ನ್ಯಾಷನಲ್ ಹೆರಾಲ್ಡ್ ವಿವಾದ - ರಾಜ್ಯ ಸರಕಾರಕ್ಕೆ ಒಂದೆರಡು ಸಲಹೆ
ಬಿವಿಸೀ
ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ತನ್ನ ನಿಗದಿತ ಮಿತಿಯನ್ನೂ ಮೀರಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ದೊಡ್ಡ ಪ್ರಮಾಣದ ಜಾಹೀರಾತುಗಳನ್ನು ನೀಡಿದೆಯೆನ್ನಲಾದ ವಿಷಯ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಪ್ರಮುಖ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಒಡೆತನದಲ್ಲಿರುವ ಈ ಪತ್ರಿಕೆ ಮೂಲತಃ ಸೋನಿಯಾ ಗಾಂಧಿ ಅವರ ಒಡೆತನದಲ್ಲಿರುವುದು ವಿವಾದವನ್ನು ಮತ್ತಷ್ಟು ವಿವಾದಿತಗೊಳಿಸಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರೆ, ಹಿರಿಯ ಬಿಜೆಪಿ ನಾಯಕರು - ಪ್ರಹ್ಲಾದ್ ಜೋಷಿಯನ್ನೂ ಒಳಗೊಂಡಂತೆ - ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸರ್ಕಾರವು ಪಕ್ಷಪಾತ ತೋರಿದ್ದು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಒಂದು ಹಂತದಲ್ಲಿ ನೋಡಿದಾಗ ಈ ಪ್ರಕರಣದಲ್ಲಿ ಅಂತಹ ಅತಿಶಯವಾದದ್ದೇನೂ ಇಲ್ಲ. ಎಲ್ಲ ಪಕ್ಷಗಳ ಸರ್ಕಾರಗಳೂ ಸಹ ತಮಗಿಷ್ಟದ ಕೆಲವು ಮಾಧ್ಯಮಗಳಿಗೆ ವಿಶೇಷ ಕೃಪೆ ತೋರಿ ಜಾಹೀರಾತು ನೀಡುವ ಮೂಲಕ ಉತ್ತೇಜನ ನೀಡಿರುವುದು ಸಾಮಾನ್ಯ ಸಂಗತಿಯಾಗಿದೆ. ಕರ್ನಾಟಕದಲ್ಲೇ ಬಿಜೆಪಿ ಮುಖ್ಯಮಂತ್ರಿಗಳು ತಮ್ಮ ಆಳ್ವಿಕೆಗೆ ಅನುಕೂಲಕರವಾಗಿರುವ ಪತ್ರಿಕೆಗಳಿಗೆ ಭಾರಿ ಮೊತ್ತದ ಜಾಹೀರಾತುಗಳನ್ನು ಒದಗಿಸಿರುವುದು ದಾಖಲಿತ ವಾಸ್ತವ. ಇದಕ್ಕೆ ಹೋಲಿಸಿದರೆ, ನ್ಯಾಷನಲ್ ಹೆರಾಲ್ಡ್ ಪ್ರತಿಕೆಯ ಜಾಹೀರಾತಿಗೆ ಮಾಡಿರುವ ವೆಚ್ಚ ತೀರಾ ಹೆಚ್ಚಿನದೇನಲ್ಲ. ಸಾಧಾರಣ ಮೊತ್ತ ಎನ್ನಬಹುದು. ಈ ವಿವಾದವು ಉಲ್ಬಣಿಸಿರುವುದಕ್ಕೆ ಮೂಲ ಕಾರಣ ಅದರಲ್ಲಿ ಅಡಗಿರುವ ಹಣದ ಮೊತ್ತ ಅಲ,್ಲ ಬದಲಾಗಿ ಸುದ್ದಿಪತ್ರಿಕೆಯ ಒಡೆತನ ಮತ್ತು ಸೋನಿಯಾ ಗಾಂಧಿ üಕುಟುಂಬಕ್ಕೆ ಹೆಸರಿಗೆ ಅಂಟಿಕೊಂಟಿರುವ ಸಾಂಕೇತಿಕ ರಾಜಕಾರಣ.
ನಿರೀಕ್ಷಿತವಾಗಿಯೇ ಈ ವಿವಾದವು ಆರಂಭದಲ್ಲಿ ಸದ್ದು ಮಾಡಿ ಶೀಘ್ರದಲ್ಲೇ ತಣ್ಣಗಾಗುತ್ತದೆ. ಆದರೆ ಈ ವಿವಾದವು ಸಿದ್ದರಾಮಯ್ಯ ಸರ್ಕಾರಕ್ಕೆ ಒದಗಿಸಿರುವ ಸದಾವಕಾಶವನ್ನು ಸರ್ಕಾರ ಅಲಕ್ಷಿಸಕೂಡದು. ಈ ವಿವಾದದ ಹಿನ್ನಲೆಯಲ್ಲೇ ಸರ್ಕಾರದ ಜಾಹೀರಾತು ನೀತಿಗೆ ಪ್ರಜಾತಂತ್ರದ ಸ್ಪರ್ಶ ನೀಡಿ, ವಿಕೇಂದ್ರೀಕರಣಗೊಳಿಸಬಹುದು. ಈ ಅರ್ಥಪೂರ್ಣ ಕ್ರಮ ದೀರ್ಘಕಾಲ ಉಪಯುಕ್ತವಾಗಿರುತ್ತದೆ.
ಹಲವು ವರ್ಷಗಳಿಂದಲೇ ಕರ್ನಾಟಕ ಸರ್ಕಾರದ ಮುಂದೆ ಪ್ರಸ್ತಾಪವೊಂದಿದ್ದು, ವೃತ್ತಿಪರವಾಗಿ ನಡೆಸಲಾಗುವ ಪ್ರಾದೇಶಿಕ ದಿನಪತ್ರಿಕೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಕನಿಷ್ಠ ನಾಲ್ಕೈದು ಜಿಲ್ಲೆಗಳಲ್ಲಾದರೂ ಪ್ರಸರಣ ಹೊಂದಿರುವ ಪತ್ರಿಕೆಗಳಿಗೆ ಸರಕಾರದ ಜಾಹೀರಾತು ನೀಡಿಕೆಯಲ್ಲಿ ಪ್ರಾಶಸ್ತ್ಯ ನೀಡಲು ಬೇಡಿಕೆ ಇದೆ. ಕರ್ನಾಟಕದಲ್ಲಿ ಇಂತಹ ಪ್ರಾದೇಶಿಕ ಪತ್ರಿಕೆಗಳು ಹಲವಾರಿವೆ. ಅವುಗಳ ಪೈಕಿ ಕೆಲವು ಪತ್ರಿಕೆಗಳು ದಶಕಗಳ ಕಾಲ ಜನರ ನಡುವೆ ಪ್ರಸಾರದಲ್ಲಿದ್ದು ಸಮಾಜಸೇವೆಯ ವಾಹಕಗಳಾಗಿವೆ. ಈ ಪತ್ರಿಕೆಗಳಲ್ಲಿ ಹೂಡಲಾಗಿರುವ ಮಾನವ ಸಂಪನ್ಮೂಲಗಳು ಮತ್ತು ಮುದ್ರಣ ಯಂತ್ರಗಳ ಮೇಲಿನ ಬಂಡವಾಳ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿವೆ. ಈ ಪತ್ರಿಕೆಗಳು ಆದಾಯ ತೆರಿಗೆ ಪಾವತಿಸುತ್ತಿದ್ದು, ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಪ್ರಾಮಾಣಿಕವಾಗಿ ಅನುಸರಿಸುತ್ತಿವೆ. ಅಷ್ಟೇ ಅಲ್ಲದೆ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ತಳಮಟ್ಟದವರೆಗೂ ಜನರಿಗೆ ಯಶಸ್ವಿಯಾಗಿ ತಲುಪಿಸುತ್ತಿವೆ.
ಈ ಕೆಲವು ಪತ್ರಿಕೆಗಳ ಪ್ರಸರಣದ ವ್ಯಾಪ್ತಿ ಮತ್ತು ವಿಶ್ವಾಸಾರ್ಹತೆಯ ಹೊರತಾಗಿಯೂ, ಈ ಪ್ರಾದೇಶಿಕ ಪತ್ರಿಕೆಗಳನ್ನು ಕೆಳಮಟ್ಟದ್ದೆಂದು ಪರಿಗಣಿಸಲಾಗುತ್ತಿದ್ದು, ಸರ್ಕಾರಿ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಸಂದರ್ಭಗಳಲ್ಲಿ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ತಾರತಮ್ಯಕ್ಕೆ ಯಾವ ರೀತಿಯ ಸಮರ್ಥನೆ ಇದೆ? ಪ್ರಾದೇಶಿಕ ಪತ್ರಿಕೆಗಳು, ಬಹುತೇಕ ಸಂದರ್ಭಗಳಲ್ಲಿ ನೇರವಾಗಿ ಸ್ಥಳೀಯ ಜನರೊಡನೆ ಸಂಪರ್ಕ ಸಾಧಿಸುತ್ತಿರುವುದರ ಹಿನ್ನೆಲೆಯಲ್ಲಿ, ಸರ್ಕಾರಿ ಜಾಹೀರಾತುಗಳ ವಿಚಾರದಲ್ಲಿ ರಾಜ್ಯ ಮಟ್ಟದ ಪತ್ರಿಕೆಗಳಿಗಿಂತಲೂ ಕಡಿಮೆ ಶ್ರೇಣಿಯಲ್ಲಿ ಪರಿಗಣಿಸುವುದು ಯಾವ ನ್ಯಾಯ?
ಜಾಹೀರಾತುಗಳನ್ನು ಸರ್ಕಾರದ ಔದಾರ್ಯ ಅಥವಾ ಪೆÇೀಷಕತ್ವ ಎಂದು ಭಾವಿಸಕೂಡದು. ರಾಜಕೀಯ ಅನುಕೂಲಕ್ಕೆ ತಕ್ಕಂತೆ, ವೈಯುಕ್ತಿಕ ಆದ್ಯತೆಯ ಅನುಸಾರ ನಿರಾಕರಿಸಬಹುದಾದ ಕ್ರಮದಂತೆ ಪರಿಗಣಿಸಕೂಡದು. ದುರದೃಷ್ಟವಶಾತ್ ಕೆಲವು ಪ್ರಾದೇಶಿಕ ಪತ್ರಿಕೆಗಳಿಗೆ ಮಾತ್ರ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡುವ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿರುವ ಮುಖ್ಯಮಂತ್ರಿಗಳ ವಿವೇಚನೆ ಅಷ್ಟೇ ಉನ್ನತ ಮಟ್ಟ ಸಾಧಿಸಿರುವ ಇತರ ಕೆಲವು ವಿಶ್ವಾಸಾರ್ಹ ಪ್ರಾದೇಶಿಕ ಪತ್ರಿಕೆಗಳಿಗೆ ಲಭ್ಯವಾಗಿಲ್ಲ. ಅವುಗಳನ್ನು ನಿರ್ಲಕ್ಷಿಸಲಾಗಿದೆ. ಈ ಪತ್ರಿಕೆಗಳ ಮನವಿಗಳು ನೆನೆಗುದಿಗೆ ಬಿದ್ದಿವೆ.
ಸಿದ್ದರಾಮಯ್ಯ ತಮ್ಮ ಬಹುತ್ವ, ವಿಕೇಂದ್ರೀಕರಣ ಮತ್ತು ನ್ಯಾಯಪರತೆಯ ವಕ್ತಾರರಾಗಿ ಬಿಂಬಿಸಿಕೊಳ್ಳುತ್ತಾರೆ, ಕರ್ನಾಟಕದ ಅತ್ಯಂತ ದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಸ್ಥಾಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದ ಬಿಕ್ಕಟ್ಟನ್ನು ಕುರಿತು ಅವರು ಆತ್ಮಾವಲೋಕನ ಮಾಡಬೇಕಿದೆ. ಅರ್ಹ ಪ್ರಾದೇಶಿಕ ಪತ್ರಿಕೆಗಳಿಗೂ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡಲಾಗುವ ಪುರಸ್ಕಾರವನ್ನು ನೀಡುವುದರ ಬಗ್ಗೆ ಯೋಚಿಸಬೇಕಿದೆ. 25ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಸಾರದಲ್ಲಿರುವ ಮತ್ತು ಕನಿಷ್ಠ ಎಂಟು ಪುಟಗಳ (ಅದರಲ್ಲಿ ಅರ್ಧದಷ್ಟು ಕಲರ್ ಪೇಜಿನಲ್ಲಿ) ಪ್ರಕಟಿಸುತ್ತಿರುವ ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡುವುದು ಅವರ ಅಧಿಕಾರ ವ್ಯಾಪ್ತಿಗೇ ಒಳಪಡುತ್ತದೆ. ಈ ಕ್ರಮವು ಪ್ರಾದೇಶಿಕ ಪತ್ರಿಕೆಗಳನ್ನು ಬಲಪಡಿಸುವುದೇ ಅಲ್ಲದೆ, ಸಿದ್ದರಾಮಯ್ಯ ಪ್ರತಿಪಾದಿಸುವ ಮೌಲ್ಯಗಳಿಗೆ ತಕ್ಕಂತಿದೆ ಎಂಬ ವ್ಯಾಪಕ ಪ್ರಶಂಸೆಗೂ ಒಳಗಾಗುತ್ತದೆ.
ಇದು ಹೆಚ್ಚಿನದನ್ನು ಕೇಳುವ ಆಗ್ರಹವಲ್ಲ. ನ್ಯಾಯಪರತೆಗಾಗಿ ಆಗ್ರಹವಷ್ಟೇ.
Comments
Post a Comment