ಯುಗದ ಚಿಂತನೆಗೆ ದಿಕ್ಕು ನೀಡಿದ ಆದಿ ಶಂಕರಾಚಾರ್ಯರು
* ಬಿವಿಸೀ
ವಿಶ್ವದ 14 ಪ್ರಮುಖ ದಿನಪತ್ರಿಕೆಗಳಲ್ಲಿ ಸಂಪಾದಕರಾಗಿದ್ದ ಪೊಥಾನ್ ಜೋಸೆಪ್, ರಾಷ್ಟ್ರಕವಿ ಕುವೆಂಪು ಮುಂತಾದವರಿಂದ ತಮ್ಮ `ಅರಿವೇ ಗುರು', `ಜ್ಞಾನವೇ ಮೋಕ್ಷದ ಮಾರ್ಗ' ಮೀಮಾಂಸೆಗಾಗಿ ಪ್ರಶಂಸಿಸಲ್ಪಟ್ಟಿದ್ದ ಆದಿ ಶಂಕರಾಚಾರ್ಯರು ಪೌರಾಣಿಕ ವ್ಯಕ್ತಿಯಲ್ಲ. ಅವರು ಕ್ರಿ ಶ ಎಂಟನೇ ಶತಮಾನದಲ್ಲಿ ಬದುಕಿ (ಕೆಲವರ ಪ್ರಕಾರ 5ನೇ ಶತಮಾನದಲ್ಲಿ), ಸಂಚರಿಸಿ, ವಾದವಿವಾದಗಳಲ್ಲಿ ತೊಡಗಿ, ಸ್ಪಷ್ಟ ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ ಐತಿಹಾಸಿಕ ವ್ಯಕ್ತಿ. ಆದರೆ ಅವರ ಮರಣಾನಂತರದ ಶತಮಾನಗಳಲ್ಲಿ, ಅವರ ಜೀವನ ಮತ್ತು ಚಿಂತನೆಯ ಸುತ್ತ ರೂಪುಗೊಂಡ ಗೌರವಪೂರ್ಣ ಕಥನಗಳು ಅವರನ್ನು ಸಾಮಾನ್ಯ ಇತಿಹಾಸಪುರುಷನ ಮಟ್ಟಕ್ಕಿಂತ ಮೇಲಕ್ಕೆ ಎತ್ತಿದವು. ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಶಂಕರರ ಮಹತ್ವವನ್ನು ಸರಿಯಾಗಿ ಗ್ರಹಿಸಲು ಅಗತ್ಯ. ಇಂದು ಆದಿಶಂಕರರು ಅಂತರರಾಷ್ಟ್ರೀಯವಾಗಿ ಭಾರತದ ತತ್ವಚಿಂತನೆಯ ಪ್ರಮುಖ ಅಧ್ವರ್ಯುವೆನಿಸಿದ್ದಾರೆ.
ಶಂಕರಾಚಾರ್ಯರ ಪ್ರಮುಖ ಸಾಧನೆ ಅದ್ವೈತ ತತ್ವದ ಶಾಸ್ತ್ರೀಯ ಸ್ಥಾಪನೆ. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೆ ಅವರು ರಚಿಸಿದ ಭಾಷ್ಯಗಳು ತರ್ಕ, ಭಾಷಾ ಶಿಸ್ತು ಮತ್ತು ತತ್ವಸ್ಪಷ್ಟತೆಯಿಂದ ಕೂಡಿವೆ. ಜ್ಞಾನವೇ ಮೋಕ್ಷದ ಮಾರ್ಗ ಎಂಬ ಅವರ ದೃಷ್ಟಿಕೋನ, ಆ ಕಾಲದ ಧಾರ್ಮಿಕ ಆಚರಣೆಗಳ ಕೇಂದ್ರಸ್ಥಾನದಲ್ಲಿದ್ದ ಕರ್ಮಕಾಂಡದ ಪ್ರಾಬಲ್ಯಕ್ಕೆ ಬೌದ್ಧಿಕ ಸವಾಲು ಎಸೆಯಿತು. ಇದು ಕೇವಲ ತತ್ವಶಾಸ್ತ್ರೀಯ ವ್ಯಾಖ್ಯಾನವಲ್ಲ; ಸಮಾಜದ ಚಿಂತನಾ ದಿಕ್ಕಿನ ಮೇಲೆಯೇ ಪರಿಣಾಮ ಬೀರಿದ ಮಹತ್ವದ ವಿಷಯ.
ಶಂಕರರ ಕಾಲಘಟ್ಟವು ತಾತ್ವಿಕ ಸಂಘರ್ಷಗಳಿಂದ ತುಂಬಿತ್ತು. ಬೌದ್ಧ, ಜೈನ ಮತ್ತು ವೈದಿಕ ಪಂಥಗಳ ನಡುವೆ ತೀವ್ರವಾದ ವಾದಪ್ರತಿವಾದಗಳು ನಡೆಯುತ್ತಿದ್ದವು. ವೇದಾಂತವೇ ಅನೇಕ ವ್ಯಾಖ್ಯಾನಗಳಿಂದ ಚೂರಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಶಂಕರರು ವೇದಾಂತವನ್ನು ಒಂದು ಸ್ಪಷ್ಟ, ಸಮಗ್ರ ತತ್ವದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟರು. ಈ ಸಾಧನೆಯೇ ಅವರನ್ನು ತಮ್ಮ ಕಾಲದ ಇತರ ಪಂಡಿತರಿಗಿಂತ ವಿಭಿನ್ನವಾಗಿ ಗುರುತಿಸಲ್ಪಡುವಂತೆ ಮಾಡಿತು.
ಶಂಕರರ ಜೀವನದ ಕುರಿತು ನಂತರ ರೂಪುಗೊಂಡ ಕಥೆಗಳು ಅವರ ಐತಿಹಾಸಿಕ ವ್ಯಕ್ತಿತ್ವದ ಸುತ್ತ ಗೌರವ ಮತ್ತು ಭಕ್ತಿಭಾವವನ್ನು ಕಟ್ಟಿದವು. ಬಾಲ್ಯದ ಅಪಾರ ಪ್ರತಿಭೆ, ತಾಯಿಯ ಅನುಮತಿಯಿಂದ ಸನ್ಯಾಸ ಸ್ವೀಕಾರ, ಗುರು ಗೋವಿಂದಭಗವತ್ಪಾದರ ಮಾರ್ಗದರ್ಶನ-ಇವುಗಳೆಲ್ಲ ಶಂಕರರನ್ನು ಅಸಾಮಾನ್ಯ ವ್ಯಕ್ತಿಯಾಗಿ ಚಿತ್ರಿಸುತ್ತವೆ. ಇವುಗಳನ್ನು ಅಕ್ಷರಶಃ ಇತಿಹಾಸದ ದಾಖಲೆಗಳೆಂದು ನೋಡಬೇಕಾಗಿಲ್ಲ; ಆದರೆ ಇವು ಶಂಕರರು ತಮ್ಮ ಸಮಕಾಲೀನರ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಸೂಚಿಸುತ್ತವೆ.
ಭಾರತದೆಲ್ಲೆಡೆ ಸಂಚರಿಸಿ ವಿವಿಧ ಪಂಥಗಳ ಪಂಡಿತರೊಂದಿಗೆ ಶಾಸ್ತ್ರಾರ್ಥ ನಡೆಸಿದರೆಂಬ ವಿವರಣೆಗಳು ಶಂಕರರನ್ನು ಬೌದ್ಧಿಕ ಯೋಧನಂತೆ ಸ್ಥಾಪಿಸುತ್ತವೆ. ಈ ದಿಗ್ವಿಜಯವನ್ನು ಅಲೌಕಿಕ ಜಯಗಳ ಸರಣಿಯಾಗಿ ನೋಡುವ ಅಗತ್ಯವಿಲ್ಲ. ಅದು ಅಂದಿನ ಕಾಲಘಟ್ಟದ ಸನ್ಯಾಸಿ-ತತ್ವಜ್ಞರ ಚಟುವಟಿಕೆಗಳ ಸಹಜ ಭಾಗ. ಆದರೆ ನಂತರದ ಪೀಳಿಗೆಗಳು ಈ ಸಂಚಾರವನ್ನು ವಿಸ್ತøತವಾಗಿ ವರ್ಣಿಸುವ ಮೂಲಕ ಶಂಕರರನ್ನು ಅಸಾಧಾರಣ ನಾಯಕನಂತೆ ಕಾಣಲು ಕಾರಣವಾದವು.
ಮಠಗಳ ಸ್ಥಾಪನೆಯ ಕುರಿತ ಕಥನವೂ ಇದೇ ಪ್ರಕ್ರಿಯೆಯ ಮುಂದುವರಿಕೆ. ಶೃಂಗೇರಿ, ಪುರಿ, ದ್ವಾರಕಾ ಮತ್ತು ಜ್ಯೋತಿರ್ಮಠಗಳ ಮೂಲಕ ಅದ್ವೈತ ಚಿಂತನೆಗೆ ನಿರಂತರತೆ ದೊರಕಿತು. ಇತಿಹಾಸದಲ್ಲಿ ಈ ಸಂಸ್ಥೆಗಳ ವಿಕಾಸ ಕ್ರಮೇಣ ನಡೆದಿದ್ದರೂ, ಶಂಕರರ ಚಿಂತನೆಯೇ ಅವುಗಳ ಕೇಂದ್ರಬಿಂದುವಾಗಿತ್ತು. ಇದರಿಂದ ಅವರು ಕೇವಲ ತತ್ವಜ್ಞನಲ್ಲ, ದೀರ್ಘಕಾಲಿಕ ಬೌದ್ಧಿಕ ಪರಂಪರೆಯ ಶಿಲ್ಪಿಯೆಂದು ಗುರುತಿಸಲ್ಪಟ್ಟರು.
ಒಟ್ಟಿನಲ್ಲಿ, ಆದಿ ಶಂಕರಾಚಾರ್ಯರು ಧಾರ್ಮಿಕ ಪರಂಪರೆಯ ಐತಿಹಾಸಿಕ ವ್ಯಕ್ತಿ ಎಂಬ ಸತ್ಯದಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರ ಚಿಂತನೆಯ ವ್ಯಾಪ್ತಿ, ತಾತ್ವಿಕ ಧೈರ್ಯ ಮತ್ತು ದೀರ್ಘಕಾಲಿಕ ಪರಿಣಾಮಗಳು ಅವರನ್ನು ಯುಗನಾಯಕನಂತೆ ಕಾಣುವಂತೆ ಮಾಡಿವೆ. ನಂತರದ ಯುಗಗಳು ಈ ಮಹತ್ವವನ್ನು ವ್ಯಕ್ತಪಡಿಸಲು ವಿಸ್ತøತ ಮತ್ತು ಗೌರವಪೂರ್ಣ ಕಥನಗಳನ್ನು ರೂಪಿಸಿಕೊಂಡವು. ಶಂಕರರು ಇತಿಹಾಸದಲ್ಲೇ ನಿಂತು, ಯುಗದ ಚಿಂತನೆಗೆ ದಿಕ್ಕು ನೀಡಿದ ಮಹಾನಾಯಕ.
-----------------------------------------
ಶಂಕರರ ಕಾಲ ಜಿಜ್ಞಾಸೆ
ಆಧುನಿಕ ಇತಿಹಾಸಕಾರರು ಆದಿ ಶಂಕರಾಚಾರ್ಯರು ಕ್ರಿ ಶ 8ನೇ ಶತಮಾನದಲ್ಲಿ (ಸುಮಾರು ಕ್ರಿ ಶ 788-820) ಬದುಕಿದ್ದರು ಎಂದು ಗುರುತಿಸುತ್ತಾರೆ. ಭಾಷಾ ಶೈಲಿ ಮತ್ತು ಇತರ ಐತಿಹಾಸಿಕ ದಾಖಲೆಗಳು ಈ ಕಾಲಘಟ್ಟಕ್ಕೆ ಪೂರಕವಾಗಿವೆ. ಆದರೆ, ಶೃಂಗೇರಿ ಮತ್ತು ಕಂಚಿ ಕಾಮಕೋಟಿ ಮಠಗಳಂತಹ ಸಾಂಪ್ರದಾಯಿಕ ಮೂಲಗಳ ಪ್ರಕಾರ, ಅವರು ಕ್ರಿ ಪೂ 5ನೇ ಶತಮಾನದಷ್ಟು ಹಿಂದಿನವರು. ಕಾಲದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಅದ್ವೈತ ವೇದಾಂತದ ಮೂಲಕ ಅವರು ಭಾರತೀಯ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ರೀತಿ ಮಾತ್ರ ಅನನ್ಯ. ಕೇವಲ 32 ವರ್ಷಗಳ ಜೀವಿತಾವಧಿಯಲ್ಲಿ ಅವರು ಸಾಧಿಸಿದ ಜ್ಞಾನದ ಹರವು ಇಂದಿಗೂ ದಾರಿದೀಪವಾಗಿದೆ.
-------------------------------------
ಚಂಡಾಲನೆದುರು ಸಾಷ್ಟಾಂಗ
ಪ್ರಣಾಮಗೈದ ಶಂಕರರು
ಕಾಶಿಯಲ್ಲಿ ಸಂಚರಿಸುತ್ತಿದ್ದ ಆದಿ ಶಂಕರಾಚಾರ್ಯರಿಗೆ ದಾರಿಯಲ್ಲಿ ಒಬ್ಬ ಚಂಡಾಲನು ಎದುರಾದನು. ಶಂಕರರೊಂದಿಗೆ ಬಂದಿದ್ದ ಅವರ ಶಿಷ್ಯರು ಸಂಪ್ರದಾಯಬದ್ಧವಾಗಿ `ದೂರ ಸರಿಯಿರಿ' ಎಂದು ಚಂಡಾಲನಿಗೆ ಹೇಳಿದರು. ಅದಕ್ಕೆ ಪ್ರತಿಯಾಗಿ ಆ ಚಂಡಾಲನು ಆತ್ಮ-ದೇಹದ ಭೇದದ ಕುರಿತು ತೀಕ್ಷ್ಣ ಪ್ರಶ್ನೆಗಳನ್ನು ಮುಂದಿಟ್ಟನು. ಕ್ಷಣಮಾತ್ರದಲ್ಲೇ ತತ್ವಸತ್ಯವನ್ನು ಅರಿತ ಶಂಕರರು ಅವನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, ಆತ್ಮಜ್ಞಾನ ಬೋಧಿಸಿದವನಾಗಿ ಅವನನ್ನು ತಮ್ಮ ಗುರುವಾಗಿ ಅಂಗೀಕರಿಸಿದರು. ಈ ಘಟನೆ ಜ್ಞಾನದಲ್ಲಿ ಜಾತಿಭೇದಕ್ಕೆ ಸ್ಥಾನವಿಲ್ಲ ಎಂಬ ಶಂಕರರ ನಿಲುವನ್ನು ದಿಟ್ಟವಾಗಿ ಸಾರುತ್ತದೆ.
Comments
Post a Comment