ಡಿ ಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್‍ಗೆ ಅಗತ್ಯವಾದ ನಾಯಕರಲ್ಲ

 ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯ ಸುತ್ತ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು, ಸಂಘರ್ಷವು ಸ್ವಪ್ರತಿಷ್ಟೆಯನ್ನೂ ಮೀರಿ ದೂರ ಸಾಗಿದೆ. ಈ ಸಂಘರ್ಷ ಪಕ್ಷದೊಳಗಿನ ಆಳವಾದ ಸಮಸ್ಯೆಯನ್ನು ಬಿಂಬಿಸುತ್ತದೆ. ಶಿವಕುಮಾರ್ ಅಪಾರ ಶಕ್ತಿ ಇರುವ ನಾಯಕರಾದರೂ ವಿಶ್ವಾಸಾರ್ಹತೆಯನ್ನು ಹೆಚ್ಚಾಗಿ ಗಳಿಸಿಲ್ಲ. ಈ ಅಂಶವೇ ಅವರನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಅಥವಾ ರಾಜ್ಯ ಸರ್ಕಾರದ ಮುಖ್ಯಸ್ಥರನ್ನಾಗಿ ಪರಿಗಣಿಸಲು ಅನರ್ಹರೆಂದು ಸಾಬೀತುಪಡಿಸುತ್ತದೆ.

ಕಳೆದ ಒಂದು ವರ್ಷದಿಂದ ಡಿಕೆಶಿ ತಮ್ಮ ಬೆಂಬಲಿಗರನ್ನು ಹುರಿದುಂಬಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಧ ಅವಧಿ ಪೂರ್ತಿಯಾದ ಕೂಡಲೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ ಎಂಬ ವದಂತಿಯನ್ನು ಜೀವಂತವಾಗಿರಿಸುವಂತೆ ನೋಡಿಕೊಂಡಿದ್ದಾರೆ. ಈ ನಿರಂತರ ಸದ್ದು ಮಾಡುತ್ತಿರುವ ಕಾರಣ ಎಂದರೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವುದು. ರಾಹುಲ್ ಗಾಂಧಿ ಅಂತಿಮವಾಗಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ ಮೇಲೆ ಶಿವಕುಮಾರ್ ತಮ್ಮ ಧ್ವನಿಯನ್ನು ಬದಲಿಸಿದ್ದು, ತಾಳ್ಮೆ ಮತ್ತು ಪಕ್ಷ ನಿಷ್ಠೆಯ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಈ ಹಠಾತ್ ಬದಲಾವಣೆ ರಾಜಕೀಯ ಮುತ್ಸದ್ದಿ ನಡೆಯೇನಲ್ಲ, ಇದು ಅವರ ಆಕ್ರಮಣಕಾರಿ ನಿಲುವು ವಿಫಲವಾಗಿರುವುದರ ಸಂಕೇತ.

ಒಂದು ವೈವಿಧ್ಯಮಯ ವಿಶಾಲ ರಾಜ್ಯವಾದ ಕರ್ನಾಟಕಕ್ಕೆ ಆಕಾಂಕ್ಷೆಗಳಿಗಿಂತಲೂ ಸದೃಢ ಮತ್ತು ಉತ್ತಮ ನಾಯಕತ್ವ ಅಗತ್ಯವಾಗಿದೆ. ಶಾಸಕರ ವಿಶ್ವಾಸ, ಜನಸಾಮಾನ್ಯರ ಭರವಸೆ, ಸ್ಪರ್ಧಾತ್ಮಕ ಹಿತಾಸಕ್ತಿಗಳನ್ನು ನಿರ್ವಹಿಸುವ ಸಾಮಥ್ರ್ಯ ಮತ್ತು ಈ ನಿಟ್ಟಿನಲ್ಲಿ ಸಂಯಮ ಮತ್ತು ತಾಳ್ಮೆ ಅಗತ್ಯವಾಗುತ್ತದೆ. ಶಿವಕುಮಾರ್ ಅವರಲ್ಲಿ ಇದಾವುದೂ ಇಲ್ಲ. ಕಾಂಗ್ರೆಸ್ ಶಾಸಕರಲ್ಲಿ ಇವರ ಬಗ್ಗೆ ಗೌರವಕ್ಕಿಂತಲೂ ಹೆದರಿಕೆ ಹೆಚ್ಚಾಗಿದೆ. ಅವರ ರಾಜಕಾರಣದ ಶೈಲಿ ಊಳಿಗಮಾನ್ಯ ಲಕ್ಷಣಗಳನ್ನು ಹೊಂದಿದೆ. ಅವರು ಹೇಳಿದ್ದನ್ನು ಕೇಳಬೇಕು ಎನ್ನುವ ಉದ್ಧಟತನ ಇದೆ. ಈ ರೀತಿಯ ಧೋರಣೆ ಪಕ್ಷದ ಕಚೇರಿಯ ನಿರ್ವಹಣೆಯಲ್ಲಿ ಅಥವಾ ಹಣಕಾಸು ನಿರ್ವಹಣೆಯಲ್ಲಿ ಸೂಕ್ತವಾಗಬಹುದು; ಆದರೆ ಶಾಸಕಾಂಗದಲ್ಲಿ, ಜನಪ್ರತಿನಿಧಿಗಳು ತಮ್ಮದೇ ಆದ ಅವಕಾಶ, ಪ್ರಾತಿನಿಧ್ಯ ಮತ್ತು ಘನತೆಯನ್ನು ಅಪೇಕ್ಷಿಸುವಾಗ, ಈ ಧೋರಣೆ ಉಪಯುಕ್ತವಾಗುವುದಿಲ್ಲ.

ಮತದಾರರ ಪೈಕಿ ಶಿವಕುಮಾರ್ ರಾಜ್ಯವ್ಯಾಪಿಯಾದ ಸಂಪರ್ಕ ಸಾಧಿಸಿಲ್ಲ. ಅಥವಾ ಅವರು ದೊಡ್ಡ ಪ್ರಮಾಣದ ಜನಕಲ್ಯಾಣದ ದೃಷ್ಟಿಕೋನವನ್ನಾಗಲೀ, ಸುಧಾರಣೆಯ ಕಾರ್ಯಸೂಚಿಯನ್ನಾಗಲೀ ಹೊಂದಿಲ್ಲ. ಬದಲಾಗಿ ಅವರ ಸಾರ್ವಜನಿಕ ವ್ಯಕ್ತಿತ್ವ, ಅಧಿಕಾರ ಹಂಚಿಕೆಯ ದಲ್ಲಾಳಿಯಂತೆ, ಕಲಹಗಳನ್ನು ಪರಿಹರಿಸಲು ಕಠಿಣ ಕ್ರಮಗಳನ್ನು ಅನುಸರಿಸುವ ನಾಯಕನಂತೆ ಕಾಣುತ್ತದೆ. ಅವರ ಹಿಂದೆ ಇರುವ ಭ್ರಷ್ಟಾಚಾರದ ಆರೋಪಗಳು ಅವರ ವರ್ಚಸ್ಸನ್ನು ಮತ್ತಷ್ಟು ಕುಗ್ಗಿಸುತ್ತದೆ. ಇ ಡಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದುದು, ಭೂ ಸ್ವಾಧೀನ ಮತ್ತು ಬೆಂಗಳೂರಿನಲ್ಲಿ ಭೂ ನೋಂದಣಿಯ ವಿವಾದಗಳು ಅವರ ಸುತ್ತ ಆವರಿಸಿಕೊಂಡಿವೆ. ಈ ನಿಟ್ಟಿನಲ್ಲಿ ಡಿಕೆಶಿ ಪ್ರಾಮಾಣಿಕ ಆಳ್ವಿಕೆ ಮತ್ತು ಸಾಂಸ್ಥಿಕ ಬದ್ಧತೆಯೊಂದಿಗೆ ಸರ್ಕಾರ ನಡೆಸಲು ಅಪೇಕ್ಷಿಸುವ ಪಕ್ಷಕ್ಕೆ ಹೊರೆಯಾಗಿ ಕಾಣುತ್ತಾರೆ.

ವಿಡಂಬನೆ ಎಂದರೆ, ಶಿವಕುಮಾರ್ ಈಗಾಗಲೇ ಅಪಾರ ಅಧಿಕಾರವನ್ನು ಅನುಭವಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಸಂಪುಟ ಹೈ ಪವರ್ ಸಚಿವರಾಗಿ, ಬೆಂಗಳೂರಿನ ಅಭಿವೃದ್ಧಿ ಮತ್ತು ಬೃಹತ್ ನೀರಾವರಿ ಯೋಜನೆಗಳ ಉಸ್ತುವಾರಿ ಹೊಂದಿದ್ದಾರೆ. ರಾಜ್ಯದ ರಾಜಕೀಯ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಇವರ ಕೊಡುಗೆಯ ಪಾಲು ಹೆಚ್ಚಾಗಿಯೇ ಇದೆ. ಆದರೂ ಅವರಿಗೆ ತೃಪ್ತಿಯಾಗಿಲ್ಲ. ಬದಲಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಬೇಕಿದೆ. ಆದರೆ ಇದಕ್ಕೆ ಅಗತ್ಯವಾದ ವಿಶಾಲ ತಳಹದಿಯ ನ್ಯಾಯೋಚಿತತೆಯನ್ನು ಗಳಿಸುವಲ್ಲಿ ಡಿಕೆಶಿ ವಿಫಲರಾಗಿದ್ದಾರೆ.

ಈ ಕಾರಣಕ್ಕಾಗಿಯೇ ಹೈಕಮಾಂಡ್ ಎಚ್ಚರಿಕೆಯಿಂದಿದೆ. ಕಾಂಗ್ರೆಸ್ ಪಕ್ಷವು, ಹೆದರಿಸಿ, ಬೆದರಿಸಿ, ಆಂತರಿಕ ಬಂಡಾಯಗಳನ್ನು ಎದುರಿಸುವ ಆಳ್ವಿಕೆಯನ್ನು ಅಪೇಕ್ಷಿಸುವುದಿಲ್ಲ. ಬಿಜೆಪಿಗೆ ಹಗರಣಗಳನ್ನು ಪೂರೈಸುವಂತಹ ಅಳ್ವಿಕೆಯನ್ನು ಬಯಸುವುದಿಲ್ಲ. ಕರ್ನಾಟಕಕ್ಕೆ ಮೇಲ್ಮಟ್ಟದಲ್ಲಿ ಧೈರ್ಯ ಅಗತ್ಯವಿಲ್ಲ. ಸಮತೋಲನದ, ವಿಶ್ವಾಸಾರ್ಹತೆಯ, ಸ್ಥಿರ ಸರ್ಕಾರ ನೀಡುವ ನಾಯಕತ್ವ ಬೇಕಿದೆ. ಅಧಿಕಾರಕ್ಕೆ ಸೂಕ್ತವಾಗಿ ಹೊಂದುವ ವಿಶ್ವಾಸ ಮುಖ್ಯ ಎಂಬ ವಾಸ್ತವವನ್ನು ಅರಿಯುವವರೆಗೂ ಡಿ ಕೆ ಶಿವಕುಮಾರ್ ಈಗಿರುವಂತೆಯೇ, ಸದ್ದುಮಾಡುತ್ತಾ, ನಿಯಂತ್ರಣಕ್ಕೊಳಪಟ್ಟು ಕಾಲ ಕಳೆಯಬೇಕಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again