜಿನ

ಪರದೆಯಾಗಿದೆಯೇ?

ಎಸ್‍ಐಟಿ ರಚನೆಯಾಗಿದ್ದು ನ್ಯಾಯ ಒದಗಿಸುವ ಸಲುವಾಗಿಯೇ? ಈ ಅನುಮಾನ ಹೆಚ್ಚಾಗುತ್ತಲೇ ಇದ್ದು, ಮೂಲತಃ ಇದರ ರಚನೆಗೆ ಸಾರ್ವಜನಿಕರ ಆಕ್ರೋಶವನ್ನು ತಣಿಸುವ ಉದ್ದೇಶ ಇತ್ತೇ ಹೊರತು, ಸತ್ಯವನ್ನು ಹೊರಗೆಳೆಯುವ ಗುರಿ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ತನಿಖೆಯನ್ನು ಆದೇಶಿಸುವ ಮೂಲಕ ಸರ್ಕಾರವು ಸಮಯ ಮತ್ತು ವಿಶ್ವಾಸಾರ್ಹತೆ ಎರಡನ್ನೂ ಖರೀದಿಸಿದೆ. ಮಧ್ಯದಲ್ಲಿ ತನಿಖೆಯನ್ನು ಭಂಗಗೊಳಿಸುವ ಮೂಲಕ ಯಾವುದೇ ಶಿಕ್ಷಾರ್ಹ ಅಪರಾಧಗಳು ಹೊರಬರದ ಹಾಗೆ ಮಾಡಿದೆ. ಉತ್ತರದಾಯಿತ್ವವನ್ನು ಕಾಪಾಡುವ ಬದಲು ಗೌರವವನ್ನು ಪವಿತ್ರಗೊಳಿಸುವ ಮಂಜಿನ ಪರದೆಯಾಗಿ ಬಳಸುತ್ತಿರುವುದನ್ನು ಗಮನಿಸಬೇಕಿದೆ. ಧರ್ಮಸ್ಥಳದ ಅಪರಾಧಿ ಕುಟುಂಬವನ್ನು ತನಿಖೆಗೊಳಪಡಿಸುವ ಬದಲು, ಎಸ್‍ಐಟಿ ಅದರ ರಕ್ಷಣೆಗೆ ಕಟಿಬದ್ಧವಾಗಿದೆ.

ಅಪಾಯಕಾರಿ ಪರಿಣಾಮಗಳು

ಇಂತಹ ಹಿಮ್ಮೆಟ್ಟುವಿಕೆಯ ಪರಿಣಾಮಗಳು ಗಂಭೀರವಾಗಿ ಕಾಣುತ್ತವೆ. ಸರ್ಕಾರಗಳು ನ್ಯಾಯ ಒದಗಿಸುವ ಹಾದಿಯನ್ನು ತ್ಯಜಿಸಿದಾಗ ಸಾರ್ವಜನಿಕರ ವಿಶ್ವಾಸ ಕುಸಿದುಹೋಗುತ್ತದೆ. ಸಂಸ್ಥೆಗಳು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ. ಕಾನೂನು ಬಲಾಢ್ಯರ ಪರವಾಗಿ ಕೆಲಸ ಮಾಡುವುದನ್ನು ಕಂಡ ನಾಗರಿಕರು ಪ್ರಕ್ಷುಬ್ಧರಾಗುತ್ತಾರೆ. ಧರ್ಮಸ್ಥಳದ ಸಾವುಗಳಂತಹ ಸೂಕ್ಷ್ಮ ಪ್ರಕರಣಗಳಲ್ಲಿ, ಹಲವು ದಶಕಗಳಿಂದ ಅನುಮಾನಗಳು ಗಟ್ಟಿಯಾಗುತ್ತಿದ್ದು, ತನಿಖೆಯನ್ನು ಏಕಾಏಕಿ ಮುಗಿಸುವುದು ಆಗಿರುವ ಗಾಯಗಳನ್ನು ಶಮನಗೊಳಿಸುವುದಿಲ್ಲ. ಇನ್ನೂ ಉಲ್ಬಣಿಸುವಂತೆ ಮಾಡುತ್ತದೆ. ಜನರನ್ನು ಹತಾಶೆಗೆ ದೂಡುತ್ತದೆ, ಇದರಿಂದ ಸಾಂಸ್ಥಿಕ ಚೌಕಟ್ಟುಗಳಿಂದಾಚೆಗೂ ಚಳುವಳಿಗಳು ಹುಟ್ಟಿಕೊಳ್ಳುತ್ತವೆ.

ಈಗಾಗಲೇ ಎಸ್‍ಐಟಿಯ ಪ್ರಾಮಾಣಿಕತೆಯಲ್ಲಿ ವಿಶ್ವಾಸ ಇರಿಸಿದ್ದ ನಾಗರಿಕರು ಅದರ ಮೂಲ ಉದ್ದೇಶವನ್ನೇ ಪ್ರಶ್ನಿಸುತ್ತಿದ್ದಾರೆ. ನ್ಯಾಯ ದೊರೆಯುವುದು ಶತಃಸಿದ್ಧ ಎಂಬ ಭರವಸೆ ಕ್ಷೀಣಿಸುತ್ತಿದ್ದು, ಎಸ್‍ಐಟಿಯನ್ನು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಲೆಂದೇ ರಚಿಸಲಾಗಿದೆ ಎಂಬ ಗುಮಾನಿ ಹೆಚ್ಚಾಗುತ್ತಿದೆ. ವಿಶ್ವಾಸ ಕುಂದುತ್ತಿರುವುದು ಕೇವಲ ಸಾಂಕೇತಿಕವಲ್ಲ, ಇದು ಸರ್ಕಾರದ ನೈತಿಕ ಅಧಿಕಾರವನ್ನೇ ಇಲ್ಲವಾಗಿಸುತ್ತದೆ. ಸತ್ಯವನ್ನು ರಾಜಿಮಾಡಿಕೊಳ್ಳಬಹುದು, ನ್ಯಾಯ ಎನ್ನುವುದನ್ನು ಆಯ್ದ ಕಡೆ ಅನ್ವಯಿಸಬಹುದು ಎಂಬ ಜನತೆಯ ಭಾವನೆಯೇ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುತ್ತದೆ.

ಬೆಂಕಿಯೊಡನೆ ಸರಸ

ಮಾಹಿತಿದಾರರನ್ನು ಗುರಿಯಾಗಿಸುತ್ತಾ, ಎಸ್‍ಐಟಿ ತನಿಖೆಯನ್ನು ಮುಗಿಸುವ ಸೂಚನೆ ನೀಡುವುದರ ಮೂಲಕ ರಾಜ್ಯ ಸರ್ಕಾರವು ಬೆಂಕಿಯೊಡನೆ ಸರಸವಾಡುತ್ತಿದೆ. ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎನ್ನುವುದಕ್ಕಿಂತಲೂ, ಎಸ್‍ಐಟಿ ತನಿಖೆ ಮಾಡಬೇಕಾಗಿದ್ದ ಅಪರಾಧಗಳಲ್ಲಿ ಶಾಮೀಲಾಗಿದೆ ಎಂಬ ಅನುಮಾನಗಳನ್ನು ಹುಟ್ಟಿಸುತ್ತಿದೆ. ಈಗ ತನಿಖೆಯನ್ನು ನಿಲ್ಲಿಸುವುದು ಧರ್ಮಸ್ಥಳದಲ್ಲಿ ಕೊನೆಗೊಂಡ ಜೀವಗಳು ನಗಣ್ಯವಾಗಿ, ಆಡಳಿತಾರೂಢ ಕುಟುಂಬದ ಗೌರವವೇ ಪ್ರಧಾನ ಎಂಬ ಭೀಕರ ಸಂದೇಶವನ್ನು ರವಾನಿಸುತ್ತದೆ.

ಇಲ್ಲಿ ಆಯ್ಕೆ ಸ್ಪಷ್ಟವಾಗಿದೆ. ಸರ್ಕಾರ ಎಸ್‍ಐಟಿ ತನಿಖೆಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು, ಯಾವುದೇ ಹಸ್ತಕ್ಷೇಪ ಮಾಡಕೂಡದು. ಇಲ್ಲವಾದಲ್ಲಿ, ಬಲಾಢ್ಯರನ್ನು ರಕ್ಷಿಸುವ ಸಲುವಾಗಿ, ನ್ಯಾಯದ ಕತ್ತು ಹಿಸುಕಿದ ಸರ್ಕಾರ ಎಂದೇ ನೆನಪಿನಲ್ಲುಳಿಯುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again