ಆರೆಸ್ಸೆಸ್ ನಿಷೇಧ ಬಗ್ಗೆ ತಾತ್ವಿಕ ತಳಹದಿ ಇಲ್ಲದ ಪ್ರಿಯಾಂಕ್ ಖರ್ಗೆ ಘೋಷಣೆ

 ಇದು ಪ್ರಿಯಾಂಕ್ ಅವರ ದೀರ್ಘಕಾಲದ ರಾಜಕೀಯ ಕಾರ್ಯತಂತ್ರದ ಒಂದು ಭಾಗವಾಗಿದೆ

ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸುವಂತೆ ಪದೇಪದೇ ಆಗ್ರಹಿಸುವ ಮೂಲಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ತ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ,  ತಮ್ಮ ಹಕ್ಕೊತ್ತಾಯದಂತೆ ಮಾತನಾಡುತ್ತಿದ್ದಾರೆ. ರಾಜಕೀಯವಾಗಿ ಆರೆಸ್ಸೆಸ್‍ಗೆ ಒಂದು ಹಣೆಪಟ್ಟಿ ಹಚ್ಚುವ ನಿಟ್ಟಿನಲ್ಲಿ ಖರ್ಗೆ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಗಟ್ಟಿಯಾದ ಸೆಕ್ಯುಲರ್ ಧ್ವನಿಯಾಗಿ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಪಕ್ಷದ ಹೈಕಮಾಂಡ್‍ನ ಸೈದ್ಧಾಂತಿಕ ನಿಲುವಿಗೆ ನೇರವಾಗಿ ಸ್ಪಂದಿಸುವಂತಿದ್ದು, ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಮಾಡುತ್ತಿರುವ ಕಸರತ್ತಿನಂತಿದೆ.

ಒಂದು ರಾಜ್ಯ ಸರ್ಕಾರಕ್ಕೆ ಆರೆಸ್ಸೆಸ್‍ನಂತಹ ಯಾವುದೇ ರಾಷ್ಟ್ರಮಟ್ಟದ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ಇರುವುದಿಲ್ಲ ಎನ್ನುವುದು ವಾಸ್ತವ. ಇಂತಹ ಕ್ರಮ ಕೈಗೊಳ್ಳಲು ಅಗತ್ಯವಾದ ಕಾನೂನಾತ್ಮಕ ಸಾಂವಿಧಾನಿಕ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಮಾತ್ರವೇ ಇರುತ್ತದೆ. ಈ ಅಧಿಕಾರವನ್ನು ಯುಎಪಿಎ  ಮಾದರಿಯ ಕಾಯ್ದೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾಗಿದೆ. ಅಂತಹ ಯಾವುದೇ ನಿಷೇಧ ಹೇರುವುದಾದರೆ, ರಾಷ್ಟ್ರೀಯ ಸಮಗ್ರತೆ, ಅಖಂಡತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಭದ್ರತೆಗೆ ಸಂಘಟನೆಯಿಂದ ಅಪಾಯ ಇರುವುದರ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಇದನ್ನು ಯಾವುದೇ ರಾಜ್ಯ ಸಚಿವರೂ ಏಕಪಕ್ಷೀಯವಾಗಿ ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಪ್ರಿಯಾಂಕ್ ಅವರು ಕಾನೂನು ಸಲಹೆಗಾರರ ಹಾಗೂ ಆಡಳಿತ ಯಂತ್ರದ ನಿಕಟ ಸಂಪರ್ಕ ಹೊಂದಿರುವುದರಿಂದ ಈ ಅಂಶಗಳು ತಿಳಿದಿರಲೇಬೇಕು.


ಆದರೂ ಪದೇಪದೇ ಯಾಕೀ ಘೋಷಣೆ?

ಈ ಪ್ರಶ್ನೆಗೆ ಉತ್ತರವನ್ನು ಸೈದ್ಧಾಂತಿಕ ಪೆÇೀಷಾಕು ಧರಿಸಿ ರಾಜಕೀಯ ಮಾಡುವ ವೈಯುಕ್ತಿಕ ಮಹತ್ವಾಕಾಂಕ್ಷೆಯಲ್ಲಿ ಗುರುತಿಸಬಹುದು. ರಾಹುಲ್ ಗಾಂಧಿ ಹಲವು ವರ್ಷಗಳ ಕಾಲ ಆರೆಸ್ಸೆಸ್ ಸಂಘಟನೆಯನ್ನೇ ಗುರಿಯಾಗಿಸಿಕೊಂಡು ಸೈದ್ಧಾಂತಿಕ ದಾಳಿ ನಡೆಸಿದ್ದರು. ರಾಹುಲ್ ಈ ಸಂಘಟನೆಯನ್ನು ಬಿಜೆಪಿಯ ರಾಜಕೀಯದ ಹಿಂದಿನ ಸೈದ್ಧಾಂತಿಕ ತಳಹದಿ ಎಂದೇ ಪರಿಗಣಿಸುವುದಲ್ಲದೆ, ಇದು ಭಾರತದ ಸಾಂವಿಧಾನಿಕ ನೆಲೆಗಳನ್ನು ಭಂಗಗೊಳಿಸುತ್ತಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಇದೇ ಮಾದರಿಯನ್ನು ಅನುಕರಿಸುವ ಮೂಲಕ ಪ್ರಿಯಾಂಕ್ ತಮ್ಮ ಪಕ್ಷದ ಸರ್ವೋಚ್ಛ ನಾಯಕ ರಾಹುಲ್ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದು, ತಮ್ಮ ಸೈದ್ಧಾಂತಿಕ ಪರಿಶುದ್ದತೆಯನ್ನು ಪ್ರದರ್ಶಿಸುವ ಮೂಲಕ ಕಾಂಗ್ರೆಸ್‍ನ ಸ್ಥಾಪಿತ ಮೌಲ್ಯಗಳೊಡನೆ ನಿಲ್ಲುವ ತಂತ್ರ ಅನುಸರಿಸುತ್ತಿದ್ದಾರೆ.

ಇದು ಪ್ರಿಯಾಂಕ್ ಅವರ ದೀರ್ಘಕಾಲದ ರಾಜಕೀಯ ಕಾರ್ಯತಂತ್ರದ ಒಂದು ಭಾಗವಾಗಿದೆ. ಕರ್ನಾಟಕದ ಒಳಗೆ ತಮ್ಮ ತಂದೆಯ ಛಾಯೆಯಿಂದ ದೂರ ಸರಿದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಿಂದ ಭಿನ್ನ ನೆಲೆಯಲ್ಲಿ ನಿಲ್ಲಲು ಪ್ರಯತ್ನಿಸುತ್ತಾರೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸಿದರೆ, ಡಿ ಕೆ ಶಿವಕುಮಾರ ಒಕ್ಕಲಿಗರ ಬೆಂಬಲವನ್ನು ಅಪೇಕ್ಷಿಸುತ್ತಾರೆ. ಪ್ರಿಯಾಂಕ್ ಕಾಂಗ್ರೆಸ್ ಪಕ್ಷದಲ್ಲಿ ದಲಿತ-ಪ್ರಗತಿಪರ ಹಾಗು ಜಾತ್ಯತೀತ ರಾಜಕಾರಣದ ವಕ್ತಾರರಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿಯೇ ಆರೆಸ್ಸೆಸ್ ಅವರಿಗೆ ಪ್ರಧಾನ ಶತ್ರುವಾಗಿ ಕಾಣುತ್ತದೆ. ರಚನಾತ್ಮಕ ವಿಮರ್ಶೆ ಮಾಡದೆ ಸಾಂವಿಧಾನಿಕ ನಿಷೇಧಕ್ಕಾಗಿ ಆಗ್ರಹಿಸುವುದು ಪ್ರಚೋದಿಸುತ್ತದೆಯೇ ಹೊರತು, ಕಾರ್ಯಗತವಾಗುವ ಲಕ್ಷಣಗಳನ್ನು ಹೊಂದಿರುವುದಿಲ್ಲ.

ಇಲ್ಲಿರುವ ನಿಜವಾದ ಅಪಾಯವನ್ನು ಎರಡು ನೆಲೆಗಳಲ್ಲಿ ಗುರುತಿಸಬಹುದು. ಮೊದಲನೆಯದಾಗಿ, ಇದು ಸಮಾಜವನ್ನು ಮತ್ತಷ್ಟು ಧೃವೀಕರಣಗೊಳಿಸುತ್ತದೆ. ಆರೆಸ್ಸೆಸ್ ಕರ್ನಾಟಕದಲ್ಲಿ ಆಳವಾಗಿ ಬೇರೂರಿರುವ ಒಂದು  ಸಂಘಟನೆ. ಇದನ್ನು ನಿಷೇಧಿಸಲು ಕರೆ ನೀಡುವುದು ಹುತಾತ್ಮತೆಯ ನಿರೂಪಣೆಯನ್ನು ಮತ್ತೆ ಮುನ್ನಲೆಗೆ ತರುತ್ತದೆ.  ಇದು ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಆರೋಪಿಸಲು ಅನುವು ಮಾಡಿಕೊಡುತ್ತದೆ. ಎರಡನೆಯದಾಗಿ, ಇನ್ನೂ ಗಂಭೀರ ವಿಚಾರ ಎಂದರೆ ಇಂತಹ ಹೇಳಿಕೆಗಳು ಒಬ್ಬ ಹಾಲಿ ಸಚಿವರಿಂದ ಬರುವುದು ಸೈದ್ಧಾಂತಿಕ ಅಭಿವ್ಯಕ್ತಿ ಮತ್ತು ಸಾಂವಿಧಾನಿಕ ಬೇಜವಾಬ್ದಾರಿತನದ ನಡುವಿನ ತೆಳು ಗೆರೆಯನ್ನು ಮಸುಕಾಗಿಸುತ್ತದೆ. ಸಚಿವರು ಕಾರ್ಯಕರ್ತರಂತೆ ಅಲ್ಲ. ಅವರಿಗೆ ಆಳ್ವಿಕೆಯ ನ್ಯಾಯಪರತೆಯ ಜವಾಬ್ದಾರಿ ಇರುತ್ತದೆ. ಹಾಗಾಗಿ ಸಂವಿಧಾನದ ಚೌಕಟ್ಟಿನ ಒಳಗೇ ಮಾತನಾಡಬೇಕಾಗುತ್ತದೆ.

ನಿರುದ್ಯೋಗ, ಬೆಲೆ ಏರಿಕೆ, ಕೋಮು ಸಂಘರ್ಷ, ಗ್ರಾಮೀಣ ಬಿಕ್ಕಟ್ಟುಗಳಿಂದ ಜರ್ಜರಿತವಾಗಿರುವ ರಾಜ್ಯದಲ್ಲಿ ಜನರು ಸರ್ಕಾರದಿಂದ ಕೇವಲ ಘೋಷಣೆಗಳನ್ನು ನಿರೀಕ್ಷಿಸುವುದಿಲ್ಲ. ಪ್ರಿಯಾಂಕ್ ಅವರಿಗೆ ಆರೆಸ್ಸೆಸ್ ಸಂಘಟನೆಯನ್ನು ವಿರೋಧಿಸುವುದೇ ಕೆಲಸ ಆದರೆ ಸೂಕ್ತ ಮಾಹಿತಿ ದತ್ತಾಂಶಗಳ ಸಮೇತ, ಮಾತುಕತೆಗಳ ಮೂಲಕ, ಸಾಂವಿಧಾನಿಕ ಚರ್ಚೆಯ ಮೂಲಕ ವ್ಯಕ್ತಪಡಿಸಬೇಕೇ ಹೊರತು, ಅವರ ಅಧಿಕಾರ ವ್ಯಾಪ್ತಿಗೆ ಮೀರಿದ ರೀತಿಯಲ್ಲಿ ಬರೀ ಬೀಸು ಮಾತಿನ ನೀತಿಯನ್ನು ಜಾರಿಗೊಳಿಸುವ ಟೊಳ್ಳು ಮಾತುಗಾರಿಕೆಯಲ್ಲಿ ತೊಡಗಕೂಡದು.

ಕೊನೆಯದಾಗ, ಪ್ರಿಯಾಂಕ್ ಅವರ ಆರೆಸ್ಸೆಸ್ ವಿರೋಧಿ ಪ್ರಚಾರ ಅವರಿಗೆ ದೆಹಲಿಯ ಹೈಕಮಾಂಡ್‍ನಲ್ಲಿ ಮತ್ತು ಸೈದ್ಧಾಂತಿಕ ಮಿತ್ರರಲ್ಲಿ  ಮೆಚ್ಚುಗೆ ಪಡೆಯಬಹುದು. ಆದರೆ ಇದರಿಂದ ಕರ್ನಾಟಕದ ಆಳ್ವಿಕೆಯಾಗಲೀ, ಕಾಂಗ್ರೆಸ್ ಪಕ್ಷದ ಭವಿಷ್ಯವಾಗಲೀ ನಿರ್ಧಾರವಾಗುವುದಿಲ್ಲ. ಬದಲಾಗಿ, ಸಚಿವ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವ ರಾಜಕೀಯ ಹುನ್ನಾರದ ಆರೋಪಕ್ಕೆ ಗುರಿಯಾಗುತ್ತದೆ. ಸಂಕುಚಿತ ವೈಯುಕ್ತಿಕ ಹಿತಾಸಕ್ತಿಗಾಗಿ ಪ್ರಜಾಸತ್ತಾತ್ಮಕ ನಿಯಮಗಳನ್ನು ಮೀರಿದ ಆರೋಪ ಎದುರಿಸಬೇಕಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again