ಧರ್ಮಸ್ಥಳದಲ್ಲಿ ಹತ್ಯಾಕಾಂಡ ಪ್ರಶ್ನೆ: ಆದಿ ಚುಂಚನಗಿರಿ ಮಠದ ಸ್ವಾಮಿಯ ನೈತಿಕ ಅಧಿಕಾರ ಮತ್ತು ಮೌನ
ಸಂಪಾದಕೀಯ
ಧರ್ಮಸ್ಥಳದಲ್ಲಿ ಸಂಭವಿಸಿರುವ ಅತ್ಯಾಚಾರ ಮತ್ತು ಕೊಲೆಗಳ ಸುದ್ದಿ ಬಯಲಾಗಿರುವುದು ಕೇವಲ ಕಾನೂನು ಸುವ್ಯವಸ್ಥೆಯ ವಿಚಾರವಲ್ಲ. ಇದರಲ್ಲಿ ಸರಣಿ ಲೈಂಗಿಕ ದೌರ್ಜನ್ಯ, ನೂರಾರು ಮಹಿಳೆಯರ ಅನುಮಾನಾಸ್ಪದ ಸಾವು, ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದ ದಾಖಲೆಗಳ ಸುತ್ತ ನಡೆಯುತ್ತಿರುವ ಚರ್ಚೆಗಳು, ಮಾಹಿತಿದಾರರ ಸಾಕ್ಷ್ಯ ಮತ್ತು ಮಾಧ್ಯಮಗಳ ನಿರಂತರ ವಿಚಾರಣೆ ಇವೆಲ್ಲವನ್ನೂ ನೋಡಿದಾಗ ಇಷ್ಟೊಂದು ಆಳವಾಗಿ ದೇಶದ ನೈತಿಕ ಪ್ರಜ್ಞೆಯನ್ನು ಕದಡಿರುವ ಘಟನೆ ಮತ್ತೊಂದು ಇಲ್ಲ ಎಂದೇ ಹೇಳಬಹುದು.
ಈ ಅಪರೂಪದ ಸಂದರ್ಭದಲ್ಲೇ ಆದಿಚುಂಚನಗಿರಿ (ಒಕ್ಕಲಿಗ) ಮಠದ ನಿರ್ಮಲಾನಂದ ಸ್ವಾಮಿಯ ಹೆಸರೂ ಸಹ ಸಾರ್ವಜನಿಕ ಚರ್ಚೆಗೆ ಬಂದಿದೆ. ಮಾಹಿತಿದಾರ ಚಿನ್ನಯ್ಯ ಮತ್ತು ದೂರುದಾರ ಮಹೇಶ್ ಶೆಟ್ಟಿ ತಿಮರೋಡಿ ಚಿತ್ರ ಸಮೇತ ನೀಡಿರುವ ಹೇಳಿಕೆಗಳಲ್ಲಿ, ಪೆÇಲೀಸರನ್ನು ಸಂಪರ್ಕಿಸುವ ಮುನ್ನ ಈ ಸ್ವಾಮಿಯನ್ನು ಸಂಪರ್ಕಿಸಿರುವ ಉಲ್ಲೇಖವಿದೆ. ಇವರ ಪ್ರಕಾರ, ಈ ಸ್ವಾಮಿಗೆ ಧರ್ಮಸ್ಥಳದ ಬೆಳವಣಿಗೆಗಳನ್ನು ತಿಳಿಸಿದ ನಂತರ, ಅವರು ಈ ವಿಚಾರವನ್ನು ಮುಖ್ಯಮಂತ್ರಿಗಳೊಡನೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದರು, ಅಪರಾಧಿಗಳು ಎಷ್ಟೇ ಪ್ರಬಲರಾಗಿದ್ದರೂ ಮೊಕದ್ದಮೆ ದಾಖಲಿಸುವುದನ್ನು ಖಾತ್ರಿಪಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ಆರೋಪಗಳು ವ್ಯಾಪಕವಾಗಿ ವರದಿಯಾಗಿದ್ದು ಚರ್ಚೆಗಳೂ ನಡೆದಿವೆ. ಆದರೆ ತದನಂತರ ನಡೆದದ್ದು ಆದಿ ಚುಂಚನಗಿರಿ ಮಠದ ಸ್ವಾಮಿಯ ದಿವ್ಯಮೌನ.
ಈ ಸ್ವಾಮಿ ಯಾರು ಎಂದು ಯೋಚಿಸಿದಾಗ ಈ ಮೌನವೇ ಅಚ್ಚರಿಯಾಗಿ ಕಾಣುತ್ತದೆ. ವೈಯಕ್ತಿಕ ಪ್ರಾಮಾಣಿಕತೆ, ಬೌದ್ಧಿಕ ಜ್ಞಾನ, ನೈತಿಕ ನಾಯಕತ್ವಕ್ಕಾಗಿ ಇವರನ್ನು ಅಪಾರವಾಗಿ ಗೌರವಿಸಲಾಗುತ್ತದೆ. ಅನೇಕ ಶೈಕ್ಷಣಕ ಸಂಸ್ಥೆಗಳನ್ನು ನಿರ್ವಹಿಸುವ ಒಂದು ಪ್ರಬಲ ಮಠದ ಮಠಾಧೀಶರಾಗಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ ಎಲ್ಲ ವಲಯಗಳಲ್ಲೂ ತಮ್ಮ ಪ್ರಭಾವ ಹೊಂದಿದ್ದಾರೆ. ಇವರ ನಿಲುವು ಕೇವಲ ಆಧ್ಯಾತ್ಮಿಕವಲ್ಲ, ಇದು ಸಾರ್ವಜನಿಕ ಮತ್ತು ಸಾಂಸ್ಥಿಕ ನಿಲುವೂ ಆಗುತ್ತದೆ. ಈ ಸ್ಥಾನಮಾನಗಳೇ ಅವರ ಬಗ್ಗೆ ಅನಿವಾರ್ಯವಾಗಿ ನಿರೀಕ್ಷೆಗಳನ್ನು ಹುಟ್ಟುಹಾಕುತ್ತವೆ. ಗಂಭೀರವಾದ ನೈತಿಕ ಮತ್ತು ಸಾಮಾಜಿಕ ಪರಿಣಾಮ ಬೀರುವ ಒಂದು ವಿಚಾರದಲ್ಲಿ ಇವರ ಹೆಸರನ್ನು ಸಾರ್ವಜನಿಕವಾಗಿ ಉಲ್ಲೇಖಿಸಿದಾಗ, ಸ್ಪಷ್ಟತೆ ತೋರಬೇಕಿರುವುದು ಅವರ ಕರ್ತವ್ಯವೇ ಹೊರತು, ತಮ್ಮ ಮೌನದಿಂದಾಗಿ ಆರೋಪಿಗಳ ಪರ ವಹಿಸುವುದಲ್ಲ.
ಸ್ಪಷ್ಟವಾಗಿ ಹೇಳುವುದಾದರೆ, ಸ್ಪಷ್ಟನೆ ಕೇಳುವುದೇ ಅಪರಾಧ ಆಗುವುದಿಲ್ಲ. ಅಥವಾ ಅಳುಕು ಸೃಷ್ಟಿಸುವುದಿಲ್ಲ, ರಾಜಿಯ ಸೂಚನೆಯನ್ನೂ ಕೊಡುವುದಿಲ್ಲ. ನೈತಿಕ ಪಾರದರ್ಶಕತೆಯನ್ನು ಒತ್ತಾಯಿಸಿದಂತೆಯೂ ಆಗುವುದಿಲ್ಲ. ಆರೋಪಗಳು ನಿರ್ದಿಷ್ಟವಾಗಿವೆಯೇ ಹೊರತು ಅಸ್ಪಷ್ಟವಾಗಿಲ್ಲ. ಈ ವಿಷಯವೇ ಬಹಳ ಗಂಭೀರವಾಗಿದ್ದು ಸಾಧಾರಣ ವಿವಾದವಲ್ಲ. ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ತಟಸ್ಥ ನಿಲುವು ಎನಿಸಿಕೊಳ್ಳುವುದಿಲ್ಲ. ಇದು ಸೃಷ್ಟಿಸುವ ನಿರ್ವಾತವೇ ಅನುಮಾನಗಳನ್ನೂ, ಹೊಂದಾಣಿಕೆಯನ್ನೂ, ಅಪನಂಬಿಕೆಗಳನ್ನೂ ಹೊಂದಿರುತ್ತದೆ.
ಧರ್ಮಸ್ಥಳದ ಪ್ರಕರಣಗಳಲ್ಲಿ ಅತಿ ಗಂಭೀರವಾದ ಸೌಜನ್ಯ ಗೌಡ ಅತ್ಯಾಚಾರ ಮತ್ತು ಕೊಲೆಯ ಪ್ರಕರಣವನ್ನು ಗಮನಿಸಿದಾಗ, ಆಕೆ ಒಕ್ಕಲಿಗ ಸಮುದಾಯಕ್ಕೇ ಸೇರಿರುವುದು ಮತ್ತು ಈ ಸಮುದಾಯವೇ ತನ್ನ ನೈತಿಕ ಮತ್ತು ಸಾಮಾಜಿಕ ನಿರ್ವಾಹಕರಾಗಿ ಆದಿಚುಂಚನಗಿರಿಯ ಕಡೆಗೆ ಮುಖ ಮಾಡುವುದು, ಸ್ವಾಮಿಯ ಮೌನದ ಬಗ್ಗೆ ಅಸಮಾಧಾನವನ್ನು ಸೃಷ್ಟಿಸುತ್ತದೆ. ಸಾಮಾನ್ಯ ಜನತೆಗೆ ಸರಳವಾದ ನಿರೀಕ್ಷೆ ಇದೆಯೇ ಹೊರತು, ಮಧ್ಯಸ್ಥಿಕೆ ಅಥವಾ ಪ್ರಭಾವ ಬೇಕಿರಲಿಲ್ಲ. ವಸ್ತುಸ್ಥಿತಿಯ ಬಗ್ಗೆ ಸಾಮಾನ್ಯ ಹೇಳಿಕೆಯ ನಿರೀಕ್ಷೆ ಇತ್ತು. ಆದರೆ ಈ ಭೇಟಿ ನಡೆಯಿತೇ, ಏನು ಚರ್ಚೆ ಮಾಡಲಾಯಿತು, ಸ್ವಾಮಿಯ ಕಡೆಯಿಂದ ಯಾವ ಕ್ರಮಗಳನ್ನು ಒತ್ತಾಯಿಸಲು ಸಾಧ್ಯವಾಯಿತು ಈ ಪ್ರಶ್ನೆಗಳು ಮುನ್ನಲೆಗೆ ಬರುತ್ತವೆ.
ಈ ಪ್ರಶ್ನೆಗಳಿಗೆ ಮೌನ ಉತ್ತರವಾಗುವುದಿಲ್ಲ. ಅಥವಾ ಇದು ನೈತಿಕ ವಿಶ್ವಾಸಾರ್ಹತೆಯನ್ನೂ ಉಳಿಸುವುದಿಲ್ಲ. ಇದು ನೈತಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ. ಜನಸಮೂಹವನ್ನೇ ಸಂತ್ರಸ್ತರನ್ನಾಗಿ ಮಾಡಿರುವ ಪ್ರಕರಣದಲ್ಲಿ ಮೌನವಹಿಸುವುದನ್ನು ಸಂಯಮ ಎನ್ನಲಾಗುವುದಿಲ್ಲ. ಇದು ನುಣುಚಿಕೊಳ್ಳುವ ತಂತ್ರ ಎಂದೇ ಹೇಳಬೇಕಾಗುತ್ತದೆ.
ನೈತಿಕ ಬಿಕ್ಕಟ್ಟು ಎದುರಾದಾಗ ನೇರವಾಗಿ ಮಾತನಾಡುವ ಧೈರ್ಯ ಇರಬೇಕಾಗುತ್ತದೆ. ತಡವಾದರೂ ಸ್ಪಷ್ಟವಾಗಿ ಮಾತನಾಡುವುದರಿಂದ ಸ್ವಾಮಿಯ ಸ್ಥಾನಕ್ಕೇನೂ ಧಕ್ಕೆಯಾಗುವುದಿಲ್ಲ. ಬದಲಾಗಿ ಸುರಕ್ಷಿತವಾಗಿ ಮರಳಿ ಗಳಿಸಿದಂತಾಗುತ್ತದೆ.
Comments
Post a Comment