ಶಾಸಕರೇ ಕಾನೂನು ಉಲ್ಲಂಘಿಸಿದರೆ, ಜಾರಿಗೊಳಿಸುವವರು ಯಾರು ?
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳು ಗಂಭೀರವಾದ ಅಹಿತಕರ ಪ್ರಶ್ನೆಯನ್ನು ಹುಟ್ಟುಹಾಕುವಂತಿವೆ. ಕರ್ನಾಟಕದ ಒಬ್ಬ ಚುನಾಯಿತ ಶಾಸಕರು, ಕಾನೂನು ನಿಯಮಕ್ಕೆ ಉತ್ತರದಾಯಿಯಾಗಿರಬೇಕೋ ಅಥವಾ ಅದನ್ನೂ ಮೀರಿ ವರ್ತಿಸಬಹುದೋ ಎಂಬ ಪ್ರಶ್ನೆ ಕಾಡುತ್ತದೆ. ಸಾರ್ವಜನಿಕರು ನೋಡುತ್ತಿರುವುದು ಒಂದು ಪ್ರತ್ಯೇಕವಾದ ದುರ್ವರ್ತನೆಯಲ್ಲ, ಬದಲಾಗಿ ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ಪಕ್ಷಗಳಲ್ಲೂ ಶಿಕ್ಷಾಭೀತಿ ಇಲ್ಲದಂತಹ ವರ್ತನೆಯನ್ನು ಗುರುತಿಸಬಹುದು.
ಪುತ್ತೂರಿನಲ್ಲಿ ಶಾಸಕರ ಸಾರ್ವಜನಿಕ ಮುಕ್ತ ಶಕ್ತಿ ಪ್ರದರ್ಶನ, ಅದರಲ್ಲೂ ಪುರಸಭಾ ಆಯುಕ್ತರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಅವಮಾನ ಮಾಡಿರುವುದು, ಆಡಳಿತಾತ್ಮಕ ಘನತೆಯ ಮೇಲಿನ ನೇರ ಪ್ರಹಾರವಾಗಿ ಕಾಣುತ್ತದೆ. ತದನಂತರ ಯಾವುದೇ ಕ್ರಮವನ್ನು ಜರುಗಿಸಲಾಗಿಲ್ಲ. ಸಂಬಂಧಪಟ್ಟ ಅಧಿಕಾರಿಯು ದೂರನ್ನೂ ಸಲ್ಲಿಸಿಲ್ಲ. ಕಾರಣ ಪ್ರಕರಣವು ಸಾಧಾರಣ ಎಂದೇನೂ ಅಲ್ಲ, ಅಧಿಕಾರ ವಲಯದಲ್ಲಿರುವ ವಾತಾವರಣದಲ್ಲಿ ಪ್ರತಿರೋಧಕ್ಕೆ ತೆರಬೇಕಾದ ಬೆಲೆ ದುಬಾರಿಯಾದುದು. ಪೆÇಲೀಸರ ಮೌನ, ಇಲಾಖೆಯ ನಿರ್ಲಿಪ್ತತೆ ಮತ್ತು ಮಹಿಳಾ ಆಯೋಗದ ಮೌನವನ್ನೂ ಗಮನಿಸಿದಾಗ, ರಾಜಕೀಯ ಮತ್ತು ಆರ್ಥಿಕ ಅಧಿಕಾರವನ್ನು ಪ್ರಶ್ನಿಸಲು ಸಂಸ್ಥೆಗಳು ಹೇಗೆ ಹಿಂಜರಿಯುತ್ತವೆ ಎನ್ನುವುದು ಸ್ಪಷ್ಟವಾಗುತ್ತದೆ. ನಾಗರಿಕ ಸೇವಾ ಅಧಿಕಾರಿಗಳು ಭಯ ಭೀತಿಯಿಂದ ಕಾರ್ಯನಿರ್ವಹಿಸಿದರೆ ಆಳ್ವಿಕೆಯನ್ನು ನಡೆಸಲಾಗುವುದಿಲ್ಲ.
ಉಡುಪಿಯಲ್ಲಿ ಶಾಸಕ ಯಶ್‍ಪಾಲ್ ಸುವರ್ಣ ಪರ್ಯಾಯದ ಸಂದರ್ಭದಲ್ಲಿ ಹೊರೆ ಕಾಣಿಕೆಯ ಪದ್ಧತಿಗೆ ರಾಜಕೀಯ ಬಣ್ಣ ನೀಡಿದ್ದಾರೆ. ಈ ಪದ್ದತಿಯು ಚಾರಿತ್ರಿಕವಾಗಿ ತನ್ನದೇ ಆದ ಮೌಲ್ಯ ಹೊಂದಿದ್ದು, ಸಾಮಾಜಿಕ ಸಹಕಾರವನ್ನು ಧಾರ್ಮಿಕ ನೆಲೆಗಳನ್ನು ದಾಟಿ ಬಿಂಬಿಸುತ್ತದೆ. ಮುಸ್ಲಿಮರ ವಿರುದ್ಧ ಅವರ ಹೇಳಿಕೆಯು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿತ್ತು. ಆದರೂ ಸರ್ಕಾರವು ಶಾಸಕರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ, ಬದಲಾಗಿ ಪ್ರತಿಕ್ರಿಯಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇಬ್ಬರು ನಾಗರಿಕರನ್ನು ಬಂಧಿಸಲಾಗಿದೆ. ಶಾಸಕರ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಈ ವರ್ತನೆ ಬಲಾಢ್ಯರು ಪ್ರಚೋದನೆ ಮಾಡುವುದನ್ನು ಸಹಿಸಿಕೊಳ್ಳಲಾಗುತ್ತದೆ, ನಾಗರಿಕರ ಪ್ರತಿರೋಧ ಶಿಕ್ಷೆಗೊಳಗಾಗುತ್ತದೆ ಎಂಬ ಅಪಾಯಕಾರಿ ಸಂದೇಶವನ್ನು ನೀಡುತ್ತದೆ.
ಕಾರ್ಕಳದಲ್ಲಿ ಪ್ರಬಲ ರಾಜಕಾರಣಿ ಸುನಿಲ್ ಕುಮಾರ್ ಅವರ ವರ್ತನೆ ಇದೇ ವ್ಯಾಧಿಯ ಮತ್ತೊಂದು ಆಯಾಮವನ್ನು ಬಿಂಬಿಸುತ್ತದೆ. ಅವರ ವಿರುದ್ಧ ಮಾಡಲಾಗಿದ್ದ ಭೂ ಕಬಳಿಕೆಯ ಆರೋಪಗಳು ಹಲವು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದವು. ಅವರು ಸಚಿವರಾಗಿದ್ದಾಗ 14 ಕೋಟಿ ರೂ ಮಂಜೂರು ಮಾಡಲಾಗಿದ್ದ ಪರಶುರಾಮ ಪ್ರತಿಮೆಯ ವಿವಾದದಲ್ಲಿ ಕಳಪೆ ವಸ್ತುಗಳ ಬಳಕೆ ಮುಖ್ಯ ಆರೋಪವಾಗಿದ್ದು, ಈ ವಿವಾದದ ವಿರುದ್ಧ ನಡೆದ ತನಿಖೆ ಸಾರ್ವಜನಿಕರಲ್ಲಿ ಸಿನಿಕತೆ ಮೂಡಿಸಿದೆ. ತನಿಖೆಗಳು ದೀರ್ಘ ಕಾಲ ನಡೆಯುತ್ತಲೇ ಇದ್ದರೆ, ಅಂತಿಮ ಫಲಿತಾಂಶ ಬರುವ ವೇಳೆಗೆ ಉತ್ತರದಾಯಿತ್ವವೇ ಅನುಮಾನಾಸ್ಪದವಾಗುತ್ತದೆ.
ಈ ಪ್ರಕರಣಗಳು ಭಿನ್ನ ರೂಪದಲ್ಲಿ ಕಂಡರೂ, ಕಾನೂನು ಸದಾ ಕೆಳಮುಖಿಯಾಗಿ ಚಲಿಸುತ್ತದೆಯೇ ಹೊರತು, ಮೇಲ್ಮುಖಿಯಾಗುವುದಿಲ್ಲ ಎನ್ನುವ ಸಮಾನ ಅಂಶವನ್ನು ಸ್ಪಷ್ಟಪಡಿಸುತ್ತದೆ. ಆಯ್ಕೆಯ ಅನುಸಾರ ಕಾನೂನು ಅನುಷ್ಟಾನ ಮಾಡುವ ಈ ವಿಧಾನ ಸಾರ್ವಜನಿಕರ ವಿಶ್ವಾಸ ಕುಂದಿಸುತ್ತದೆ. ಸಮುದಾಯಗಳು ತಮ್ಮನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಭಾವಿಸುತ್ತವೆ, ನಾಗರಿಕ ಸೇವಾ ಅಧಿಕಾರಿಗಳು ಬಯಲಾಗುತ್ತಾರೆ, ನಾಗರಿಕರು ರಕ್ಷಣೆ ಇಲ್ಲದವರಾಗುತ್ತಾರೆ. ಸಮಾಜವನ್ನು ಅಸ್ಥಿರಗೊಳಿಸುವವರನ್ನು ರಕ್ಷಿಸುವ ಮತ್ತು ಪ್ರತಿಕ್ರಿಯಿಸುವವರನ್ನು ಶಿಕ್ಷೆಗೊಳಪಡಿಸುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಲಾಗುವುದಿಲ್ಲ.
ಚುನಾಯಿತ ಪ್ರತಿನಿಧಿಗಳು ಊಳಿಗಮಾನ್ಯ ಯಜಮಾನರಲ್ಲ. ಅವರು ಸಾಂವಿಧಾನಿಕ ರಕ್ಷಕರು. ಇಂತಹ ವಿಚಾರಗಳಲ್ಲಿ ತಟಸ್ಥ ನೀತಿ ಸರಿಯಲ್ಲ ಎನ್ನುವುದನ್ನು ಸರ್ಕಾರಗಳು ಅರ್ಥಮಾಡಿಕೊಳ್ಳಬೇಕಿದೆ. ಶಾಸಕರು ಸಂಯಮ ಇಲ್ಲದೆ ವರ್ತಿಸುವಾಗ, ಸಂಸ್ಥೆಗಳು ವಿಮುಖವಾದಾಗ, ರಾಜ್ಯ ಸರ್ಕಾರವೇ ಶಾಮೀಲಾದಂತೆ ಆಗುತ್ತದೆ.
ಜನರ ವಿಶ್ವಾಸವನ್ನು ಮರಳಿ ಗಳಿಸಲು ಒಂದು ದಿಟ್ಟ ಹೆಜ್ಜೆ ಸಾಕಾಗುತ್ತದೆ. ಕಾನೂನನ್ನು ಸಮಾನವಾಗಿ ಅನ್ವಯಿಸಬೇಕು, ಅಧಿಕಾರ, ಸ್ಥಾನಮಾನ ಅಥವಾ ಪಕ್ಷವನ್ನು ಲೆಕ್ಕಿಸದೆ ಜಾರಿಗೊಳಿಸಬೇಕು. ಇಲ್ಲವಾದರೆ, ಪ್ರಜಾಪ್ರಭುತ್ವ ಎನ್ನುವುದು, ಕರಾವಳಿ ಕರ್ನಾಟಕದಲ್ಲಿ, ಭೀತಿಯ ನೆಲೆಯಾಗುತ್ತದೆಯೇ ಹೊರತು ಕಾನೂನಿನಿಂದ ನಿರ್ವಹಿಸಿದಂತಾಗುವುದಿಲ್ಲ.
Comments
Post a Comment